ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯದಾನ ವ್ಯವಸ್ಥೆ ಬಲಪಡಿಸಿ

ನಿವೃತ್ತ ಡಿಜಿಪಿ ಶಂಕರ ಮಹಾದೇವ ಬಿದರಿ
Last Updated 27 ಸೆಪ್ಟೆಂಬರ್ 2021, 6:43 IST
ಅಕ್ಷರ ಗಾತ್ರ

ದಾವಣಗೆರೆ: ಮುಂದಿನ ಪೀಳಿಗೆ ಗೌರವದಿಂದ, ಸೌಹಾರ್ದದಿಂದ, ನೆಮ್ಮದಿಯಿಂದ ಬದುಕಬೇಕು ಎಂದರೆ ನ್ಯಾಯದಾನದ ವ್ಯವಸ್ಥೆ ಬಲವಾಗಬೇಕು. ತಪ್ಪು ಮಾಡಿದವರಿಗೆ ವರ್ಷದಲ್ಲೇ ಶಿಕ್ಷೆಯಾಗಬೇಕು. ಸರಿಯಾದ ನ್ಯಾಯ ವ್ಯವಸ್ಥೆ ಇದ್ದರೆ ದೇಶದ ಜಿಡಿಪಿ ಶೇ 5ರಿಂದ ಶೇ 8 ಹೆಚ್ಚಳವಾಗುವುದಲ್ಲ. ವರ್ಷಕ್ಕೆ ಶೇ 30ರಿಂದ ಶೇ 40ವರೆಗೆ ಹೆಚ್ಚಾಗಲಿದೆ ಎಂದು ನಿವೃತ್ತ ಡಿಜಿಪಿ ಶಂಕರ ಮಹಾದೇವ ಬಿದರಿ ಹೇಳಿದರು.

ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಅರುಣ ಟಾಕೀಸ್ ಸರ್ಕಲ್‌ ಬಳಿ ₹ 1.25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಭವನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನ ಪವಿತ್ರ ಕಾರ್ಯ, ಮಹತ್‌ ಕಾರ್ಯ ಎಂದರೆ ಸಜ್ಜನರಿಗೆ ರಕ್ಷಣೆ, ದುರ್ಜನರಿಗೆ ಶಿಕ್ಷೆ ನೀಡುವುದು ಆಗಿದೆ. ಧರ್ಮ ಎಂದರೆ ಈ ನೆಲದ ಕಾನೂನನ್ನು ಪಾಲನೆ ಮಾಡುವುದಾಗಿದೆ. ಯಾುದೇ ಜಾತಿ, ಧರ್ಮ, ಭಾಷೆ, ಪ್ರದೇಶಗಳಿಗಳಿಗೆ ಸೇರಿರಲಿ ಅವರು ನೆಮ್ಮದಿಯಾಗಿ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಪೊಲೀಸ್‌ ಇಲಾಖೆಯದ್ದಾಗಿದೆ. ಭಾರತದಲ್ಲೂ ಸುಭದ್ರ, ನಿಷ್ಪಕ್ಷಪಾತ, ಸ್ವತಂತ್ರ ನ್ಯಾಯ ಆಡಳಿತ ಮಾಡಲು ಸಾಧ್ಯವಾಗಬೇಕಿದೆ ಎಂದು ತಿಳಿಸಿದರು.

ಅತಿವೃಷ್ಟಿ, ಅನಾವೃಷ್ಟಿ, ಅಪಘಾತ, ವ್ಯಾಜ್ಯ ಏನೇ ಆಗಲಿ ಅಲ್ಲಿ ಪೊಲೀಸರು ಇರುತ್ತಾರೆ. ಪೊಲೀಸರು ಒಂದು ಸ್ಥಳದಲ್ಲಿ ಒಂದು ವರ್ಷ ಕೆಲಸ ಮಾಡಲೂ ಬಿಡದೇ ವರ್ಗಾವಣೆ ಮಾಡಲಾಗುತ್ತದೆ. ಯಾವುದೇ ಪ್ರದೇಶದಲ್ಲಿ ಅಲ್ಲಿನ ಸ್ಥಿತಿಗತಿ ಅರ್ಥ ಮಾಡಿಕೊಂಡು ಕೆಲಸ ಮಾಡಲು ಈ ಕಡಿಮೆ ಅವಧಿ ಸಾಕಾಗುವುದಿಲ್ಲ. ಇದೆಲ್ಲ ನಿಲ್ಲಬೇಕು ಎಂದು ಹೇಳಿದರು.

ಎಲ್ಲೆಲ್ಲಿ ಹೇಗೆ ಭ್ರಷ್ಟಾಚಾರ ಇದೆ ಎಂಬುದನ್ನು ನಾವು ಮುಕ್ತವಾಗಿ ಮಾತನಾಡಬೇಕು. ರೋಗ ಎಲ್ಲಿದೆ ಎಂದು ಗೊತ್ತಾದರಷ್ಟೇ ಔಷಧ ನೀಡಲು ಸಾಧ್ಯ. ವಾಸ್ತವ ವಿಚಾರವನ್ನು ಜನರಿಗೆ ತಿಳಿಸಬೇಕಿದೆ ಎಂದರು.

ಪೊಲೀಸರು ಕೂಡ ಮನುಷ್ಯರೇ. ಹಾಗಾಗಿ ನಾವು ಕೂಡ ತಪ್ಪು ಮಾಡುತ್ತೇವೆ. ಬೇರೆ ಇಲಾಖೆಗಳಿಗೆ ಹೋಲಿಸಿದರೆ ನಮ್ಮ ತಪ್ಪುಗಳು ಶೇ 10ಕ್ಕಿಂತಲೂ ಕಡಿಮೆ ಇದೆ. ನಾವು ತಪ್ಪು ಮಾಡಿದಾಗ ಬೇರೆಯವರಿಗಿಂತ ಐದು ಪಟ್ಟು ಶಿಕ್ಷೆ ನೀಡಿ. ಆದರೆ ನ್ಯಾಯಯುತವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಂಡಿ ಎಂದು ಕೋರಿದರು.

ನಿವೃತ್ತ ಪೊಲೀಸರ ಕಲ್ಯಾಣಕ್ಕಾಗಿ ಪೊಲೀಸ್ ವರಿಷ್ಠಾಧಿಕಾರಿ ಹಂತದ ಅಧಿಕಾರಿಯೊಬ್ಬರನ್ನು ನೇಮಿಸಬೇಕು. ಪ್ರತಿ ಜಿಲ್ಲೆಯಲ್ಲಿ ನಿವೃತ್ತ ಪೊಲೀಸರಿಗೆ 100X100 ಭವನ ನಿರ್ಮಿಸಬೇಕು. ಬೆಂಗಳೂರಿನಲ್ಲಿ ನಾಲ್ಕು ಕಡೆ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಅಪರೂಪಕ್ಕೆ ಯುದ್ಧ ಮಾಡುವ ಸೈನಿಕರ ಬಗ್ಗೆ ವಿಶೇಷ ಕಾಳಜಿ ವಹಿಸಿ ವಿಶೇಷ ಸೌಲಭ್ಯ ನೀಡಲಾಗುತ್ತದೆ. ಅವರಿಗೆ ನೀಡುವುದಕ್ಕೆ ಅಭ್ಯಂತರವಿಲ್ಲ. ನಿತ್ಯ ಯುದ್ಧ ಮಾಡುವ ಪೊಲೀಸರಿಗೂ ಅಂಥ ಸೌಲಭ್ಯ ನೀಡಬೇಕು. ಕೇಂದ್ರ ಸರ್ಕಾರದ ಸಿ.ಜಿ.ಎಚ್.ಎಸ್.ಮಾದರಿಯಲ್ಲಿ ಪೊಲೀಸರಿಗೆ ಆರೋಗ್ಯ ಸೌಲಭ್ಯ ಕಲ್ಬಿಸಬೇಕು ಎಂದವರು ಆಗ್ರಹಿಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ, ‘ಪೊಲೀಸ್ ಕೆಲಸ ಗೌರವದ ಜವಾಬ್ದಾರಿ‌.ದಿನದ24ಗಂಟೆಗಳ ಕಾಲವೂ ಕಾನೂನು ವ್ಯವಸ್ಥೆ ಕಾಯ್ದುಕೊಳ್ಳದೇ ಹೋದರೆ ಯಾರ ತಲೆ ಎಲ್ಲೋ ಹೋಗುವ ಪರಿಸ್ಥಿತಿ ಉಂಟಾಗುತ್ತದೆ’ ಎಂದು ಹೇಳಿದರು.

ಶಾಸಕ ಎಸ್.ಎ.ರವೀಂದ್ರನಾಥ್, ‘ಒತ್ತಡದ ನಡುವೆ ಕೆಲಸ ಮಾಡುವ ಪೊಲೀಸರು ಉದ್ಯೋಗದಲ್ಲಿದ್ದಾಗ ಹಾಗೂ ನಿವೃತ್ತಿಯ ನಂತರವೂ ಆರೋಗ್ಯದ ಕಡೆ ಗಮನ ಹರಿಸಬೇಕು. ಜತೆಗೆ ಠಾಣೆಗಳಲ್ಲಿ ಪೊಲೀಸ್‌ ಭಾಷೆ ಬದಲಾಗಿ ಒಳ್ಳೆಯ ಭಾಷೆ ಬಳಸಬೇಕು’ ಎಂದು ಸಲಹೆ ನೀಡಿದರು.

ಭವನ ನಿರ್ಮಾಣಕ್ಕೆ ನೆರವಾದ ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರನ್ನು ಸನ್ಮಾನಿಸಲಾಯಿತು.

ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಜಿ.ಕೆ.ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪೊಲೀಸ್ ವರಿಷ್ಠಾದಿಕಾರಿ ಸಿ.ಬಿ. ರಿಷ್ಯಂತ್, ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಎನ್.ನಾಗರಾಜ,ಸಂಘದ ಮಾಜಿ ಕಾರ್ಯದರ್ಶಿ ಕುಮಾರ್ ಎಸ್.ಕರ್ನಿಂಗ್,ಜಿಲ್ಲಾ ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ಎಸ್ ಶಿವಾಚಾರ್ಯ,ಬಿ.ಬಿ.ಸಕ್ರಿ, ನಿಖಿಲ್‌ ಕೊಂಡಜ್ಜಿ, ಡಾ.ಉಮಾದೇವಿ ಬಿದರಿ ಉಪಸ್ಥಿತರಿದ್ದರು.

ಜಿಲ್ಲಾ ಸಂಘದ ಉಪಾಧ್ಯಕ್ಷ ರವಿನಾರಾಯಣ ಸ್ವಾಗತಿಸಿದರು. ಉಪಾಧ್ಯಕ್ಷ ಎನ್. ಲಿಂಗಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

‘ಭ್ರಷ್ಟರಿಗೆ ಉನ್ನತ ಸ್ಥಾನ’

ಭ್ರಷ್ಟಾಚಾರ, ವಂಚನೆ, ಮೋಸ ಮಾಡಿದವರೇ ಉನ್ನತ ಸ್ಥಾನ ಪಡೆಯುತ್ತಿದ್ದಾರೆ. ಅಧಿಕಾರಿಗಳಾದರೆ ಅವರು ಇರುವ ಇಲಾಖೆಯಲ್ಲಿ ಮುಂದಿನ ಸ್ಥಾನಗಳಿಗೆ ಹೋಗುತ್ತಾರೆ. ಕೆಲವು ಭ್ರಷ್ಟರು ಬಡ್ಡಿ ಪಡೆಯುತ್ತಾರೆ. ರಾಜಕಾರಣಿಯಾದರೆ ರಾಜಕಾರಣದಲ್ಲಿ ಮುಂದಕ್ಕೆ ಹೋಗುತ್ತಾರೆ. ಬದ್ಧತೆಯಿಂದ, ಪ್ರಾಮಾಣಿಕತೆಯಿಂದ, ವಂಚನೆ ಇಲ್ಲದೇ ಮೋಸ ಮಾಡದೇ ಕೆಲಸ ಮಾಡುವವರು ಅಲ್ಲೇ ಉಳಿಯುತ್ತಾರೆ. ಅವರನ್ನು ಗುರುತಿಸುವ ಕೆಲಸವನ್ನು ಸಮಾಜವೂ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT