ಗುರುವಾರ , ಡಿಸೆಂಬರ್ 5, 2019
19 °C

ಅಭಿಮಾನಿಗಳಿಂದ ಕೋಣ,ಕುರಿ ಬಲಿ, ‘ದಿ ವಿಲನ್‌’ ಸುದೀಪ್‌ ಚಿತ್ರಕ್ಕೆ ರಕ್ತಾಭಿಷೇಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದಾವಣಗೆರೆ: ಗುರುವಾರ ತೆರೆ ಕಂಡ ‘ದಿ ವಿಲನ್‌’ ಸಿನಿಮಾ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿ ನಟ ಸುದೀಪ್‌ ಅವರ ಅಭಿಮಾನಿಗಳು ಕೋಣ, ಕುರಿಯನ್ನು ಬಲಿ ಕೊಟ್ಟು, ಪೋಸ್ಟರ್‌ನಲ್ಲಿರುವ ತಮ್ಮ ನೆಚ್ಚಿನ ನಟನಿಗೆ ರಕ್ತಾಭಿಷೇಕ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸಿನಿಮಾ ಮಂದಿರವೊಂದರ ಬಳಿ ‘ದಿ ವಿಲನ್‌’ ಸಿನಿಮಾದ ಪೋಸ್ಟರ್‌ ಎದುರು ಸುದೀಪ್‌ ಅಭಿಮಾನಿಗಳು ಕುರಿಯನ್ನು ಹಿಡಿದುಕೊಂಡಿದ್ದಾರೆ. ಒಬ್ಬ ತಲವಾರ್‌ನಿಂದ ಹೊಡೆದು ರುಂಡವನ್ನು ಕತ್ತರಿಸಿದರೆ, ಮತ್ತೊಬ್ಬ ಮುಂಡದ ಭಾಗವನ್ನು ಸುದೀಪ್‌ ಭಾವಚಿತ್ರಕ್ಕೆ ಹಿಡಿದು ರಕ್ತದ ಅಭಿಷೇಕ ಮಾಡಿದ್ದಾನೆ. ಕುರಿಯನ್ನು ಕಡಿದ ವ್ಯಕ್ತಿ ತಲವಾರ್‌ ಅನ್ನು ಝಳಪಳಿಸುತ್ತ ಕುಣಿದಾಡಿರುವುದು, ಉಳಿದ ಅಭಿಮಾನಿಗಳು ಸುದೀಪ್‌ಗೆ ಜೈಕಾರ ಹಾಕಿರುವ ದೃಶ್ಯಾವಳಿಗಳು 30 ಸೆಕೆಂಡ್‌ಗಳ ವಿಡಿಯೊದಲ್ಲಿ ದಾಖಲಾಗಿದೆ.

ಇನ್ನೊಂದು ವಿಡಿಯೊದಲ್ಲಿ ಅಭಿಮಾನಿಗಳು ಚಿತ್ರದ ಪೋಸ್ಟರ್‌ ಎದುರಿಗೆ ಮರಿ ಕೋಣವನ್ನು ಬಲಿ ನೀಡಿ, ರಕ್ತದ ಅಭಿಷೇಕವನ್ನು ಮಾಡಿದ್ದಾರೆ. ಬಲಿ ನೀಡುವ ಮುನ್ನ ಕೋಣನನ್ನು ಮೂರು ಬಾರಿ ಮೇಲಕ್ಕೆ ಹಾರಿಸಿ ನೆಲದ ಮೇಲೆ ಬೀಳಿಸುವ ಮೂಲಕ ಚಿತ್ರಹಿಂಸೆಯನ್ನೂ ನೀಡಲಾಗಿದೆ. 2:54 ನಿಮಿಷದ ಈ ವಿಡಿಯೊದಲ್ಲೂ ಅಭಿಮಾನಿಗಳ ಅಟ್ಟಹಾಸ ಕಂಡುಬರುತ್ತದೆ.

ಈ ಎರಡೂ ಘಟನೆಗಳು ಎಲ್ಲಿ ನಡೆದಿವೆ ಎಂಬ ಬಗ್ಗೆ ಇನ್ನೂ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.

ಈ ಹಿಂದೆ ‘ಟಗರು’ ಸಿನಿಮಾ ಬಿಡುಗಡೆಯಾದಾಗ ನಟ ಶಿವರಾಜ್‌ಕುಮಾರ್‌ ಅಭಿಮಾನಿಗಳು ಕೆಲವು ಕಡೆ ಟಗರಿನ ರುಂಡವನ್ನು ಕಡಿದು ಸಿನಿಮಾ ಮಂದಿರದ ಪೋಸ್ಟರ್‌ಗೆ ಸಿಕ್ಕಿಸಿ, ಅಭಿಮಾನವನ್ನು ಮೆರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು