ಶನಿವಾರ, ಸೆಪ್ಟೆಂಬರ್ 25, 2021
28 °C
ಮೂರನೇ ಅಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ

ಜಿಲ್ಲಾಡಳಿತಕ್ಕೆ ಸ್ಪಿರುಲಿನಾ ಚಿಕ್ಕಿ, ಸ್ಪಿರುಲಿನಾ ಗ್ರಾನ್ಯುಯಲ್ಸ್‌ ಹಸ್ತಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕ ಮತ್ತು ಸಾಧಾರಣ ಅಪೌಷ್ಟಿಕ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ನೀಡಲು ಹರಿಹರ ಕುಮಾರಪಟ್ಟಣಂನ ಗ್ರಾಸಿಂ ಇಂಡಸ್ಟ್ರೀಸ್‌ ವತಿಯಿಂದ ಜಿಲ್ಲಾಡಳಿತಕ್ಕೆ ಸ್ಪಿರುಲಿನಾ ಚಿಕ್ಕಿ ಮತ್ತು ಸ್ಪಿರುಲಿನಾ ಗ್ರಾನ್ಯುಯಲ್ಸ್‌ ಅನ್ನು ಸೋಮವಾರ ಹಸ್ತಾಂತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಅಗತ್ಯ ಇರುವವರಿಗೆ ವಿತರಿಸಲಾಯಿತು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ‘ಕೊರೊನಾ ಮ್ಯೂಟೆಂಟ್ ವೈರಸ್ ಬರುತ್ತಿರುವುದರಿಂದ ಮಕ್ಕಳ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲೆಯಲ್ಲಿ ಸಮೀಕ್ಷೆ ಮಾಡಿ 9 ಸಾವಿರ ಅಪೌಷ್ಟಿಕ ಮಕ್ಕಳನ್ನು ಗುರುತಿಸಲಾಗಿದೆ. ಅವರನ್ನು ಜಿಲ್ಲಾಡಳಿತ ದತ್ತು ಪಡೆದು 2 ತಿಂಗಳಲ್ಲಿ ಅವಧಿಯಲ್ಲಿ ಗುಣಮಾಡುವ ಜವಾಬ್ದಾರಿ ವಹಿಸಿಕೊಂಡಿದೆ. ಮೊದಲನೇ ಅಲೆಯಲ್ಲಿ ಚಿಕ್ಕಿ ಮತ್ತು ಗ್ರಾನ್ಯುಯಲ್ಸ್‌ ತರಿಸಿ ಕೊರೊನಾ ಸೋಂಕಿತರಿಗೆ ಕೊಡಲಾಗುತ್ತಿತ್ತು. ಅವರು ಬೇಗ ಗುಣಮುಖರಾಗಿದ್ದರು. ಈ ಹಿನ್ನೆಲೆಯಲ್ಲಿ ಅಪೌಷ್ಟಿಕ ಸಮಸ್ಯೆ ಇರುವ ಮಕ್ಕಳಿಗೂ ಇದನ್ನು ನೀಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಗ್ರಾಸಿಂ ಇಂಡಸ್ಟ್ರೀಸ್‌ನವರು 3 ತಿಂಗಳಿಗೆ ಆಗುವಷ್ಟು ಹಸ್ತಾಂತರ ಮಾಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕೋಲಾರದ ನರಸಿಪುರ ಗ್ರಾಮದ ಓಂ ಶಕ್ತಿ ಮಹಿಳಾ ಸ್ವಸಹಾಯ ಸಂಘದಿಂದ ತಯಾರಿಸಿದ ಪೌಷ್ಟಿಕ ಆಹಾರ ಇದಾಗಿದೆ.  ಇದರ ಸೂತ್ರಗಳನ್ನು ತಿಳಿದು ತಯಾರಿಸಲು ನಮ್ಮಲ್ಲಿರುವ ಸಂಘಗಳು ಆಸಕ್ತಿಯನ್ನು ತೋರಿದರೆ ಅವರಿಗೆ ಪ್ರೋತ್ಸಾಹ ನೀಡಲಾಗುವುದು’ ಎಂದು ಹೇಳಿದರು.

ಜಿ.ಪಂ.ಸಿಇಒ ವಿಜಯ ಮಹಾಂತೇಶ ದಾನಮ್ಮನವರ್, ‘ಅಂಗನವಾಡಿ ಕಾರ್ಯಕರ್ತರ ಮೂಲಕ ಮನೆ ಮನೆಗೆ ಹೋಗಿ ತಿಳಿವಳಿಕೆ ನೀಡಲಾಗುವುದು’ ಎಂದು ತಿಳಿಸಿದರು.

ಸಿಂಡಿಕೇಟ್ ಘಟಕದ ಆಯೋಜಕರಾದ ಮಹೇಶ್, ‘ಸ್ಪಿರುಲಿನಾ ಚಿಕ್ಕಿಯನ್ನು 5 ವರ್ಷ ಹಾಗೂ ಅದಕ್ಕಿಂತ ಮೇಲಿನ ಮಕ್ಕಳು ಸೇವಿಸಬಹುದು. ಸ್ಪಿರುಲಿನಾ ಗ್ರ್ಯಾನುಯಲ್ಸ್‍ನ್ನು 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ನೀಡಬೇಕು. ಬಿಸಿ ಹಾಲು ಅಥವಾ ನೀರಿನೊಂದಿಗೆ ಬೆರೆಸಬಾರದು’ ಎಂದು ಸಲಹೆ ನೀಡಿದರು.

ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಕೇದಾರನಾಥ್, ‘ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗುತ್ತಿದೆ. ಮಕ್ಕಳಲ್ಲಿ ಜೀರ್ಣಕ್ರಿಯೆ ಸರಿಯಾದ ರೀತಿಯಲ್ಲಿ ನಡೆಯದೇ ಹೋದಾಗ ಅಪೌಷ್ಟಿಕ ಸಮಸ್ಯೆಗಳು ಉಂಟಾಗುತ್ತವೆ’  ಎಂದರು.

ಗ್ರಾಸಿಂ ಇಂಡಸ್ಟ್ರಿಸ್ ಸಂಸ್ಥಾಪಕ ಅಜಯ್ ಗುಪ್ತಾ, ಸಂದೀಪ್ ಭಟ್, ಶ್ರೀನಿವಾಸ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು