ಬುಧವಾರ, ಆಗಸ್ಟ್ 10, 2022
21 °C

ಪುಷ್ಪ ಹರಾಜು ಕೇಂದ್ರದಲ್ಲಿ ವಹಿವಾಟು ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ವರ್ಷದ ಹಿಂದೆ ಬಣಗುಡುತ್ತಿದ್ದ ಇಲ್ಲಿನ ಭಾರತ್ ಕಾಲೊನಿಯ ಪುಷ್ಪ ಹರಾಜು ಕೇಂದ್ರದಲ್ಲೀಗ ಪುಷ್ಪಗಳು ನಳಿಸುತ್ತಿವೆ. ವ್ಯಾಪಾರ ಆರಂಭವಾಗಿದೆ.

ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 6 ವರ್ಷಗಳ ಹಿಂದೆ ₹ 2.50 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಈ ಕೇಂದ್ರದಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಿದ್ದರೂ ನಗರದ ಕೇಂದ್ರ ಭಾಗದಿಂದ ದೂರ ಎಂಬ ಕಾರಣಕ್ಕೆ ವ್ಯಾಪಾರಿಗಳು ಬರುತ್ತಿರಲಿಲ್ಲ. ಆದರೆ ಈಗ ಮೂಲಸೌಲಭ್ಯ ಕಲ್ಪಿಸಿದ್ದು, ವ್ಯಾಪಾರಿಗಳು ಇಲ್ಲಿ ವಹಿವಾಟು ಆರಂಭಿಸಿದ್ದಾರೆ. ಎರಡು ದಿವಸಕ್ಕೆ ₹60 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹೂವಿನ ವ್ಯಾವಾರಿಗಳು ಪುಷ್ಪ ಹರಾಜು ಕೇಂದ್ರದಲ್ಲಿ ವಹಿವಾಟು ನಡೆಸುವುದಿಲ್ಲ ಎಂದು ಹೈಕೋರ್ಟ್ ಮೊರೆಹೋಗಿದ್ದರು. ಆದರೆ ತೀರ್ಪು ವ್ಯಾಪಾರಿಗಳ ಪರವಾಗದೇ ಸರ್ಕಾರದ ಪರ ಬಂದಿತ್ತು. ಆದ್ದರಿಂದ ಪಿಬಿ ರಸ್ತೆಯಲ್ಲಿರುವ ರೈತ ಭವನ (ತಾಲ್ಲೂಕು ಕಚೇರಿ) ಪಕ್ಕದಲ್ಲಿದ್ದ ಮಳಿಗೆಗಳಿಂದ ಪುಷ್ಪ ಹರಾಜು ಕೇಂದ್ರಕ್ಕೆ ಸ್ಥಳಾಂತರಗೊಳ್ಳುವಂತೆ ವ್ಯಾಪಾರಿಗಳಿಗೆ ನೋಟಿಸ್ ನೀಡಿದ್ದರೂ ವ್ಯಾಪಾರಿಗಳು ಸ್ಥಳಾಂತರಗೊಂಡಿರಲಿಲ್ಲ. 

‘ಪೊಲೀಸರು ಮತ್ತು ಪಾಲಿಕೆ ಸಿಬ್ಬಂದಿ ಸಹಾಯ ಪಡೆದು ಈಚೆಗೆ ಕಾರ್ಯಾಚರಣೆ ನಡೆಸಿ 17 ಮಳಿಗೆಗಳಿಗೆ ಬೀಗ ಹಾಕಿ ಹೂವಿನ ವ್ಯಾಪಾರವನ್ನು ಸ್ಥಳಾಂತರಗೊಳಿಸಲಾಯಿತು’ ಎಂದು ಎಪಿಎಂಸಿ ಕಾರ್ಯದರ್ಶಿ ಕೆ.ಸಿ.ದೊರೆಸ್ವಾಮಿ ಮಾಹಿತಿ ನೀಡಿದರು.

‘ಪುಷ್ಪ ಹರಾಜು ಕೇಂದ್ರದಲ್ಲಿ 27 ಮಳಿಗೆಗಳು ಇದ್ದು, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಲಾಟರಿ ಎತ್ತುವ ಮೂಲಕ ಈಚೆಗೆ ವ್ಯಾಪಾರಿಗಳಿಗೆ ಹಂಚಿಕೆ ಮಾಡಿದ್ದು, ಎಪಿಎಂಸಿ ಬಳಿ ಇದ್ದ 17 ವ್ಯಾಪಾರಿಗಳಿಗೂ ಇಲ್ಲಿ ಆದ್ಯತೆ ನೀಡಲಾಗಿದೆ. ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಸಿಸಿ ರಸ್ತೆಯನ್ನು ನಿರ್ಮಿಸಲಾಗಿದೆ’ ಎಂದು ಪುಷ್ಪ ಹರಾಜು ಕೇಂದ್ರದ ಸಹಾಯಕ ನಿರ್ದೇಶಕ ಗಿರಿನಾಯ್ಕ ತಿಳಿಸಿದರು. 

‘ಹೂವು ಸಾಗಿಸಲು ಟ್ರಕ್ ಸೌಲಭ್ಯ’
‘ಪುಷ್ಪ ಹರಾಜು ಕೇಂದ್ರಕ್ಕೆ ವಿವಿಧ ಸೌಲಭ್ಯ ಕಲ್ಪಿಸಲು ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯಡಿ ₹1.05 ಕೋಟಿ ಅನುದಾನ ಮಂಜೂರಾಗಿದ್ದು, ಹಣ ಬಿಡುಗಡೆಯಾದ ಬಳಿಕ ಹೂವು ಸಾಗಿಸಲು ಟ್ರಕ್ ಸೇರಿ ಹಲವು ಸೌಲಭ್ಯ ಕಲ್ಪಿಸಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮೀಕಾಂತ್ ಬೋಮ್ಮನ್ನರ್ ತಿಳಿಸಿದರು.

‘ಸಿಸಿಟಿವಿ ಕ್ಯಾಮೆರಾ, ₹35 ಲಕ್ಷ ವೆಚ್ಚದಲ್ಲಿ ಕೇಂದ್ರಕ್ಕೆ ಶೆಲ್ಟರ್ ನಿರ್ಮಾಣ ಮಾಡಲಾಗುವುದು. ಶೌಚಾಲಯ ಸೇರಿ ಹಲವು ಸೌಲಭ್ಯ ಕಲ್ಪಿಸಲಾಗುವುದು. ಅಲ್ಲದೇ ಆ ಮಾರ್ಗವಾಗಿ ಸಂಚರಿಸುವ ಬಸ್‌ಗಳಿಗೆ ಪುಷ್ಪ ಹರಾಜು ಕೇಂದ್ರದಲ್ಲಿ ನಿಲುಗಡೆ ಮಾಡುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರೂ ಕೆಎಸ್ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದ್ದಾರೆ. ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಚೌಕಿ ನಿರ್ಮಿಸಲು ಮನವಿ ಮಾಡಲಾಗುವುದು’ ಎಂದು ಬೋಮ್ಮನ್ನರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು