ಸೋಮವಾರ, ಜನವರಿ 20, 2020
26 °C
ಸೋಮೇಶ್ವರ ವಿದ್ಯಾಸಂಸ್ಥೆಯಲ್ಲಿ ಕಿಕ್ಕಿರದ ಜನಸ್ತೋಮ

ದಾವಣಗೆರೆಯಲ್ಲಿ ಎಸ್‌ಪಿಬಿ ಸಂಗೀತ ರಸದೌತಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬೆಣ್ಣೆದೋಸೆ ನಗರಿಯಲ್ಲಿ, ಸಂಜೆಯ ವೇಳೆ ಚುಮು ಚುಮು ಚಳಿಯಲ್ಲಿ ಹಿನ್ನೆಲೆ ಗಾಯಕ ಎಸ್‌.ಬಿ. ಬಾಲಸುಬ್ರಹ್ಮಣ್ಯಂ ಗಾಯನ ಸಂಗೀತ ಪ್ರಿಯರಿಗೆ ಬೆಚ್ಚನೆಯ ಸ್ಪರ್ಶ ನೀಡಿತು.

ನಗರದ ಸೋಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ‘ಸೋಮೇಶ್ವರೋತ್ಸ’ವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಸಂಗೀತೋತ್ಸವದಲ್ಲಿ ಮೇರು ಗಾಯಕ ಹಾಡುಗಳ ಮೂಲಕ ಮೋಡಿ ಮಾಡಿದರು. ನೆರೆದಿದ್ದ ಶ್ರೋತೃಗಳಿಗೆ ಅಲ್ಲಿ ಸಂಗೀತದ ಹಬ್ಬವೇ ನಡೆಯಿತು. ತಮ್ಮ ಸಿರಿಕಂಠದಿಂದ ದಶಕಗಳಿಂದ ರಂಜಿಸುತ್ತ ಬಂದಿರುವ ಎಸ್‌ಪಿಬಿ ಅವರ ಗಾನಸುಧೆಯನ್ನು ಆನಂದಿಸುವ ಅವಕಾಶ ದೊರೆಯಿತು.

ಶಂಕರಾಚಾರ್ಯರ ಶ್ಲೋಕದೊಂದಿಗೆ ಎಸ್‌ಪಿಬಿ ಸಂಗೀತ ಆರಂಭಿಸಿದರು. ವೇದಿಕೆಯಲ್ಲಿದ್ದ ಸಹ ಕಲಾವಿದರಿಗೆ ವಂದಿಸುವ ಮೂಲಕ ಗಾಯನ ಆರಂಭಿಸಿದ್ದು ಅವರ ಸೌಜನ್ಯಕ್ಕೆ ಸಾಕ್ಷಿಯಾಗಿತ್ತು.

ಮಹಾಕ್ಷತ್ರಿಯ ಚಿತ್ರದ ‘ಈ ಭೂಮಿ ಬಣ್ಣದ ಬುಗುರಿ...’ ಹಾಡಿನಿಂದ ಚಿತ್ರಗೀತೆಗಳ ಲೋಕಕ್ಕೆ ಶ್ರೋತೃಗಳನ್ನು ಕರೆದೊಯ್ದರು. ಈ ಹಾಡಿನ ಸಾರವನ್ನು ತಿಳಿದು ಆಚರಣೆಗೆ ತರುವಂತೆ ಎಲ್ಲರಿಗೂ ಮನವಿ ಮಾಡಿದರು. ನಂತರ ಸೋಲಿಲ್ಲದ ಸರದಾರ ಚಿತ್ರದ ‘ಈ ಕನ್ನಡ ಮಣ್ಣನು ಮರಿಬೇಡ, ಓ ಅಭಿಮಾನಿ...’ ಹಾಡು ಹೇಳಿ ರಂಜಿಸಿದರು.

‘ನಿಮ್ಮ ದಯೆಯಿಂದ 54 ವರ್ಷಗಳಿಂದ ನಿಮಗಾಗಿ, ನನಗಾಗಿ ಹಾಡುತ್ತಿದ್ದೇನೆ. 1967ರಲ್ಲಿ ‘ನಕ್ಕರೆ ಅದೇ ಸ್ವರ್ಗ’ ಚಿತ್ರದ ಮೂಲಕ ಕನ್ನಡ ಚಿತ್ರಗೀತೆಗಳ ಗಾಯನ ಆರಂಭಿಸಿದೆ. ರೆಕಾರ್ಡಿಂಗ್ ಆಗಿರುವ ನನ್ನ ಎರಡನೇ ಹಾಡೇ ಕನ್ನಡದ ಗೀತೆಯಾಗಿತ್ತು. ‘ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯನ್ನು ಹೊರತುಪಡಿಸಿ ಬೇರೆ ವಿಷಯದ ಕಡೆಗೆ ಗಮನ ಹರಿಸಬಾರದು. ವಿದ್ಯೆಗಿಂತ ಮಿಗಿಲಾದುದು ಯಾವುದೂ ಇಲ್ಲ’ ಎಂದು ಸಲಹೆ ನೀಡಿದರು.

‘ಕನಸಲೂ ನೀನೇ ಮನಸಲೂ ನೀನೆ’ ಗೀತೆಯನ್ನು ಗಾಯಕಿ ಎಂ.ಡಿ. ಪಲ್ಲವಿ ಅವರೊಂದಿಗೆ ಹಾಡಿದರು. ಈ ಹಾಡು ನಿಮಗೆ ಇಷ್ಟವಾಗದೇ ಇರದು ಎಂದು ಹೇಳಿದರು. ಹಾಡಿದಾಗ ಕೇವಲ ಗಾಯಕರಿಗೆ ಚಪ್ಪಾಳೆ ಸಿಗುತ್ತದೆ, ಅದರ ಹಿಂದೆ ಅನೇಕ ಕಲಾವಿದರ ಶ್ರಮ ಇರುತ್ತದೆ. ಕವಿಗಳ ರಚನೆ, ನಟರ ಅಭಿನಯ ಎಲ್ಲವೂ ಸೇರಿ ಇದೊಂದು ಸಮಷ್ಟಿ ಕೃಷಿಯಾಗಿದೆ ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕಣ್ವಕುಪ್ಪೆ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ‘ಮಕ್ಕಳು ಈ ದೇಶದ ಆಸ್ತಿಯಾಗಿದ್ದು, ಪ್ರಾಮಾಣಿಕತೆ, ಉತ್ತಮ ಸಂಸ್ಕಾರ, ನೀಡುವ ಜವಾಬ್ದಾರಿ ಪೋಷಕರು, ಶಿಕ್ಷಕರದ್ದಾಗಿದೆ. ಇವರಿಬ್ಬರು ಕೇವಲ ಐಎಎಸ್‌, ಐಪಿಎಸ್‌, ಕೆಎಎಸ್‌, ವೈದ್ಯ, ಎಂಜಿನಿಯರ್‌ ಮಾಡುವ ಬದಲು ಅವರಿಗೆ ಉತ್ತಮ ಸಂಸ್ಕಾರ ಹೇಳಿಕೊಡುವ ಜತೆಗೆ ದೇಶ ಪ್ರೇಮ ಬೆಳೆಸಬೇಕು’ ಎಂದು ಸಲಹೆ ನೀಡಿದರು

ಶಾಸಕ ಎಸ್.ಎ. ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎ.ಎಚ್. ಶಿವಯೋಗಿಸ್ವಾಮಿ, ಸರ್ ಎಂ.ವಿ. ಕಾಲೇಜು ಕಾರ್ಯದರ್ಶಿ ಶ್ರೀಧರ್ ಎಸ್.ಜೆ, ಮಕ್ಕಳ ತಜ್ಞ ಡಾ. ಎನ್.ಕೆ. ಕಾಳಪ್ಪನವರ್, ಸಂಸ್ಥೆಯ ಅಧ್ಯಕ್ಷ ಎಚ್.ಆರ್. ಅಶೋಕ್ ರೆಡ್ಡಿ, ಸಂಸ್ಥಾಪಕ ಕೆ.ಎಂ. ಸುರೇಶ್, ಲೆಕ್ಕಪರಿಶೋಧಕ ಉಮೇಶ್ ಶೆಟ್ಟಿ, ಹಿರಿಯ ವಕೀಲ ಟಿ.ಆರ್. ಗುರುಬಸವರಾಜ್, ವೈದ್ಯ ಡಾ. ಎ.ಕೆ. ರುದ್ರಮುನಿ, ಬಿಇಒ ಬಿ.ಸಿ. ಸಿದ್ದಪ್ಪ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು