ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಡಿಸೆಂಬರ್ ತಿಂಗಳಲ್ಲಿ ರಾಜ್ಯಮಟ್ಟದ ಜನಜಾಗೃತಿ ಸಮಾವೇಶ

Published 20 ನವೆಂಬರ್ 2023, 4:41 IST
Last Updated 20 ನವೆಂಬರ್ 2023, 4:41 IST
ಅಕ್ಷರ ಗಾತ್ರ

ದಾವಣಗೆರೆ: ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಜಾತಿ ಗಣತಿ ಸಮೀಕ್ಷೆ ಬಿಡುಗಡೆ ಮಾಡುವಂತೆ ಆಗ್ರಹಿಸಿ ದಾವಣಗೆರೆಯಲ್ಲಿ ಡಿಸೆಂಬರ್ 15ರಿಂದ 20ರೊಳಗಡೆ ರಾಜ್ಯಮಟ್ಟದ ಜನಜಾಗೃತಿ ಸಮಾವೇಶ ನಡೆಸಲಾಗುವುದು ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ.ಎ.ಬಿ. ರಾಮಚಂದ್ರಪ್ಪ ಹೇಳಿದರು.

ಅಹಿಂದ ಚೇತನ ಸಂಘಟನೆಯಿಂದ ಇಲ್ಲಿನ ರೋಟರಿ ಬಾಲಭವನದಲ್ಲಿ ಭಾನುವಾರ ಆಯೋಜಿಸಿದ್ದ ಚಿಂತನ–ಮಂಥನ ಸಭೆಯಲ್ಲಿ ಅವರು ಮಾತನಾಡಿದರು.

‘ಜಾತಿ ಗಣತಿ ವರದಿ ಬಿಡುಗಡೆಯಾದ ಬಳಿಕ ಅಪಸ್ವರ ಹೇಳುವುದು ಮಾಮೂಲಿ. ಆದರೆ ವರದಿ ಬಿಡುಗಡೆಯಾಗುವ ಮುನ್ನವೇ ಅಪಸ್ವರ ಎದ್ದಿದೆ. ಎರಡು ಪ್ರಬಲ ಸಮುದಾಯಗಳು ಇದನ್ನು ವಿರೋಧಿಸುತ್ತಿದ್ದು, ಹಿಂದುಳಿದ ವರ್ಗಗಳು ಒಟ್ಟಾಗಿ ಸಮಾವೇಶ ಮಾಡಿ ಬಹುಸಂಖ್ಯಾತರು ಶಕ್ತಿವಂತರು ಎಂಬುದನ್ನು ತೋರಿಸುವ ಅಗತ್ಯವಿದೆ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

‘ಅಧಿಕಾರ, ಸಂಪತ್ತು ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆಯಾದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ. ಆದರೆ ರಾಜ್ಯದಲ್ಲಿ ಮೇಲ್ಜಾತಿಗಳೇ ಅಧಿಕಾರದ ಚುಕ್ಕಾಣಿ ಹಿಡಿದಿವೆ. ಚುನಾವಣೆ ಸಮಯದಲ್ಲಿ ಮಾತ್ರ ನಾವು ಸಂಘಟಿತರಾಗುತ್ತೇವೆ. ನಮ್ಮ ಚಟುವಟಿಕೆ ನಿರಂತರವಾಗಿರಬೇಕು. ಸಂಘಟನೆಗಳಿಗೆ ಇಂದು ಜಾತಿಯ ಲೇಪನ ಹಚ್ಚಲಾಗುತ್ತಿದ್ದು, ಜಾತ್ಯತೀತವಾಗಿ ನಾವು ಒಂದಾಗಿ ಪರಿಹಾರ ಕಂಡುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಉಳಿದ ಯಾರೂ ಜಾತಿಗಣತಿ ವರದಿ ಬಿಡುಗಡೆ ಮಾಡಲು ಸಾಧ್ಯವಿಲ್ಲ. ತುಳಿತಕ್ಕೆ ಒಳಗಾದವರು ಮೇಲೆ ಬರಬೇಕು ಎಂದರೆ ವರದಿ ಬಿಡುಗಡೆಯಾಗಬೇಕು. ಮುಸ್ಲಿಂ, ನಾಯಕ ಹಾಗೂ ಕುರುಬ ಸಮಾಜ ಸೇರಿಂದತೆ ಶೇ 65–80ರಷ್ಟು ಇರುವ ಅಹಿಂದ ವರ್ಗಕ್ಕೆ ಸೂಕ್ತ ಮೀಸಲಾತಿ ಸಿಗಬೇಕಾದರೆ ವರದಿ ಬಿಡುಗಡೆಯಾಗಬೇಕು’ ಎಂದು ನಾಯಕ ಸಮಾಜದ ಮುಖಂಡ ಬಿ. ವೀರಣ್ಣ ಅಭಿಪ್ರಾಯಪಟ್ಟರು.‌

‘ನಾವು ಯಾರನ್ನೋ ಬೆಳೆಸಲು ಹೋಗಿ ಅವರ ಸ್ವಾರ್ಥಕ್ಕೆ ಬಲಿಯಾಗುತ್ತಿದ್ದೇವೆ. ಅಧಿಕಾರಿಗಳಿಗೆ ಆಯಕಟ್ಟಿನ ಜಾಗ ಕೊಡಬೇಕು ಎಂದು ಒಂದು ಸಮಾಜದವರು ಕೇಳುತ್ತಿದ್ದು, ನಮ್ಮ ಜನಾಂಗದವರಿಗೆ ಆಯಕಟ್ಟಿನ ಜಾಗ ಕೊಡಿ ಎಂದು ಯಾರೂ ಕೇಳಿಲ್ಲ. ನಾವೆಲ್ಲಾ ಒಂದಾಗದೇ ಇರುವುದರಿಂದ ನಮ್ಮನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ’ ಎಂದು ಕೊರಚ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಪಾಟೀಲ್ ಕೆ.ಎಂ. ಅಭಿಪ್ರಾಯಪಟ್ಟರು.

ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರಸನ್ನಕುಮಾರ್, ವಿವಿಧ ಸಮಾಜಗಳ ಮುಖಂಡರಾದ ಎಸ್‌.ಎಂ.ಸಿದ್ದಪ್ಪ, ದೀಟೂರು ಚಂದ್ರು, ನಾಗೇಂದ್ರಪ್ಪ, ಎಚ್‌.ಜಿ.ಉಮೇಶ್‌, ಓಬಳೇಶಪ್ಪ, ರಘು ದೊಡ್ಮನಿ, ಅಲೆಸ್ಟಾಂಡ್‌ ಜಾನ್‌, ಡಿ.ತಿಪ್ಪಣ್ಣ, ತಿಪ್ಪೇಸ್ವಾಮಿ, ಸಿ.ಡಿ.ಮಹೇಂದ್ರಪ್ಪ, ಕರಿಬಸಯ್ಯ ಮಠದ್‌, ಮಂಜನಾಯ್ಕ, ವೆಂಕಟಚಲಪತಿ, ಎನ್‌. ರುದ್ರಮುನಿ, ದಾದಾಪೀರ್ ನವಿಲೇಹಾಳ್, ವಿಶ್ವನಾಥ್ ಇದ್ದರು.

ವರದಿ ಬಿಡುಗಡೆಗೆ ಆಗ್ರಹ

ರಾಜ್ಯದ ಶೇ 80ರಷ್ಟು ಜನಸಂಖ್ಯೆ ಇರುವ ಅಹಿಂದ ವರ್ಗಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ನ್ಯಾಯ ಸಿಗದೇ ವಂಚಿತವಾಗಿವೆ. ₹162 ಕೋಟಿ ವೆಚ್ಚ ಮಾಡಿ ಕಾಂತರಾಜು ವರದಿಯನ್ನು ಬಿಡುಗಡೆ ಮಾಡಬೇಕು ಮುಖ್ಯಮಂತ್ರಿಯವರನ್ನು ಒತ್ತಾಯಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರು ಇದೇ ತಿಂಗಳಲ್ಲಿ ವರದಿ ನೀಡುವುದಾಗಿ ತಿಳಿಸಿದ್ದಾರೆ. ಈ ವರದಿಯನ್ನು ಬಿಡುಗಡೆ ಮಾಡದಂತೆ ಪ್ರಬಲ ಸಮುದಾಯಗಳು ಒತ್ತಡ ತರುತ್ತಿರುವುದು ದುರದೃಷ್ಟಕರ. ಮುಖ್ಯಮಂತ್ರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ಸಮೀಕ್ಷಾ ವರದಿಯನ್ನು ಅಂಗೀಕರಿಸಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

2006ರಲ್ಲಿ ಸಾಚಾರ್ ಸಮಿತಿ ನೀಡಿದ ವರದಿ ಅನ್ವಯ ಶೇ 16ರಷ್ಟು ರಾಜಕೀಯ ಮೀಸಲಾತಿ ಸಿಗಬೇಕು. ಇದು ಕಾರ್ಯಗತವಾಗಿಲ್ಲ. ರಾಜಕೀಯ ಧುರೀಣರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ.
ಅನೀಸ್ ಪಾಷ, ಮುಸ್ಲಿಂ ಸಮಾಜದ ಮುಖಂಡ
ನಮಗೆ ಸೌಲಭ್ಯಗಳು ಸಿಗುವವರೆಗೂ ಸಂಘಟಿತರಾಗಬೇಕು. ದೊಡ್ಡ ಕ್ರಾಂತಿಯಾದಾಗ ಮಾತ್ರ ನಮಗೆ ನ್ಯಾಯ ಸಿಗಲು ಸಾಧ್ಯ.
ಎಚ್.ಗುಡ್ಡಪ್ಪ, ಮಾದಿಗ ದಂಡೋರ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT