ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಳೆಕೆರೆ; ರಕ್ಷಣೆಗಿದೋ ಮೊರೆ–1,500ಕ್ಕೂ ಹೆಚ್ಚು ಪ್ರದೇಶದಲ್ಲಿ ಒತ್ತುವರಿ ಆರೋಪ

lಸೂಳೆಕೆರೆಯ 1,500ಕ್ಕೂ ಹೆಚ್ಚು ಪ್ರದೇಶದಲ್ಲಿ ಒತ್ತುವರಿ ಆರೋಪ lಜಾರಿಯಾಗದ ಪ್ರಾಧಿಕಾರದ ನಿಯಮಗಳು
Last Updated 16 ಆಗಸ್ಟ್ 2021, 2:44 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ 450ಕ್ಕೂ ಹೆಚ್ಚು ಕೆರೆಗಳಿದ್ದು, ಬಹುತೇಕ ಕೆರೆಗಳು ಒತ್ತುವರಿಯಾಗಿವೆ. ಗಿಡ–ಗಂಟಿಗಳು ಬೆಳೆದು ಹೂಳು ತುಂಬಿದೆ. ಕೆರೆಗಳ ಸುತ್ತಲಿನ 30 ಮೀಟರ್‌ ಪ್ರದೇಶವನ್ನು ಬಫರ್‌ ಝೋನ್ ಆಗಿಸುವಂತೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರವು ಸೂಚಿಸಿದೆ. ಆದರೆ, ಇದೂ ಸೇರಿ ಕೆರೆಗಳ ಸಂರಕ್ಷಣೆ ಕುರಿತ ಯಾವುದೇ ನಿಯಮಗಳೂ ಪಾಲನೆಯಾಗದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಚನ್ನಗಿರಿ ತಾಲ್ಲೂಕಿನಲ್ಲಿ 273 ಕೆರೆಗಳಿವೆ. ‘ಸೂಳೆಕೆರೆ’ ಅಥವಾ ಈಗ ಕರೆಯುವ ‘ಶಾಂತಿ ಸಾಗರ’ ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಕೆರೆಯಾಗಿದೆ. ದಾವಣಗೆರೆಯಿಂದ 40 ಕಿ.ಮೀ. ದೂರದಲ್ಲಿರುವ ಕೆರೆಗೆ 800ಕ್ಕೂ ಹೆಚ್ಚು ವರ್ಷಗಳ ಭವ್ಯ ಇತಿಹಾಸವಿದೆ. 40 ಕಿ.ಮೀ. ಸುತ್ತಳತೆ ಹೊಂದಿದೆ. ಆರೂವರೆ ಸಾವಿರ ಎಕರೆಗಿಂತಲೂ ಹೆಚ್ಚು ವಿಸ್ತಾರವಾದ ಪ್ರದೇಶದಲ್ಲಿ ನೀರು ಆವರಿಸಿದೆ. ಚನ್ನಗಿರಿ ತಾಲ್ಲೂಕು, ಚಿತ್ರದುರ್ಗ, ಭೀಮಸಮುದ್ರ, ಹೊಳಲ್ಕೆರೆ ತಾಲ್ಲೂಕಿನ ಹಳ್ಳಿಗಳಿಗೆ ಜೀವಜಲದ ಮೂಲವಾಗಿದೆ. ಆದರೆ, ಈ ಕೆರೆಯ 1,500 ಎಕರೆಗೂ ಹೆಚ್ಚು ಪ್ರದೇಶ ಒತ್ತುವರಿ ಮಾಡಿ ತೆಂಗು, ಅಡಿಕೆ, ಮೆಕ್ಕೆಜೋಳ ಬೆಳೆಯಲಾಗಿದೆ. ರಸ್ತೆ ನಿರ್ಮಿಸಲಾಗಿದೆ. ಪಂಪ್‌ಸೆಟ್‌ಗಳನ್ನುಅಕ್ರಮವಾಗಿ ಅಳವಡಿಸಲಾಗಿದೆ. ಗೋದಾಮುಗಳು, ಕಟ್ಟಡಗಳು ತಲೆಯೆತ್ತಿವೆ ಎಂಬ ಆರೋಪವಿದೆ. ಉಳಿದ 272 ಕೆರೆಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ಸಂತೇಬೆನ್ನೂರು, ಕುಳೇನೂರು, ಸಿದ್ಧನಮಠ, ಮೆದಿಕೆರೆ ಕೆರೆಗಳ ಸರ್ವೆ ನಡೆದಿದ್ದು, ಒತ್ತುವರಿಯಾಗಿರುವುದು ದಾಖಲೆಗಳಿಂದ ತಿಳಿದಿದೆ. ಹಿರೇಕೋಗಲೂರು ಕೆರೆಯ ಸರ್ವೆಯನ್ನು ಗ್ರಾಮಸ್ಥರು ಸ್ವಂತ ಖರ್ಚಿನಲ್ಲಿ ನಡೆಸಿ, ಒತ್ತುವರಿ ತೆರವುಗೊಳಿಸಿದ್ದರು. ಆನೆ ಕಂದಕ ತೋಡಿಸಿ ಹದ್ದಬಸ್ತು ಮಾಡಿದ್ದರು. ಮತ್ತೆ 100 ಎಕರೆಗೂ ಹೆಚ್ಚು ಪ್ರದೇಶ ಒತ್ತುವರಿ ಮಾಡಲಾಗಿದೆ ಎನ್ನುತ್ತಾರೆ ಮೀನು ಬಳಕೆದಾರರ ಸಂಘದ ಅಧ್ಯಕ್ಷ ಜಗದೀಶ್ ಗೌಡ.

ಹೊನ್ನಾಳಿ–ನ್ಯಾಮತಿ ಅವಳಿ ತಾಲ್ಲೂಕಿನಲ್ಲಿ 140 ಕೆರೆಗಳಿದ್ದು, ಇದುವರೆಗೆ ಸರ್ವೆ ಕಾರ್ಯ ನಡೆದಿಲ್ಲ. ನ್ಯಾಮತಿ ತಾಲ್ಲೂಕಿನ ಸವಳಂಗದಲ್ಲಿ 1928ರಲ್ಲಿ ಕಟ್ಟಲಾದ ಹೊಸಕೆರೆ 800 ಎಕರೆ ವಿಸ್ತೀರ್ಣ ಹೊಂದಿದ್ದು, ಸಾವಿರಾರು ಎಕರೆ ಜಮೀನುಗಳಿಗೆ ನೀರುಣಿಸುತ್ತದೆ. ಆದರೆ, ಕೆರೆಯ ಅಂಚಿನಲ್ಲಿ ಸುಮಾರು 20 ಎಕರೆ ಒತ್ತುವರಿಯಾಗಿದೆ. ಕೆಲವು ಕೆರೆಗಳ ಕುರುಹೂ ಇಲ್ಲದಂತಾಗಿದೆ ಎಂದು ಈ ಭಾಗದ ರೈತರು ದೂರಿದ್ದಾರೆ. ಸಾಸ್ವೆಹಳ್ಳಿ ಹೋಬಳಿಯ ಉಜ್ಜನೀಪುರ ಕೆರೆಯನ್ನು ಸ್ಮಶಾನ ಜಾಗವಾಗಿಸಿರುವ ಬಗ್ಗೆ ದೂರು ದಾಖಲಾಗಿದೆ. ಆದರೆ, ತೆರವಿಗೆ ಕ್ರಮ ಕೈಗೊಂಡಿಲ್ಲ.

ಜಗಳೂರಿನ 525 ಎಕರೆ ವಿಸ್ತೀರ್ಣದ ಕೆರೆ ಒತ್ತುವರಿ ಮಾಡಿ ನೂರಾರು ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಆರ್‌ಟಿಐ ಕಾರ್ಯಕರ್ತ ಮನುಮಾರ್ಕ್ ಅವರ ದೂರಿನ ಮೇರೆಗೆ ಕಟ್ಟಡಗಳನ್ನು ನೆಲಸಮ ಮಾಡಲಾಗಿತ್ತು. ಇದೀಗ ಮತ್ತೆ ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಈ ಮೊದಲು ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲ್ಲೂಕಿನಲ್ಲಿ 60ಕ್ಕೂ ಹೆಚ್ಚು ಕೆರೆಗಳನ್ನು ಒತ್ತುವರಿ ಮಾಡಲಾಗಿದೆ. ಕೆರೆಯಂಗಳದ ಮಣ್ಣು ಮಾರಾಟ, ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ನಡೆದಿದೆ. ರಾಗಿಮಸಲವಾಡ ಕೆರೆಯಂಗಳದಲ್ಲಿಯೇ ಕೆಲ ರೈತರು ಬಿತ್ತನೆ ಮಾಡಿದ್ದಾರೆ.

ದಾವಣಗೆರೆ ತಾಲ್ಲೂಕಿನ ದೇವರ ಬೆಳಕೆರೆ, ಅಣಜಿ ಕೆರೆ, ತುಪ್ಪದಹಳ್ಳಿ ಕೆರೆ, ಕುಂದನಕೋವಿ ಕೆರೆ, ಕೊಡಗನೂರು ಮುಂತಾದ ಕೆರೆಗಳು ಒತ್ತುವರಿಯಾಗಿವೆ. ದಾವಣಗೆರೆ –ಹರಿಹರ ರಸ್ತೆಯಲ್ಲಿರುವ ಬಾತಿಕೆರೆಯ 4 ಎಕರೆ ಕೆರೆ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಲೇಔಟ್‌ ನಿರ್ಮಿಸಲು ಒತ್ತುವರಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಿಂದಲೇ ಭೂಪರಿವರ್ತನೆ ಮಾಡಿಸಿಕೊಳ್ಳಲಾಗಿದೆ. ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಲೇಔಟ್‌ ವಿನ್ಯಾಸ ನಕ್ಷೆಗೆ ಅನುಮೋದನೆ ಸಿಕ್ಕಿದೆ. ಅಲಿನೇಷನ್‌ ರದ್ದುಪಡಿಸುವಂತೆ ದಾವಣಗೆರೆ
–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿಪಿಐ ಆರೋಪಿಸಿದೆ.

ಬಾತಿಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಮುಂದಾದ ಸಂದರ್ಭದಲ್ಲಿ ಒತ್ತುವರಿಯಾಗಿರುವುದು ತಿಳಿಯಿತು. 1970ರಲ್ಲಿ ಕೆರೆಯ ಜಾಗವನ್ನು ಭೂಸ್ವಾಧೀನಪಡಿಸಿಕೊಂಡಾಗ ಪಹಣಿಯಲ್ಲಿ ಸರ್ಕಾರ ಎಂದು ನಮೂದಿಸಿರಲಿಲ್ಲ. ಇತ್ತಿಚೆಗೆ ನಮೂದಿಸಿದ್ದನ್ನು ಪ್ರಶ್ನಿಸಿ ಪಹಣಿಯಲ್ಲಿ ಹೆಸರಿರುವ ರೈತರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸದ್ಯ ಕೋರ್ಟ್‌ ತಡೆಯಾಜ್ಞೆ ನೀಡಿದೆ ಎಂದು ಧೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

ಜನ, ಜಾನುವಾರು, ಪಕ್ಷಿಗಳ ಉಳಿವಿಗೆ ಕೆರೆಗಳ ಸಂರಕ್ಷಣೆ ಅತ್ಯಗತ್ಯ. ಈಗಲಾದರೂ ಜಿಲ್ಲಾಡಳಿತವು ಜಿಲ್ಲೆಯಲ್ಲಿರುವ ಕೆರೆಗಳ ನಿಖರ ಪಟ್ಟಿ ತಯಾರಿಸಿ, ಸರ್ವೆ ನಡೆಸಿ, ಕೆರೆಯ ಪೂರ್ಣ ಮಾಹಿತಿ ಇರುವ ನಾಮಫಲಕ ಹಾಕಿ, ಹದ್ದುಬಸ್ತು ಮಾಡಲು ಕ್ರಮ ಕೈಗೊಳ್ಳಬೇಕು ಎಂಬುದು ಸಂಘಟನೆಗಳು ಮತ್ತು ಜನರ ಆಗ್ರಹವಾಗಿದೆ.

ಕೆರೆಗಳ ಸಂರಕ್ಷಣೆಗೆ ಮುಖಂಡರ ಆಗ್ರಹ

ಸೂಳೆಕೆರೆ ಸಂರಕ್ಷಣೆಗೆ ಸಾಕಷ್ಟು ಒತ್ತಡ ತಂದ ನಂತರದಲ್ಲಿ ಸರ್ವೆ ಕಾರ್ಯಕ್ಕಾಗಿ ಸರ್ಕಾರದಿಂದ ₹ 11 ಲಕ್ಷ ಬಿಡುಗಡೆಯಾಗಿತ್ತು. ಕರ್ನಾಟಕ ನೀರಾವರಿ ನಿಗಮ ವರದಿಯನ್ನು ಜಿಲ್ಲಾಡಳಿತಕ್ಕೆ ನೀಡಿತ್ತು. ಜಿಲ್ಲಾಧಿಕಾರಿ ಅವರು ವರದಿ ಸರ್ಟಿಫೈ ಮಾಡಿ ಕಳುಹಿಸುವಂತೆ ತಾಲ್ಲೂಕು ಅಧಿಕಾರಿಗೆ ಕಳುಹಿಸಿದ್ದಾರೆ. ಆದರೆ, ಅದು ಅಲ್ಲೇ ಉಳಿದಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದೇವೆ.

–ರಘು ಬಿ.ಆರ್‌., ಅಧ್ಯಕ್ಷ, ಖಡ್ಗ ಸಂಘ, ಚನ್ನಗಿರಿ

ಜಿಲ್ಲೆಯಲ್ಲಿರುವ ಕೆರೆಗಳ ಸಂಖ್ಯೆ, ವಿಸ್ತೀರ್ಣ, ನೀರಿನ ಸಾಮರ್ಥ್ಯ, ಹೂಳು ತುಂಬಿರುವ ಕೆರೆಗಳು, ಒತ್ತುವರಿ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆದಿದ್ದರೂ ಕಾರ್ಯಗತಗೊಂಡಿಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳ ಕೃಪಾಪೋಷದಿಂದ ತಮಗೆ ಬೇಕಾದ ಜಾಗಕ್ಕೆ ಬಂದಿರುತ್ತಾರೆ. ಒತ್ತುವರಿದಾರರಲ್ಲಿ ಬಹುತೇಕರು ಜನಪ್ರತಿನಿಧಿಗಳ ಬೆಂಬಲಿಗರಿದ್ದು, ಅಧಿಕಾರಿಗಳು ತೆರವಿಗೆ ಮುಂದಾದಾಗ ನಾಯಕರಿಂದ ಒತ್ತಡ ಬಂದಾಕ್ಷಣ ಸುಮ್ಮನಾಗುತ್ತಾರೆ. ಹಾಗಾಗಿ ಕೆರೆಗಳ ಸಂರಕ್ಷಣೆ ಕಾರ್ಯ ನನೆಗುದಿಗೆ ಬಿದ್ದಿದೆ.

–ಬಲ್ಲೂರು ರವಿಕುಮಾರ್‌, ಭೂಕಬಳಿಕೆ ವಿರೋಧಿ ಹೋರಾಟ
ಸಮಿತಿ ಸದಸ್ಯ, ದಾವಣಗೆರೆ

ಬಾತಿ ಕೆರೆಯ ಅಳತೆಯನ್ನು ಸರ್ವೆ ಮಾಡಿ, ಹದ್ದುಬಸ್ತು ಮಾಡಬೇಕು. ಕೆರೆಯಲ್ಲಿ ತುಂಬಿರುವ ಹೂಳನ್ನು ತೆಗೆಯಿಸುವ ಮೂಲಕ ಹೆಚ್ಚು ನೀರು ಸಂಗ್ರಹವಾಗುವಂತೆ ಮಾಡಬೇಕು. ದೊಡ್ಡಬಾತಿ, ಹಳೆ ಬಾತಿ, ನೀಲಾನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳು ಮತ್ತು ದಾವಣಗೆರೆ ನಗರಕ್ಕೆ ನೀರು ಸಂಗ್ರಹಣಾ ಕೆರೆಯಾಗಿ ಬಳಸಬೇಕು.

–ಆವರಗೆರೆ ವಾಸು, ಜಿಲ್ಲಾ ಸಹ ಕಾರ್ಯದರ್ಶಿ, ಸಿಪಿಐ, ದಾವಣಗೆರೆ

ಕೆರೆಗಳ ಸಂರಕ್ಷಣೆಯಾದರೆ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿಸುವ ಕೆಲಸ ಸಾರ್ಥಕವಾಗುತ್ತದೆ. ಅಂತರ್ಜಲ ಮಟ್ಟ ಹೆಚ್ಚಿ ಕುಡಿಯುವ ನೀರು, ಕೃಷಿಗೆ ಅನುಕೂಲವಾಗುತ್ತದೆ. ಕೊಳವೆಬಾವಿಗಳಲ್ಲಿ ನೀರು ಉಳಿಯುವುದರಿಂದ ಮೇಲಿಂದ ಮೇಲೆ ಕೊಳವೆಬಾವಿ ಕೊರೆಯಿಸುವುದು ತಪ್ಪಿ ರೈತರಿಗೆ ಅನುಕೂಲವಾಗುತ್ತದೆ.

–ಎಲ್‌. ಕೊಟ್ರೇಶ್‌ ನಾಯ್ಕ ಹುಲಿಕಟ್ಟೆ, ಪ್ರಧಾನ ಕಾರ್ಯದರ್ಶಿ, 22 ಕೆರೆಗಳ ಏತ ನೀರಾವರಿ ಯೋಜನೆಯ ಹೋರಾಟ ಸಮಿತಿ

ಕೆರೆಗಳ ಸಂರಕ್ಷಣೆಗೆ ಸಿಬ್ಬಂದಿ ಕೊರತೆ

ಕೆರೆಗಳ ಸಂರಕ್ಷಣೆಗೆ ಪ್ರತಿ ಜಿಲ್ಲೆಯಲ್ಲೂ ಕೆರೆ ಸಂರಕ್ಷಣಾ ಸಮಿತಿ ಇದೆ. ಜಿಲ್ಲಾಧಿಕಾರಿ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ, ಸಣ್ಣ, ಮಧ್ಯಮ ಹಾಗೂ ಬೃಹತ್‌ ನೀರಾವರಿ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್‌ ಇಲಾಖೆ, ಪರಿಸರ ಅಧಿಕಾರಿ, ಸ್ಥಳೀಯ ಆಡಳಿತದ ಅಧಿಕಾರಿಗಳು ಸದಸ್ಯರಿರುತ್ತಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಕ್ರಮಗಳನ್ನು ಜರುಗಿಸಬೇಕಿರುತ್ತದೆ. ಆದರೆ, ಕೆಲಸ ನಿರ್ವಹಣೆಗೆ ಸಿಬ್ಬಂದಿಯೇ ಇಲ್ಲ.

ಜಿಲ್ಲೆಯಲ್ಲಿ ಸಹಾಯಕರೊಬ್ಬರು, ಚಾಲಕರೊಬ್ಬರು ಇದ್ದಾರೆ. ಜಿಲ್ಲಾ ಅಧಿಕಾರಿ, ತಾಂತ್ರಿಕ ಅಧಿಕಾರಿ, ಲೆಕ್ಕ ಪರಿಶೋಧನೆ, ಕಂಪ್ಯೂಟರ್‌ ಪ್ರೊಗ್ರಾಮರ್‌, ಸಾಮಾಜಿಕ ತಜ್ಞರು ಇಲ್ಲ. ಇರುವ ಒಬ್ಬಿಬ್ಬರು ಎಂಜಿನಿಯರ್‌ಗಳು ಮೂರು, ನಾಲ್ಕು ಜಿಲ್ಲೆಗಳ ಜವಾಬ್ದಾರಿ ನಿರ್ವಹಿಸಬೇಕಾದ ಸ್ಥಿತಿ ಇದೆ.

ಎರಡೇ ದೂರು ದಾಖಲು

ಕೆರೆಗಳ ಸಂರಕ್ಷಣೆ ಮತ್ತು ನಿರ್ವಹಣೆ ಸಂಬಂಧ ಹೈಕೋರ್ಟ್‌ ಆದೇಶದ ಮೇರೆಗೆ ಜಿಲ್ಲಾ ಕೇಂದ್ರದಲ್ಲಿ ದೂರು ನಿರ್ವಹಣಾ ಕೇಂದ್ರ ಸ್ಥಾಪಿಸಿದ್ದು, ಕೇವಲ ಎರಡು ದೂರುಗಳು ದಾಖಲಾಗಿವೆ.

ಜಗಳೂರು ಪಟ್ಟಣದ ಕೆರೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌, ಜಗಳೂರು ನಗರಾಡಳಿತದ ಮುಖ್ಯಾಧಿಕಾರಿ, ತಹಶೀಲ್ದಾರ್‌ ಅವರಿಗೆ ಪತ್ರ ಬರೆಯಲಾಗಿದೆ. ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿಯಲ್ಲಿ ಕೆರೆ ಒತ್ತುವರಿ ತೆರವು ಸಂಬಂಧ ತಾಲ್ಲೂಕು ಅಧಿಕಾರಿಗೆ ಪತ್ರ ಬರೆಯಬೇಕಿದೆ ಎಂದು ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರದ ಬಗ್ಗೆ ಜನರಿಗೆ ಮಾಹಿತಿ ಇಲ್ಲ. ಕೆರೆಗಳ ಕುರಿತು ಏನೇ ದೂರು ಇದ್ದರೂ ದೂರವಾಣಿ: 08192–226301 ನಂಬರ್‌ಗೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.

---------

ಕೋಟ್‌...

ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಪಟ್ಟಿ ಮಾಡಿ ಸರ್ವೆ ನಡೆಸಲು ನೀಡಲಾಗಿದೆ. ಸರ್ವೆ ವೇಳೆ ಒತ್ತುವರಿ ಕಂಡುಬಂದರೆ ತೆರವುಗೊಳಿಸಿ, ಆನೆ ಕಂದಕ ತೋಡಿಸಿ, ಹದ್ದುಬಸ್ತು ಮಾಡಲು ಕ್ರಮ ಕೈಗೊಳ್ಳಲಾಗುವುದು.

ಜಿ. ಪರಮೇಶ್ವರಪ್ಪ, ಕಾರ್ಯನಿರ್ವಾಹಕ ಎಂಜಿನಿಯರ್‌, ಜಿಲ್ಲಾ ಪಂಚಾಯಿತಿ, ದಾವಣಗೆರೆ

ಸೂಳೆಕೆರೆಯಲ್ಲಿ 27 ಅಡಿ ನೀರು ತುಂಬಿಸಿದಾಗ 6,712 ಎಕರೆ ಪ್ರದೇಶ ಜಲಾವೃತವಾಗುತ್ತದೆ. ಭೂ ದಾಖಲೆಗಳ ನಕಾಶೆ/ಆಕಾರ ಬಂದಿ ಪ್ರಕಾರ ಸೂಳೆಕೆರೆ ವಿಸ್ತೀರ್ಣ 5,447 ಎಕರೆ 10 ಗುಂಟೆ ಎಂದಿದೆ. ಖಾಸಗಿ ಏಜೆನ್ಸಿಯಿಂದ ಸೂಳೆಕೆರೆಯ ಸರ್ವೆ ನಡೆಸಿದ್ದು, ಪರಿಶೀಲನೆಗಾಗಿ ಕಳುಹಿಸಲಾಗಿದೆ. ಸರ್ವೆ ಇಲಾಖೆ ಪರಿಶೀಲಿಸಿದ ನಂತರದಲ್ಲಿ ಕೆರೆಯ ಜಾಗವೆಷ್ಟು, ರೈತರ ಜಮೀನುಗಳೆಷ್ಟು, ಒತ್ತುವರಿಯ ಪ್ರಮಾಣವೆಷ್ಟು ತಿಳಿಯಲಿದೆ. ಈ ಮಧ್ಯೆ 1,400 ಎಕರೆ ಪ್ರದೇಶದಲ್ಲಿರುವ ರೈತರು ಮೂರು ವರ್ಷಗಳಿಂದ ಜಮೀನುಗಳಲ್ಲಿ ನೀರು ನಿಂತಿದೆ ಎಂದು ಪರಿಹಾರ ಕೋರಿ ಕೋರ್ಟ್‌ ಮೊರೆಹೋಗಿದ್ದಾರೆ.

ತಿಪ್ಪೇಸ್ವಾಮಿ, ಸಹಾಯಕ ಎಂಜಿನಿಯರ್‌, ಬೃಹತ್‌ ಮತ್ತು ಮಧ್ಯಮ ನೀರಾವರಿ ಇಲಾಖೆ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT