ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಶಾಲೆಗಳತ್ತ ಹೆಜ್ಜೆ ಹಾಕಿದ ಮಕ್ಕಳು

ಪಠ್ಯಪುಸ್ತಕ, ಸಮವಸ್ತ್ರ ವಿತರಣೆ* ಗುಲಾಬಿ ಹೂ ನೀಡಿ ಸ್ವಾಗತ
Published 31 ಮೇ 2024, 13:05 IST
Last Updated 31 ಮೇ 2024, 13:05 IST
ಅಕ್ಷರ ಗಾತ್ರ

ದಾವಣಗೆರೆ: ಬೇಸಿಗೆ ರಜೆಯ ಮುಗಿದು ಶುಕ್ರವಾರದಿಂದ ಶಾಲೆಗಳು ಆರಂಭವಾಗಿದ್ದು, ಮಕ್ಕಳು ಲವಲವಿಕೆಯಿಂದಲೇ ಶಾಲೆಯತ್ತ ಹೆಜ್ಜೆ ಹಾಕಿದರು. ಮೊದಲ ದಿವಸ ಶೇ 40–50ರಷ್ಟು ಹಾಜರಾತಿ ಕಂಡುಬಂದಿತು.

ಶಾಲೆಗಳನ್ನು ಬಾಳೆಕಂದು, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಶಿಕ್ಷಕರು ಮಕ್ಕಳಿಗೆ ಗುಲಾಬಿ ಹೂ ನೀಡಿ ಶಾಲೆಗೆ ಬರಮಾಡಿಕೊಂಡರು. ಶಾಲೆಗಳಲ್ಲಿ ಶುಕ್ರವಾರ ಹಬ್ಬದ ವಾತಾವರಣ ಕಂಡು ಬಂದಿತು. ಶಿಕ್ಷಕರು, ಬಿಇಒಗಳು ಮಕ್ಕಳಿಗೆ ಸಿಹಿ ತಿನಿಸಿ ತರಗತಿಗಳಿಗೆ ಕಳುಹಿಸಿದರು. ಮಧ್ಯಾಹ್ನದ ಬಿಸಿಯೂಟದಲ್ಲೂ ಸಿಹಿ ನೀಡಲಾಯಿತು. ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಯಿತು.

‘465 ಪ್ರೌಢಶಾಲೆ, 1498 ಪ್ರಾಥಮಿಕ ಶಾಲೆಗಳು ಇದ್ದು, 2.66 ಲಕ್ಷ ವಿದ್ಯಾರ್ಥಿಗಳು ಇದ್ದಾರೆ. ಮೊದಲ ದಿವಸ ಶೇ 40–50ರಷ್ಟು ಇತ್ತು’ ಎಂದು ಡಿಡಿಪಿಐ ಕೊಟ್ರೇಶ್ ಮಾಹಿತಿ ನೀಡಿದರು.

ನಗರದ ನಿಟುವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಡಿಡಿಪಿಐ ಜಿ. ಕೊಟ್ರೇಶ್ ಮಕ್ಕಳಿಗೆ ಗುಲಾಬಿ ಹೂ ನೀಡುವ ಮೂಲಕ ಅವರನ್ನು ಸ್ವಾಗತಿಸಿದರು. ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು. ನೋಟ್ ಪುಸ್ತಕದಲ್ಲಿ ಒಂದನೇ ತರಗತಿಯ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಮಕ್ಕಳಿಗೆ ಲಡ್ಡು ವಿತರಿಸಲಾಯಿತು.

‘ಮಧ್ಯಾಹ್ನದ ಬಿಸಿಯೂಟದಲ್ಲಿ ಕೇಸರಿಬಾತ್ ಹಾಗೂ ಫುಲಾವ್ ನೀಡಲಾಯಿತು. ಮೊದಲ ದಿವಸ 555 ಮಕ್ಕಳಲ್ಲಿ 300ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಬಂದಿದ್ದರು’ ಎಂದು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸ್ವಾಮಿ ತಿಳಿಸಿದರು.

ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸುರೇಶ್, ಬಿಸಿಯೂಟ ವಿಭಾಗದ ಶಿಕ್ಷಣಾಧಿಕಾರಿ ದುರ್ಗಪ್ಪ, ಎಸ್‌ಡಿಎಂಸಿ ಅಧ್ಯಕ್ಷೆ ಲತಾ, ಶಿಕ್ಷಕರಾದ ಜಯಪ್ಪ, ಅಜಯ್ ನಾರಾಯಣ್, ಸೇವಾದಳ ಸಂಘಟಕ ಪಕ್ಕೀರ್ ಗೌಡ, ವಿಷಯ ಪರಿವೀಕ್ಷಕ ಹಾಗೂ ಸಿಬ್ಬಂದಿ ಇದ್ದರು.

ಬಸಾಪುರ ಶಾಲೆಯಲ್ಲಿ ಸ್ವಾಗತ

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 21ನೇ ವಾರ್ಡ್ ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕೆ.ಎಸ್. ರೇವಣಸಿದ್ದಪ್ಪ ರಂಗಮಂದಿರ ಆವರಣದಲ್ಲಿ ಮಕ್ಕಳಿಗೆ ಗುಲಾಬಿ ಹೂ ನೀಡುವ ಮಕ್ಕಳನ್ನು ಸ್ವಾಗತಿಸಲಾಯಿತು.

ಗ್ರಾಮದ ಮುಖಂಡ ಹರೀಶ್ ಕೆ.ಎಲ್. ಬಸಾಪುರ ಮಕ್ಕಳಿಗೆ ಶುಭ ಹಾರೈಸಿ, ‘ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯ ಮಕ್ಕಳು ರಾಜ್ಯದಲ್ಲಿಯೇ ಮೊದಲ ಸ್ಥಾನ ಗಳಿಸಿದ್ದು, ಇದು ನಿಮಗೆ ಪ್ರೇರಣೆಯಾಗಬೇಕು. ಶೇ 100ರಷ್ಟು ಹಾಜರಾತಿ ದಾಖಲಾದ ಎಲ್ಲಾ ಮಕ್ಕಳಿಗೂ ನೆನಪಿನ ಕಾಣಿಕೆ ನೀಡುತ್ತೇನೆ’ ಎಂದು ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಗುರುಸಿದ್ದಯ್ಯ, ಉಪಾಧ್ಯಕ್ಷೆ ಮಂಜುಳಾ, ಪ್ರಭಾರಿ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಇದ್ದರು.

ಶಾಲಾ ಆರಂಭೋತ್ಸವದ ಪ್ರಯುಕ್ತ ದಾವಣಗೆರೆಯ ನಿಟುವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಡಿಡಿಪಿಐ ಜಿ.ಕೊಟ್ರೇಶ್ ಮಕ್ಕಳಿಗೆ ಸಿಹಿ ತಿನ್ನಿಸಿದರು.
ಶಾಲಾ ಆರಂಭೋತ್ಸವದ ಪ್ರಯುಕ್ತ ದಾವಣಗೆರೆಯ ನಿಟುವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಡಿಡಿಪಿಐ ಜಿ.ಕೊಟ್ರೇಶ್ ಮಕ್ಕಳಿಗೆ ಸಿಹಿ ತಿನ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT