ಶುಕ್ರವಾರ, ಜನವರಿ 27, 2023
27 °C
ಎಐಸಿಸಿ ಎಸ್‌ಸಿ ಘಟಕದ ಅಧ್ಯಕ್ಷ ರಾಜೇಶ್‌ ಲಿಲೋತಿಯಾ

ಎಲ್ಲರಿಗೂ ಅಧಿಕಾರ ನೀಡಿದ ಸಂವಿಧಾನ ಉಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಆರ್‌ಎಸ್‌ಎಸ್‌, ಮನುವಾದಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಮತ್ತು ಮಹಿಳೆಯರಿಗೆ ಅಧಿಕಾರವನ್ನು ನಿರಾಕರಿಸಿದ್ದರು. ಈ ಎಲ್ಲರಿಗೂ ಅಂಬೇಡ್ಕರ್‌ ಅವರು ಸಂವಿಧಾನದ ಮೂಲಕ ಅಧಿಕಾರ ನೀಡಿದರು. ಅಂಥ ಸಂವಿಧಾನವನ್ನು ನಾವು ಉಳಿಸಿಕೊಳ್ಳಬೇಕು’ ಎಂದು ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ರಾಜೇಶ್‌ ಲಿಲೋತಿಯಾ ಹೇಳಿದರು.

ಸೋಮವಾರ ಭಾರತ್ ಜೋಡೋ -ಸಂವಿಧಾನ ಬಚಾವೋ ಪಾದಯಾತ್ರೆಯ ಬಳಿಕ ಜಿಲ್ಲಾ ಕಾಂಗ್ರೆಸ್‌ ಕಚೇರಿ ಬಳಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂವಿಧಾನವನ್ನು ಬದಲಾಯಿಸಲು, ಸಂವಿಧಾನವನ್ನು ಮುಗಿಸಲು ಈಗಿನ ಬಿಜೆಪಿ ಸರ್ಕಾರ ಯತ್ನಿಸುತ್ತಿದೆ. ಎಲ್ಲರಿಗೂ ಸ್ವಾಭಿಮಾನದ, ಗೌರವವದ ಬದುಕಿನ ಅವಕಾಶವನ್ನು ನೀಡಿದ ಸಂವಿಧಾನವನ್ನು ಬದಲಾಯಿಸಲು ಬಿಡಬಾರದು’ ಎಂದು ವಿವರಿಸಿದರು.

‘ಮಹಿಳೆಯರನ್ನು ಒಳಗೊಳ್ಳದೇ ಕುಟುಂಬ, ಪಕ್ಷ, ದೇಶ ಪರಿಪೂರ್ಣವಲ್ಲ. ದೇಶದಲ್ಲಿ ಶೇ 50ರಷ್ಟು ಇರುವ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ ಪಕ್ಷಕ್ಕೆ ಮುಖ್ಯ’ ಎಂದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಮಾತನಾಡಿ, ‘ಯುವಜನರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ 8 ವರ್ಷಗಳ ಹಿಂದೆ ಹೇಳಿ ಅಧಿಕಾರಕ್ಕೆ ಬಂದಿರುವ ಮೋದಿ ಅವರು ನಿರುದ್ಯೋಗ ಹೆಚ್ಚಿಸಿದರು. ಈರುಳ್ಳಿ ಬೆಲೆ ಹೆಚ್ಚಾದಾಗ ಜನರಿಗೆ ಮಂಕುಬೂದಿ ಎರಚಿ, ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿ ಬಂದಿರುವ ಬಿಜೆಪಿ ಸರ್ಕಾರ ಬೆಲೆ ನಿಯಂತ್ರಣ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ’ ಎಂದು ಅಂಕಿ ಅಂಶಗಳನ್ನು
ನೀಡಿದರು.

‘ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ದಬ್ಬಾಳಿಕೆಯ ರಾಜಕಾರಣವನ್ನು ಬಿಜೆಪಿ ಮಾಡುತ್ತಾ ಬಂದಿದೆ. ಆದರೆ ಜನಪರವಾಗಿ, ನ್ಯಾಯಪರವಾಗಿ, ಶೋಷಿತರ ಪರವಾಗಿ ಇರುವ ಕಾಂಗ್ರೆಸ್‌ ಅನ್ನು ಮುಗಿಸಲು ಇವರಿಂದ ಸಾಧ್ಯವಿಲ್ಲ. ಅಂಬೇಡ್ಕರ್‌ ಸಂವಿಧಾನ ರಚನೆ ಮಾಡದೇ ಇದ್ದಿದ್ದರೆ ನಮ್ಮ ಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಎಲ್ಲರೂ ಯೋಚಿಸಬೇಕು. ಇಂಥ ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವವರಿಗೆ ಪಾಠ ಕಲಿಸಬೇಕು’ ಎಂದರು.

ಕಾಂಗ್ರೆಸ್‌ ಪರಿಶಿಷ್ಟ ಜಾತಿ ರಾಜ್ಯ ಘಟಕದ ಅಧ್ಯಕ್ಷ ಧರ್ಮಸೇನಾ ಸಂವಿಧಾನದ ಪೀಠಿಕೆ ವಾಚಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಚ್‌. ವೀರಭದ್ರಪ್ಪ, ಮುಖಂಡರಾದ ಕೆ.ಎಸ್‌. ಬಸವಂತಪ್ಪ, ಡಿ.ಜಿ. ಶಾಂತನಗೌಡ, ಕೆ.ಜಿ. ಶಿವಕುಮಾರ್‌, ಮಾಗನಳ್ಳಿ ಪರಶುರಾಮ್‌, ಮಂಜುನಾಥ್‌, ಪುಟ್ಟಸ್ವಾಮಿ ಗೌಡ, ಕೆ.ಪಿ. ಪಾಲಯ್ಯ, ಅಯೂಬ್‌ ಪೈಲ್ವಾನ್‌, ಸವಿತಾ ಬಾಯಿ ಮಲ್ಲೇಶ್‌ನಾಯ್ಕ್‌, ಕೆ.ಎಲ್. ಹರೀಶ್‌, ಡೋಲಿ ಚಂದ್ರು ಮುಂತಾದವರು ಇದ್ದರು.

ಮಲ್ಲಿಕಾರ್ಜುನ್ ಸ್ವಾಗತಿಸಿದರು. ನಂಜಾನಾಯ್ಕ್‌ ನಿರೂಪಿಸಿದರು.

‘ಕಮಿಷನ್‌ ವಿರೋಧಿಸಿ ಪಾದಯಾತ್ರೆ’

‘ಬಿಜೆಪಿಯ ಜನವಿರೋಧಿ ನೀತಿಯ ವಿರುದ್ಧ ರಾಹುಲ್‌ ಗಾಂಧಿ ದೇಶದಾದ್ಯಂತ ಪಾದಯಾತ್ರೆ ಮಾಡುತ್ತಿದ್ದಾರೆ. ಅದರ ಜತೆಗೆ ರಾಜ್ಯದ ಬಿಜೆಪಿ ಸರ್ಕಾರದ ಬೆಲೆ ಏರಿಕೆ, 40 ಪರ್ಸೆಂಟ್ ಕಮಿಷನ್ ದಂಧೆಯ ವಿರುದ್ಧ ಕಾಂಗ್ರೆಸ್‌ನಿಂದ ಜಿಲ್ಲೆ ಜಿಲ್ಲೆಗಳಲ್ಲಿ ಭಾರತ್ ಜೋಡೋ -ಸಂವಿಧಾನ ಬಚಾವೋ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಹೆಚ್ಚಳದಿಂದ ಜನಸಾಮಾನ್ಯರು ಬದುಕು ನಡೆಸಲು ಆಗದಂಥ ದಿನಗಳನ್ನು ತಂದೊಡ್ಡಿವೆ. ಮುಖ್ಯವಾಗಿ ರಾಜ್ಯದಲ್ಲಿ 40 ಪರ್ಸೆಂಟ್‌ ದಂಧೆ ಅವ್ಯಾಹತವಾಗಿದೆ. ಅದರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಇನ್ನೂ ಹೆಚ್ಚಾಗಿದೆ’ ಎಂದು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು