ಸೋಮವಾರ, ಜನವರಿ 17, 2022
18 °C

ಕುಟುಂಬ ನಿರ್ವಹಣೆಯ ಜೊತೆಗೆ ಸಮಾಜಸೇವೆ ಶ್ಲಾಘನೀಯ: ಮೇಯರ್ ಎಸ್‌.ಟಿ. ವೀರೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಶಿಕ್ಷಣ, ತರಬೇತಿ ಹಾಗೂ ಸ್ವಯಂ ಉದ್ಯೋಗ ತರಬೇತಿಗೆ ಅಗತ್ಯ ನೆರವು ನೀಡಲು ಪಾಲಿಕೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಮೇಯರ್ ಎಸ್‌.ಟಿ. ವೀರೇಶ್ ಹೇಳಿದರು.

ಮಕ್ಕಳ ದಿನಾಚರಣೆ ಅಂಗವಾಗಿ ದಾವಣಗೆರೆ ಜಿಲ್ಲಾ ಶಿಶು ಕಲ್ಯಾಣ ಮಂಡಳಿಯಿಂದ ಶನಿವಾರ ನಡೆದ ಮಕ್ಕಳ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಶು ಕಲ್ಯಾಣ ಮಂಡಳಿಯಲ್ಲಿ ಗ್ರಂಥಾಲಯಕ್ಕೆ ಅನುದಾನ ಹಾಗೂ ಐಎಎಸ್‌ ಹಾಗೂ ಕೆಎಎಸ್ ಪರೀಕ್ಷೆಗಳಿಗೆ ತರಬೇತಿ ನೀಡಲು ಪಾಲಿಕೆ ಸಭೆಯಲ್ಲಿ ಮಾತನಾಡಿ, ಅನುದಾನ ನೀಡಲು ಪ್ರಯತ್ನಿಸುತ್ತೇನೆ. ಇಂತಹ ಸಂಸ್ಥೆಗೆ ಹಣ ಕೊಟ್ಟರೆ ದುರುಪಯೋಗವಾಗುವುದಿಲ್ಲ’ ಎಂದರು.

‘ಕುಟುಂಬ ನಿರ್ವಹಣೆಯ ಜೊತೆಗೆ ಅನೇಕ ಮಹಿಳೆಯರು ವನಿತಾ ಸಮಾಜದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಬೆಳೆಸಲು ಇಂತಹ ವೇದಿಕೆಗಳು ಸಹಾಯಕವಾಗಿವೆ’ ಎಂದು ಹೇಳಿದರು.

‘ರಾಜಕಾರಣಿಗಳು ಹೆಚ್ಚು ಮಾತನಾಡಿ, ಕಡಿಮೆ ಕೆಲಸ ಮಾಡುತ್ತಾರೆ. ಆದರೆ ನಾಗಮ್ಮ ಕೇಶವಮೂರ್ತಿ ಇದಕ್ಕೆ ಅಪವಾದ ಎಂಬಂತೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡು ಬಂದಿದ್ದಾರೆ. ಅವರ ಸಾಧನೆಗೆ ಇಲ್ಲಿರುವ ಕಟ್ಟಡಗಳೇ ಸಾಕ್ಷಿಯಾಗಿವೆ. ಇಂಥಹ ವ್ಯಕ್ತಿಗಳು ಮಾತ್ರ ಸಮಾಜವನ್ನು ಸರಿದಾರಿಗೆ ತರಲು ಸಾಧ್ಯ. ಯುವ ಜನಾಂಗ ಸಾಧನೆಗಳನ್ನು ಮಾಡಲು ನಾಗಮ್ಮ ಕೇಶವಮೂರ್ತಿ ಅವರು ಪ್ರೇರಣೆಯಾಗುತ್ತಾರೆ’ ಎಂದರು.

ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ಮಾತನಾಡಿ, ‘ಹಾವೇರಿ, ದಕ್ಷಿಣ ಕನ್ನಡ ಸೇರಿ ರಾಜ್ಯದ 10 ಜಿಲ್ಲೆಗಳ ಶಿಶು ಕಲ್ಯಾಣ ಮಂಡಳಿಗಳಲ್ಲಿ ದಾವಣಗೆರೆ ಜಿಲ್ಲೆಯ ಮಂಡಳಿಯಲ್ಲಿ ಉತ್ತಮವಾದ ಕಾರ್ಯಗಳು ನಡೆಯುತ್ತಿದ್ದು, ನಂಬರ್ ಒನ್ ಸ್ಥಾನದಲ್ಲಿದೆ. ಈಗಿನ ಅಧ್ಯಕ್ಷರು ಹೊಸ ಯೋಜನೆ ರೂಪಿಸಬೇಕು’ ಎಂದು ಸಲಹೆ ನೀಡಿದರು.

‘ಶಿಶು ಸೇವಾ’ ‍ಪ್ರಶಸ್ತಿ ಸ್ವೀಕರಿಸಿದ ಪ್ರೇಮಾಲಯದ ಅಧ್ಯಕ್ಷೆ ಆರ್. ವಾಗ್ದೇವಿ, ‘ಇಂದಿನ ಮಕ್ಕಳು ಟೀವಿ, ಮೊಬೈಲ್‌ಗಳಿಗೆ ದಾಸರಾಗಿದ್ದು, ಒಂಟಿ ಪಾಲಕರ ಮಕ್ಕಳಿರುವ ಪ್ರೇಮಾಲಯದಲ್ಲಿ ಇದರ ಸೋಂಕಿಲ್ಲ. ಶಿಕ್ಷಣಕ್ಕೆ ಉತ್ತಮ ಅವಕಾಶಗಳಿವೆ. ಇಲ್ಲಿ ಕಲಿತವರು ದೊಡ್ಡ ಹುದ್ದೆಯಲ್ಲಿದ್ದಾರೆ’ ಎಂದರು.

ಅಮೃತ ವಿದ್ಯಾಲಯಂ ಶಾಲೆಯ ಟಿ.ಜಾಗೃತಿಗೆ ‘ಉತ್ತಮ ವಿದ್ಯಾರ್ಥಿ ಪ್ರಶಸ್ತಿ’ ನೀಡಲಾಯಿತು. ಮಂಡಳಿ ಅಧ್ಯಕ್ಷೆ ಉಷಾ ರಂಗನಾಥ್, ಕಾರ್ಯದರ್ಶಿ ಸುನೀತಾ ಇಂದೂಧರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು