ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಸಿರೆಲೆ ಗೊಬ್ಬರ ಬಳಕೆಯಿಂದ ಕೃಷಿಯಲ್ಲಿ ಯಶಸ್ಸು: ಗಂಗಪ್ಪಗೌಡ ಬಿರಾದಾರ್‌

Published 11 ಜುಲೈ 2024, 12:37 IST
Last Updated 11 ಜುಲೈ 2024, 12:37 IST
ಅಕ್ಷರ ಗಾತ್ರ

ಬಸವಾಪಟ್ಟಣ: ರೈತರು ಹಸಿರೆಲೆ ಗೊಬ್ಬರದಿಂದ ಸಾವಯವ ಗೊಬ್ಬರವನ್ನು ಸುಲಭವಾಗಿ ತಯಾರಿಸಿಕೊಂಡು ಬಳಕೆ ಮಾಡಿಕೊಂಡರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗಲಿದೆ ಎಂದು ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಗಂಗಪ್ಪಗೌಡ ಬಿರಾದಾರ್‌ ತಿಳಿಸಿದರು.

ಸಮೀಪದ ಹೊಸಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬುಧವಾರ ರೈತರಿಗೆ ಏರ್ಪಡಿಸಿದ್ದ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಣ್ಣಿನಲ್ಲಿರುವ ಭೌತಿಕ, ರಾಸಾಯನಿಕ, ಜೈವಿಕ ಅಂಶಗಳನ್ನು ಅವಲಂಬಿಸಿರುವ ಪೋಷಕಾಂಶಗಳಾದ ಇಂಗಾಲ, ಸಾರಜನಕ, ರಂಜಕ, ಪೊಟ್ಯಾಷ್‌, ಕಬ್ಬಿಣ, ಸತು, ತಾಮ್ರ, ಬೋರಾನ್‌ಗಳ ಬಗ್ಗೆ ರೈತರು ತಮ್ಮ ಉಳುಮೆ ಭೂಮಿಯ ಮಣ್ಣನ್ನು ಕಡ್ಡಾಯವಾಗಿ ಪರೀಕ್ಷಿಸಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಸಾವಯವ ಗೊಬ್ಬರ ಬಳಕೆ ಮಾಡಬೇಕು. ತಮ್ಮ ಹೊಲಗದ್ದೆಗಳ ಬದುಗಳಲ್ಲಿ ಸೆಣಬು, ಹೊಂಗೆ, ಡಯಂಚ ಅಲ್ಲದೇ ರೈತರು ತಾವು ಬೆಳೆಯುವ ಹೆಸರು, ಅವರೆ, ಅಲಸಂದೆ, ಹುರುಳಿ, ತೊಗರಿ ಬೆಳೆಗಳ ಸೊಪ್ಪುಗಳಿಂದಲೂ ಕ್ರಮ ಬದ್ಧವಾಗಿ ಮಣ್ಣಿನಲ್ಲಿ ಬೆರೆಸಿ ಹಸಿರೆಲೆ ಗೊಬ್ಬರವನ್ನು ತಯಾರಿಸಿಕೊಳ್ಳಬಹುದು ಎಂದು ವಿವರಿಸಿದರು.

‘ನಿರಂತರವಾಗಿ ಹಸಿರೆಲೆ ಗೊಬ್ಬರ ಬಳಸುವುದರಿಂದ ಭೂಮಿಯ ಫಲವತ್ತತೆ ಕ್ರಮೇಣ ಹೆಚ್ಚಿ, ಅಧಿಕ ಇಳುವರಿಯೊಂದಿಗೆ ರೋಗರಹಿತ ಫಸಲ ಪಡೆಯಬಹುದಾಗಿ. ನಮ್ಮ ಸಂಶೋಧನಾ ಕೇಂದ್ರವು ಈ ಬಗ್ಗೆ ರೈತರಿಗೆ ಮಾರ್ಗದರ್ಶನ ಮಾಡುತ್ತದೆ’ ಎಂದು ಹೇಳಿದರು.

ರೈತರು ಅವೈಜ್ಞಾನಿಕವಾಗಿ ರಾಸಾಯನಿಕ ಗೊಬ್ಬರಗಳ ಬಳಕೆ ಮಾಡುತ್ತಿರುವುದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದ್ದು, ಪ್ರತಿ ಬೆಳೆಗೂ ರಾಸಾಯನಿಕ ಗೊಬ್ಬರ ಬಳಕೆಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿ ರೈತರಿಗೆ ನಷ್ಟವಾಗುತ್ತಿದೆ. ಅದರ ಬದಲು ರೈತರು ಸಾವಯವ ಗೊಬ್ಬರದ ಬಳಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಅಧಿಕಾರಿ ಹನುಮಂತಪ್ಪ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮೇಲ್ವಿಚಾರಕ ರವಿ, ಒಕ್ಕೂಟದ ಅಧ್ಯಕ್ಷ ಚಂದ್ರಪ್ಪ ಹಾಗೂ ನೂರಾರು ರೈತರು, ರೈತ ಮಹಿಳೆಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT