ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲು ಮರಗಳನ್ನು ಬೆಳೆಸುತ್ತಿರುವ ನಿವೃತ್ತ ಅಧಿಕಾರಿ

Last Updated 25 ಜೂನ್ 2018, 17:45 IST
ಅಕ್ಷರ ಗಾತ್ರ

ಬಸವಾಪಟ್ಟಣ: ಕೈಯಲ್ಲಿ ಹೀಗೆ ದೊಡ್ಡದೊಂದು ಗಿಡವನ್ನು ಹಿಡಿದು ರಸ್ತೆ ಬದಿಯಲ್ಲಿ ನೆಡುವುದಕ್ಕಾಗಿ ಸಿದ್ಧರಾಗಿರುವವರು ಭೂಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ಎಚ್‌. ಷಣ್ಮುಖಪ್ಪ. ಆರು ವರ್ಷಗಳ ಹಿಂದೆ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಇವರಿಗೆ ಗಿಡಗಳನ್ನು ನೆಟ್ಟು ಬೆಳೆಸುವುದೇ ದಿನ ನಿತ್ಯದ ಕಾಯಕವಾಗಿದೆ.

ನಿವೃತ್ತರಾದವರು ಸರ್ಕಾರ ಕೊಡುವ ಪಿಂಚಿಣಿ ಹಣವನ್ನು ಪಡೆದು ಸುಖವಾಗಿ ವಿಶ್ರಾಂತ ಜೀವನ ನಡೆಸಲು ಆಶಿಸುತ್ತಾರೆ. ಆದರೆ ಬಾಲ್ಯದಿಂದಲೇ ಪರಿಸರ ಪ್ರೇಮವನ್ನು ಒಗ್ಗೂಡಿಸಿಕೊಂಡಿರುವ ಷಣ್ಮುಖಪ್ಪ, ಸರ್ಕಾರಿ ನೌಕರಿಯಲ್ಲಿ ಇರುವಾಗಲೇ ಕಾಡು ಬೆಳೆಸಿ ನಾಡು ಉಳಿಸಿ ಎಂದು ಎಲ್ಲರನ್ನೂ ಪ್ರೋತ್ಸಾಹಿಸಿದವರು.

ನಿವೃತ್ತಿಯ ನಂತರ ಬಸವಾಪಟ್ಟಣದ ಹಾಲಸ್ವಾಮಿ ಗವಿಮಠದ ದಾರಿಯಲ್ಲಿ, ಇಲ್ಲಿನ ಬೆಟ್ಟದ ಮೇಲಿರುವ ದುರ್ಗಾದೇವಿ ದೇವಾಲಯದ ದಾರಿ ಹಾಗೂ ಆವರಣದಲ್ಲಿ ಮತ್ತು ರಸ್ತೆ ಬದಿಗಳಲ್ಲಿ ಈವರೆಗೆ ಸರಿ ಸುಮಾರು ಒಂದು ಸಾವಿರ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ. ಇವರು ನೆಟ್ಟ ಗಿಡಗಳು ಈಗಾಗಲೇ ಬಾಲ್ಯವನ್ನು ದಾಟಿ ಯವ್ವನಕ್ಕೆ ಕಾಲಿಟ್ಟಿವೆ. ನೇರಳೆ, ಕಾಡು ಬಾದಾಮಿ, ಹೊಂಗೆ, ಗಸಗಸೆ , ಬೇವು ಮುಂತಾದ ನೆರಳು ನೀಡುವ ಗಿಡಗಳನ್ನು ನೆಟ್ಟಿರುವ ಇವರು ಅವುಗಳನ್ನು ತಮ್ಮ ಮಕ್ಕಳಂತೆ ಸಾಕುತ್ತಿದ್ದಾರೆ. ವಿವಿಧ ರೀತಿಯ ಸಸ್ಯಗಳ ಬೀಜಗಳನ್ನು ತಂದು ಅವುಗಳನ್ನು ತಮ್ಮ ಮನೆಯ ಆವರಣದಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ಬೆಳೆಸಿ, ಅವು ದೊಡ್ಡವಾಗುತ್ತಿದ್ದಂತೆ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ ನೆಡುವ ಕಾರ್ಯ ಆರಂಭಿಸುತ್ತಾರೆ.

ಮಳೆಗಾಲದಲ್ಲಿ ಕೇವಲ ಗಿಡಗಳನ್ನು ನೆಟ್ಟರೆ ಸಾಲದು, ಅವುಗಳನ್ನು ಜೋಪಾನ ಮಾಡುವುದು ಅತಿ ಮುಖ್ಯ ಎಂಬುದು ಅವರ ಧ್ಯೇಯ. ನೆಟ್ಟ ಗಿಡಗಳಿಗೆ ನೀರುಣಿಸಲೆಂದೇ ಅವರು ಒಂದು ಕಾರು ಖರೀದಿಸಿದ್ದಾರೆ. ಅದರಲ್ಲಿ ವಿವಿಧ ಜಾತಿಯ ಗಿಡಗಳೊಂದಿಗೆ, ಅವುಗಳನ್ನು ನೆಡಲು ಹಾರೆ ಗುದ್ದಲಿ ಸಲಿಕೆಗಳೊಂದಿಗೆ ಸ್ವಂತ ಖರ್ಚಿನಿಂದ ಕೂಲಿಕಾರನ್ನು ನೇಮಿಸಿಕೊಂಡು ಕಾರ್ಯೋನ್ಮುಖರಾಗುತ್ತಾರೆ. ಕಾರಿನಲ್ಲಿ ನೀರಿನ ಕೊಡಗಳನ್ನು ಇಟ್ಟುಕೊಂಡು ತಾವೇ ಕಾರು ಚಲಾಯಿಸುತ್ತಾ, ಗಿಡಗಳಿಗೆ ನೀರೆರೆದು ಸಂತಸ ಪಡುತ್ತಾರೆ.ದನಕರುಗಳಿಗಿಂದ ಅವುಗಳನ್ನು ರಕ್ಷಿಸಲು ಮುಳ್ಳು ಕಂಟಿಗಳನ್ನು ತಂದು ಮರೆ ಮಾಡುತ್ತಾರೆ.

ಎಲ್ಲರೂ ತಮ್ಮ ಮನೆ , ಕಣ ಮತ್ತು ಹೊಲಗಳ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಪೋಷಿಸಿ ಎಂದು ಸಾರ್ವಜನಿಕರಿಗೆ ವಿನಂತಿಸುವ ಇವರಿಗೆ ಪತ್ನಿ ಸರೋಜಮ್ಮ ಮತ್ತು ಇಲ್ಲಿನ ಖ್ಯಾತ ವೈದ್ಯ ಹಾಗೂ ಪರಿಸರ ಪ್ರೇಮಿ ಡಾ. ಬಸವನಗೌಡ ಕುಸಗೂರ್‌ ಅವರು ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಇಲ್ಲಿನ ಗವಿಮಠದ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಇವರ ಪರಿಸರ ಪ್ರೇಮವನ್ನು ಮೆಚ್ಚಿ ಸನ್ಮಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT