ಸೋಮವಾರ, ಜುಲೈ 26, 2021
21 °C

ಪೊಲೀಸರ ಸೋಗಿನಲ್ಲಿ ದರೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಗಿರಿ: ತಾಲ್ಲೂಕಿನ ಹೆಬ್ಬಳಗೆರೆ ಗ್ರಾಮದ ಕೆರೆ ಏರಿ ಮೇಲೆ ನಾಲ್ವರು ಇಸ್ಪೀಟ್ ಆಡುತ್ತಿದ್ದಾಗ ಪೊಲೀಸರ ಸೋಗಿನಲ್ಲಿ ಬಂದ ನಾಲ್ವರು ಹಣ, ಮೊಬೈಲ್, ಚಿನ್ನದ ಉಂಗುರ ಹಾಗೂ ಬೆಳ್ಳಿ ಕಡಗ ದೋಚಿದ್ದಾರೆ. 

ಹೊದಿಗೆರೆ ಗ್ರಾಮದ ಪ್ರಭಾಕರ, ಜಗದೀಶ ಹಾಗೂ ಗಿರೀಶ ಹಣ ಕಳೆದುಕೊಂಡವರು. ಈ ಮೂವರು ಕೆರೆಯ ದಂಡೆಯ ಮೇಲೆ ಇಸ್ಪೀಟ್ ಆಡುತ್ತಿದ್ದಾಗ ನಾಲ್ಕು ಮಂದಿ ಕೆಂಪು ಕಾರಿನಲ್ಲಿ ಬಂದು ‘ನಾವು ಪೊಲೀಸಿನವರು’ ಎಂದು ಸುಳ್ಳು ಹೇಳಿ ಹೇಳಿ ಬೆದರಿಸಿದ್ದಾರೆ.

ಪ್ರಭಾಕರ ಅವರಿಂದ ₹ 22 ಸಾವಿರ, 1 ಬಂಗಾರದ ಉಂಗುರ, 1 ಕೀ ಪ್ಯಾಡ್ ಮೊಬೈಲ್ ಕಿತ್ತುಕೊಂಡಿದ್ದಾರೆ. ಅದೇ ರೀತಿ ಜಗದೀಶ ಅವರಿಂದ ವಿವೊ ಮೊಬೈಲ್, ಒಂದು ಬೆಳ್ಳಿ ಕಡಗ ಹಾಗೂ ಗಿರೀಶ ಬಳಿ ಇದ್ದ ₹ 5 ಸಾವಿರ ಹಾಗೂ ಬೆಳ್ಳಿ ಚೈನನ್ನು ಕಿತ್ತುಕೊಂಡಿದ್ದಾರೆ.

‘ನೀವು ಬೆಳಿಗ್ಗೆ ಪೊಲೀಸ್ ಠಾಣೆಗೆ ಬನ್ನಿ’ ಎಂದು ಕಳ್ಳರು ಹೋಗಿದ್ದರು. ಪೊಲೀಸ್ ಠಾಣೆಗೆ ವಿಚಾರಿಸಿದಾಗ ಇಲ್ಲಿಂದ ಯಾರೂ ಬಂದಿಲ್ಲ ಎಂಬ ವಿಷಯ ತಿಳಿದಿದೆ.

ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನಾಭರಣ ಕಳವು

ತ್ಯಾವಣಗಿ: ಇಲ್ಲಿನ ಮಿಯಾಪುರ ರಸ್ತೆಯ ಮನೆಯೊಂದರ ಬಾಗಿಲ ಬೀಗ ಮುರಿದ ಕಳ್ಳರು ಚಿನ್ನಾಭರಣ ಸೇರಿ ಹಲವು ₹ 1.23 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಮೊಬೈಲ್ ಸೇಲ್ಸ್ ಮತ್ತು ಸರ್ವೀಸ್ ಕೆಲಸ ಮಾಡುತ್ತಿದ್ದ ಎಸ್. ಪ್ರವೀಣ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಪ್ರವೀಣ್ ಪತ್ನಿ ಹಾಗೂ ಮಕ್ಕಳನ್ನು ಕರೆತರಲು ಬೆಂಗಳೂರಿಗೆ ತೆರಳಿದ್ದ ವೇಳೆ ಕಳ್ಳರು ₹ 24 ಸಾವಿರ ಮೌಲ್ಯದ ಟಿವಿ, ₹55 ಸಾವಿರ ಬೆಲೆಬಾಳುವ ಚಿನ್ನದ ಸರ, ಕಿವಿಯೋಲೆ, ಉಂಗುರ, ಬೆಳ್ಳಿ ಸಾಮಗ್ರಿಗಳು ಹಾಗೂ ₹15 ಸಾವಿರವನ್ನು ಹೊತ್ತೊಯ್ದಿದ್ದಾರೆ.  

ಬಸವಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನದ ಸರ ಕಿತ್ತುಕೊಂಡು ಪರಾರಿ

ದಾವಣಗೆರೆ: ಇಲ್ಲಿನ ಎಂಸಿಸಿ ‘ಎ’ ಬ್ಲಾಕ್‌ನಲ್ಲಿ ವೃದ್ಧೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು 45 ಗ್ರಾಂ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಪ್ರಮೀಳಮ್ಮ ಸರ ಕಳೆದುಕೊಂಡವರು. ಮಧ್ಯಾಹ್ನ 12 ಗಂಟೆ ವೇಳೆ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ಬೈಕ್‌ನಲ್ಲಿ ಬಂದಿದ್ದಾರೆ. ಹಿಂಬದಿಯ ಸವಾರ ಪ್ರಮೀಳಮ್ಮ ಅವರ ಕುತ್ತಿಗೆಯಿಂದ ಎರಡೆಳೆಯ 1 ಬಂಗಾರದ ಸರ, 30ಗ್ರಾಂನ ಅವಲಕ್ಕಿ ಸರದಲ್ಲಿ 10 ಗ್ರಾಂ ಅನ್ನು ಕಿತ್ತುಕೊಂಡು ಹೋಗಿದ್ದಾನೆ. ಇವುಗಳ ಮೌಲ್ಯ ₹1.35 ಲಕ್ಷ ಎಂದು ಅಂದಾಜಿಸಲಾಗಿದೆ.

ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿರುಕುಳ ತಾಳಲಾರದೇ ಆತ್ಮಹತ್ಯೆ

ಹೊನ್ನಾಳಿ: ಹಣಕಾಸಿನ ಸಂಸ್ಥೆಯೊಂದಕ್ಕೆ ಬಾಕಿ ಹಣ ಕಟ್ಟುವಂತೆ ಬೆದರಿಕೆಯೊಡ್ಡಿದ್ದರಿಂದ ಮಾರಾಟ ಪ್ರತಿನಿಧಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಕುಂದೂರು ಗ್ರಾಮದ ಎಂ.ಜೆ. ಆದರ್ಶ (24) ಮೃತಪಟ್ಟವರು. ದಾವಣಗೆರೆಯ ಶ್ರೀರಾಮ ಸಿಟಿ ಯುನಿಯನ್ ಟು ವಿಲರ್ ಫೈನಾನ್ಸ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆದರ್ಶ ಅವರು ₹ 1.15 ಲಕ್ಷ ಬಾಕಿ ಕಟ್ಟಬೇಕಿತ್ತು.

‘ಹಣ ಕಟ್ಟುವಂತೆ ಲೋನ್ ಎಕ್ಸಿಕ್ಯೂಟಿವ್ ಸುನಿಲ್ ಹಾಗೂ ಟೀಂ ಲೀಡರ್ ಹುತ್ತೇಶ ಅವರು ಕಿರುಕುಳ ನೀಡಿದ್ದರಿಂದ ನನ್ನ ಮಗ ಮೃತಪಟ್ಟಿದ್ದಾನೆ’ ಎಂದು ಆದರ್ಶ ಅವರ ತಂದೆ ಎಂ.ಎಚ್. ಜಯಪ್ಪ ಹೊನ್ನಾಳಿ ಠಾಣೆಗೆ ದೂರು ನೀಡಿದ್ದಾರೆ.  

ಗೂಡ್ಸ್ ರೈಲು ಡಿಕ್ಕಿ: ಇಬ್ಬರ ಸಾವು

ಚಳ್ಳಕೆರೆ: ತಳಕು ಗ್ರಾಮದ ಭೋವಿ ಕಾಲೊನಿಯ ಬಳಿ ಭಾನುವಾರ ರಾತ್ರಿ ಬಳ್ಳಾರಿಯಿಂದ ಚಿತ್ರದುರ್ಗದ ಮಾರ್ಗವಾಗಿ ಹೋಗುತ್ತಿದ್ದ ಗೂಡ್ಸ್ ರೈಲು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಬಿಆರ್‌ಸಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕ ಎಚ್. ದೇವರಾಜ (43) ಹಾಗೂ ದಾವಣಗೆರೆಯ ಡಿ. ಸುನೀಲ್ (28) ಮೃತಪಟ್ಟವರು.

ಸಂಬಂಧಿಕರ ಮದುವೆಯ ನಿಮಿತ್ತ, ಶಿಕ್ಷಕ ದೇವರಾಜ ಮತ್ತು ಸುನೀಲ್ ಇಬ್ಬರೂ ತಳಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೋವಿ ಕಾಲೊನಿಗೆ ಹೋಗಿದ್ದರು. ಮದ್ಯ ಸೇವಿಸಿ ಮನೆಗೆ ಮರಳಿ ಬರುವಾಗ ಬಳ್ಳಾರಿ ಕಡೆಯಿಂದ ಬಂದ ಗೂಡ್ಸ್ ರೈಲು ಡಿಕ್ಕಿಯಾಗಿದೆ ಎನ್ನಲಾಗಿದೆ. ಸೋಮವಾರ ಚಳ್ಳಕೆರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ದಾವಣಗೆರೆ ರೈಲ್ವೆ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.