ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಕರ್ಷಣೆ ಕಳೆದುಕೊಂಡ ಆರ್‌ಟಿಇ ಸೀಟು

ಪ್ರವೇಶ ಪಡೆದವರು 329 ಮಕ್ಕಳು; ಖಾಲಿ ಉಳಿದಿವೆ 756 ಸೀಟುಗಳು
Last Updated 5 ಅಕ್ಟೋಬರ್ 2020, 16:06 IST
ಅಕ್ಷರ ಗಾತ್ರ

ದಾವಣಗೆರೆ: ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡುವ ಶಿಕ್ಷಣ ಹಕ್ಕು ಕಾಯ್ದೆಯ (ಆರ್‌.ಟಿ.ಇ) ಕೋಟಾದ ಸೀಟು ಜನಾಕರ್ಷಣೆ ಕಳೆದುಕೊಳ್ಳುತ್ತಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಗೆ ಹಂಚಿಕೆಯಾಗಿದ್ದ 1,085 ಆರ್‌.ಟಿ.ಇ. ಸೀಟುಗಳ ಪೈಕಿ ಕೇವಲ 329 ಸೀಟುಗಳಿಗೆ ಪ್ರವೇಶ ಪಡೆದಿರುವುದೇ ಇದಕ್ಕೆ ಉತ್ತಮ ನಿದರ್ಶನ.

ಆರ್‌.ಟಿ.ಇ ವ್ಯಾಪ್ತಿಗೆ ಒಳಪಡುತ್ತಿದ್ದ ಜಿಲ್ಲೆಯ 176 ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಒಟ್ಟು 1,085 ಸೀಟುಗಳನ್ನು ಉಚಿತವಾಗಿ ಶಿಕ್ಷಣ ನೀಡಲು ಮೀಸಲಿಡಲಾಗಿತ್ತು. ಆದರೆ, 676 ಅರ್ಜಿಗಳು ಮಾತ್ರ ಬಂದಿದ್ದವು. ಇವುಗಳ ಪೈಕಿ 329 ಮಕ್ಕಳು ಮಾತ್ರ ಪ್ರವೇಶ ಪಡೆದಿದ್ದು, 756 ಸೀಟುಗಳು ಖಾಲಿ ಉಳಿದಿವೆ.

ಮೂರ್ನಾಲ್ಕು ವರ್ಷಗಳ ಹಿಂದೆ ಆರ್‌ಟಿಇ ಅಡಿ ಮಕ್ಕಳಿಗೆ ಸೀಟು ಪಡೆಯಲು ಪೋಷಕರು ಪೈಪೋಟಿಗೆ ಇಳಿಯುತ್ತಿದ್ದರು. ಲಾಟರಿ ಎತ್ತಿ ಸೀಟು ಹಂಚಿಕೆ ಮಾಡಬೇಕಾಗುತ್ತಿತ್ತು. ಆದರೆ, ಈಗ ಹಂಚಿಕೆಯಾಗಿರುವ ಸೀಟಿನಷ್ಟೂ ಅರ್ಜಿಗಳು ಬಾರದಂತಹ ಸ್ಥಿತಿಗೆ ತಲುಪಿದೆ.

ಶೂನ್ಯ ಪ್ರವೇಶ: ಚನ್ನಗಿರಿ, ದಾವಣಗೆರೆ ಉತ್ತರ, ಜಗಳೂರು ವಲಯಗಳಲ್ಲಿ ಆರ್‌.ಟಿ.ಇ ಅಡಿ ಒಂದೇ ಒಂದು ಪ್ರವೇಶವೂ ಆಗಿಲ್ಲ. ಹೊನ್ನಾಳಿ ವಲಯದಲ್ಲಿ ಕೇವಲ ಮೂವರು ಮಕ್ಕಳು ಪ್ರವೇಶ ಪಡೆದಿದ್ದಾರೆ. ದಾವಣಗೆರೆ ದಕ್ಷಿಣ ವಲಯದಲ್ಲಿ (310) ಮಾತ್ರ ಪೋಷಕರು ತಕ್ಕಮಟ್ಟಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮೊದಲ ಸುತ್ತಿನಲ್ಲಿ ಒಟ್ಟು 1,085 ಸೀಟುಗಳ ಪೈಕಿ 379 ಸೀಟುಗಳಿಗೆ ಆಯ್ಕೆ ಮಾಡಲಾಗಿತ್ತು. ಆದರೆ, ಇದರಲ್ಲಿ 288 ಮಕ್ಕಳು ಮಾತ್ರ ಪ್ರವೇಶ ಪಡೆದುಕೊಂಡಿದ್ದರು. ಎರಡನೇ ಸುತ್ತಿನಲ್ಲಿ ಆಯ್ಕೆ ಮಾಡಿದ್ದ 72 ಸೀಟುಗಳ ಪೈಕಿ ಕೇವಲ 41 ಸೀಟುಗಳಿಗೆ ಪ್ರವೇಶ ಪಡೆಯಲಾಗಿದೆ. ಖಾಸಗಿ ಶಾಲೆಗಳಲ್ಲಿ ಲಭ್ಯವಿದ್ದ ಆರ್‌.ಟಿ.ಇ ಸೀಟುಗಳಿಗೆ ಮಾತ್ರ ಪೋಷಕರು ಮಕ್ಕಳನ್ನು ಸೇರಿಸಲು ಮುಂದೆ ಬಂದಿದ್ದಾರೆ. ಅನುದಾನಿತ ಶಾಲೆಗಳಿಗೆ ಸೇರಿಸಲು ಆಸಕ್ತಿ ತೋರಿಸಿಲ್ಲ. ಹೀಗಾಗಿ ಖಾಲಿ ಇರುವ ಸೀಟುಗಳಿಗೆ ಮತ್ತೊಂದು ಸುತ್ತಿನ ಆಯ್ಕೆ ಪ್ರಕ್ರಿಯೆ ನಡೆಸದಿರಲು ಇಲಾಖೆ ನಿರ್ಧರಿಸಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ನಿಯಮಗಳು ಬದಲಾಗಿದ್ದರಿಂದ ಎರಡು ವರ್ಷಗಳಿಂದ ಆರ್‌.ಟಿ.ಇ ಸೀಟುಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಸೀಟು ಸಿಗಬಹುದೇ ಎಂದು ಪೋಷಕರು ಪ್ರಯತ್ನಿಸುತ್ತಾರೆ. ಆರ್‌.ಟಿ.ಇ ಸೀಟು ಸಿಗದಿದ್ದರೆ ಹಣ ಕೊಟ್ಟಾದರೂ ಅದೇ ಶಾಲೆಗೆ ಸೇರಿಸುತ್ತಿದ್ದಾರೆ. ಕನ್ನಡ ಮಾಧ್ಯಮದ ಅನುದಾನಿತ ಶಾಲೆಯನ್ನು ಬಹುತೇಕ ಪೋಷಕರು ಆಯ್ಕೆ ಮಾಡಿಕೊಳ್ಳುತ್ತಿಲ್ಲ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

**

ಅರ್ಜಿ ಸಲ್ಲಿಸದ್ದ ಬಹುತೇಕ ಪೋಷಕರು ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೇ ಸೇರಿಸಲು ಬಯಸಿದ್ದರು. ಹೀಗಾಗಿ ಕನ್ನಡ ಮಾಧ್ಯಮದ ಅನುದಾನಿತ ಶಾಲೆಗಳ ಸೀಟುಗಳು ಖಾಲಿ ಉಳಿದಿವೆ.

– ಸಿ.ಆರ್‌. ಪರಮೇಶ್ವರಪ್ಪ, ಡಿಡಿಪಿಐ

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT