ಸೋಮವಾರ, ಜನವರಿ 27, 2020
15 °C

ಶೇಂಗಾಕ್ಕೆ ಬೆಂಬಲ ಬೆಲೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಗಳೂರು: ಶೇಂಗಾ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮತ್ತು ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪಟ್ಟಣದ ಮಿನಿ ವಿಧಾನಸೌಧದ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ಪ್ರತಿಭಟನಕಾರರು ಮಿನಿವಿಧಾನಸೌಧದಲ್ಲಿ ಜಮಾಯಿಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ‘ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬೆಲೆ ಏರಿಕೆಯಾಗುತ್ತಿದೆ. ಡೀಸೆಲ್, ವಿದ್ಯುಚ್ಛಕ್ತಿ, ರಸಗೊಬ್ಬರ ಹಾಗೂ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದರಿಂದಾಗಿ ರೈತರ ಬದುದಕು ಸಂಕಷ್ಟಕ್ಕೆ ಸಿಲುಕಿದೆ. ಆದರೆ ಕೇಂದ್ರ ಸರ್ಕಾರ ಶೇಂಗಾಕ್ಕೆ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್‌ಗೆ ₹ 5,090 ನಿಗದಿಪಡಿಸಿರುವುದು ಸರಿಯಲ್ಲ. ಕಡಿಮೆ ಬೆಲೆ ನಿಗದಿಯಿಂದಾಗಿ ರೈತರು ಪ್ರತಿ ಎಕೆರೆಗೆ ಕನಿಷ್ಠ ₹ 4 ಸಾವಿರ ನಷ್ಟ ಅನುಭವಿಸುವಂತಾಗಿದೆ‘ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 34.10 ಲಕ್ಷ ಎಕರೆ ಹಾಗೂ ಜಗಳೂರು ತಾಲ್ಲೂಕಿನಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ₹ 5090 ಜೊತೆಗೆ ರಾಜ್ಯ ಸರ್ಕಾರದ ₹ 2500 ಸೇರಿಸಿ ದರ ಹೆಚ್ಚಳ ಮಾಡಬೇಕು. ಯಾವುದೇ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸಿದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿರಂಜೀವಿ, ಗಂಗಾಧರಪ್ಪ, ಸತೀಶ್, ಲೋಕೇಶ್, ಯರ್ಲಕಟ್ಟೆ ಕೆಂಚಪ್ಪ, ಶರಣಪ್ಪ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು