ದಾವಣಗೆರೆ: ಸೂರ್ಯ ಗ್ರಹಣ, ದೇಗುಲಗಳಲ್ಲಿ ಇರಲಿಲ್ಲ ಭಕ್ತರ ದಟ್ಟಣೆ

ದಾವಣಗೆರೆ: ದೀಪಾವಳಿ ಹಬ್ಬದ ಸಂಭ್ರಮ ಇದ್ದರೂ ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ನಗರದ ಕೆಲ ದೇವಸ್ಥಾನಗಳಲ್ಲಿ ಮಂಗಳವಾರ ಮಧ್ಯಾಹ್ನ ಪೂಜೆ ಮುಗಿಸಿ ಬಾಗಿಲನ್ನು ಹಾಕಿ ದೇವರ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇನ್ನು ಕೆಲವು ದೇಗುಲಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರೂ ಗ್ರಹಣದ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿರಲಿಲ್ಲ. ಬಹುತೇಕ ದೇವಸ್ಥಾನಗಳ ಆವರಣ ಬಿಕೋ ಎನ್ನುತ್ತಿದ್ದವು.
ಸೂರ್ಯ ಗ್ರಹಣದ ಕಾರಣಕ್ಕೆ ಬಹುತೇಕ ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಅಲಂಕಾರ, ಪೂಜೆಗಳು ನಡೆಯಲಿಲ್ಲ. ನಗರದೇವತೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಮಧ್ಯಾಹ್ನ 2.30ಕ್ಕೆ ಬಾಗಿಲು ಹಾಕಿ ದೇವಿಯ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿತ್ತು. ರಾತ್ರಿ 7.30ಕ್ಕೆ ಮತ್ತೆ ಬಾಗಿಲು ತೆರೆದು ಪೂಜೆ ಸಲ್ಲಿಸಲಾಯಿತು. ಈ ವಾರ ಪ್ರತಿ ಮಂಗಳವಾರದಂತೆ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಿರಲಿಲ್ಲ.
ನಗರದ ಕೆ.ಬಿ. ಬಡಾವಣೆಯಲ್ಲಿರುವ ರಾಯರ ಮಠದಲ್ಲಿ ಸಂಜೆ ಗ್ರಹಣ ಶಾಂತಿ ಹೋಮ ಹಮ್ಮಿಕೊಳ್ಳಲಾಗಿತ್ತು. ಭಕ್ತರು ಮಂತ್ರಪಠಣ, ಜಪ ನಡೆಯಿತು. ಪಿ.ಜೆ. ಬಡಾವಣೆಯ ರಾಯರ ಮಠದಲ್ಲೂ ಗ್ರಹಣದ ವೇಳೆ ಪಾರಾಯಣ, ಅಭಿಷೇಕ ನಡೆಯಿತು.
ಬಲಿಪಾಡ್ಯಮಿ, ಹಟ್ಟಿ ಲಕ್ಕವ್ವ ಹಬ್ಬಕ್ಕೆ ಖರೀದಿ ಜೋರು
ದೀಪಾವಳಿ ಹಬ್ಬದ ಎರಡನೇ ದಿನವಾದ ಮಂಗಳವಾರ ಸೂರ್ಯ ಗ್ರಹಣ ಇದ್ದುದರಿಂದ ಹೆಚ್ಚಿನ ಜನರು ಸೋಮವಾರವೇ ಲಕ್ಷ್ಮೀ ಪೂಜೆ ನೆರವೇರಿಸಿದ್ದರು. ಮಂಗಳವಾರ ಬೆಳಿಗ್ಗೆಯೂ ಕೆಲವು ಜನ ಲಕ್ಷ್ಮೀಪೂಜೆ ನೆರವೇರಿಸಿರುವುದು ಕಂಡುಬಂತು.
ಬುಧವಾರ ಬಲಿಪಾಡ್ಯಮಿ ಹಾಗೂ ಹಟ್ಟಿ ಲಕ್ಕವ್ವನ ಹಬ್ಬ ಆಚರಿಸಲು ಮಂಗಳವಾರ ಬೆಳಿಗ್ಗೆ ಹಾಗೂ ಸಂಜೆಯ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಮಾರುಕಟ್ಟೆಗೆ ಬಂದಿದ್ದರು.
‘ದಸರಾ ಹಬ್ಬಕ್ಕೆ ಹೋಲಿಸಿದರೆ ಹಣ್ಣಿನ ವ್ಯಾಪಾರ ದೀಪಾವಳಿಗೆ ಹೆಚ್ಚಾಗಿದೆ. ಒಂದು ಕೆ.ಜಿ. ಮಿಕ್ಸ್ ಹಣ್ಣನ್ನು ₹100ರಿಂದ ₹ 120ರವರೆಗೂ ಮಾರಾಟ ಮಾಡುತ್ತಿದ್ದೇವೆ. ಹಟ್ಟಿ ಲಕ್ಕವ್ವನ ಹಬ್ಬವನ್ನು ದೊಡ್ಡದಾಗಿ ಆಚರಿಸುವುದರಿಂದ ಬುಧವಾರ ಬೆಳಿಗ್ಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುವ ನಿರೀಕ್ಷೆ ಇದೆ’ ಎಂದು ಪ್ರವಾಸಿ ಮಂದಿರದ ರಸ್ತೆಯಲ್ಲಿದ್ದ ಹಣ್ಣಿನ ವ್ಯಾಪಾರಿ ದುಗ್ಗೇಶ್ ತಿಳಿಸಿದರು.
ಸೇವಂತಿ, ಚೆಂಡು ಹೂವು, ಕಾಚಿಕಡ್ಡಿ, ಕೋಲಾಣಿ, ಉತ್ರಾಣಿ, ಬ್ರಹ್ಮದಂಡೆ, ಮಾಲಿಂಗಬಳ್ಳಿ, ಗುಜ್ಜವ್ವ, ಬಾಳೆಗಿಡಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರ ಆಗುತ್ತಿರುವುದು ಕಂಡುಬಂತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.