ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಬಸ್‌ ಪಾಸ್‌ ಸಿಗದೇ ವಿದ್ಯಾರ್ಥಿಗಳು ಕಂಗಾಲು

ಇಲ್ಲಿಯವರೆಗೆ ಇರಲಿಲ್ಲ, ಇನ್ನು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
Last Updated 26 ಆಗಸ್ಟ್ 2021, 9:15 IST
ಅಕ್ಷರ ಗಾತ್ರ

ದಾವಣಗೆರೆ: ತಿಂಗಳ ಆರಂಭದಲ್ಲೇ ಕಾಲೇಜುಗಳು ಆರಂಭವಾಗಿದ್ದವು. ಇದೀಗ 9ನೇ ತರಗತಿಯಿಂದ ಪಿಯು ತರಗತಿಗಳು ಆರಂಭವಾಗಿವೆ. ದೂರದ ಊರಿಂದ ಬರುವ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಇನ್ನೂ ಬಸ್‌ಪಾಸ್ ಸಿಕ್ಕಿಲ್ಲ. ಹಾಗಾಗಿ ಕನಿಷ್ಠ ₹ 100 ದಿನಕ್ಕೆ ಪ್ರಯಾಣದ ವೆಚ್ಚ ಆಗುತ್ತಿದೆ.

‘ನಾವು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಹೋಗಿ ಪಾಸ್‌ ನೀಡಿ ಎಂದು ಕೇಳಿದರೆ ಇನ್ನೂ ಪಾಸ್‌ ಆರಂಭಿಸಿಲ್ಲ ಎಂದು ಉತ್ತರ ನೀಡುತ್ತಾರೆ. ನಾನು 35 ಕಿಲೋಮೀಟರ್‌ ದೂರದಿಂದ ಬರುತ್ತಿದ್ದೇನೆ. ಬಸ್‌ಪಾಸ್‌ ವ್ಯವಸ್ಥೆ ಮಾಡಿದರೆ ಕಾಲೇಜಿಗೆ ಹೋಗಲು ವೆಚ್ಚ ಕಡಿಮೆಯಾಗಲಿದೆ’ ಎಂದು ಬಿ.ಇಡಿ ಪ್ರಥಮ ವರ್ಷದ ವಿದ್ಯಾರ್ಥಿನಿ ಹರಪನಹಳ್ಳಿ ತಾಲ್ಲೂಕಿನ ಅರಸಿಕೆರೆಯ ಚಾಂದಿನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅರಸಿಕೆರೆಯಿಂದ ದಾವಣಗೆರೆಗೆ ನೇರವಾಗಿ ಕೆಎಸ್‌ಆರ್‌ಟಿಸಿ ಬಸ್‌ ಇಲ್ಲ. ಬಸ್‌ ಪಾಸ್‌ ಸಿಕ್ಕಿದರೂ ಅರಸಿಕೆರೆಯಿಂದ ಕಂಚಿಕೆರೆವರೆಗೆ ಖಾಸಗಿ ಬಸ್‌ನಲ್ಲಿ ಬರಬೇಕು. ಅಲ್ಲಿಂದ ಸರ್ಕಾರಿ ಬಸ್‌ ಹಿಡಿದು ದಾವಣಗೆರೆ ಬಸ್‌ ನಿಲ್ದಾಣಕ್ಕೆ ಬರಬೇಕು. ಬಸ್‌ ನಿಲ್ದಾಣದಿಂದ ಮತ್ತೆ ಬಸ್‌ ಹಿಡಿದು ಕಾಲೇಜು ಇರುವ ವಿದ್ಯಾನಗರಕ್ಕೆ ಹೋಗಬೇಕು. ಪಾಸ್‌ ವಿತರಣೆಯ ಜತೆಗೆ ಅರಸಿಕೆರೆಗೆ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಮಾಡಬೇಕು ಎಂಬುದು ಚಾಂದಿನಿಯ ಒತ್ತಾಯ.

‘ಜಗಳೂರು, ಹೊನ್ನಾಳಿ, ನ್ಯಾಮತಿ, ಹರಪನಹಳ್ಳಿ ಹೀಗೆ ಮೂಲೆ ಮೂಲೆಯಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ನಮ್ಮಲ್ಲಿರುವ ಹೆಚ್ಚಿನ ಮಕ್ಕಳು ಗ್ರಾಮೀಣ ಪ್ರದೇಶದವರು. ಅವರಿಗೆ ಪಾಸ್‌ ಸಿಗದೇ ಬಹಳ ಸಮಸ್ಯೆಯಾಗಿದೆ’ ಎಂದು ಇಂಟೆಕ್‌ ಬಿಇಡಿ ಕಾಲೇಜಿನ ಉಪನ್ಯಾಸಕ ಲೋಹಿತ್‌ ವಿವರಿಸಿದರು.

‘ನಮ್ಮ ಕಾಲೇಜು ಒಂದೇ ಅಲ್ಲ. ದಾವಣಗೆರೆಯ ಎಲ್ಲ ಕಾಲೇಜುಗಳಿಗೆ ದೂರದ ಊರಿಂದ ಬರುವ ಮಕ್ಕಳಿಗೆ ಸಮಸ್ಯೆ ಇದೆ. ಎಲ್ಲ ಮಕ್ಕಳಿಗೆ ಬಸ್‌ಪಾಸ್ ನೀಡಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

‘ಹೊಸಬರಿಗಷ್ಟೇ ಸಮಸ್ಯೆ’

ಕಳೆದ ವರ್ಷ ಬಸ್‌ ಪಾಸ್‌ ಹೊಂದಿದ್ದವರಿಗೆ ಅದೇ ಪಾಸ್‌ನಲ್ಲಿ ಕಾಲೇಜುಗಳಿಗೆ ಹೋಗಲು ಆ.31ರವರೆಗೆ ಅವಕಾಶ ನೀಡಲಾಗಿದೆ. ಕಾಲೇಜುಗಳಿಗೆ ಈ ವರ್ಷ ಸೇರಿದವರಿಗೆ ಮಾತ್ರ ಸಮಸ್ಯೆಯಾಗಿದೆ. ಇದೀಗ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅನುಮತಿ ದೊರೆತಿದೆ. ಇಂದಿನಿಂದಲೇ ಅರ್ಜಿ ಸಲ್ಲಿಸಬಹುದು. 15 ದಿನಗಳ ಒಳಗೆ ಪಾಸ್‌ ಅವರ ಕೈ ಸೇರಲಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ ಸಿದ್ದೇಶ್ವರ ಹೆಬ್ಬಾಳ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕೊರೊನಾ ಕಾರಣದಿಂದ ಕಾಲೇಜುಗಳು ತೆರೆದಿರಲಿಲ್ಲ. ಹಾಗಾಗಿ ಬಸ್‌ಪಾಸ್‌ ವಿತರಿಸುವ ಪ್ರಮೇಯ ಬಂದಿರಲಿಲ್ಲ. ಆ.9ರಿಂದ ಕಾಲೇಜುಗಳು, ಆ.23ರಿಂದ 9ನೇ ತರಗತಿಯಿಂದ ಪಿಯು ತರಗತಿಗಳು ಆರಂಭವಾಗಿವೆ. ಅವರಿಗೆ ಬಸ್ ಪಾಸ್‌ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT