ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ಪ್ರಶಾಂತ ನಗರದ ‘ಶಾಂತಿ’ ಕದಡಿದ ನಾಯಿಗಳ ಹಿಂಡು

ನಾಯಿಗಳ ಉಪಟಳಕ್ಕೆ ಕೋಳಿ, ಬೆಕ್ಕುಗಳು ಬಲಿ... ಕರು, ಸಾರ್ವಜನಿಕರಿಗೂ ಗಾಯ
Published 19 ಸೆಪ್ಟೆಂಬರ್ 2023, 14:34 IST
Last Updated 19 ಸೆಪ್ಟೆಂಬರ್ 2023, 14:34 IST
ಅಕ್ಷರ ಗಾತ್ರ

ಹರಿಹರ: ನಗರದ ವಿವಿಧೆಡೆ ಬೀದಿ ನಾಯಿಗಳ ಉಪಟಳ ಅಧಿಕವಾಗಿದೆ. ನಗರದ 25ನೇ ವಾರ್ಡ್ ವ್ಯಾಪ್ತಿಯ ಪ್ರಶಾಂತ ನಗರದಲ್ಲಂತೂ ನಾಯಿಗಳನ್ನು ಕಂಡರೆ ಜನತೆ ಬೆಚ್ಚಿ ಬೀಳುತ್ತಿದ್ದಾರೆ. ಸಂಜೆಯ ನಂತರ ಪಾಲಕರು ತಮ್ಮ ಚಿಕ್ಕಮಕ್ಕಳನ್ನು ಮನೆಯಿಂದ ಹೊರಗೇ ಬಿಡದೆ ಗೃಹ ಬಂಧನದಲ್ಲಿಡುವಂಥ ಸ್ಥಿತಿ ನಿರ್ಮಾಣವಾಗಿದೆ.

ಪ್ರಶಾಂತನಗರ ನಾಯಿಗಳ ಕಾಟದಿಂದ ‘ಅಶಾಂತ’ನಗರವಾಗಿ ಪರಿವರ್ತನೆಯಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಸೆ. 5ರಂದು ನಾಯಿಗಳ ಹಿಂಡು ಭಾನುವಳ್ಳಿ ನೂರ್ ಸಾಬ್ ಹಾಗೂ ಆಲೂರು ಚನ್ನಬಸಪ್ಪ ಅವರ ಮನೆ ಮುಂದೆ ಕಟ್ಟಿದ್ದ ಎರಡು ಕರುಗಳ ಮೇಲೆ ದಾಳಿ ಮಾಡಿ ಅರ್ಧಂಬರ್ಧ ತಿಂದು ಹಾಕಿವೆ.

ಹತ್ತಾರು ಕೋಳಿ, ಬೆಕ್ಕುಗಳು ನಾಯಿಗಳ ಬಾಯಿಗೆ ಆಹಾರವಾಗಿವೆ. ಹೆಚ್ಚು ಹಣ ನೀಡಿ ಖರೀದಿಸಿ ತಂದಿದ್ದ ಬೆಕ್ಕುಗಳೂ ಬೀದಿ ನಾಯಿಗಳ ದಾಳಿಗೆ ಬಲಿಯಾಗಿವೆ. ಪ್ರಶಾಂತ ನಗರದ ನಿವಾಸಿ, ಚಿಕ್ಕಮಕ್ಕಳ ವೈದ್ಯ ಗುಲಾಮ್ ನಬಿ ಅವರು ಕೆಲ ತಿಂಗಳ ಹಿಂದೆ ಬೆಳಿಗ್ಗೆ 5.30ಕ್ಕೆ ಮನೆ ಸಮೀಪದ ಮಸೀದಿಗೆ ನಮಾಜ್‌ಗೆಂದು ಹೊರಟಿದ್ದಾಗ ಐದಾರು ನಾಯಿಗಳ ಹಿಂಡು ದಾಳಿ ಮಾಡಿದೆ.

ನಾಯಿ ಕಡಿತ ಹಾಗೂ ಬಿದ್ದು ಗಾಯಗೊಂಡ ಈ ವೈದ್ಯ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಎರಡು ವಾರ ವಿಶ್ರಾಂತಿ ಪಡೆದರು. ಹಲವು ಮಕ್ಕಳನ್ನೂ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಹೊರ ಭಾಗದ ಬಡಾವಣೆ ಆಗಿರುವುದರಿಂದ ಮನೆಗಳು ದೂರ, ದೂರ ಇದ್ದು ನಾಯಿ ದಾಳಿ ಮಾಡಿದಾಗ ರಕ್ಷಿಸಲು ಬೇರೆ ಜನ ನೆರವಿಗೂ ಬಾರದಂಥ ಸ್ಥಿತಿ ಅಲ್ಲಿದೆ.

ನಾಯಿಗಳ ಕಾಟದಿಂದ ಬೇಸತ್ತ ಈ ಭಾಗದ ಜನರು ಹಾವಳಿ ತಪ್ಪಿಸುವಂತೆ 2 ವರ್ಷಗಳಿಂದ ನಗರಸಭೆಗೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆರು ತಿಂಗಳ ಹಿಂದೆ ಕೆಲವು ನಾಯಿಗಳನ್ನು ನಗರಸಭೆಯಿಂದ ಸೆರೆ ಹಿಡಿದು ಊರಾಚೆ ಬಿಡಲಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಆ ನಾಯಿಗಳು ಮತ್ತೆ ಪ್ರತ್ಯಕ್ಷವಾಗಿವೆ.

ಸಮೀಪದ ಅಂಗಡಿ, ಟೂಷನ್‌ಗೆ ಹೋಗಬೇಕೆಂದರೂ ಮಕ್ಕಳೊಂದಿಗೆ ಪಾಲಕರು ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಇಲ್ಲಿರುವ ಮಸೀದಿಗೆ ಬೆಳಗಿನ ಜಾವ ನಮಾಜ್‌ ಮಾಡಲು ತೆರಳುವ ಜನರು ನಾಯಿಗಳಿಂದ ರಕ್ಷಣೆಗೆ ಕೋಲನ್ನು ಹಿಡಿದುಕೊಂಡು ಸಾಗುತ್ತಿದ್ದಾರೆ. 

ಪ್ರಶಾಂತನಗರದ ಜೊತೆಗೆ ನಗರದ ಕೆಲವು ಬಡಾವಣೆಗಳಲ್ಲೂ ನಾಯಿಗಳ ಕಾಟವಿದೆ. ನಗರಸಭೆಯವರು ಬೀದಿನಾಯಿಗಳನ್ನು ಸೆರೆ ಹಿಡಿದು ದೂರದ ಪ್ರದೇಶಕ್ಕೆ ರವಾನೆ ಮಾಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಹರಿಹರ: ಹರಿಹರದ ಪ್ರಶಾಂತನಗರದ ಮನೆಯೊಂದರ ಮುಂದೆ ಗುಂಪಾಗಿ ಕುಳಿತಿರುವ ನಾಯಿಗಳ ಗುಂಪು.
ಹರಿಹರ: ಹರಿಹರದ ಪ್ರಶಾಂತನಗರದ ಮನೆಯೊಂದರ ಮುಂದೆ ಗುಂಪಾಗಿ ಕುಳಿತಿರುವ ನಾಯಿಗಳ ಗುಂಪು.
ಮನೆಯಲ್ಲಿ ಸಾಕಿದ್ದ 4 ಟರ್ಕಿ 4 ಜವಾರಿ ಕೋಳಿ ಹಾಗೂ ತಲಾ ₹ 15000 ಬೆಲೆಯ ಎರಡು ಬೆಕ್ಕುಗಳನ್ನು ನಾಯಿಗಳು ತಿಂದಿವೆ. ನಾಯಿಗಳ ಕಾಟದಿಂದ ಮುಕ್ತಿ ದೊರಕಿಸದಿದ್ದರೆ ನಗರಸಭೆ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ.
-ಅಸ್ರಾ ಅತಾಉಲ್ಲಾ ಖಾನ್, ಪ್ರಶಾಂತನಗರ ನಿವಾಸಿ
ಈ ಹಿಂದೆ ಪ್ರಶಾಂತನಗರದಲ್ಲಿ ಹಲವು ನಾಯಿಗಳನ್ನು ಸೆರೆ ಹಿಡಿಸಿ ದೂರಕ್ಕೆ ಬಿಡಲಾಗಿತ್ತು. ಆದರೆ ಈಗ ಮತ್ತೆ ನಾಯಿ ಉಪಟಳ ಆರಂಭವಾಗಿದೆ. ನಾಯಿ ಸೆರೆ ಹಿಡಿಯುವವರಿಗೆ ಈ ಕುರಿತು ಸೂಚಿಸಿದ್ದೇವೆ.
-ಸಂತೋಷ್‌ನಾಯ್ಕ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT