ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆ ನಗರಿಯ ಕನ್ನಡದ ಡಿಂಡಿಮದ ಪರಿಚಾರಕರು

Last Updated 1 ನವೆಂಬರ್ 2021, 5:25 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯೋತ್ಸವದಂದು ಎಲ್ಲೆಡೆ ಕನ್ನಡದ ಡಿಂಡಿಮ ಕೇಳುತ್ತಿದೆ. ಕನ್ನಡ ಗೀತೆಗಳ ಗಾಯನ ನಾಡಿನಾದ್ಯಂತ ಅನುರಣಿಸುತ್ತಿದೆ. ಆದರೆ ನವೆಂಬರ್‌ ಕಳೆಯುತ್ತಿದ್ದಂತೆ ಕನ್ನಡದ ಅಭಿಮಾನ ಮುಸುಕು ಹೊದ್ದು ಮಲಗುತ್ತದೆ. ಜೀವನದುದ್ದಕ್ಕೂ ಕನ್ನಡವನ್ನೆ ಉಸಿರಾಗಿಸಿಕೊಂಡು, ಭಾಷಾಭಿಮಾನ ಮೆರೆಯುತ್ತಿರುವವರೂ ನಮ್ಮ ಮಧ್ಯೆ ಇದ್ದಾರೆ. ಕೆಲವರ ಪರಿಚಯ ಎಲ್ಲರಿಗೂ ಇದ್ದರೆ, ಇನ್ನಷ್ಟು ಮಂದಿ ಪ್ರಚಾರವಿಲ್ಲದೇ ಎಲೆ ಮರೆಯ ಕಾಯಿಯಂತೆ ತಮ್ಮಷ್ಟಕ್ಕೇ ಕನ್ನಡದ ಕಾಯಕ ಮಾಡುತ್ತಿದ್ದಾರೆ. ಅಂಥ ಕೆಲವು ಮಹನೀಯರ ಮಾಹಿತಿ ಇಲ್ಲಿದೆ.

ಉದಯೋನ್ಮುಖ ಕವಿ ರವಿನಾಗ್ ತಾಳ್ಯ

- ಸಾಂತೇನಹಳ್ಳಿ ಸಂದೇಶ್ ಗೌಡ

ಹೊಳಲ್ಕೆರೆ: ತಾಲ್ಲೂಕಿನ ತಾಳ್ಯ ಗ್ರಾಮದ ರವಿನಾಗ್ ತಾಳ್ಯ ಉದಯೋನ್ಮುಖ ಕವಿಯಾಗಿದ್ದು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮುಂದಡಿ ಇಡುತ್ತಿದ್ದಾರೆ. ಇವರು ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್, ಬಿ.ಸಿ.ಎ ಓದಿದ್ದರೂ ಕನ್ನಡದ ಬಗ್ಗೆ ಹೆಚ್ಚು ಆಸಕ್ತಿ. ಪಟ್ಟಣದ ಪುರಸಭೆಯಲ್ಲಿ ಕಿರಿಯ ಪ್ರೋಗ್ರಾಮರ್ ಆಗಿರುವ ಇವರು ನೂರಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದಾರೆ.

ಬರಹಗಾರರು, ಓದುಗರಿಗಾಗಿ ಇರುವ ‘ಪ್ರತಿಲಿಪಿ ಸಾಹಿತ್ಯ’ ಎಂಬ ವೆಬ್ ಸೈಟ್ ನಲ್ಲಿ ಅನೇಕ ಕವನಗಳು, ಕಿರುಕಾದಂಬರಿ ಬರೆದಿದ್ದು, ಓದುಗರಿಂದ ಮೆಚ್ಚುಗೆ ಗಳಿಸಿದ್ದಾರೆ. ಶ್ರೀಕೃಷ್ಣನ ಬಗ್ಗೆ ಬರೆದ ‘ಕೃಷ್ಣಾ ಬರಬಾರದೇ’ ಎಂಬ ಕವನ ಇಸ್ಕಾನ್ ವೆಬ್ ಸೈಟ್ ನಲ್ಲಿ ಪ್ರಕಟಗೊಂಡಿದೆ. ಪೌರಕಾರ್ಮಿಕರ ಬಗ್ಗೆ ಬರೆದ ‘ಹೀಗೊಂದು ಅಪ್ಪ ಮಗನ ದೇಶ’ ಕತೆಗೆ ಪ್ರಶಸ್ತಿ ಲಭಿಸಿದೆ.

‘ಪ್ರಚಲಿತ ವಿದ್ಯಮಾನಗಳನ್ನು ವಸ್ತುವಾಗಿಟ್ಟುಕೊಂಡು ಕವನಗಳನ್ನು ಬರೆಯುತ್ತೇನೆ. ನನ್ನ ಪ್ರತಿ ಕವನದಲ್ಲೂ ಸಮಾಜಕ್ಕೆ ಒಂದು ಉತ್ತಮ ಸಂದೇಶ ಇರುತ್ತದೆ. ಮಾದಾರ ಚನ್ನಯ್ಯ ಸ್ವಾಮೀಜಿ, ಶಿವಮೂರ್ತಿ ಮುರುಘಾ ಶ್ರೀಗಳ ಬಗ್ಗೆ ಕವನ ಬರೆದಿದ್ದೇನೆ. ಭರಮಸಾಗರ ಕೆರೆಗೆ ನೀರು ತಂದ ಯಶೋಗಾಥೆ ಬಗ್ಗೆ ಸಿರಿಗೆರೆ ಶ್ರೀಗಳ ಕುರಿತು ಕವನ ರಚಿಸಿದ್ದು, ಶ್ರೀಗಳಿಗೆ ಅರ್ಪಿಸಲಾಗುವುದು’ ಎನ್ನುತ್ತಾರೆ ರವಿನಾಗ್ ತಾಳ್ಯ.

ವಿವಿಧ ಕವಿಗೋಷ್ಠಿ, ಕವನ ಸ್ಪರ್ಧೆಗಳಲ್ಲಿ ಪಾಲ್ಗೊಂಡಿರುವ ರವಿನಾಗ್ ತಾಳ್ಯ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬೀದರ್ ನ ವಿಚಾರ ಮಂಟಪ ಸಾಹಿತ್ಯ ವೇದಿಕೆಯಿಂದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ದೇಹಾಂಗ ದಾನ ಸಾಹಿತ್ಯ ಪರಿಷತ್, ಚಿತ್ರದುರ್ಗದ ಗಂಗಮ್ಮ ಹಿರಾಳ್ ವೀರಭದ್ರಪ್ಪ ಚಾರಿಟಬಲ್ ಟ್ರಸ್ಟ್, ಧಾರಾವಾಡದ ಯುವ ಬರಹಗಾರರ ಒಕ್ಕೂಟ, ದಾಂಡೇಲಿಯ ಸಾಹಿತ್ಯ ವೇದಿಕೆ, ಕಲಬುರ್ಗಿಯ ಬಸವ ಬಳಗ, ಧಾರವಾಡದ ಗಣಕ ರಂಗ ವೇದಿಕೆ, ದಕ್ಷಿಣ ಕನ್ನಡದ ಗುರುಕುಲ ಕಲಾ ಪ್ರತಿಷ್ಠಾನ ಮತ್ತಿತರ ಸಂಘ ಸಂಸ್ಥೆಗಳಿಂದ ಕವನ ವಾಚನಕ್ಕೆ ಅಭಿನಂದನಾ ಪತ್ರಗಳನ್ನು ಪಡೆದಿದ್ದಾರೆ.ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಹಂಬಲ ರವಿನಾಗ್ ತಾಳ್ಯ ಅವರದು.

***

ದಂತವೈದ್ಯನ ಕನ್ನಡ ಪ್ರೇಮ

ಪಟ್ಟಣದ ಡಾ.ಕೆ.ವಿ.ಸತೋಷ್ ವೃತ್ತಿಯಲ್ಲಿ ದಂತವೈದ್ಯರಾದರೂ, ಪ್ರವೃತ್ತಿಯಲ್ಲಿ ಕನ್ನಡದ ಕಟ್ಟಾಳು. ಬರೀ ಇಂಗ್ಲಿಷ್ ಮಯವಾಗಿರುವ ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡವನ್ನೂ ಬೆರೆಸುವ ಪ್ರಯತ್ನ ಮಾಡಿದ್ದಾರೆ. ದಂತ ಆರೋಗ್ಯ, ಸಾಮಾನ್ಯ ಆರೋಗ್ಯ ಸೇರಿದಂತೆ ಹಳೆಯ ದೇವಾಲಯ, ಮಾಸ್ತಿಗಲ್ಲು, ವೀರಗಲ್ಲು, ಪುಷ್ಕರಣಿ ಮತ್ತಿತರ ಪ್ರಾಚೀನ ಸ್ಮಾರಕಗಳ ಬಗ್ಗೆ ಬೆಳಕು ಚೆಲ್ಲುವ ಸುಮಾರು 250ಕ್ಕೂ ಹೆಚ್ಚು ಕನ್ನಡ ಲೇಖನಗಳನ್ನು ಬರೆದಿದ್ದಾರೆ.

ಹೊಳಲ್ಕೆರೆ ತಾಲ್ಲೂಕು ದರ್ಶನ ಕೃತಿ ಬರೆದಿರುವ ಡಾ.ಕೆ.ವಿ.ಸಂತೋಷ್, ತಾಲ್ಲೂಕಿನ 160 ಗ್ರಾಮಗಳ ಪರಿಚಯ ಮಾಡಿಸಿದ್ದಾರೆ. ಖುದ್ದು ತಾವೇ ಪ್ರತೀ ಹಳ್ಳಿಗಳಿಗೆ ಭೇಟಿ ನೀಡಿ ಹಿರಿಯರಿಂದ, ಅನುಭವಿಗಳಿಂದ ಮಾಹಿತಿ ಪಡೆದು ಪುಸ್ತಕ ಬರೆದಿದ್ದಾರೆ. ಗ್ರಾಮದ ಜನಜೀವನ, ವೃತ್ತಿ, ಬೆಳೆಗಳು, ದೇವಾಲಯಗಳು, ಐತಿಹಾಸಿಕ ಸ್ಮಾರಕಗಳು, ಕಲೆ, ಸಂಸ್ಕೃತಿ, ಹಬ್ಬ-ಹರಿದಿನಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಹಳ್ಳಿಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದು, ಪುಸ್ತಕ ಹೊರತರುವ ಪ್ರಯತ್ನದಲ್ಲಿದ್ದಾರೆ.

***

ಕನ್ನಡದ ಕಂಪು ಹರಡುತ್ತಿರುವ ಮುರಿಗೇಂದ್ರಪ್ಪ

- ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ: ದೇವಿ ಮಹಾತ್ಮೆ, ಶನಿಪುರಾಣ, ಶಬರ ಶಂಕರ ವಿಲಾಸ, ಕುಮಾರವ್ಯಾಸ ಭಾರತ ಮುಂತಾದ ಕನ್ನಡ ಕಾವ್ಯವಾಚನದ ಮೂಲಕ ಗಡಿ ಭಾಗದ ಗ್ರಾಮದ ಜನರಲ್ಲಿ ಕನ್ನಡದ ಆಸಕ್ತಿಯ ಜತೆಗೆ ಅವರಲ್ಲಿ ಕುತೂಹಲ ಮೂಡಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ನಿವೃತ್ತ ಉಪನ್ಯಾಸಕ ಪಿ. ಮಹಾದೇವಪುರ ಗ್ರಾಮದ ಸಿ. ಮುರಿಗೇಂದ್ರಪ್ಪ.

ಜಾತಿವಾರು ರೋಸ್ಟರ್ ಅಡಿಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕನಾಗುವುದು ತುಂಬಾ ಕಷ್ಟವಾಗಿದ್ದ ಆ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ದಿನೇಶ್‌ ಗುಂಡೂರಾವ್, ಅವರ ಅಧಿಕಾರದ ಅವಧಿಯ ನಿರುದ್ಯೋಗಿ ಪದವೀಧರ ಯೋಜನೆಯಲ್ಲಿ ₹ 150 ಸ್ಟೈಫಂಡ್‌ ಪಡೆಯುವ ಮೂಲಕ ಶಿಕ್ಷಕ ವೃತ್ತಿಗೆ ಪ್ರವೇಶ ಪಡೆದ ಮುರಿಗೇಂದ್ರಪ್ಪ ಗಡಿ ಭಾಗದ ಪಾವಗಡ ತಾಲ್ಲೂಕು ವೆಂಕಟಪುರ ಗ್ರಾಮದಲ್ಲಿ ಸ್ಥಾಪನೆ ಮಾಡಿದ ಊರಿನವರು ಊರಿಗಾಗಿ ಶಾಲೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೆಲ ವರ್ಷಗಳಲ್ಲೇ ಆ ಶಾಲೆ ಸರ್ಕಾರಿ ಶಾಲೆಯಾಗಿ ಮಾರ್ಪಟ್ಟಿತು. ನಂತರ ಸಾಸಲಕುಂಟೆ ಗ್ರಾಮದಲ್ಲಿ ಮುಖ್ಯಶಿಕ್ಷಕ ಹಾಗೂ ಸಿಐಒ ಎರಡು ಹುದ್ದೆಗಳನ್ನು ಒಂದು ವರ್ಷ ಯಶಸ್ವಿಯಾಗಿ ನಿಭಾಯಿಸಿದರು. ಅದಾದಮೇಲೆ ಚಿತ್ರದುರ್ಗ ಡಯಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ನಿವೃತ್ತಿಯ ನಂತರದ ದಿನಗಳಲ್ಲಿಯೂ ಆಂಧ್ರದ ಅಮರಾಪುರ, ಗೌಡನಕುಂಟೆ, ವಲಸೆ, ವೀರಾಪುರ, ತಮ್ಮಡಿಹಳ್ಳಿ, ವಿರಪಸಮುದ್ರ, ಕುಂರ‍್ಪಿ, ತಿಪ್ಪನಹಳ್ಳಿ, ಮುಲಕಲಡು, ಪೆರಗುಪಲ್ಲಿ ಮುಂತಾದ ಗ್ರಾಮದಲ್ಲಿ ದೇವಿ ಮಹಾತ್ಮೆ, ವಿರಾಟಪರ್ವ, ಶರಬರ ಶಂಕರ ವಿಲಾಸ, ಕುಮಾರವ್ಯಾಸ ಭಾರತ ಮತ್ತು ಗ್ರಾಮೀಣ ಪ್ರದೇಶದ ಮಠಗಳಲ್ಲಿ ಧಾರ್ಮಿಕ ಗ್ರಂಥಗಳ ವಾಚನ ಮತ್ತು ಕನ್ನಡದ ವ್ಯಾಕರಣದ ವಿಷಯವನ್ನು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸುಲಭ-ಸರಳ ವಿಧಾನದಲ್ಲಿ ಕಲಿಸುತ್ತ ಬಂದಿದ್ದಾರೆ. ಹೀಗೇ ಕುತೂಹಲದ ಜತೆಗೆ ಮಕ್ಕಳಲ್ಲಿ ಕನ್ನಡದ ಆಸಕ್ತಿಯನ್ನು ಬೆಳೆಸುತ್ತ ಬಂದಿದ್ದಾರೆ.

ಚಳ್ಳಕೆರೆ, ಮೊಳಕಾಲ್ಮುರು ಹಾಗೂ ಹೊಸದುರ್ಗ ತಾಲ್ಲೂಕಿನ ಕೆಲ ಶಾಲೆಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹೋಗಿ ಅಲ್ಲಿ ವ್ಯಾಕರಣ ವಿಷಯದ ತರಬೇತಿ ನೀಡಿದ್ದಾರೆ.

‘ಗಡಿಯಲ್ಲಿನ ಆಂಧ್ರ ಗ್ರಾಮದ ಜನರ ಆಡುಭಾಷೆ ಕನ್ನಡ, ಆಡಳಿತ ಹಾಗೂ ವ್ಯಾವಹಾರಿಕವಾಗಿ ನೌಕರರು, ತೆಲುಗು ಪರಿಭಾಷೆ ಬಳಕೆ ಮಾಡುತ್ತಾರೆ. ಆದರೆ, ಸಭೆ-ಸಮಾರಂಭದಲ್ಲಿ ಜನರು ಮಾತ್ರ ಕನ್ನಡವನ್ನೇ ಹೆಚ್ಚು ಬಳಸುತ್ತಾರೆ. ಹೀಗಾಗಿ ಸುಲಲಿತವಾದ ಕನ್ನಡವನ್ನು ಮಕ್ಕಳಿಗೆ ಅನೌಪಚಾರಿಕವಾಗಿ ಹೇಳಿಕೊಡುವ ಪರಿಸರ ನಿರ್ಮಾಣ ಮಾಡಬೇಕು’ ಎನ್ನುತ್ತಾರೆ ಅವರು.

***

ಕನ್ನಡಕ್ಕಾಗಿ ದುಡಿಯುತ್ತಿರುವ ನಾಗರಾಜು ಸಕ್ಕರ

- ವಿ. ವೀರಣ್ಣ ಧರ್ಮಪುರ

ಧರ್ಮಪುರ: ಸಮೀಪದ ಕುಗ್ರಾಮ ಸಕ್ಕರದ ಎಸ್.ಕೆ. ನಾಗರಾಜು ಸಕ್ಕರ, ತಾವು ಎಸ್ಸೆಸ್ಸೆಲ್ಸಿಯಲ್ಲಿ ಓದುತ್ತಿರುವಾಗಲೇ ಕನ್ನಡ ಭಾಷೆ, ಸಂಸ್ಕೃತಿ, ನೆಲ ಮತ್ತು ಜಲದ ಬಗ್ಗೆ ಅತಿಯಾದ ಆತ್ಮವಿಶ್ವಾಸವನ್ನು ಬೆಳೆಸಿಕೊಂಡವರು.

ಇಲ್ಲಿನ ಪಂಚಲಿಂಗೇಶ್ವರ ಪ್ರೌಢಶಾಲೆಯಲ್ಲಿ ಓದುತ್ತಿರುವಾಗ ಲಾವಣಿ ಹಾಡುವುದು, ಕವನಗಳ ರಚನೆ ಸೇರಿ ವಿವಿಧ ಸಾಂಸ್ಕೃತಿಕ ಚಟುವಟಿಕೆ, ಕಾವ್ಯ ಕಮ್ಮಟ, ಕಾವ್ಯ ರಚನೆಗೆ ಮುಂದಾಗಿ ತಮ್ಮ ಕನ್ನಡ ಶಿಕ್ಷಕರ ಮನಸ್ಸನ್ನು ಗೆದ್ದವರು. ಕನ್ನಡ ಸಾಹಿತ್ಯದತ್ತ ಒಲವು ಹೆಚ್ಚಿಸಿಕೊಂಡು ಕನ್ನಡ ಭಾಷೆ, ನಾಡು, ನುಡಿಯ ಕಾರ್ಯಕ್ರಮಗಳಲ್ಲೇ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಆಂಗ್ಲ ಮಾಧ್ಯಮದ ಡ್ಯಾಡಿ, ಮಮ್ಮಿ ಶಾಲೆಗಳ ಬದಲಾಗಿ ಅಪ್ಪ, ಅಮ್ಮ ಎಂದು ಕಲಿಸುವ ಕನ್ನಡ ಶಾಲೆಗಳು ನಮಗೆ ಬೇಕು. ಧರ್ಮಪುರ ಹೋಬಳಿ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿದ್ದು, ಅಲ್ಲಿನ ಕನ್ನಡ ಶಾಲೆಗಳು ಮುಚ್ಚಿಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಎಚ್ಚರ ವಹಿಸಬೇಕು. ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೇ ಯಾವಾಗಲು ಕನ್ನಡದ ಕಂಪು ಪಸರಿಸುವಂತೆ ನೋಡಿಕೊಳ್ಳಬೇಕು ಎಂದು ತಮ್ಮ ಮನದಾಳದ ಮಾತು ಬಿಚ್ಚಿಡುತ್ತಾರೆ.

1996-97ರಲ್ಲಿ ಅಕ್ಷರವಾಣಿ ಸಾಕ್ಷರತೆಯ ಮೂಲಕ ಪ್ರಾರಂಭಿಸಿದ ಇವರ ಕನ್ನಡ ಭಾಷೆಯ ಪ್ರೀತಿ ಬೀದಿ ನಾಟಕಗಳಲ್ಲಿ ಕಲಾವಿದನಾಗಿ ಜಾಗೃತಿ ಕಾರ್ಯಕ್ರಮ, ಗ್ರಾಮೀಣಗ್ರಂಥಾಲಯಗಳಲ್ಲಿ ಕನ್ನಡ ಪುಸ್ತಕಗಳ ಸಂಗ್ರಹ, ಉಪಪ್ರೇರಕನಾಗಿ ಕೆಲಸ, ನಂತರ ಗ್ರಾಮದಲ್ಲಿ 15 ಜನರನ್ನೊಳಗೊಂಡ ‘ದುರ್ಗದ ಸಿರಿ ಕನ್ನಡ ಕಲಾ ಕ್ರೀಡೆ ಯುವಕ ಸಂಘ’ ಕಟ್ಟಿ ಅದರ ಮೂಲಕ ಕವಿಗೋಷ್ಠಿ, ಯುವಜನ ಮೇಳ, ನಾಟಕ ಪ್ರದರ್ಶನ, ಭಜನೆ, ಶಾಲೆಗಳಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯುವಕರಲ್ಲಿ ಕನ್ನಡದ ಜಾಗೃತಿ ಮೂಡಿಸಿದವರು.

ಇವರ ಈ ಎಲ್ಲಾ ಸಾಧನೆಗಳನ್ನು ಕಂಡ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಇವರನ್ನು ಸನ್ಮಾನಿಸಿವೆ. 2004ರಲ್ಲಿ ಕೊಪ್ಪಳದಲ್ಲಿ ನಡೆದ ರಾಜ್ಯ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಚಂಪಾರವರು ‘ಚುಟುಕುಶ್ರೀ’ ಪ್ರಶಸ್ತಿ ಗೌರವ, 2005ರಲ್ಲಿ ಬೆಂಗಳೂರು ಕನ್ನಡ ಅಭಿವೃದ್ಧಿ ಬಳಗ ವತಿಯಿಂದ ‘ಚುಟುಕು ಕವಿರತ್ನ’ ಪ್ರಶಸ್ತಿ, 2012ರಲ್ಲಿ ಚಿತ್ರದುರ್ಗ ಯುವಜನ ಕ್ರೀಡಾ ಇಲಾಖೆಯಿಂದ ಚಿತ್ರದುರ್ಗ ಜಿಲ್ಲಾ ‘ಯುವ ಪ್ರಶಸ್ತಿ’ ಪುರಸ್ಕಾರ, ಶಿರಾ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ‘ತಾಲ್ಲೂಕು ರಾಜ್ಯೋತ್ಸವ’ ಪ್ರಶಸ್ತಿ, 2017ರಲ್ಲಿ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯಿಂದ ‘ಕಾಯಕಶ್ರೀ’ ಪ್ರಶಸ್ತಿ ಪುರಸ್ಕಾರ, 2018ರಲ್ಲಿ ಮೈಸೂರು ಗ್ರಾಮಾಂತರ ಬುದ್ಧಿಜೀವಿ ಬಳಗದ ವತಿಯಿಂದ ‘ವಿಶ್ವಮಾನ್ಯ ಕನ್ನಡಿಗ’ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

***

ಕನ್ನಡ ಬೆಳೆಸುವ ತವಕ ಸಾಹಿತಿ ರಾಜು

- ಕೊಂಡ್ಲಹಳ್ಳಿ ಜಯಪ್ರಕಾಶ

ಮೊಳಕಾಲ್ಮುರು:ತಾನು ಇನ್ನೂ ಚಿಗುರುತ್ತಿರುವ ಹಂತದ ಸಾಹಿತಿ. ಆದರೆ ತನ್ನ ಬೆಳವಣಿಗೆ ಜತೆ ಇತರ ಸಾಹಿತ್ಯ ಪ್ರೇಮಿಗಳನ್ನು ಕರೆದುಕೊಂಡು ಹೋಗುವ ತವಕ ಹೊಂದುವ ಮೂಲಕ ಮಾದರಿಯಾಗಿರುವವರು ಮೊಳಕಾಲ್ಮುರು ತಾಲ್ಲೂಕಿನ ಸೂಲೇನಹಳ್ಳಿ ರಾಜು.

ಕಾಲೇಜು ದಿನಗಳಲ್ಲಿ ಸಾಹಿತ್ಯದ ಗೀಳು ಬೆಳೆಸಿಕೊಂಡ ರಾಜು ಬಿ.ಎ. ಅಭ್ಯಾಸ ಮಾಡುವಾಗ ರಚಿಸಿದ್ದ ಒಲವೇ ಕವನ ಸಂಕಲನ ಬಿಡುಗಡೆಯಾಯಿತು. ನಂತರ ಸ್ಪಂದನಾ, ಅವಳ ಪ್ರೇಮದ ಅಲೆಗಳು, ಬುದ್ಧ ಕಾಣದ ನಗೆ, ಪ್ರೇಮಸ್ಪರ್ಶ, ಗದ್ದುಗೆ ಸರ್ಕಾರ, ಅಜ್ಜಿ ಕೊಡಿಸಿದ ಅಂಗಿ, ಮುಗಿಲಮಾಲೆ, ನನ್ನ ಪ್ರೇಮ ಮಹಲು ಕೃತಿಗಳನ್ನು ರಚಿಸಿದ್ದಾರೆ.

ತನುಶ್ರೀ ಪ್ರಕಾಶನ ಸ್ಥಾಪಿಸಿ ಪುಸ್ತಕ ಪ್ರಕಾಶನಕ್ಕೆ ಕೈಜೋಡಿಸುತ್ತಿದ್ದಾರೆ. ಕರುನಾಡ ಹಣತೆ ಕವಿ ಬಳಗದ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ರಾಜು, ಮೊಳಕಾಲ್ಮುರು ಮತ್ತು ಚಿತ್ರದುರ್ಗದಲ್ಲಿ ಬಳಗದ ರಾಜ್ಯ ಸಮ್ಮೇಳನ ಮಾಡಿದ್ದಾರೆ. ಪ್ರಸ್ತುತ ಚಳ್ಳಕೆರೆ ತಾಲ್ಲೂಕಿನ ನಾಗಗೊಂಡನಹಳ್ಳಿಯಲ್ಲಿ ಖಾಸಗಿ ಶಾಲೆ ಮುಖ್ಯಶಿಕ್ಷಕರಾಗಿ ಕೆಲಸ ಮಾಡುತ್ತಿರುವ ರಾಜು ಕೋವಿಡ್ ವೇಳೆ ಮತ್ತು ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹತ್ತಾರು ಕವಿಗೋಷ್ಠಿ, ಚುಟುಕು ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಾಹಿತ್ಯ ಜೀವಂತಿಕೆಗೆ ಕೊಡುಗೆ ನೀಡಿದ್ದಾರೆ.

ಸಿರಿಗನ್ನಡ ಸಾಹಿತ್ಯರತ್ನ ರಾಜ್ಯ ಪ್ರಶಸ್ತಿ, ಕರ್ನಾಟಕ ಶಿಕ್ಷಣ ಸೇವಾ ರತ್ನ ಪ್ರಶಸ್ತಿ, ಸಾಹಿತ್ಯ ವಿಭೂಷಣ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ವಿಭೂಷಣ ಪ್ರಶಸ್ತಿ, ಮಾಸ್ತಿ ರಾಷ್ಟ್ರೀಯ ಪ್ರಶಸ್ತಿ ಸೇರಿ ಹತ್ತಾರು ಪ್ರಶಸ್ತಿಗಳಿಗೆ ರಾಜು ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT