ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಬತ್ತಿದ ತುಂಗಭದ್ರಾ ನದಿ, ಪೂರೈಸಲು ನೀರಿಲ್ಲ-ಹಾಹಾಕಾರ ತಪ್ಪುತ್ತಿಲ್ಲ

ಸದ್ಯ ಟಿ.ವಿ ಸ್ಟೇಷನ್‌ ಹಾಗೂ ಕುಂದವಾಡ ಕೆರೆಗಳೇ ಆಧಾರ
Published 29 ಮಾರ್ಚ್ 2024, 6:39 IST
Last Updated 29 ಮಾರ್ಚ್ 2024, 6:39 IST
ಅಕ್ಷರ ಗಾತ್ರ

ದಾವಣಗೆರೆ: ಮಳೆಯ ತೀವ್ರ ಕೊರತೆಯಿಂದಾಗಿ ಜಲಾಶಯಗಳು ಭರ್ತಿಯಾಗದೇ ತುಂಗಭದ್ರಾ ನದಿಯ ಒಡಲು  ಸಂಪೂರ್ಣ ಬರಿದಾಗಿದೆ. ನಗರಕ್ಕೆ ಕುಡಿಯುವ ನೀರು ಪೂರೈಕೆ ಸರದಿಯಲ್ಲಿ ವಿಳಂಬವಾಗುತ್ತಿದೆ.

ನದಿಯಲ್ಲಿ ನೀರು ಲಭ್ಯವಿಲ್ಲದ ಕಾರಣ ರಾಜನಹಳ್ಳಿ ಹತ್ತಿರದ ದಾವಣಗೆರೆ ಮಹಾನಗರ ಪಾಲಿಕೆಯ ಕುಡಿಯುವ ನೀರು ಪೂರೈಕೆ ವಿಭಾಗದ ಜಾಕ್‌ವೆಲ್‌ ಹಾಗೂ ಬಾತಿ ಹತ್ತಿರ ಇರುವ ನೀರು ಶುದ್ಧೀಕರಣ ಘಟಕಗಳನ್ನು ಮಾರ್ಚ್‌ 21ರಿಂದಲೇ ಸ್ಥಗಿತಗೊಳಿಸಲಾಗಿದೆ. ಸದ್ಯ ಟಿ.ವಿ. ಸ್ಟೇಷನ್‌ ಕೆರೆ ಹಾಗೂ ಕುಂದವಾಡ ಕೆರೆಗಳು ಕುಡಿಯುವ ನೀರಿಗೆ ಆಧಾರವಾಗಿದ್ದು, 20 ದಿನಗಳವರೆಗೆ ಮಾತ್ರ ನೀರು ಪೂರೈಸಬಹುದಾಗಿದೆ. ಕಾರಣ ಐದು ದಿನಗಳಿಗೊಮ್ಮೆ ನೀರು ಪೂರೈಕೆ ಆಗುತ್ತಿದ್ದ ಪ್ರದೇಶಗಳಲ್ಲಿ 8 ದಿನಗಳಿಗೊಮ್ಮೆ ಹಾಗೂ ಎಂಟು ದಿನಗಳಿಗೊಮ್ಮೆ ಪೂರೈಕೆ ಆಗುತ್ತಿದ್ದ ಭಾಗಗಳಲ್ಲಿ 12ರಿಂದ 15 ದಿನಗಳಿಗೊಮ್ಮೆ ನೀರು ಪೂರೈಸುವ ಅನಿವಾರ್ಯತೆ ಎದುರಾಗಿದೆ.

‘ಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಸಿದ್ದು, ಟಿ.ವಿ ಸ್ಟೇಷನ್ ಕೆರೆಗೆ 35 ಎಂಎಲ್​ಡಿ ನೀರು ಬರಬೇಕಿತ್ತು. ಅಕ್ರಮ ಪಂಪ್‌ಸೆಟ್‌ ಹಾವಳಿಯಿಂದಾಗಿ ಕೇವಲ 10 ಎಂಎಲ್​ಡಿಯಷ್ಟು ನೀರು ಕೆರೆಗೆ ಹರಿದು ಬರುತ್ತಿದೆ. ಕುಂದವಾಡ ಕೆರೆಯಲ್ಲಿ ಲಭ್ಯವಿರುವ ನೀರಿನಲ್ಲೇ ಹಳೇ ದಾವಣಗೆರೆ ಭಾಗಕ್ಕೆ ಕುಡಿಯಲು ನೀರು ಕೊಡಲಾಗುತ್ತಿದೆ’ ಎಂದು ಮಹಾನಗರ ಪಾಲಿಕೆ ಕುಡಿಯುವ ನೀರು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಉದಯಕುಮಾರ್‌ ಎಂ.ಎಚ್‌. ತಿಳಿಸಿದರು.

‘ಭದ್ರಾ ಜಲಾಶಯದಿಂದ ಮಾರ್ಚ್‌ 29ರಿಂದ ನದಿಗೆ ನೀರು ಹರಿಸುವುದರಿಂದ ರಾಜನಹಳ್ಳಿ ಜಾಕ್‌ವೆಲ್‌ ಹಾಗೂ ನೀರು ಶುದ್ಧೀಕರಣ ಘಟಕಗಳು ಪುನರ್‌ ಕಾರ್ಯಾರಂಭಿಸುವ ವಿಶ್ವಾಸವಿದೆ. ಆದರೆ, ಏಪ್ರಿಲ್‌ 5ಕ್ಕೆ ನೀರಿನ ಹರಿವು ಸ್ಥಗಿತಗೊಳಿಸುವುದರಿಂದ ಸಮಸ್ಯೆ ಪೂರ್ತಿಯಾಗಿ ಬಗೆಹರಿಯುವುದಿಲ್ಲ. ಆ ವೇಳೆಗೆ ಕೆರೆಗಳಲ್ಲಿನ ನೀರು ಖಾಲಿಯಾಗುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿ ಬಿಗಡಾಯಿಸಲಿದೆ. ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಅವರು ವಿವರಿಸಿದರು.

‘ಪಾಲಿಕೆ ಅಡಿ ನಗರದಲ್ಲಿ 1,080 ಕೊಳವೆಬಾವಿಗಳಿವೆ. ಇವುಗಳ ಪೈಕಿ 45ರಲ್ಲಿ ನೀರು ಬತ್ತಿದೆ. ಅವುಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದೆ. ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿವಿಧ ವಾರ್ಡ್‌ಗಳಲ್ಲಿ 22 ಕೊಳವೆಬಾವಿ ಕೊರೆಯಿಸಿದ್ದು, ಇವುಗಳಿಂದ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುವುದು. 6 ಸ್ವಂತ ಟ್ಯಾಂಕರ್‌ಗಳಿದ್ದು, 10 ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಮಳೆ ಕೊರತೆಯ ಕಾರಣ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ಸಮಸ್ಯೆ ನಿರ್ವಹಣೆಗೆ ಪಾಲಿಕೆಯೊಂದಿಗೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ವಿವಿಧ ವಾರ್ಡ್‌ಗಳಲ್ಲಿ ನೀರು ಸರಬರಾಜು ಸಮಸ್ಯೆ ನಿರ್ವಹಣೆ ಕೊಳವೆಬಾವಿ ದುರಸ್ತಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಇತ್ಯಾದಿ ದೂರುಗಳ ನಿರ್ವಹಣೆಗೆ 9 ಜನ ಎಂಜಿನಿಯರ್‌ಗಳನ್ನು ನೇಮಿಸಲಾಗಿದೆ.
-ರೇಣುಕಾ, ಮಹಾನಗರ ಪಾಲಿಕೆ ಆಯುಕ್ತೆ
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಹರಿಯುವ ತುಂಗಭದ್ರಾ ನದಿ ಸಂಪೂರ್ಣ ಬತ್ತಿರುವುದು
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಹರಿಯುವ ತುಂಗಭದ್ರಾ ನದಿ ಸಂಪೂರ್ಣ ಬತ್ತಿರುವುದು

ಸಮಸ್ಯೆ ನಿವಾರಣೆಗೆ ಕ್ರಮ

ವಿದ್ಯುತ್ ಮತ್ತು ನೀರು ಸರಬರಾಜಿನ ನೋಡಲ್ ಅಧಿಕಾರಿಯಾಗಿ ಎಂ.ಎಚ್.ಉದಯ್‌ಕುಮಾರ್ (ಮೊ.ಸಂ: 9900899559) ಅವರನ್ನು ನೇಮಿಸಲಾಗಿದೆ. ನೀರಿನ ಸಮಸ್ಯೆಯಾದರೆ ಸಾರ್ವಜನಿಕರು ಈ ಕೆಳಕಂಡ ಅಧಿಕಾರಿಗಳನ್ನು ಸಂಪರ್ಕಿಸಬಹುದು. ವಲಯ ಕಚೇರಿ–1: ವಾರ್ಡ್ ನಂ.1ರಿಂದ 5ರವರೆಗೆ ಕಿರಿಯ ಎಂಜಿನಿಯರ್ ಈ.ಪ್ರಕಾಶ್ (ಮೊ:9742037934). ವಾರ್ಡ್ ನಂ. 6ರಿಂದ 10ರವರೆಗೆ ಸಹಾಯಕ ಎಂಜಿನಿಯರ್ ಯೂಸುಫ್ ಅಲಿಖಾನ್ ಎನ್. (ಮೊ:9164091278). ವಾರ್ಡ್ ನಂ. 11ರಿಂದ 14 ಮತ್ತು 45ರವರೆಗೆ ಸಹಾಯಕ ಎಂಜಿನಿಯರ್ ಪ್ರವೀಣಕುಮಾರ್ ಎಚ್.ಬಿ. (ಮೊ :7760117430). ವಲಯ ಕಚೇರಿ–2: ವಾರ್ಡ್ ನಂ: 18ರಿಂದ 30 ಹಾಗೂ 32ರಿಂದ 37ರಚರೆಗೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿನಾಯಕ ನಂಜಪ್ಪ ನಾಯಕ (ಮೊ:8431563165). ವಾರ್ಡ್ ನಂ 18192021252627 ಮತ್ತು 28 ರವರೆಗೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಚಿನ್‌ ಸಿ.ಎಂ. (ಮೊ:7829137361). ವಾರ್ಡ್ ನಂ. 29303233343536 ಮತ್ತು 37ರವರೆಗೆ ಕಿರಿಯ ಎಂಜಿನಿಯರ್ ಶೋಯಬ್ ಖಾನ್ (ಮೊ:9738729141). ವಲಯ ಕಚೇರಿ-3: ವಾರ್ಡ್ ನಂ. 1516172223243839314041 4243 ಮತ್ತು 44ರವರೆಗೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅನೂಪ್ ಕನೋಜ್ (ಮೊ: 9880913909). ವಾರ್ಡ್ ನಂ. 15161722232438 ಮತ್ತು 39ರವರೆಗೆ ಕಿರಿಯ ಎಂಜಿನಿಯರ್ ಮಾರುತಿ.ಎಸ್ ಹಾದಿಮನಿ (ಮೊ :9538770058). ವಾರ್ಡ್ ನಂ. 3140.4142.43 ಮತ್ತು 44 ರವರೆಗೆ ಕಿರಿಯ ಎಂಜಿನಿಯರ್ ಶ್ವೇತಾ ಈ. (ಮೊ :9036887318).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT