ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಸ್ಥಾನಕ್ಕಿಂತ ಸಮಾಜಕ್ಕೆ ಮೀಸಲಾತಿ ಮುಖ್ಯ; ಕೂಡಲಸಂಗಮ ಶ್ರೀ

ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಪಾದನೆ
Last Updated 10 ಆಗಸ್ಟ್ 2021, 15:36 IST
ಅಕ್ಷರ ಗಾತ್ರ

ದಾವಣಗೆರೆ: ‘ನಮ್ಮ ಪ್ರತಿಜ್ಞೆ ಏನಿದ್ದರೂ ಪಂಚಮಸಾಲಿ ಸಮಾಜದ ಬಡವರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಎಂಬುದಾಗಿದೆ. ಸಮಾಜದವರಿಗೆ ಮುಖ್ಯಮಂತ್ರಿ ಸ್ಥಾನ ಕೊಡಿಸುವುದಕ್ಕಿಂತ ಮೀಸಲಾತಿ ಕಲ್ಪಿಸುವುದೇ ನಮಗೆ ಮುಖ್ಯ ವಿಚಾರವಾಗಿದೆ’ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಪಾದಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬದಲಾವಣೆ ಮಾಡುವ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಮೂವರು ಸ್ಪರ್ಧೆಯಲ್ಲಿದ್ದರು. ಆದರೆ, ಕೊನೆ ಕ್ಷಣದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಮಾಡಲಾಯಿತು. ಬಿ.ಎಸ್‌. ಯಡಿಯೂರಪ್ಪ ಅವರು ಪಂಚಮಸಾಲಿ ಸಮಾಜಕ್ಕೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದರು ಎಂಬ ಭಾವನೆ ಸಮಾಜದ ಜನರಲ್ಲಿ ಮೂಡಿದೆ. ಹೀಗಿದ್ದರೂ ಉತ್ತರ ಕರ್ನಾಟಕದ ಲಿಂಗಾಯತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ನಮ್ಮ ಬೇಡಿಕೆ ಈಡೇರಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಮೀಸಲಾತಿಗಾಗಿ ಪಾದಯಾತ್ರೆ ನಡೆಸಿದ ಬಳಿಕ ಪಂಚಮಸಾಲಿ ಸಮದಾಯದ ಶಕ್ತಿ ಬಗ್ಗೆ ಬಿಜೆಪಿಯ ಕೇಂದ್ರದ ನಾಯಕರಿಗೆ ಗೊತ್ತಾಗಿದೆ. ಜೆ.ಎಚ್‌. ಪಟೇಲ್‌ ಮುಖ್ಯಮಂತ್ರಿಯಾದ ನಂತರದ ಎಲ್ಲಾ ಮುಖ್ಯಮಂತ್ರಿಗಳ ಅವಧಿಯಲ್ಲೂ ಪಂಚಮಸಾಲಿ ಸಮುದಾಯದ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗುತ್ತಿತ್ತು. ನಮ್ಮ ಹೋರಾಟದ ಪರಿಣಾಮ ಈ ಬಾರಿ ಸಮಾಜದ ಮೂವರಿಗೆ ಒಳ್ಳೆಯ ಖಾತೆ ಲಭಿಸಿದೆ’ ಎಂದು ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.

‘ಹುಬ್ಬಳ್ಳಿಯಲ್ಲಿ ಆಗಸ್ಟ್‌ 12ರಂದು ಹಮ್ಮಿಕೊಂಡಿರುವ ಪಂಚಮಸಾಲಿ ಹೋರಾಟಗಾರರ ದುಂಡು ಮೇಜಿನ ಸಭೆಗೆ ಹರಿಹರದ ಪಂಚಮಸಾಲಿ ಪೀಠದ ಸ್ವಾಮೀಜಿಯನ್ನು ಆಹ್ವಾನಿಸಿದ್ದೀರಾ’ ಎಂಬ ಪ್ರಶ್ನೆಗೆ, ‘ಸಮಾಜದ ಮುಖಂಡರೆಲ್ಲರೂ ಸಭೆಗೆ ಬರುವಂತೆ ಮಾಧ್ಯಮದ ಮೂಲಕ ಮನವಿ ಮಾಡಿದ್ದೇನೆ’ ಎಂದಷ್ಟೇ ಪ್ರತಿಕ್ರಿಯಿಸಿದರು. ‘ನಿಮ್ಮ ಮುಂದಿನ ಹೋರಾಟಕ್ಕೆ ಹರಿಹರದ ಪೀಠ ಕೈಜೋಡಿಸಲಿದೆಯೇ’ ಎಂಬ ಪ್ರಶ್ನೆಗೆ, ‘ಹರಿಹರದ ಪೀಠ ಕೈಜೋಡಿಸಲಿದೆಯೇ ಎಂಬುದಕ್ಕಿಂತ ಸಮಾಜದ ಜನ ಕೈಜೋಡಿಸುವುದು ನಮಗೆ ಮುಖ್ಯ’ ಎಂದು ಉತ್ತರಿಸಿದರು.

ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ, ‘ಮೀಸಲಾತಿಗಾಗಿ ಎಲ್ಲಿಂದ ಹೋರಾಟ ಆರಂಭವಾಯಿತು? ಯಾರು ನಿಜವಾಗಿಯೂ ಪರಿಶ್ರಮ ಪಟ್ಟಿದ್ದಾರೆ ಎಂಬುದು ಸಮಾಜದ ಜನರಿಗೆ ತಿಳಿದಿದೆ. ಕೂಡಲಸಂಗಮದ ಸ್ವಾಮೀಜಿ ಹೋರಾಟ ಆರಂಭಿಸಿದ ಬಳಿಕ ಬಂದು ಸೇರಿಕೊಂಡವರು ಬೆಂಗಳೂರಿನಲ್ಲಿ ಟಾವಲ್‌ ಸುತ್ತು ಹಾಕಿದ ತಕ್ಷಣ ತಾವು ಪ್ರಪಂಚವನ್ನೇ ಸುತ್ತಿದೆವು ಎಂದುಕೊಂಡರು. ಹರಿಹರ, ಬೆಂಗಳೂರು, ಹರಿದ್ವಾರದಲ್ಲಿ ಮಾತ್ರ ಕಾಣಿಸಿಕೊಳ್ಳುವವರಿಂದ ಸಮಾಜಕ್ಕೆ ನ್ಯಾಯ ಸಿಗುವುದಿಲ್ಲ’ ಎಂದು ಹೇಳುವ ಮೂಲಕ ಪರೋಕ್ಷವಾಗಿ ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವಿರುದ್ಧ ಹರಿಹಾಯ್ದರು.

‘–14 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕೆಲಸ ಮಾಡಿದವರ ಮೈಗೆ, ಕಾಲಿಗೆ ಬೊಬ್ಬೆ ಬರುತ್ತದೆ. ಆದರೆ, ಯಾರು 30 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಿನ ತಾಪಮಾನದಲ್ಲಿ ಕೆಲಸ ಮಾಡುತ್ತಿದ್ದಾರೋ ಅವರ ಕಾಲಿಗೆ ಪಾದಯಾತ್ರೆ ವೇಳೆ ಬೊಬ್ಬೆ ಬಂದಿಲ್ಲ’ ಎಂದು ವ್ಯಂಗ್ಯವಾಡಿದರು.

‘ಜ.14ರಂದು ಕೂಡಲಸಂಗಮದಿಂದ ಪಾದಯಾತ್ರೆ ಆರಂಭಗೊಂಡಾಗ ಸಣ್ಣ ಪ್ರಮಾಣದಲ್ಲಿತ್ತು. ಹರಿಹರಕ್ಕೆ ಬಂದ ಬಳಿಕ ನಾವೆಲ್ಲ ಪಾದಯಾತ್ರೆಗೆ ಆನೆಬಲ ತಂದುಕೊಟ್ಟೆವು. ಹಿಂದುಳಿದ ವರ್ಗಗಳ ಅನೇಕ ಸ್ವಾಮೀಜಿಗಳೂ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದರು’ ಎಂದು ಸ್ಮರಿಸಿದರು.

ಮಾಜಿ ಮೇಯರ್‌ ಬಿ.ಜಿ. ಅಜಯಕುಮಾರ್‌, ಪಂಚಮಸಾಲಿ ಸಮುದಾಯದ ಮುಖಂಡರಾದ ಪ್ರಭು ಕಲಬುರ್ಗಿ ಹಾಗೂ ಸಮಾಜದ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT