ಭಾನುವಾರ, ಸೆಪ್ಟೆಂಬರ್ 20, 2020
21 °C

ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆ ವಿರುದ್ದ ಕಠಿಣ ಕ್ರಮ: ಸಚಿವ ಬೈರತಿ ಬಸವರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ನೋಂದಣಿ ಸೇರಿ ಸರ್ಕಾರದ ಸವಲತ್ತುಗಳನ್ನು ರದ್ದುಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮೊದಲ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರೋಗಿಗಳು ಚಿಕಿತ್ಸೆಗಾಗಿ ಬಂದಾಗ ಬೆಡ್ ಖಾಲಿ ಇಲ್ಲ’. ‘ಜ್ವರ ಬಂದಿದ್ದರೆ ಚಿಗಟೇರಿ ಆಸ್ಪತ್ರೆಗೆ ಹೋಗಿ’ ಎಂದು ದೂರದಿಂದಲೇ ಕಳುಹಿಸುತ್ತಿದ್ದಾರೆ. ಜನಪ್ರತಿನಿಧಿಗಳು ಕರೆ ಮಾಡಿದರೂ ತ್ವರಿತ ಸ್ಪಂದನೆ ಇಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ದೂರುತ್ತಿದ್ದಾರೆ. ಇದನ್ನು ಸಹಿಸುವುದಿಲ್ಲ. ಜಿಲ್ಲೆಯಲ್ಲಿ ಕೋವಿಡ್‍ನಿಂದ ಸಾವು ಹೆಚ್ಚುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಬೆಡ್ ಅನ್ನು ಕೋವಿಡ್ ರೋಗಿಗಳಿಗೆ ನಿಗದಿಪಡಿಸಬೇಕು’ ಎಂದರು.

‘ಕೋವಿಡ್ ನಿರ್ವಹಣೆಗಾಗಿ ಪೊಲೀಸ್, ಬೆಸ್ಕಾಂ, ಒಳಚರಂಡಿ ಇಲಾಖೆಯ ಅಧಿಕಾರಿಗಳ ತಂಡಗಳನ್ನು ರಚಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಅವರು, ಯಾವುದೇ ಆಸ್ಪತ್ರೆ ರೋಗಿಗಳನ್ನು ನಿರ್ಲಕ್ಷಿಸಿದಲ್ಲಿ ನಿರ್ದಾಕ್ಷಣ್ಯ ಕ್ರಮ ಜರುಗಿಸಲಾಗುವುದು. ಜೊತೆಗೆ ಡಿಎಚ್ಒ ಅವರನ್ನೂ ಹೊಣೆ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಖಾಸಗಿ ಸೇರಿ ಎಲ್ಲ ಆಸ್ಪತ್ರೆಗಳು ಕೋವಿಡ್ ಹಾಗೂ ಯಾವುದೇ ಆರೋಗ್ಯ ಸಮಸ್ಯೆ ಇರುವ ರೋಗಿಗಳಿಗೆ ತ್ವರಿತ ಚಿಕಿತ್ಸೆ ನೀಡಬೇಕು. ಯಾವುದೇ ಕಾರಣ ಹೇಳಿ ನಿರಾಕರಿಸುವಂತಿಲ್ಲ. ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಬೇಕು. ಸಾವಿನ ಸಂಖ್ಯೆ ಕುಗ್ಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯೋನ್ಮುಖವಾಗಬೇಕು. ಅಭಿವೃದ್ಧಿ ಕಾರ್ಯಗಳಲ್ಲಿ ಸ್ವಲ್ಪ ಹಿನ್ನಡೆಯಾದರೂ ಪರವಾಗಿಲ್ಲ. ಆದರೆ ಕೋವಿಡ್ ನಿರ್ವಹಣೆಯಲ್ಲಿ ಹಿನ್ನಡೆಯಾದರೆ ಸಹಿಸುವುದಿಲ್ಲ. ಕೋವಿಡ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದರು.

ಡಿಎಚ್‍ಒ ಡಾ. ರಾಘವೇಂದ್ರ ಸ್ವಾಮಿ, ‘ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಶಾಲಾ ಮಕ್ಕಳಿಗೆ ಆ.1ರಿಂದ 15ರವರೆಗೆ ಶಾಲಾ ಲಸಿಕಾ ಕಾರ್ಯಕ್ರಮ ಪ್ರಗತಿಯಲ್ಲಿದೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಸಂಖ್ಯೆ ಕಡಿಮೆಯಾಗಿದೆ. ಶೇ 20ರಷ್ಟು ಮಾತ್ರ ಸಿಸೇರಿಯನ್ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್, ‘ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ರ‍್ಯಾಪಿಡ್ ಟೆಸ್ಟ್ ನಡೆಸಲಾಗುತ್ತಿದ್ದು, ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ.  ಮೂರು ಲ್ಯಾಬ್‍ಗಳಲ್ಲಿ ಮೂರು ಪಾಳಿಯಲ್ಲಿ ಟೆಸ್ಟ್ ನಡೆಸಲಾಗುತ್ತಿದೆ. ಅಕ್ಟೋಬರ್ ಅಂತ್ಯದವರೆಗೆ ಪ್ರಕರಣ ಹೆಚ್ಚಳವಾಗುವ ಸಾಧ್ಯತೆ ಇದ್ದು ನವೆಂಬರ್ ಡಿಸೆಂಬರ್ ವೇಳೆಯಲ್ಲಿ ಗಣನೀಯವಾಗಿ ಇಳಿಮುಖವಾಗುವ ಸಾಧ್ಯತೆ ಇದೆ’ ಎಂದರು.

ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಜಿ. ವೀರಶೇಖರಪ್ಪ, ‘ಆರೋಗ್ಯ ಇಲಾಖೆಯ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ₹ 9 ಕೋಟಿ  ಬಳಕೆಯಾಗದೇ ಇದೆ. ಇಂತಹ ಸಮಯದಲ್ಲಾದರೂ ಅದರ ಸದ್ಬಳಕೆಯಾಗಬೇಕು. ಇಲ್ಲದಿದ್ದರೆ ಹಣ ವಾಪಸ್ ಹೋಗುತ್ತದೆ. ಅಧಿಕಾರಿಗಳು ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಜಿಲ್ಲೆಯ ಬರಪೀಡಿತವಾಗಿದ್ದ ಜಗಳೂರು ತಾಲ್ಲೂಕಿನಲ್ಲಿ ಈ ಬಾರಿ ಯಥೇಚ್ಛ ಮಳೆಯಾಗಿದೆ. ಜೊತೆಗೆ ನೆರೆ ಭೀತಿ ಇರುವ ಹರಿಹರ ಮತ್ತು ಹೊನ್ನಾಳಿಯಲ್ಲಿ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

ದಾವಣಗೆರೆ ಜಿಲ್ಲಾ ಪಂಚಾಯಿತಿಗೆ ಬಂದಿರುವ ₹ 50 ಲಕ್ಷ ಬಹುಮಾನದ ಮೊತ್ತವನ್ನು ವೆಂಟಿಲೇಟರ್‌ಗಳ ಖರೀದಿಗೆ ಬಳಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್ ಆಗ್ರಹಿಸಿದರು.

ಡಿಡಿಪಿಐ ಪರಮೇಶ್ವರಪ್ಪ, ತೋಟಗಾರಿಕೆ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶಿವಾನಂದ ಕುಂಬಾರ್, ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಶಾಸಕರಾದ ಎಸ್.ಎ. ರವೀಂದ್ರನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ್, ಉಪಾಧ್ಯಕ್ಷೆ ಸಾಕಮ್ಮ ಗಂಗಾನಾಯ್ಕ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರ ಇದ್ದರು.

‘ಡೀಲರ್‌ಗಳ ವಿರುದ್ಧ ಕ್ರಮ ಕೈಗೊಳ್ಳಿ’

ಜಗಳೂರು ತಾಲ್ಲೂಕು ಸೇರಿ ಜಿಲ್ಲೆಯಲ್ಲಿ ಯೂರಿಯಾದ ಅಭಾವ ಸೃಷ್ಟಿಯಾಗಿದೆ. ಕೆಲವೇ ಡೀಲರ್‌ಗಳಿಗೆ ಯೂರಿಯಾ ಸರಬರಾಜು ಆಗುತ್ತಿದ್ದು, ಅವರು ಅಭಾವ ಸೃಷ್ಟಿಸಿದ್ದಾರೆ. ಜೊತೆಗೆ ಯೂರಿಯಾ ಜೊತೆ ಇನ್ನಿತರೆ ರಾಸಾಯನಿಕ ಗೊಬ್ಬರ ಖರೀದಿಸುವಂತೆ ರೈತರನ್ನು ಒತ್ತಾಯಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ದೂರಿದ್ದಾರೆ. ಈ ಬಗ್ಗೆ ಡೀಲರ್‌ಗಳ ದಾಸ್ತಾನು ಮಳಿಗೆಗಳಿಗೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಿಗೆ ಸಚಿವರು ಸೂಚಿಸಿದರು.

ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ‘ಕೋವಿಡ್ ಹಿನ್ನೆಲೆಯಲ್ಲಿ ರೇಖ್ ಮೂವ್‍ಮೆಂಟ್ ನಿಂತ ಕಾರಣ ಯೂರಿಯಾ ಸರಬರಾಜು ವ್ಯತ್ಯಯವಾಗಿದೆ. ಸೋಮವಾರ ಸ್ಟಾಕ್ ಬರಲಿದ್ದು, ಯೂರಿಯಾ ಗೊಬ್ಬರ ಪ್ರತಿ ತಾಲ್ಲೂಕುಗಳಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು