ಶುಕ್ರವಾರ, ಜುಲೈ 30, 2021
26 °C
ವಾರಾಂತ್ಯ ಬಿಟ್ಟು ಬೇರೆ ದಿನ ಮಧ್ಯಾಹ್ನ 2 ಗಂಟೆವರೆಗೆ ಖರೀದಿಗೆ ಅವಕಾಶ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಸೋಮವಾರದಿಂದ ಶುಕ್ರವಾರದವರೆಗೆ ಅರೆ ಅನ್‌ಲಾಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇ 5ಕ್ಕಿಂತ ಅಧಿಕ, ಶೇ 10ಕ್ಕಿಂತ ಒಳಗೆ ಇರುವುದರಿಂದ ಇನ್ನೂ ಒಂದು ವಾರ ಸಂಪೂರ್ಣ ಅನ್‌ಲಾಕ್‌ ಇರುವುದಿಲ್ಲ. ನಿರ್ಬಂಧಿತ ಲಾಕ್‌ಡೌನ್‌ ಮುಂದುವರಿಯಲಿದೆ. ಸೋಮವಾರದಿಂದ ಶುಕ್ರವಾರದ ವರೆಗೆ ಪ್ರತಿದಿನ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಜೂನ್‌ 21ರಿಂದ ಜುಲೈ 5ರವರೆಗೆ ಈ ನಿಯಮ ಅನ್ವಯವಾಗಲಿದೆ. ಜಿಲ್ಲೆಯಲ್ಲಿ ಸದ್ಯ ಪಾಸಿಟಿವಿಟಿ ಪ್ರಮಾಣ ಶೇ 6.37 ಇದೆ. ಇನ್ನು ಎರಡು ಮೂರು ದಿನಗಳಲ್ಲಿ ಅದು ಶೇ 5ರ ಒಳಗೆ ಬರುವ ನಿರೀಕ್ಷೆ ಇದೆ. ಶೇ 5ರ ಒಳಗೆ ಬಂದರೆ ಮತ್ತೆ ಸಡಿಲಿಕೆ ಮಾಡಲು ಸರ್ಕಾರವನ್ನು ಕೇಳಲು ಅವಕಾಶವಾಗುತ್ತದೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರತಿ ದಿನ ರಾತ್ರಿ 7ರಿಂದ ಬೆಳಿಗ್ಗೆ 5ರ ವರೆಗೆ ರಾತ್ರಿ ಕರ್ಫ್ಯೂ ಇರಲಿದೆ. ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5ರ ವರೆಗೆ ವಾರಂತ್ಯದ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ವಿವರಿಸಿದರು.

ಸರಕು ಸಾಗಾಣಿಕೆ ವಾಹನಗಳಿಗೆ ಸಂಚಾರಕ್ಕೆ ಅವಕಾಶವಿದೆ. ಆ ವಾಹನಗಳು ಸರಕುಗಳನ್ನು ರಶೀದಿಯಲ್ಲಿ ನಮೂದಿತ ವಿಳಾಸದ ಅಂಗಡಿ ಮತ್ತು ಗೋದಾಮುಗಳಲ್ಲಿ ಇಳಿಸಲು ಮತ್ತು ತೆಗೆದುಕೊಂಡು ಹೋಗಲು ಮಾತ್ರ ದಿನ ಪೂರ್ತಿ ಅವಕಾಶ ನೀಡಲಾಗಿದೆ. ಕೃಷಿ ಉಪಕರಣ ಬಾಡಿಗೆ ಕೇಂದ್ರಗಳಿಗೆ, ಯಂತ್ರೋಪಕರಣಗಳಿಗೆ ಸಂಬಂಧಿಸಿದ ಅಂಗಡಿಗಳು ಮತ್ತು ಗೋದಾಮುಗಳು ಸೇರಿದಂತೆ ಎಲ್ಲಾ ಕೃಷಿ ಮತ್ತು ತತ್ಸಂಬಂಧಿತ ಕಾರ್ಯಚಟುವಟಿಕೆಗಳಿಗೆ ಅನುಮತಿಸಿದೆ ಹಾಗೂ ಸಿಬ್ಬಂದಿಗಳು ಕೃಷಿ ಕೈಗಾರಿಕಾ ಸಂಸ್ಥೆಗಳು ನೀಡಿದ ಅರ್ಹ ಗುರುತಿನ ಚೀಟಿ, ಅಧಿಕೃತ ಪತ್ರವನ್ನು ತೋರಿಸುವ ಮೂಲಕ ಓಡಾಡುವುದಕ್ಕೆ ಅನುಮತಿ ನೀಡಲಾಗಿದೆ ಎಂದರು.

ಕೃಷಿ ಚಟುವಟಿಕೆಗಳಿಗೆ ಅನುವಾಗುವಂತೆ ಅಗತ್ಯ ವಸ್ತುಗಳಾದ ಬೀಜ, ಗೊಬ್ಬರ, ಕೀಟ ನಾಶಕಗಳು, ಕೃಷಿ ಕೋಯ್ಲು ಯಂತ್ರೋಪಕರಣಗಳ ಸಾಗಣೆ ಮತ್ತು ಸಂಬಂಧಿಸಿದ ಅಂಗಡಿಗಳು ವಾರಂತ್ಯ ಬಿಟ್ಟು ಪ್ರತಿದಿನ ಮಧ್ಯಾಹ್ನ 2ರವರೆಗೆ ತೆರೆಯಬಹುದು. ಜನರು ಅಗತ್ಯ ಚಟುವಟಿಕೆಗೆ ಮಾತ್ರ ವಾಹನಗಳಲ್ಲಿ ಸಂಚರಿಸಬಹುದು ಎಂದು ತಿಳಿಸಿದರು.

ಜಿಲ್ಲೆಯ ಹೊರಗಿನಿಂದ ಬರುವವರು 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿರಬೇಕು. ಆರೋಗ್ಯಕ್ಕೆ ಸಂಬಂಧ ಪಟ್ಟ ಓಡಾಟಕ್ಕೆ ನಿರ್ಬಂಧವಿಲ್ಲ. ಖಾಸಗಿ ಭದ್ರತಾ ಸೇವೆಗಳಿಗೆ ಅನುಮತಿಸಲಾಗಿದೆ. ಹೋಟೆಲ್, ರೆಸ್ಟೊರಂಟ್‍ಗಳು, ಉಪಾಹಾರ ಗೃಹಗಳು ಪಾರ್ಸಲ್ ಸೇವೆಗಳನ್ನು ಗ್ರಾಹಕರ ಮನೆ ಬಾಗಿಲಿಗೆ ವಿತರಿಸಲು ಮಾತ್ರ ಅನುಮತಿಸಲಾಗಿದೆ ಎಂದರು.

ಹಾಲು, ಪಶು ಆಹಾರ ಅಂಗಡಿಗಳು, ಕಿರಾಣಿ ಅಂಗಡಿಗಳು, ದಿನಸಿ, ಹಣ್ಣು, ತರಕಾರಿಗಳು, ಮಾಂಸ ಮತ್ತು ಮೀನು ಹಾಗೂ ಎಲ್ಲಾ ಮದ್ಯದ ಅಂಗಡಿಗಳು ಮತ್ತು ಸಿಎಲ್-4 ಸನ್ನದು ಹೊಂದಿರುವ ಕ್ಲಬ್‍ಗಳಲ್ಲಿ ಪಾರ್ಸ್‍ಲ್ ಸೇವೆ ಮಾತ್ರ ಅವಕಾಶ.
ಕಟ್ಟಡ ಕಾಮಗಾರಿ, ದುರಸ್ತಿಗೆ ಸಂಬಂಧಿಸಿದ ವಸ್ತುಗಳನ್ನು ಪೂರೈಸುವ ಅಂಗಡಿಗಳು, ಕನ್ನಡಕದ ಅಂಗಡಿಗಳು, ಪಡಿತರ ನ್ಯಾಯಬೆಲೆ ಅಂಗಡಿಗಳು ಈ ಅನ್‌ಲಾಕ್‌ ಸಮಯದಲ್ಲಿ ತೆರೆಯಬಹುದು ಎಂದು ವಿವರಿಸಿದರು.

ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಹಾಪ್-ಕಾಮ್ಸ್ ಮೂಲಕ, ಇಲ್ಲವೇ ತಳ್ಳುಗಾಡಿಗಳ ಮೂಲಕ ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ಮಾರಾಟ ಮಾಡಬಹುದು. ಎಲ್ಲಾ ವಿಧದ ಉತ್ಪಾದಿತ ಘಟಕಗಳು ಸಂಸ್ಥೆಗಳು, ಕೈಗಾರಿಕೆಗಳು ಶೇ 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬಹುದು. ಗಾರ್ಮೆಂಟ್ಸ್‌ಗಳಲ್ಲಿ ಶೇ 30ರ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬಹುದು ಎಂದರು.

ವಾಕಿಂಗ್ ಮತ್ತು ಜಾಗಿಂಗ್ ಉದ್ದೇಶಕ್ಕಾಗಿ ಮಾತ್ರ ಉದ್ಯಾನಗಳನ್ನು ಬೆಳಿಗ್ಗೆ 5 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿಸಿದೆ. ಯಾವುದೇ ಗುಂಪು ಚಟುವಟಿಕೆಗೆ ಅವಕಾಶವಿಲ್ಲ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ್ ಇದ್ದರು.

41 ಗ್ರಾಮ ಸೀಲ್‌ಡೌನ್‌: 7 ಗ್ರಾಮಗಳಲ್ಲಷ್ಟೇ 10ಕ್ಕಿಂತ ಅಧಿಕ ಪ್ರಕರಣ

ಕೊರೊನಾ 10ಕ್ಕಿಂತ ಅಧಿಕ ಪ್ರಕರಣಗಳು ಕಂಡು ಬಂದಿರುವ 41 ಗ್ರಾಮಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಆದರೆ ಈಗ ಏಳು ಗ್ರಾಮಗಳಲ್ಲಿಯಷ್ಟೇ 10ಕ್ಕಿಂತ ಅಧಿಕ ಪ್ರಕರಣಗಳಿವೆ. ಒಮ್ಮೆ ಸೀಲ್‌ಡೌನ್‌ ಮಾಡಿದರೆ 10 ದಿನಗಳ ಕಾಲ ಜಾರಿಯಲ್ಲಿರುವುದರಿಂದ ಸೀಲ್‌ಡೌನ್‌ ತೆಗೆದಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಿಜಯ ಮಹಾಂತೇಶ್‌ ದಾನಮ್ಮನವರ್‌ ತಿಳಿಸಿದರು.

5ಕ್ಕಿಂತ ಕಡಿಮೆ ಪ್ರಕರಣಗಳು ಬಂದರೆ ಆಗ ಆ ಗ್ರಾಮಗಳ ಸೀಲ್‌ಡೌನ್‌ ತೆಗೆಯಲು ಕ್ರಮ ವಹಿಸಲಾಗುವುದು. ಸದ್ಯ ಜಿಲ್ಲೆಯಲ್ಲಿ ಮೊದಲನೇ ಮತ್ತು ಎರಡನೇ ಅಲೆಯಲ್ಲಿ ಒಂದೇ ಒಂದು ಪ್ರಕರಣ ಕೂಡ ಪತ್ತೆಯಾಗದ 72 ಗ್ರಾಮಗಳಿವೆ. ಅಲ್ಲಿಯೂ ಪರೀಕ್ಷೆಗಳನ್ನು ಹೆಚ್ಚಿಸಲಾಗುವುದು ಎಂದರು.

ಮದುವೆಗೆ ಅವಕಾಶ: 40 ಜನ ಮೀರುವಂತಿಲ್ಲ

ನಿಗದಿತ ಮದುವೆ ಕಾರ್ಯಕ್ರಮಗಳನ್ನು ಷರತ್ತುಗಳ ಅನ್ವಯ ಮಾಡಬಹುದು. ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡಿರಬೇಕು. 40ಕ್ಕಿಂತ ಅಧಿಕ ಮಂದಿ ಇರಬಾರದು. ಮದುವೆಯಲ್ಲಿ ಊಟದ ವ್ಯವಸ್ಥೆ ಮಾಡಬಾರದು. ಉಳಿದ ಎಲ್ಲ ಸಾಮಾಜಿಕ, ಧಾರ್ಮಿಕ ಸಭೆ ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಅಂತ್ಯಸಂಸ್ಕಾರಕ್ಕೆ ಗರಿಷ್ಠ 5 ಜನರಿಗೆ ಮಾತ್ರ ಭಾಗವಹಿಸಬಹುದು ಎಂದರು.

ಸ್ಫೋಟಕ ಒಂದೇ ಪ್ರಕರಣ ಪತ್ತೆ: ಎಸ್‌ಪಿ

ನಿಯಮ ಉಲ್ಲಂಘಿಸಿ ಸ್ಫೋಟಕ ಬಳಸುವ ಒಂದು ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ. ಅವರಲ್ಲಿ ಸ್ಫೋಟಿಸಲು ಅನುಮತಿ ಪತ್ರ ಇತ್ತು. ಆದರೆ ಸ್ಫೋಟಿಸಲು ಅನುಮತಿ ಇರುವ ತಜ್ಞ ವ್ಯಕ್ತಿ ಇರಲಿಲ್ಲ. ಅದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಧಿಕಾರಿ ಸಿ.ಬಿ. ರಿಷ್ಯಂತ್‌ ಮಾಹಿತಿ ನೀಡಿದರು.

ಬಡವನೊಬ್ಬ ಮನೆ ಕಟ್ಟಲು ಅಲ್ಲೇ ಆಜುಬಾಜಿನಿಂದ ಮರಳು ಒಯ್ಯಬಹುದು. ಆದರೆ ಮಾರಾಟ ಮಾಡಲು ಒಯ್ಯುವಂತಿಲ್ಲ. ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಅನಧಿಕೃತವಾಗಿ ಒಯ್ಯುವಂತಿಲ್ಲ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಸ್ಪಷ್ಟ ಮಾಹಿತಿ ಪಡೆದುಕೊಳ್ಳಲಾಗುವುದು. ಅಕ್ರಮ ಮರಳುಗಾರಿಕೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು