ಭಾನುವಾರ, ಏಪ್ರಿಲ್ 2, 2023
32 °C
ರೈತ ಸಂಘದಿಂದ ಪ್ರತಿಭಟನೆ

ರೈತರ ಸಂತೆಗೆ ನಿಗದಿಪಡಿಸಿದ್ದ ಮಳಿಗೆಗಳನ್ನು ರೈತರಿಗೆ ಮೀಸಲಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಇಲ್ಲಿನ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಭಾನುವಾರದ ರೈತ ಸಂತೆಗೆ ನಿಗದಿಪಡಿಸಿದ್ದ ಮಳಿಗೆಗಳನ್ನು ವ್ಯಾಪಾರಿಗಳಿಗೆ ನೀಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.

‘ಜಿಲ್ಲೆಯಲ್ಲಿ 173 ಗ್ರಾಮಗಳಿಂದ 4 ಸಾವಿರದಿಂದ 5 ಸಾವಿರ ತೋಟಗಾರಿಕೆ ಬೆಳೆಗಾರರು ಇದ್ದು, ತರಕಾರಿ, ಹಣ್ಣು ಹಾಗೂ ಹೂವು ಮಾರಾಟ ಮಾಡಲು ನಗರಕ್ಕೆ ಬರುತ್ತಾರೆ. ಇವರಿಗೆ ಅನುಕೂಲವಾಗುವಂತೆ 58 ಮಳಿಗೆಗಳನ್ನು ನಿಗದಿಪಡಿಸಲಾಗಿತ್ತು. ಅವುಗಳಲ್ಲಿ 30 ಮಳಿಗೆಗಳನ್ನು ವರ್ತಕರಿಗೆ ಕಾನೂನುಬಾಹಿರವಾಗಿ ಹಂಚಿಕೆ ಮಾಡಲಾಗಿದೆ’ ಎಂದು ರೈತ ಮುಖಂಡ ಬಲ್ಲೂರು ರವಿಕುಮಾರ್ ಆರೋಪಿಸಿದರು.

‘ರೈತ ಭವನದ ಮುಂಭಾಗದಲ್ಲಿ ಮಳಿಗೆಗಳನ್ನು ಮೀಸಲಿರುಸುವಂತೆ 2019–20ನೇ ಸಾಲಿನಲ್ಲಿ ತಾಲ್ಲೂಕು ರೈತ ಸಂಘದಿಂದ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ಸಲ್ಲಿಸಿದವರಿಗೆ ಈಗ ಯಾವುದೇ ಮಾಹಿತಿ ನೀಡದೇ ವರ್ತಕರಿಗೆ ಮಂಜೂರು ಮಾಡಿ ಬಾಡಿಗೆಗೆ ನೀಡಿದ್ದಾರೆ. ಇದು ರೈತ ವಿರೋಧಿ. ಅಕ್ರಮವಾಗಿ ನೀಡಿರುವ ಮಳಿಗೆಗಳನ್ನು ಕೂಡಲೇ ತೆರವುಗೊಳಿಸಿ ರೈತ ಉತ್ಪಾದಕ ಸಂಘಗಳು ಹಾಗೂ ತರಕಾರಿ ಬೆಳೆಗಾರರಿಗೆ ಕಾಯ್ದಿರಿಸಬೇಕು’ ಎಂದು ಅವರು ಆಗ್ರಹಿಸಿದರು.

ರೈತಭವನದ ಮುಂದಿನ ಸಾಲುಗಳಲ್ಲಿರುವ ವಾಣಿಜ್ಯ ಮಳಿಗೆಗಳು ಬಾಡಿಗೆಗೆ ನೀಡಿದ್ದು, ಮೂಲ ಬಾಡಿಗೆದಾರರು ಅವುಗಳಲ್ಲಿ ವ್ಯಾಪಾರ ನಡೆಸುತ್ತಿಲ್ಲ. ಇದೂ ಅಕ್ರಮವಾಗಿದೆ. ಎಪಿಎಂಸಿ ಕಾರ್ಯದರ್ಶಿ ಹಾಗೂ ಸಮಿತಿಯವರು ಮೇಲಿನ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. 7 ದಿನಗಳ ಒಳಗೆ ಸರಿಪಡಿಸದೇ ಇದ್ದಲ್ಲಿ ನ್ಯಾಯ ಸಿಗುವವರೆಗೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಸಮಧಾನಪಡಿಸಿದರು.

‘ಕಾನೂನು ಪ್ರಕಾರ ಲೈಸೆನ್ಸ್‌ದಾರರಿಗೆ ಮಳಿಗೆ ನೀಡಿದ್ದೇವೆ. ಇನ್ನೂ ಕೆಲವು ಖಾಲಿ ಮಳಿಗೆಗೆಗಳು ಇದ್ದು, ಅವುಗಳನ್ನು ರೈತ ಉತ್ಪಾದಕ ಸಂಘಗಳಿಗೆ ನೀಡಲಾಗುವುದು‘ ಎಂದು ಚಂದ್ರಶೇಖರ್ ತಿಳಿಸಿದರು.

ರೈತ ಮುಖಂಡರಾದ ಹೊನ್ನೂರು ಮುನಿಯಪ್ಪ, ಆವರಗೆರೆ ರುದ್ರಮುನಿ, ಅಣಬೇರು ಅಣ್ಣಪ್ಪ, ಇಟಗಿ ಬಸವರಾಜಪ್ಪ, ರಾಮಪುರ ಬಸವರಾಜು, ಶಿವಕುಮಾರ್ ಬೇತೂರು, ರವಿಕುಮಾರ್ ಬೇತೂರು, ಶಂಕ್ರಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.