ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್‌ ಗ್ರೂಪ್ ರಚಿಸಿ ಜನರ ಸಮಸ್ಯೆಗೆ ಸ್ಪಂದನ

ಗ್ರಾಮ ಪಂಚಾಯಿತಿ ನೂತನ ಸದಸ್ಯೆಯ ಮಾದರಿ ನಡೆ
Last Updated 15 ಫೆಬ್ರುವರಿ 2021, 13:41 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡು ತಮ್ಮ ವ್ಯಾಪ್ತಿಯ ನಾಗರಿಕರ ಸಮಸ್ಯೆಗೆ ಸ್ಪಂದಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಗ್ರಾಮದ ನಾಲ್ಕನೇ ವಾರ್ಡ್‌ನಲ್ಲಿ ಈಚೆಗೆ ಸ್ಪರ್ಧಿಸಿ ಜಯಗಳಿಸಿದ ಶಿಲ್ಪಾ ಮರುಳ ಸಿದ್ದೇಶ್ ಪತಿಯ ನೆರವಿನೊಂದಿಗೆ ‘ಸಂತೇಬೆನ್ನೂರು 4ನೇ ವಾರ್ಡ್’ ಎಂಬ ಗ್ರೂಪ್ ರಚಿಸಿಕೊಂಡಿದ್ದಾರೆ. ಅದರಲ್ಲಿ ವಾರ್ಡ್‌ ಮತದಾರರನ್ನು ಸದಸ್ಯರನ್ನಾಗಿ ಸೇರಿಸಿಕೊಂಡಿದ್ದಾರೆ.

ವಾರ್ಡ್‌ನಲ್ಲಿನ ಮೂಲಸೌಕರ್ಯಗಳ ಸಮಸ್ಯೆಗಳನ್ನು ಗ್ರೂಪ್‌ನಲ್ಲಿ ಫೋಟೊ ಸಹಿತ ಹಾಕಲು ಮನವಿ ಮಾಡಿಕೊಂಡಿದ್ದಾರೆ. ಒಂದು ತಿಂಗಳಿನಿಂದ ಹಲವು ಸಮಸ್ಯೆಗಳಿಗೆ ತತ್‌ಕ್ಷಣ ಪರಿಹಾರ ನೀಡಿದ್ದಾರೆ. ಮಿನಿ ಟ್ಯಾಂಕ್ ಸೋರಿಕೆ ಕುರಿತು ನಿವೇದಿಸಿಕೊಂಡವರಿಗೆ ತಕ್ಷಣ ಕಾರ್ಮಿಕರ ನೆರವಿನೊಂದಿಗೆ ಹೊಸ ಪೈಪ್ ಅಳವಡಿಸಿದ್ದಾರೆ. ಬೆಂಕಿ ಹಚ್ಚಿ ಸುಟ್ಟ ಪೈಪ್‌ಲೈನ್ ದುರಸ್ತಿ ಮಾಡಿಸಿದ್ದಾರೆ. ಮಿನಿ ಟ್ಯಾಂಕ್‌ಗೆ ನೀರು ತುಂಬಿಸುವ ಅಹವಾಲಿಗೆ ಸ್ಪಂದಿಸಿದ್ದಾರೆ. ಚರಂಡಿಗಳಲ್ಲಿ ಸ್ವಚ್ಛತೆಯ ಮನವಿಗೆ ಶೀಘ್ರ ಪರಿಹಾರ ದೊರಕಿಸಿಕೊಡುವಲ್ಲಿ ಸಮರ್ಥರಾಗಿದ್ದಾರೆ.

‘ಪರಿಶಿಷ್ಟ ವರ್ಗದ ಅಲೆಮಾರಿ ಜನಾಂಗದವರ ಗುಡಿಸಲುಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಸ್ವಂತ ಖರ್ಚಿನಲ್ಲಿ ₹ 12 ಸಾವಿರ ವೆಚ್ಚದಲ್ಲಿ ವಿದ್ಯುತ್ ಕಂಬ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕೆಲವರಿಗೆ ಸೋಲಾರ್ ಪ್ಯಾನಲ್‌ಗಳನ್ನು ನೀಡಿ ರಾತ್ರಿ ವಿದ್ಯುತ್ ಬೆಳಕಿನಲ್ಲಿ ವಾಸಿಸಲು ಸಹಕರಿಸಿದ್ದೇನೆ’ ಎನ್ನುತ್ತಾರೆ ಶಿಲ್ಪಾ.

‘ಮನೆ ಮನೆಗೆ ತೆರಳಿ ಜನರ ಸಮಸ್ಯೆ ಆಲಿಸುತ್ತಿದ್ದೇನೆ. ವ್ಯಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿಕೊಂಡು ಸಮಸ್ಯೆ ಬಗ್ಗೆ ದಾಖಲಿಸಲು ಕೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಡವರಿಗೆ ಮನೆಗಳ ಮಂಜೂರಾತಿಗೆ ಶ್ರಮಿಸಲಾಗುವುದು’ ಎನ್ನುತ್ತಾರೆ ಅವರು.

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬಿ.ಎ. ಪದವಿಯಲ್ಲಿ 9ನೇ ರ‍್ಯಾಂಕ್ ಪಡೆದಿದ್ದೆ. ಎಂ.ಎ. ಪದವಿ ಪಡೆದು ಗೃಹಿಣಿ ಆಗಿದ್ದೆ. ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಮೂಲಕ ಜನಸೇವೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಶಿಲ್ಪಾ ಮರುಳ ಸಿದ್ದೇಶ್, ಗ್ರಾ.ಪಂ ಸದಸ್ಯೆ.

ಕಳೆದ ಹಲವು ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಗುಡಿಸಲಲ್ಲಿ ವಾಸಿಸುತ್ತಿದ್ದೇವೆ. ನೂತನ ಗ್ರಾಮ ಪಂಚಾಯಿತಿ ಸದಸ್ಯರು ಗೆದ್ದ ಕೆಲವೇ ದಿನಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಸಿರುವುದು ಭರವಸೆ ಮೂಡಿಸಿದೆ.

ಮಾರಪ್ಪ, ನಾಲ್ಕನೇ ವಾರ್ಡ್ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT