ಮಂಗಳವಾರ, ಜೂನ್ 22, 2021
27 °C

ಕಟ್ಟಡ ಕಾರ್ಮಿಕ ಕುಟುಂಬಕ್ಕೆ ನೆರವು ನೀಡಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ವಲಸೆ ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ಆರ್ಥಿಕ ನೆರವು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರಿಗೆ ಮನವಿ ಸಲ್ಲಿಸಿದ ನಿಯೋಗವು, ಈ ಕೂಡಲೇ ಆನ್‍ಲೈನ್ ಮೂಲಕ ತುರ್ತು ಸಭೆ ನಡೆಸಿ ಕಾರ್ಮಿಕರ ಹಿತರಕ್ಷಣೆ ಕಾಪಾಡುವಂತೆ ಮನವಿ ಮಾಡಿತು.

‘2ನೇ ಕೋವಿಡ್ ಅಲೆ ಮತ್ತು ಮುಂಬರುವ 3 ಮತ್ತು 4ನೇ ಅಲೆಗಳ ಅಪಾಯವು ಮುಂದಿನ ಕನಿಷ್ಠ 1 ವರ್ಷದವರೆಗೂ ಇರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ಬಹುತೇಕ ಕಟ್ಟಡ ಕಾರ್ಮಿಕರಿಗೆ ಸಂಕಷ್ಟದ ದಿನಗಳು ಎದುರಾಗಲಿವೆ. ಮಂಡಳಿಯಲ್ಲಿ ನೊಂದಾಯಿತರಾದ ಎಲ್ಲ ಕಾರ್ಮಿಕರಿಗೂ ತಿಂಗಳಿಗೆ ₹10 ಸಾವಿರ ಪರಿಹಾರವನ್ನು ಕಾರ್ಮಿಕರ ಬ್ಯಾಂಕ್ ಖಾತೆಗೆ ಮೇ 1ರಿಂದಲೇ ಅನ್ವಯವಾಗುವಂತೆ ಹಣ ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಕಳೆದ ವರ್ಷ ಘೋಷಿಸಲಾದ ಕೋವಿಡ್ ಪರಿಹಾರದ ₹ 5 ಸಾವಿರವನ್ನು ಬಾಕಿ ಇರುವ 1 ಲಕ್ಷ ಕಾರ್ಮಿಕರಿಗೆ ಈ ಕೂಡಲೇ ವರ್ಗಾವಣೆ ಮಾಡಬೇಕು. ಕೋವಿಡ್ ಸಮಯದಲ್ಲಿ ಶೈಕ್ಷಣಿಕ ಮತ್ತು ಪಿಂಚಣಿ, ಮದುವೆ, ವೈದ್ಯಕೀಯ ಮೊದಲಾದ ತಡೆ ಹಿಡಿದಿರುವ ಧನಸಹಾಯವನ್ನು ಫಲಾನುಭವಿಗಳ ಖಾತೆಗೆ ಈ ಕೂಡಲೇ ಜಮಾ ಮಾಡಬೇಕು. ಮತ್ತು ಹೊಸದಾಗಿ ಅರ್ಜಿ ಸಲ್ಲಿಸಲು 3 ತಿಂಗಳವರೆಗೆ ವಿಸ್ತರಿಸಿ ಆದೇಶ ಮಾಡಬೇಕು’ ಎಂದು ಒತ್ತಾಯಿಸಿದರು.

‘ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರಿಗೆ ಉಚಿತ ಲಸಿಕೆಯನ್ನು ಒಂದು ಕಾಲಮಿತಿಯಲ್ಲಿ ಹಾಕಲು ಕ್ರಮ ವಹಿಸಬೇಕು. ಕೋವಿಡ್‌ನಿಂದ ಮೃತಪಟ್ಟ ನೋಂದಾಯಿತ ಕಟ್ಟಡ ಕಾರ್ಮಿಕರ ಕುಟುಂಬಕ್ಕೆ ಕನಿಷ್ಠ ₹10 ಲಕ್ಷ ವಿಶೇಷ ಪರಿಹಾರ ಧನ ನೀಡಬೇಕು’ ಎಂದು ಆಗ್ರಹಿಸಿದರು.

ಈ ನಿಯೋಗದಲ್ಲಿ ವಿ.ಲಕ್ಷ್ಮಣ್, ಆವರಗೆರೆ ಎಚ್.ಜಿ. ಉಮೇಶ್, ಪಿ.ಕೆ. ಲಿಂಗರಾಜ್, ತಿಪ್ಪೇಸ್ವಾಮಿ, ಸತೀಶ್ ಅರವಿಂದ್, ಜಬೀನಾಖಾನಂ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.