ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರೀದಿದಾರರಿಲ್ಲದ ರೇಷ್ಮೆ ಮಾರುಕಟ್ಟೆ

ರೇಷ್ಮೆ ಗೂಡು ಮಾರಾಟಕ್ಕೆ 270 ಕಿ.ಮೀ ದೂರದ ರಾಮನಗರಕ್ಕೆ ತೆರಳುವ ರೈತರು
Last Updated 3 ಸೆಪ್ಟೆಂಬರ್ 2021, 2:58 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ರೇಷ್ಮೆ ಗೂಡು ಖರೀದಿದಾರರೇ ಇಲ್ಲ. ಹಾಗಾಗಿ ರೈತರು 270 ಕಿ.ಮೀ ದೂರದ ರಾಮನಗರಕ್ಕೆ ಹೋಗುತ್ತಿದ್ದಾರೆ.

ನಗರದ ಎಪಿಎಂಸಿಯಲ್ಲಿ ದನದ ಮಾರುಕಟ್ಟೆಯ ಎದುರಿಗೆ ಇರುವ ಈ ಮಾರುಕಟ್ಟೆಗೆ ಐದು ವರ್ಷಗಳ ಹಿಂದಿನವರೆಗೂ ರೀಲರ್‌ಗಳು (ಗೂಡು ಖರೀದಿದಾರರು) ಬರುತ್ತಿದ್ದರು. ಬಳಿಕ ನಿಂತು ಹೋಯಿತು. ಈಗ ರೇಷ್ಮೆ ಇಲಾಖೆಯ ಕಚೇರಿಗಳಷ್ಟೇ ಅಲ್ಲಿ ಕಾರ್ಯ ನಿರ್ವಹಿಸುತ್ತಿವೆ.

‘ಇಲ್ಲಿ ಮಾರುಕಟ್ಟೆ ಇದ್ದಾಗ ದಾವಣಗೆರೆ, ಜಗಳೂರು, ಹರಪನಹಳ್ಳಿ ಸಹಿತ ಸುತ್ತಮುತ್ತಲ ತಾಲ್ಲೂಕುಗಳ ರೈತರಿಗೆ ಉಪಯೋಗ ಆಗುತ್ತಿತ್ತು. ಖರೀದಿದಾರರಿಗೆ ದೂರ ಆಗುತ್ತಿದೆ ಎಂಬ ಕಾರಣಕ್ಕೆ ಅವರು ಬರುವುದನ್ನು ನಿಲ್ಲಿಸಿದರು. ಈಗ ರೇಷ್ಮೆಯ ದೊಡ್ಡ ಮಾರುಕಟ್ಟೆಯಾದ ರಾಮನಗರಕ್ಕೆ ಹೋಗಬೇಕಿದೆ. ಸಣ್ಣಪುಟ್ಟ ವ್ಯವಹಾರ ಹಾವೇರಿಯಲ್ಲಿ ನಡೆಯುತ್ತಿದೆ. ದಾವಣಗೆರೆಯಲ್ಲಿ ಮಾರುಕಟ್ಟೆ ಪುನರ್‌ ಆರಂಭಗೊಂಡರೆ ಈ ಜಿಲ್ಲೆಯ ರೈತರಿ
ಗಲ್ಲದೇ ಚಿತ್ರದುರ್ಗ ಸಹಿತ ಸುತ್ತಲಿನ ರೈತರಿಗೂ ಉಪಯೋಗ ಆಗಲಿದೆ’ ಎಂದು ರೇಷ್ಮೆ ಬಟ್ಟೆ ಉದ್ಯಮಿ
ಮಂಜುನಾಥ ನಾಯ್ಕ್ ತಿಳಿಸಿದರು.

‘ದೂರದ ಮಾರುಕಟ್ಟೆಗೆ ಹೋಗಿ ಬರಬೇಕಿರುವುದರಿಂದ ಖರೀದಿದಾರರು ವಂಚನೆ
ಮಾಡುತ್ತಾರೆ. ಇಲ್ಲಿಯೇ ಇದ್ದಾಗ ರೈತರನ್ನು ವಂಚಿಸಲು ಆಗುವುದಿಲ್ಲ’ ಎಂದು ವಿವರಣೆ.

ತೆರೆಯಲು ಕ್ರಮ: ‘ನೂಲು ಬಿಚ್ಚುವ ಸರ್ಕಾರಿ ಕಿರು ಘಟಕ ಇಲ್ಲಿ ಇತ್ತು. ಐದು ವರ್ಷಗಳಿಂದ ಅದು ನಿಂತಿದೆ. ಇಲ್ಲಿದ್ದ ಸೆಮಿ ಅಟೊಮೆಟಿಕ್‌ ಮಷಿನ್‌ಗಳು ಕೂಡ ಈಗ ಔಟ್‌ ಡೇಟೆಡ್‌ ಆಗಿವೆ. ಕರೂರಿನಲ್ಲಿ ಸ್ವಯಂ ಚಾಲಿತ ಮಷಿನ್‌ ಚಾಲನೆಗೊಂಡಿದೆ. ಹಾಗಾಗಿ ಇನ್ನು ಖರೀದಿದಾರರು ಇಲ್ಲಿಗೆ ಬರುವ ಸಾಧ್ಯತೆ ಇದೆ. ರೀಲರ್ಸ್‌ ವಹಿವಾಟು ಆರಂಭಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀಹರ್ಷ ಭರವಸೆ ನೀಡಿದ್ದಾರೆ.

ಹೆಚ್ಚು ಶ್ರಮ, ಉತ್ತಮ ಆದಾಯ: ‘ಒಂದು ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆದು ರೇಷ್ಮೆ ಗೂಡು ತಯಾರಿಸಿದರೆ ರೈತರಿಗೆ ಈಗಿರುವ ದರ ಒಂದು ಕೆ.ಜಿ.ಗೆ ₹ 450ರಂತೆ ₹ 72 ಸಾವಿರ ಆದಾಯ ಬರುತ್ತದೆ. ವರ್ಷದ ಸರಾಸರಿ ಆದಾಯ ₹ 300 ಎಂದು ಹಿಡಿದುಕೊಂಡರೂ ಒಂದು ಬೆಳೆಗೆ ₹ 45 ಸಾವಿರ ಆದಾಯ ಬರುತ್ತದೆ. ವರ್ಷಕ್ಕೆ ಹತ್ತು ಬೆಳೆ ತೆಗೆಯಲು ಸಾಧ್ಯ. ಆದರೆ, ವರ್ಷದ 365 ದಿನಗಳೂ ಕೆಲಸ ಮಾಡಬೇಕಿರುವುದರಿಂದ ದೊಡ್ಡ ಹಿಡುವಳಿದಾರರು, ನೀರಾವರಿ ಸೌಲಭ್ಯ ಇರುವವರು ರೇಷ್ಮೆ ಕೃಷಿ ಕಡೆ ಗಮನ ಹರಿಸುತ್ತಿಲ್ಲ. ಸಣ್ಣ ಹಿಡುವಳಿದಾರರು ಆದಾಯ ಹೆಚ್ಚು ಬರುವ ರೇಷ್ಮೆಗೆ
ಆದ್ಯತೆ ನೀಡುತ್ತಾರೆ’ ಎಂದು ಶ್ರೀಹರ್ಷ ಮಾಹಿತಿ ನೀಡಿದರು.

‘ಜಿಲ್ಲೆಯ 122 ಗ್ರಾಮಗಳಲ್ಲಿ 817 ಎಕರೆ ಪ್ರದೇಶಗಳಲ್ಲಿ ರೇಷ್ಮೆ ಕೃಷಿ ನಡೆಯುತ್ತಿದೆ. ಪರಿಶಿಷ್ಟ ಜಾತಿಯ 39 ಮಂದಿ, ಪರಿಶಿಷ್ಟ ಪಂಗಡದ 71 ಮಂದಿ ಸೇರಿ ಒಟ್ಟು 450 ಮಂದಿ ಕೃಷಿ ಮಾಡುತ್ತಿದ್ದಾರೆ. ಹಾವೇರಿ ಜಿಲ್ಲೆಯ ಚಳ್ಳಗೇರಿಯಲ್ಲಿ ಹೈಟೆಕ್‌ ಮಾರುಕಟ್ಟೆ ಆರಂಭಿಸುವುದಾಗಿ ರೇಷ್ಮೆ ಸಚಿವರು ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಮಾರುಕಟ್ಟೆಯಾದರೆ, ಹಾವೇರಿಯಲ್ಲಿ ಹೈಟೆಕ್‌ ಮಾರುಕಟ್ಟೆಯಾದರೆ ರಾಮನಗರಕ್ಕೆ ಹೋಗುವುದು ತಪ್ಪಲಿದೆ. ರೈತರಿಗೆ ಉಪಯೋಗ
ವಾಗಲಿದೆ. ದಾವಣಗೆರೆಯ ಮಾರುಕಟ್ಟೆ ಮತ್ತೆ ಆರಂಭಿಸುವ ಪ್ರಯತ್ನದಲ್ಲಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT