ಶುಕ್ರವಾರ, ನವೆಂಬರ್ 27, 2020
20 °C
ಸಿರಿಗೆರೆ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಗ್ರಹ

ಪ್ರೌಢಶಾಲಾ ಮಾದರಿಯಲ್ಲೇ ಪದವೀಧರ ಶಿಕ್ಷಕರಿಗೆ ವೇತನ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪ್ರೌಢಶಾಲೆ ಶಿಕ್ಷಕರಿಗೆ ನೀಡುವ ವೇತನವನ್ನೇ ಪದವೀಧರ ಪ್ರಾಥಮಿಕ ಶಿಕ್ಷಕರಿಗೂ ನೀಡಬೇಕು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.

ಕರ್ನಾಟಕ ರಾಜ್ಯ 6–8 ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದಿಂದ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲಾ ಘಟಕಗಳ ಸಹಭಾಗಿತ್ವದಲ್ಲಿ ಇಲ್ಲಿನ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಪದವೀಧರ ಪ್ರಾಥಮಿಕ ಶಿಕ್ಷಕರ (6–8) ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಹಿಂದೆ ಇದ್ದ ಶಿಕ್ಷಕರು ಪಾಠ ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ 8ನೇ ತರಗತಿಗೆ ಪಾಠ ಮಾಡಲು ಪದವೀಧರ ಶಿಕ್ಷಕರನ್ನು ಸರ್ಕಾರ ನೇಮಕ ಮಾಡಿಕೊಂಡಿದೆ. ಅವರನ್ನು ನೇಮಕ ಮಾಡಿಕೊಂಡ ಮೇಲೆ ಹಿಂದೆ ಇದ್ದ ಸಂಬಳವನ್ನೇ ನೀಡುವುದು ಯಾವ ನ್ಯಾಯ? ಪ್ರೌಢಶಾಲಾ ಶಿಕ್ಷಕರಿಗೆ ಕೊಡುವ ವೇತನವನ್ನೇ ಪದವೀಧರ ಪ್ರಾಥಮಿಕ ಶಿಕ್ಷಕರಿಗೆ ಕೊಡಲೇಬೇಕು. ಪಾಠ ಮಾತ್ರ ಮಾಡಿ ಸಂಬಳ ನೀಡದಿದ್ದರೆ ತಾರತಮ್ಯ ಮಾಡಿದಂತಾಗುತ್ತದೆ. ಈ ತಾರತಮ್ಯವನ್ನು ಸಚಿವರು ಹಾಗೂ ಶಾಸಕರು ಸರಿ ಮಾಡಬೇಕು’ ಎಂದು ಆಗ್ರಹಿಸಿದರು.

‘ದೇಶದಲ್ಲಿ ಮೂರು ಹಂತಗಳಲ್ಲಿ ಶಿಕ್ಷಣ ನೀಡುತ್ತಿದ್ದು, ಮಾಧ್ಯಮಿಕ ಶಾಲೆಗಳಲ್ಲಿ 6ರಿಂದ 8ನೇ ತರಗತಿಗಳನ್ನು ಓದಿ ಪುನಃ 8ನೇ ತರಗತಿಯನ್ನು ಪ್ರೌಢಶಾಲೆಯಲ್ಲಿ ಓದಬೇಕಾಗಿದೆ. 6ರಿಂದ 8ರವರೆಗೆ ಒಂದು ಘಟಕ ಮಾಡಿದ ಮೇಲೆ ಪ್ರೌಢಶಾಲೆಗೆ 8ನೇ ತರಗತಿ ಇರಬಾರದು. ಶಿಕ್ಷಣ ಇಲಾಖೆ ಅನೇಕ ಬದಲಾವಣೆ ಮಾಡುತ್ತಿದ್ದು, ಏನಾದರೂ ಬದಲಾವಣೆ ಮಾಡಬೇಕಾದರೆ ಸಮಗ್ರವಾಗಿ ಅಧ್ಯಯನ ಮಾಡಿ ಯಾವುದೇ ವ್ಯತ್ಯಾಸಗಳು ಆಗದಂತೆ ಸಮಸ್ಯೆಗಳು ಬಾರದಂತೆ ಚಿಂತನೆಯನ್ನು ಶಿಕ್ಷಣ ಇಲಾಖೆ ಮಾಡಿಬೇಕು. ಆದರೆ ಅದು ಆಗಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಶಿಕ್ಷಕರು ಮಾಡುವ ಪಾಠ ತುಂಬ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಶಿಕ್ಷಕರು ಹೇಳಿದ್ದೇ ಸರಿ ಎಂಬಂತೆ ಬಿಂಬಿಸುತ್ತವೆ. ಪಾಠವಷ್ಟೇ ಅಲ್ಲ. ವಿದ್ಯಾರ್ಥಿಗಳ ಮನಸ್ಸುನಲ್ಲಿ ಪರಿಣಾಮಕಾರಿಯಾಗಿ ಉತ್ಸಾಹ ಉಂಟು ಮಾಡುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ದೇಶದಲ್ಲಿ ಅನೇಕ ಸಮಸ್ಯೆಗಳಿವೆ. ನಮ್ಮ ಪವಿತ್ರ ಕಾರ್ಯದಲ್ಲಿ ಭಾರತದ ಭವಿಷ್ಯವನ್ನು ನಿರ್ಮಾಣ ಮಾಡುವ ಶಿಲ್ಪಿಗಳು’ ಎಂದರು.

‘ಶೈಕ್ಷಣಿಕವಾಗಿ ಮಕ್ಕಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದರೆ ಶಿಕ್ಷಕರಿಗೆ ಸರ್ಕಾರ ಆರ್ಥಿಕ ಸವಲತ್ತುಗಳನ್ನು ನೀಡಬೇಕು. ಅಮೆರಿಕಾದಲ್ಲಿ ಅಧ್ಯಾಪಕರಿಗೆ ಸಂಶೋಧನೆಗಾಗಿಯೇ ಎರಡು ವರ್ಷ ರಜೆ ಕೊಡಲಾಗುತ್ತದೆ. ಸಂಬಳವನ್ನೂ ನೀಡುತ್ತದೆ. ಅದೇ ರೀತಿ ಭಾರತದಲ್ಲೂ ಆಗಬೇಕು. ಯಾವುದೇ ಬದಲಾವಣೆ ತಂದರೂ ಮುಂದೆ ಬರಬಹುದಾದಂತಹ ಸಮಸ್ಯೆಗಳನ್ನು ಸರಿಪಡಿಸಬೇಕು. ಇದು ಆಡಳಿತದ ಜವಾಬ್ದಾರಿ’ ಎಂದರು.

ವಿಧಾನ ಪರಿಷತ್ ಸದಸ್ಯ ಚೌಡಾರೆಡ್ಡಿ ಮಾತನಾಡಿ, ‘ಜಿಪಿಟಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಈಗಾಗಲೇ ಶಿಕ್ಷಣ ಸಚಿವರನ್ನು ಭೇಟಿ ಮನವರಿಕೆ ಮಾಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ನಡೆಯುವ ಅಧಿವೇಶನದಲ್ಲಿ ಭೇಟಿ ಮಾಡಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಲಾಗುವುದು’ ಎಂದರು.

ರಾಜ್ಯ ಮಂಡಳಿಯ ಕಾರ್ಯಾಧ್ಯಕ್ಷ ಮುರುಳೀಧರ ಪಿ. ಪ್ರಾಸ್ತಾವಿಕವಾಗಿ ಮಾತನಾಡಿ, ‘ಜಿಪಿಟಿ ಶಿಕ್ಷಕರು ಬಡ್ತಿ, ವರ್ಗಾವಣೆ, ವೇತನ ತಾರತಮ್ಯ ಹಾಗೂ ನೇಮಕಾತಿ ಆದೇಶಗಳಲ್ಲಿ ಸಾಕಷ್ಟು ಗೊಂದಲಗಳನ್ನು ಎದುರಿಸುತ್ತಿದ್ದು,, ಇದವುಗಳನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಅಭಿವೃದ್ಧಿ) ಲಿಂಗರಾಜು ಎಚ್.ಕೆ. ಮಾತನಾಡಿ, ‘ವಿದ್ಯಾರ್ಥಿಗಳಿಗೆ ಪಾಠ ಮಾಡುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ರೂಪಿಸಬೇಕು. ಭಾರತೀಯ ಸಂಸ್ಕೃತಿ ಉಳಿಸಬೇಕು. ಮಕ್ಕಳನ್ನು ರೂಪಾಂತರಗೊಳಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಲಾಕ್ಷಪ್ಪ, ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ, ದಾವಣಗೆರೆ ಉತ್ತರ ವಲಯದ ಬಿಇಒ ಉಷಾಕುಮಾರಿ, ಕರ್ನಾಟಕ ರಾಜ್ಯ ಬಡ್ತಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಯಲ್ಲಪ್ಪಗೌಡ, ವಾಮದೇವಪ್ಪ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು