ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಹಕ್ಕುಪತ್ರ, ನೋಂದಣಿ ಇಲ್ಲ, ಸೌಲಭ್ಯ ಪಡೆಯಲಾಗುತ್ತಿಲ್ಲ

ಕೊಳೆಗೇರಿಗಳಲ್ಲಿನ ನಿವಾಸಿಗಳ ಸಮಸ್ಯೆ ಆಲಿಸದ ಜನಪ್ರತಿನಿಧಿಗಳು, ಅಧಿಕಾರಿಗಳು
Published : 28 ಸೆಪ್ಟೆಂಬರ್ 2024, 6:17 IST
Last Updated : 28 ಸೆಪ್ಟೆಂಬರ್ 2024, 6:17 IST
ಫಾಲೋ ಮಾಡಿ
Comments

ದಾವಣಗೆರೆ: ನಗರದ ಕೊಳೆಗೇರಿಗಳಲ್ಲಿ ಅರ್ಧ ಶತಮಾನದಿಂದ ವಾಸವಿರುವ ಹಲವರಿಗೆ ಜಾಗ ಅಥವಾ ಮನೆಗಳ ಹಕ್ಕುಪತ್ರ ಸಿಗದ ಕಾರಣ  ಅಭದ್ರತೆ ನಡುವೆಯೇ ಜೀವಿಸಬೇಕಾದ ದುಃಸ್ಥಿತಿ ಇದೆ.

ಪರಿಶಿಷ್ಟರು ಹಾಗೂ ಹಿಂದುಳಿದದವರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದು, ಗಾರೆ, ಹಮಾಲಿ, ಬೀಡಿ ಕಟ್ಟುವುದು, ಮಂಡಕ್ಕಿ ಭಟ್ಟಿ, ಮನೆಗೆಲಸ ಸೇರಿ ಇತರೆ ಕೂಲಿ ಮಾಡುತ್ತಿದ್ದಾರೆ. ಕುಡಿಯುವ ನೀರು, ರಸ್ತೆ, ವಿದ್ಯುತ್‌, ಚರಂಡಿ, ಶೌಚಾಲಯದಂಥ ಸೌಕರ್ಯಗಳು ಇಲ್ಲದೆ ಯಾತನೆ ಅನುಭವಿಸುತ್ತಿದ್ದಾರೆ.

ಶಾಸಕರಾಗಿದ್ದ ಪಂಪಾಪತಿ ಅವರು ದಕ್ಕಿಂತ ಮುಂಚೆ ನಗರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಗರದ ವಿವಿಧೆಡೆ ವಾಸವಿದ್ದ ಬಡವರಿಗೆ ನಿವೇಶನ ಹಂಚಿದ್ದರು. 2004ರಲ್ಲಿ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ವಸತಿರಹಿತರಿಗಾಗಿ ಆಶ್ರಯ ಯೋಜನೆ ಅಡಿ ದಾವಣಗೆರೆಗೆ 10,000 ಮನೆಗಳು ಮಂಜೂರಾಗಿದ್ದವು. ಕೊಳೆಗೇರಿಗಳಲ್ಲಿದ್ದ ಕೆಲವರು ಹಣ ಕಟ್ಟಿ ಮನೆ ಪಡೆದುಕೊಂಡರೆ, ಹಲವರಿಗೆ ಹಣ ಕಟ್ಟಲು ಸಾಧ್ಯವಾಗದ ಕಾರಣ ಹಕ್ಕುಪತ್ರ ಪಡೆಯಲು ಸಾಧ್ಯವಾಗಿರಲಿಲ್ಲ. 2018ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ವಂತಿಗೆ ಶುಲ್ಕ ಮನ್ನಾ ಮಾಡಿದರು. ಬಳಿಕ 4,800ಕ್ಕೂ ಹೆಚ್ಚು ಮನೆಗಳಿಗೆ ಹಕ್ಕುಪತ್ರ ನೀಡಿ ನೋಂದಣಿ ಮಾಡಿಸಿಕೊಡಲಾಗಿದೆ.

ಮಹಾವೀರ ನಗರದಲ್ಲಿ 200ಕ್ಕೂ ಹೆಚ್ಚು ಮನೆಗಳಿವೆ. ಈ ನಗರವಿರುವ ಒಂದೂವರೆ ಎಕರೆ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದು, ಗುಡಿಸಲುಗಳನ್ನು ಹಾಕಿಕೊಂಡಿದ್ದವರಿಗೆ 10x20 ಅಳತೆಗೆ ಆಗಿನ ಕಾಲದಲ್ಲೇ ₹ 1,500ಕ್ಕೆ ಕ್ರಯ ನೀಡಿರುತ್ತಾರೆ. ಜನರ ಬಳಿ ಈ ಕುರಿತ ಪತ್ರ ಬಿಟ್ಟರೆ ಯಾವುದೇ ದಾಖಲೆಗಳಿಲ್ಲ. ರಾಮಕೃಷ್ಣ ಹೆಗಡೆ ನಗರ ನಿವಾಸಿಗಳನ್ನು ಏಕಾಏಕಿ ಸ್ಥಳಾಂತರಿಸಿದ ಬಳಿಕ ಯಾವ ಸಂದರ್ಭದಲ್ಲೇ ಒಕ್ಕಲೇಳಬಹುದು ಎಂಬ ಆತಂಕ ಅವರಲ್ಲಿದೆ.

‘ಮಹಾವೀರ ನಗರವಿರುವ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದು ಎಂಬ ನೆಪ ಹೇಳಿಕೊಂಡು ಈವರೆಗೂ ಹಕ್ಕುಪತ್ರ ನೀಡುತ್ತಿಲ್ಲ. ಆದರೆ, ವಾಂಬೆ ಯೋಜನೆ ಅಡಿ ನಗರದ ವಿವಿಧ ಕೊಳೆಗೇರಿಗಳಲ್ಲಿ 211 ಮನೆ ನಿರ್ಮಿಸಿ ಕೊಟ್ಟ ಸಂದರ್ಭದಲ್ಲಿ ಇಲ್ಲಿಯೂ 11 ಮನೆಗಳನ್ನು ನಿರ್ಮಿಸಿ, ಹಕ್ಕುಪತ್ರ ನೀಡಲಾಗಿದೆ. ಅಂತೆಯೇ ಉಳಿದವರಿಗೂ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ನಿವಾಸಿ ಆರ್‌.ರಾಜಾಸಾಬ್‌ ಆಗ್ರಹಿಸುತ್ತಾರೆ.

‘ನಮ್ಮ ಬಡಾವಣೆಯಲ್ಲಿ ಕೆಲವೊಬ್ಬರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಹಕ್ಕುಪತ್ರ ಇರುವವರಿಗೆ ನೋಂದಣಿ ಮಾಡಿಸಿಕೊಡದ ಕಾರಣ ನಮ್ಮ ಹೆಸರಿಗೆ ಖಾತೆ ಆಗಿಲ್ಲ. ಇದರಿಂದ ಬ್ಯಾಂಕ್‌ ಸಾಲ ಪಡೆಯಲಾಗಲೀ, ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಲಾಗಲೀ ಸಾಧ್ಯವಾಗುತ್ತಿಲ್ಲ’ ಎಂದು ಸಿದ್ಧರಾಮೇಶ್ವರ ಬಡಾವಣೆಯ ತಿಮ್ಮವ್ವ ದೂರಿದರು.

‘ರಾಜೀವ್‌ ಗಾಂಧಿ ಆವಾಸ್‌ ಯೋಜನೆ ಅಡಿ ಮಂಜೂರಾಗಿದ್ದ ಮನೆ ನಿರ್ಮಾಣದ ಗುತ್ತಿಗೆಯನ್ನು ಬೀಡಿ ಕಾರ್ಮಿಕರ ಹೆಸರಿನಲ್ಲಿ ಸಂಘ ಮಾಡಿದ್ದ ಎಂ.ರಾಜಾಸಾಬ್‌ ಪಡೆದಿದ್ದರು. ಜನರಿಂದಲೂ ಆಗಾಗ ₹ 5,000, ₹ 10,000ದಂತೆ ₹ 2 ಲಕ್ಷದವರೆಗೂ ವಸೂಲಿ ಮಾಡಿಕೊಂಡು ನಂತರ ಮೋಸ ಮಾಡಿದರು. ವಿಷಯ ತಿಳಿದವರು ಆಕ್ರೋಶಗೊಂಡು ಅರ್ಧಂಬರ್ಧ ನಿರ್ಮಾಣವಾಗಿದ್ದ ಮನೆಗಳಿಗೆ ನುಗ್ಗಿದರು. ಅನೇಕರಿಗೆ ಮನೆಯೇ ಸಿಗಲಿಲ್ಲ. ಅಂದಿನಿಂದ ಇಲ್ಲಿವರೆಗೂ ಹಕ್ಕುಪತ್ರ ನೀಡಿಲ್ಲ. ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದೇವೆ’ ಎಂದು ಸ್ಥಳೀಯ ನಿವಾಸಿ ಸಬರೀನ್‌ ಬಾನು ತಿಳಿಸಿದರು.

ಮಂಡಕ್ಕಿ ಭಟ್ಟಿ ಪ್ರದೇಶ, ಕಾರ್ಲ್‌ಮಾರ್ಕ್ಸ್‌ ನಗರ, ಯರಗುಂಟೆ ಎ.ಕೆ.ಕಾಲೊನಿ, ಮೆಹಬೂಬ್‌ ನಗರ, ಬಾಷಾ ನಗರ, ಮಟ್ಟಿಕಲ್‌ ಸ್ಲಂ, ಎತ್ತಿನಸಂತೆ ಮೈದಾನ, ಬೆಂಕಿ ನಗರ, ದನವಿನ ಓಣಿ ಮುಂತಾದೆಡೆ ನೆಲೆಸಿರುವವರು ಅಸುರಕ್ಷತೆಯಲ್ಲಿದ್ದಾರೆ.

ಘೋಷಿತ ಕೊಳೆಗೇರಿಯು ಸರ್ಕಾರಿ ಜಾಗದಲ್ಲಿದ್ದರೆ ಮಾತ್ರ ಹಕ್ಕುಪತ್ರ ನೀಡಲು ಸಾಧ್ಯ. ಖಾಸಗಿ ವ್ಯಕ್ತಿ ದಾನವಾಗಿ ನೀಡಿರುವ ಭೂಮಿಯಲ್ಲಿ ಕೊಳೆಗೇರಿ ಇದ್ದರೆ ಹಕ್ಕುಪತ್ರ ನೀಡಲು ಬರುವುದಿಲ್ಲ. ಭೂಮಾಲೀಕರು ಮಂಡಳಿ ಹೆಸರಿಗೆ ನೋಂದಣಿ ಮಾಡಿಸಿಕೊಟ್ಟಲ್ಲಿ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬಹುದು. ಕೊಳೆಗೇರಿಗಳಲ್ಲಿ ಸರ್ವೆ ನಡೆಸಿ ಹಕ್ಕುಪತ್ರ ವಿತರಿಸುವಂತೆ ಸರ್ಕಾರ ಆದೇಶಿಸಿದ ಬಳಿಕ ದಾವಣಗೆರೆಯಲ್ಲಿ ಸರ್ವೆ ನಡೆಸಿ 531 ಜನರ ಪಟ್ಟಿ ಸಿದ್ಧಪಡಿಸಲಾಗಿದೆ. ಹಕ್ಕುಪತ್ರ ಪಡೆಯಲು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು ₹ 2,000 ಮತ್ತು ಇತರೆಯವರು ₹ 4,000 ಪಾವತಿಸಬೇಕು. ಸಿಬ್ಬಂದಿ ಕೊರತೆಯ ಕಾರಣ ಸರ್ವೆ ಕಾರ್ಯ ಪೂರ್ಣಗೊಂಡಿಲ್ಲ. ಈಗಾಗಲೇ ಹಕ್ಕುಪತ್ರ ಹೊಂದಿರುವವರು ಕೊಳೆಗೇರಿ ಮಂಡಳಿಯಿಂದ ಪತ್ರ ಪಡೆದು ನೋಂದಣಿ ಮಾಡಿಸಿಕೊಳ್ಳಬಹುದು. ಹಕ್ಕುಪತ್ರ ಸಿಗದವರನ್ನು ಗುರುತಿಸಿ ಮಂಡಳಿ ವತಿಯಿಂದಲೂ ನೋಂದಣಿ ಮಾಡಿಸಿಕೊಡಲಾಗುವುದು ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಎಂಜಿನಿಯರ್‌ ಎಸ್‌.ನಿಶಾಂತ್‌ ಹೇಳುತ್ತಾರೆ.

ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿ ಹೆಂಚಿನ ಮನೆ

ಗುಡಿಸಲು ತೆಗೆದು ಪಕ್ಕಾ ಮನೆ ನಿರ್ಮಿಸಲು ಅವಕಾಶ ಇದ್ದು 2022ರಲ್ಲಿ ದಾವಣಗೆರೆ ನಗರಕ್ಕೆ 1723 ಮನೆಗಳು ಮಂಜೂರಾಗಿವೆ. 1000 ಮನೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು 680 ಪೂರ್ಣಗೊಂಡಿವೆ. 300 ಪ್ರಗತಿಯಲ್ಲಿವೆ. ತಲಾ ಮನೆಗೆ ₹ 7.40 ಲಕ್ಷ ವೆಚ್ಚವಾಗಲಿದ್ದು ಪರಿಶಿಷ್ಟರು ಇತರೆಯವರಿಂದ ಫಲಾನುಭವಿ ವಂತಿಗೆಯಾಗಿ ₹ 1 ಲಕ್ಷ ಪಡೆಯಲಾಗುತ್ತದೆ. ಕೇಂದ್ರದ ಪಾಲು ₹ 1.50 ಲಕ್ಷ ಉಳಿದುದನ್ನು ರಾಜ್ಯ ಸರ್ಕಾರ ಭರಿಸುತ್ತದೆ. ಸರ್ಕಾರಿ ಜಾಗದಲ್ಲಿರುವ ಕೊಳೆಗೇರಿಗಳ ನಿವಾಸಿಗಳು ಹಕ್ಕುಪತ್ರ ಹೊಂದಿದ್ದರೂ ಯೋಜನೆಯ ಲಾಭ ಪಡೆಯಬಹುದು. ಆದರೆ ಖಾಸಗಿ ಜಾಗಗಳಲ್ಲಿನ ಕೊಳೆಗೇರಿಗಳಲ್ಲಿ ವಾಸವಿರುವವರ ಜಾಗ ನೋಂದಣಿಯಾಗಿದ್ದಲ್ಲಿ ಮಾತ್ರ ಸೌಲಭ್ಯ ಸಿಗಲಿದೆ ಎಂದು ಎಸ್‌.ನಿಶಾಂತ್‌ ಸ್ಪಷ್ಟಪಡಿಸಿದರು.

ಕೊಳೆಗೇರಿ ಅಭಿವೃದ್ಧಿ ಮಂಡಳಿ ಉಪ ನೋಂದಣಾಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳು ಜಂಟಿ ಸಭೆ ನಡೆಸಿ ತೊಡಕುಗಳನ್ನು ಪರಿಹರಿಸುವ ಮೂಲಕ ಹಕ್ಕುಪತ್ರ ನೀಡಲು ನೋಂದಣಿ ಮಾಡಿಸಲು ಕ್ರಮ ಕೈಗೊಳ್ಳಬೇಕು.
-ಜಬೀನಾ ಖಾನಂ, ಅಧ್ಯಕ್ಷರು ನೆರಳು ಬೀಡಿ ಕಾರ್ಮಿಕರ ಯೂನಿಯನ್‌
ಮಟ್ಟಿಕಲ್‌ ಸ್ಲಂ ಪಾಲಿಕೆ ಜಾಗದಲ್ಲಿದ್ದರೂ ಕೊಳೆಗೇರಿ ಮಂಡಳಿಗೆ ಸೇರಿಸಿಲ್ಲ. ದನವಿನ ಓಣಿಯಲ್ಲಿ ವಾಸವಿರುವವರಿಗೆ ಹಕ್ಕುಪತ್ರ ನೀಡಿದ್ದು ಅಳತೆ ಮಾಡಿಕೊಡದ ಕಾರಣ ಮನೆ ಕಟ್ಟಿಸಿಕೊಳ್ಳಲು ಆಗುತ್ತಿಲ್ಲ. ಸಂಬಂಧಪಟ್ಟವರು ಗಮನಹರಿಸಬೇಕು.
-ಆವರಗೆರೆ ವಾಸು, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT