ದಾವಣಗೆರೆ: ಇಲ್ಲಿನ ತರಳಬಾಳು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ, ನಿವೃತ್ತ ಪ್ರಾಚಾರ್ಯ ಪ್ರೊ.ಎಸ್.ಬಿ. ರಂಗನಾಥ (82) ಅನಾರೋಗ್ಯದಿಂದ ಗುರುವಾರ ಬೆಳಗಿನಜಾವ ನಿಧನರಾದರು.
ಮೃತರಿಗೆ ಪತ್ನಿ, ಐವರು ಪುತ್ರಿಯರು, ಒಬ್ಬ ಪುತ್ರ ಹಾಗೂ ಬಂಧುಬಳಗ ಇದ್ದಾರೆ. ಇಲ್ಲಿನ ತರಳಬಾಳು ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿ ಮಧ್ಯಾಹ್ನ 1ಗಂಟೆವರೆಗೆ ಪಾರ್ಥಿವ ಶರೀರ ಇರಿಸಿದ ನಂತರ ಅವರ ಹುಟ್ಟೂರಾದ ಚನ್ನಗಿರಿ ತಾಲ್ಲೂಕಿನ ಸಿದ್ದನಮಠ ಗ್ರಾಮದಲ್ಲಿರುವ ಅವರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕನ್ನಡ ಸಾಹಿತ್ಯ ಪರಿಷತ್ ನ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲಾ ಘಟಕಗಳ ಅಧ್ಯಕ್ಷರಾಗಿ, ಶಿಕ್ಷಕ, ಪ್ರಾಧ್ಯಾಪಕ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಇವರು ಲೇಖಕರಾಗಿ, ಅಂಕಣಕಾರರಾಗಿ ಹೆಸರಾಗಿದ್ದರು. 'ಪ್ರಜಾವಾಣಿ'ಯ 'ಚುರುಮುರಿ' ಸೇರಿ ವಿವಿಧ ಅಂಕಣಗಳಲ್ಲೂ ಇವರ ಅನೇಕ ಬರಹಗಳು ಪ್ರಕಟವಾಗಿದ್ದವು.