ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಯದ ರಸ್ತೆ ವಿಸ್ತರಣೆ ಕಾಮಗಾರಿ: ತಪ್ಪದ ಕಿರಿಕಿರಿ

ವಾಹನ ಸವಾರರನ್ನು ಕಂಗೆಡಿಸುತ್ತಿರುವ ರಸ್ತೆ ಗುಂಡಿಗಳು, ದೂಳು
Last Updated 18 ಅಕ್ಟೋಬರ್ 2021, 4:15 IST
ಅಕ್ಷರ ಗಾತ್ರ

ಕುಮಾರಪಟ್ಟಣ: ರಸ್ತೆ ವಿಸ್ತರಣೆ ಕಾಮಗಾರಿ ಆರಂಭಗೊಂಡು ತಿಂಗಳುಗಳೇ ಕಳೆದಿದ್ದರೂ, ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗಿದೆ. ಕಿರಿದಾದ ಏಕಮುಖ ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಎಡತಾಕುವ ಗುಂಡಿಗಳು, ದೂಳಿನಿಂದ ವಾಹನ ಸವಾರರು ನಿಯಂತ್ರಣ ತಪ್ಪಿ ಅಪಾಯಕ್ಕೆ ಸಿಲುಕುವಂತಾಗಿದೆ.

ರಸ್ತೆ ಪಕ್ಕದಲ್ಲಿರುವ ಮನೆಗಳಿಗೆ ಓಡಾಡಲು ಅಡ್ಡಿಯಾಗಿ, ಮಳೆ ನೀರು ಸೇರಿದಂತೆ ಪೈಪ್‌ಲೈನ್‌ಗೆ ಧಕ್ಕೆಯಾಗಿ ಗುಂಡಿಗಳು ತುಂಬಿ ಕೆಸರು ಗದ್ದೆಯಾಗಿವೆ. ಇದರಿಂದ ವಾಹನ ಸವಾರರ ಸಂಚಾರ ಅಸ್ತವ್ಯಸ್ತಗೊಂಡಿದೆ ಎಂದು ಆಟೊ, ಬೈಕ್‌ ಸವಾರರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಚರಂಡಿ ಸೌಲಭ್ಯವಿಲ್ಲದ ಕಾರಣ ಮಳೆಗಾಲದಲ್ಲಿ ಮಳೆನೀರು ಮನೆಗಳಿಗೆ ನುಗ್ಗಿದ್ದು, ಕಾಮಗಾರಿ ವಿಳಂಬದಿಂದ ಮಳೆ ನೀರು ಎತ್ತಿ ಹಾಕಲು ಗ್ರಾಮ ಪಂಚಾಯ್ತಿ ಅವರಿಗೆ ದುಂಬಾಲು ಬೀಳಬೇಕು. ನಮ್ಮ ಸಮಸ್ಯೆಗೆ ಎಂದು ಮುಕ್ತಿ ಸಿಗುತ್ತದೆಯೋ ಗೊತ್ತಿಲ್ಲ ಎನ್ನುತ್ತಾರೆ ವಾಗೀಶನಗರದ ನಿವಾಸಿಗಳು.

‘ಬಹು ದಿನಗಳಿಂದ ವಾಲ್ಮೀಕಿ ವೃತ್ತದಿಂದ ನದಿಸೇತುವೆ ತನಕ ದುರಸ್ತಿಯೇ ಕಾಣದ ರಸ್ತೆಯಲ್ಲಿ ಓಡಾಡಲು ಜನರು ಹಿಂದೇಟು ಹಾಕುತ್ತಿದ್ದರು. ಶಾಸಕ ಅರುಣಕುಮಾರ ಪೂಜಾರ ಜನರ ಸಮಸ್ಯೆಗೆ ಸ್ಪಂದಿಸಿ, ಲೋಕೋಪಯೋಗಿ ಇಲಾಖೆ ಅನುದಾನ ಸೇರಿದಂತೆ ಹೆಚ್ಚುವರಿ ₹14 ಕೋಟಿ ವೆಚ್ಚದ ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ಗ್ರಾಮದ ಹಿರಿಯ ಮುಖಂಡ ನಾಗರಾಜ್‌ ಹಳ್ಳೆಳ್ಳಪ್ಪನವರ ‘ಪ್ರಜಾವಾಣಿ’ಗೆ ತಿಳಿಸಿದರು.

ವಾಲ್ಮೀಕಿ ವೃತ್ತ ಸೇರಿ ಫುಟ್‌ಪಾತ್ ಭಾಗಶಃ ಪೂರ್ಣಗೊಂಡಿದ್ದು, ಯುಜಿಡಿ ಮಾದರಿಯ ಚರಂಡಿಗಳು ನಿರ್ಮಾಣ ಹಂತದಲ್ಲಿವೆ. ಅಂಗಡಿ, ಬೀದಿ ಬದಿ ವ್ಯಾಪಾರಿಗಳ ದುಡಿಮೆಗೆ ಅನುಕೂಲ ಕಲ್ಪಿಸಿದ್ದಾರೆ. ತನ್ನ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಪಣ ತೊಟ್ಟಿರುವ ಶಾಸಕರ ಕಾರ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಶ್ರೀಘ್ರದಲ್ಲಿ ಸೇತುವೆ ದುರಸ್ತಿ: ‘ಶಾಸಕರ ಪ್ರಯತ್ನದಿಂದ ಚಳಗೇರಿ ಗ್ರಾಮಸ್ಥರ ಸೇತುವೆ (ಎನ್‌ಎಚ್‌4) ಎತ್ತರಿಸುವ ಬೇಡಿಕೆ ಈಡೇರಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಹಮತ ತೋರಿದ್ದು, ಪ್ರಸ್ತುತ ಹಂತದಿಂದ 36 ಅಡಿ ಅಗಲ, 12 ಅಡಿ ಎತ್ತರಿಸುವುದಕ್ಕೆ ಒಪ್ಪಿಗೆ ನೀಡಿದ್ದಾರೆ’ ಎಂದು ಬಿಜೆಪಿ ಯುವ ಮುಖಂಡ ಅನಂತ ಇಟಗಿ ಮಾಹಿತಿ ನೀಡಿದರು.

ಮಳೆ– ಗಾಳಿಗೆ ಒಣಗಿದ ಮರದ ರಂಬೆ, ಕೊಂಬೆಗಳು ಮರಿದು ಬೀಳುವ ಸಂಭವವಿದೆ. ಅಪಾಯ ಸಂಭವಿಸುವ ಮುನ್ನವೇ ತೆರವುಗೊಳಿಸಬೇಕು.

ಚೇತನ್‌ ಪೂಜಾರ, ಗ್ರಾ.ಪಂ ಅಧ್ಯಕ್ಷ, ಕೊಡಿಯಾಲ

ಒಣಗಿದ ಮರ ತೆರವಿಗೆ ಆಗ್ರಹ

‘ಕುಮಾರಪಟ್ಟಣ ಮತ್ತು ಹರಿಹರ ನಗರಕ್ಕೆ ಸಂಪರ್ಕ ಕಲ್ಪಿಸುವ ಸಮೀಪದ ಕೊಡಿಯಾಲ ಗ್ರಾಮದ ಹಳೆ ಪಿ.ಬಿ ರಸ್ತೆ (ತುಂಗಭದ್ರಾ ನದಿ ಸೇತುವೆ ಬಳಿ) ಪಕ್ಕದ ಒಣಗಿದ ಬೃಹತ್‌ ಮರ ಗೆದ್ದಲು ಹಿಡಿದು ಯಾವಾಗ ಮುರಿದು ಬೀಳುತ್ತದೆಯೋ ಎನ್ನುವ ಆತಂಕ ವಾಹನ ಸವಾರರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕೂಡಲೇ ಹಳೆ ಮರವನ್ನು ತೆರವುಗೊಳಿಸಿ’ ಎಂದು ಪರಿಸರಪ್ರೇಮಿ ಡಾ.ಜಿ.ಜೆ. ಮೆಹೆಂದಳೆ ಆಗ್ರಹಿಸಿದ್ದಾರೆ.

‘ಶೀಘ್ರದಲ್ಲಿ ಕಾಮಗಾರಿ ಪೂರ್ಣ’

‘ವಾಲ್ಮೀಕಿ ವೃತ್ತದಿಂದ ಈಗಾಗಲೇ ಚರಂಡಿಗಳು ಒಳಗೊಂಡಂತೆ 15 ಮೀ. ಅಗಲವುಳ್ಳ, 430 ಮೀ. ಉದ್ದದ ಕಾಮಗಾರಿ ಮುಗಿದಿದೆ. ಉಳಿದ 970 ಮೀ. ಉದ್ದದ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಮಳೆಯಿಂದಾಗಿ ಹಿನ್ನೆಡೆಯಾಗಿದೆ. ವೃತ್ತದಿಂದ ತುಂಗಭದ್ರ ಸೇತುವೆವರೆಗೂ ಡಿವೈಡರ್‌ ಹಾಗೂ ದೀಪದ ಕಂಬಗಳ ಅಳವಡಿಕೆ ಕಾರ್ಯ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ’ ಎಂದು ಗುತ್ತಿಗೆದಾರ ರವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT