ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊನ್ನಾಳಿ | ಸರ್ಕಾರಿ ಜಮೀನಿನಲ್ಲಿ ಸೋಲಾರ್ ಪ್ಲಾಂಟ್: ಉಗ್ರ ಹೋರಾಟದ ಎಚ್ಚರಿಕೆ

ಅರಬಗಟ್ಟೆ: ಗ್ರಾಮಸ್ಥರು, ಮುಖಂಡರೊಂದಿಗೆ ಎಂ.ಪಿ.ರೇಣುಕಾಚಾರ್ಯ ಪ್ರತಿಭಟನೆ
Published 18 ಜೂನ್ 2024, 14:38 IST
Last Updated 18 ಜೂನ್ 2024, 14:38 IST
ಅಕ್ಷರ ಗಾತ್ರ

ಹೊನ್ನಾಳಿ: ‘ಅಭಿವೃದ್ಧಿ ಹೆಸರಿನಲ್ಲಿ ಜಾನುವಾರುಗಳಿಗೆ ಮೀಸಲಿರಿಸಿರುವ ಗೋಮಾಳದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಿಸಲು ಮುಂದಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಧಿಕಾರಿಗಳಿಗೆ ಎಚ್ಚರಿಸಿದರು.

ಮಂಗಳವಾರ ತಾಲ್ಲೂಕಿನ ಅರಬಗಟ್ಟೆ ಸರ್ಕಾರಿ ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಗಡಿ ಗುರುತಿಸಿ ಕಂಬ ನೆಡುತ್ತಿದ್ದಾರೆ ಎಂಬ ಮಾಹಿತಿ ತಿಳಿದ ಅವರು ಸ್ಥಳೀಯ ಗ್ರಾಮಸ್ಥರು ಹಾಗೂ ತಮ್ಮ ಪಕ್ಷದ ಮುಖಂಡರೊಂದಿಗೆ ಸ್ಥಳಕ್ಕೆ ಧಾವಿಸಿ ದಿಢೀರ್‌ ಧರಣಿ ನಡೆಸಿದರು.

‘ಕೇಂದ್ರ ಸರ್ಕಾರ ಅಭಿವೃದ್ಧಿಗೆ ಒತ್ತು ನೀಡಿ ಇಂತಹ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ಉಳುಮೆ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಿ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಿ ಎಂದು ಎಲ್ಲಿಯೂ ಹೇಳಿಲ್ಲ. ಆದರೆ, ನೀವುಗಳು ಗುತ್ತಿಗೆದಾರರ ಜತೆ ಶಾಮೀಲಾಗಿ ಉಳುಮೆ ಮಾಡುತ್ತಿರುವ ಭೂಮಿಯಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಲು ಹುನ್ನಾರ ನಡೆಸುತ್ತಿರುವುದು ಖಂಡನೀಯ. ಈ ಬಗ್ಗೆ ಎಚ್ಚರಿಕೆ ನೀಡಿದ ನಂತರವೂ ಅಧಿಕಾರಿಗಳು ಮುಂದುವರಿದರೆ ಸಹಿಸುವುದಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

‘ಗಡಿ ಕಂಬಗಳನ್ನು ನೆಡುವ ಈ ಕಾರ್ಯವನ್ನು ಇಲ್ಲಿಗೇ ನಿಲ್ಲಿಸಬೇಕು. ರೈತರ ಜಮೀನನ್ನು ಅವರಿಗೆ ಬಿಟ್ಟುಕೊಡಬೇಕು. ಇಲ್ಲವಾದಲ್ಲಿ ಉಳುಮೆ ಮಾಡುತ್ತಿರುವ ರೈತರು ಹಾಗೂ ಗ್ರಾಮಸ್ಥರ ಜತೆಗೂಡಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ಮಾಡಲಾಗುವುದು’ ಎಂದು ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು.

ಉಳುಮೆ ಮಾಡುತ್ತಿದ್ದ ರೈತರು ಸಹ ತಮ್ಮ ಅಳಲನ್ನು ತೋಡಿಕೊಂಡರು.

ಪ್ರಧಾನಿ ಹೆಸರಿಗೆ ಧಕ್ಕೆ ತರಬೇಡಿ: ‘ಕೇಂದ್ರ ಸರ್ಕಾರದ ಪಿಎಂ ಕುಸುಮ ಯೋಜನೆ ಸ್ಥಳೀಯ ರೈತರಿಗೆ ಅನುಕೂಲವಾಗಲಿದೆ’ ಎಂದು ಉಪ ವಿಭಾಗಾಧಿಕಾರಿ ವಿ. ಅಭಿಷೇಕ್ ಅವರು ರೇಣುಕಾಚಾರ್ಯ ಅವರಿಗೆ ಮನವರಿಕೆ ಮಾಡಲು ಮುಂದಾದಾಗ, ‘ಪ್ರಧಾನ ಮಂತ್ರಿ ಹೆಸರನ್ನು ಮಧ್ಯೆ ಎಳೆಯಬೇಡಿ. ಇದು ಯೋಜನೆಯ ಹೆಸರು ಮಾತ್ರ ಆಗಿದ್ದು, ಮೋದಿ ಅವರು ಇದೇ ಅರಬಗಟ್ಟೆ ಗ್ರಾಮದ ಜಮೀನಿನಲ್ಲಿ ಮಾಡಿ ಎಂದು ಹೇಳಿಲ್ಲ. ಅರಬಗಟ್ಟೆ ಹಾಗೂ ಹರಳಹಳ್ಳಿ ಗ್ರಾಮದ ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಿ’ ಎಂದು ಹೇಳಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜೆ.ಕೆ.ಸುರೇಶ್, ಬಿಜೆಪಿ ಮುಖಂಡರಾದ ಶಾಂತರಾಜ್ ಪಾಟೀಲ್, ತರಗನಹಳ್ಳಿ ರಮೇಶ್, ಶಿವುಹುಡೇದ್, ಎಸ್.ಎಸ್.ಬೀರಪ್ಪ, ರವಿಕುಮಾರ್, ಅರಕೆರೆ ನಾಗರಾಜ್ ಹಾಗೂ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದ ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT