ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಕಾಳಜಿಯಲ್ಲಿ ಸ್ವಾರ್ಥಿಗಳಾಗಿ: ಪೂಜಾರ ವೀರಮಲ್ಲಪ್ಪ

ವಿಶ್ವ ಹಿರಿಯ ನಾಗರಿಕರ ದಿನಾಚರಣೆ
Last Updated 1 ಅಕ್ಟೋಬರ್ 2021, 15:45 IST
ಅಕ್ಷರ ಗಾತ್ರ

ದಾವಣಗೆರೆ: ‘ಹಿರಿಯ ನಾಗರಿಕರು ಕುಟುಂಬದಲ್ಲಿ ಕಲಹಗಳ ಬಗ್ಗೆ ಗಮನ ಕೊಡದೆ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸ್ವಾರ್ಥಿಗಳಾಗಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಾವಣಗೆರೆ ಹಿರಿಯ ನಾಗರಿಕರ ಸಂಘದ ಆಶ್ರಯದಲ್ಲಿ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಠದಲ್ಲಿ ಶುಕ್ರವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಮ್ಮ ಸಲುವಾಗಿ ನಾವು ಬದುಕುವುದನ್ನು ರೂಢಿಸಿಕೊಳ್ಳುತ್ತೇವೆ ಎಂದು ಹಿರಿಯ ನಾಗರಿಕರು ಪ್ರತಿಜ್ಞೆ ಮಾಡಬೇಕು. ಆಗ ಮಾತ್ರ ಸಂತೋಷವಾಗಿರಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಹಿರಿಯ ನಾಗರಿಕರ ಬೇಡಿಕೆಗಳನ್ನು ಸಚಿವರು ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತಂದು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಆನಂದ, ‘ಇಂದು ಯುವ ಪೀಳಿಗೆ ಹಿರಿಯ ನಾಗರಿಕರಿಗೆ ಗೌರವ ನೀಡುತ್ತಿಲ್ಲ. ವಿದ್ಯಾವಂತರೇ ತಂದೆ–ತಾಯಿಯನ್ನು ಅನಾಥಾಶ್ರಮ ಸೇರಿಸುತಿದ್ದಾರೆ. ಮುಂದೆ ತಾವೂ ಹಿರಿಯ ನಾಗರಿಕರಾಗುತ್ತವೆ ಎಂಬುದನ್ನು ಯುವಜನತೆ ನೆನಪಿಟ್ಟುಕೊಳ್ಳಬೇಕು. ಯುವ ಜನತೆ ಆಧುನಿಕತೆಯ ಗೀಳಿಗೆ ಬೀಳದೆ ಹಿರಿಯರನ್ನು ಗೌರವಿಸಬೇಕು’ ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌, ‘ಇಂದಿನ ಯುವಕ–ಯುವತಿಯರು ಅವಿಭಕ್ತ ಕುಟುಂಬವನ್ನು ಇಷ್ಟಪಡುವುದಿಲ್ಲ. ಹೀಗಾಗಿ ಮಕ್ಕಳು ನಾವು ಹೇಳಿದಂತೆ ಕೇಳಬೇಕು ಎಂಬ ಭಾವನೆಯನ್ನು ಬಿಟ್ಟು ಹೊಂದಿಕೊಂಡು ಬಾಳುವುದನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ಮನೆಯಲ್ಲಿ ಮಕ್ಕಳೊಂದಿಗೆ ಉತ್ತಮ ಜೀವನ ನಡೆಸಲು ಸಾಧ್ಯ’ ಎಂದರು.

ಜಿಲ್ಲಾ ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಎಸ್.ಗುರುಮೂರ್ತಿ, ‘ಹಿರಿಯ ನಾಗರಿಕರ ಸಂಘದ ಕಟ್ಟಡ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಬೇಕು. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹಿರಿಯ ನಾಗರಿಕರಿಗೆ ನೀಡುತ್ತಿರುವ ಶೇ 25ರ ರಿಯಾಯಿತಿಯನ್ನು ಶೇ 50ಕ್ಕೆ ಹೆಚ್ಚಿಸಬೇಕು. ಐರಾವತದಂತಹ ಹವಾನಿಯಂತ್ರಿತ ಬಸ್ ಹಾಗೂ ಜಿಲ್ಲೆಯ ಪ್ರಮುಖ ಸಾರಿಗೆ ವ್ಯವಸ್ಥೆಯಾದ ಖಾಸಗಿ ಬಸ್‌ಗಳಲ್ಲಿಯೂ ವಿಸ್ತರಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಎಸ್.ಟಿ. ಕುಸುಮಶ್ರೇಷ್ಠಿ ಮಾತನಾಡಿದರು.

ಹಿರಿಯ ನಾಗರಿಕರ ದಿನಾರಣೆ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಿವೃತ್ತ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜಿ.ಎಸ್. ಶಶಿಧರ್‌, 100 ಗಿಡಗಳನ್ನು ತಂದು ಹಂಚಿದ ಅಂಚೆ ಇಲಾಖೆಯ ನಿವೃತ್ತ ನೌಕರ ಬಿ. ಸೋಮಶೇಖರ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಅಧಿಕಾರಿ ಡಾ.ಕೆ.ಕೆ.ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT