ಮಂಗಳವಾರ, ಏಪ್ರಿಲ್ 20, 2021
27 °C

ಸರ್ವ ಜನಾಂಗದ ಪ್ರೀತಿ ಗಳಿಸಿದ್ದ ಸದ್ಯೋಜಾತ ಶ್ರೀ: ಶಿವಾಚಾರ್ಯ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಲಿಂಗೈಕ್ಯ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ವೀರಶೈವ ಸಮಾಜಕ್ಕೆ ಸೀಮಿತವಾಗದೇ ಸರ್ವ ಜನಾಂಗದ ಪ್ರೀತಿ ಗಳಿಸಿದ್ದರು ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಸದ್ಯೋಜಾತ ಮಠದಲ್ಲಿ ಡಾ. ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮೀಜಿ ಅವರ 13ನೇ ಸಂಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

‘ಭಕ್ತರು ನೀಡುವ ದೇಣಿಗೆ ಸಮಾಜದ ಕೆಲಸಕ್ಕೆ ಬಳಸಿಕೊಂಡು, ತಮ್ಮ ಕಾಯಕದಿಂದ ಬಂದ ಹಣದಿಂದ ಬದುಕುತ್ತಿದ್ದ ಸದ್ಯೋಜಾತ ಸ್ವಾಮೀಜಿ ಅವರ ಚಿಂತನೆಗಳು ಚರ್ಚೆಯಾಗಬೇಕು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು. ಭಕ್ತರಿಂದ ಧನಸಹಾಯ ಮಾಡಿಸುತ್ತಿದ್ದರು. ಅಂಥ ಸಹಾಯ ಪಡೆದವರಲ್ಲಿ ನಾನೂ ಒಬ್ಬ’ ಎಂದು ನೆನಪಿಸಿಕೊಂಡರು.

ಶಿಕ್ಷಣದ ಮೇಲೆ ಅಪಾರ ಪ್ರೀತಿ ಇತ್ತು. ಹಾಗಾಗಿ ಅವರ ಹೆಸರಿನಲ್ಲಿ ದಾವಣಗೆರೆ ನಗರದಲ್ಲಿ ವೀರಶೈವ ಬಡ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ನಿರ್ಮಾಣ ಮಾಡಬೇಕು. ಸಮಾಜದವರು ಈ ವಿಚಾರದಲ್ಲಿ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿಕೊಂಡರು.

‘ಸದಾ ಕಾಲ ಭಕ್ತರ ಶ್ರೇಯಸ್ಸು ಬಯಸು, ಉಪನ್ಯಾಸಕ ವೃತ್ತಿಯನ್ನು ಬಿಡಬೇಡ ಎಂದು ನನಗೆ ಸ್ವಾಮೀಜಿ ಆಗಾಗ ಸಲಹೆ ಕೊಡುತ್ತಿದ್ದರು. ದಾವಣಗೆರೆಗೆ ಶಿವಾಚಾರ್ಯರು ಬಂದರೆ ಅವರನ್ನು ಮಠಕ್ಕೆ ಕರೆದುಕೊಂಡು ಬಂದು ಸ್ವತಃ ಅಡುಗೆ ಮಾಡಿ ಸತ್ಕರಿಸುತ್ತಿದ್ದರು. ಅವರ ವಿಶಾಲ ಮನೋಭಾವ ಎಲ್ಲರೂ ಬೆಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಉದ್ಯಮಿ ಬಿ.ಸಿ. ಉಮಾಪತಿ ಮಾತನಾಡಿ, ‘ಸದ್ಯೋಜಾತ ಶ್ರೀಗಳು ನಮ್ಮೊಡನೆ ದೈಹಿಕವಾಗಿ ಇಲ್ಲದೇ ಇದ್ದರೂ ನಮ್ಮೆಲ್ಲರ ಆತ್ಮದಲ್ಲಿದ್ದಾರೆ. ಅವರ ಕೆಲಸ ನಮಗೆಲ್ಲ ಆದರ್ಶ’ ಎಂದರು.

‘ಅವರು ಪ್ರಾಂಶುಪಾಲರಾಗಿ ಕಾಯಕ ಮಾಡುತ್ತಿದ್ದರು. ಹಣದ ಬಗ್ಗೆ ಆಸಕ್ತಿ ಇರಲಿಲ್ಲ. ಆದರೆ, ವ್ಯವಹಾರ ಪಾರದರ್ಶಕವಾಗಿತ್ತು’ ಎಂದು ಒಡನಾಟ ಹಂಚಿಕೊಂಡರು.

ವಿಧಾನ ಪರಿಷತ್‌ ಮಾಜಿ ಸಚೇತಕ ಡಾ.ಎ.ಎಚ್. ಶಿವಯೋಗಿ ಸ್ವಾಮಿ, ‘ವಿಶ್ವ ಹಿಂದೂ ಪರಿಷತ್‍ನ ಗೌರವಾಧ್ಯಕ್ಷರಾಗಿ ಕೆಲಸ ಮಾಡುವ ಮೂಲಕ ಶ್ರೀಗಳು ಹಿಂದೂ ಸಮಾಜದ ಪ್ರಗತಿಗೆ ಶ್ರಮಿಸಿದ್ದಾರೆ. ಮುಂದಿನ ಪೀಳಿಗೆಗೆ ಸಂಸ್ಕೃತಿ, ಸಂಸ್ಕಾರದ ಅರಿವು ಮೂಡಿಸಬೇಕು ಎಂಬ ಹಿನ್ನೆಲೆಯಲ್ಲಿ ಅವರು ಮಾಡುತ್ತಿದ್ದ ಕಾರ್ಯಗಳು ಮರೆಯುವಂತಿಲ್ಲ’ ಎಂದು ಹೇಳಿದರು.

ವಿಜಯ ಹಿರೇಮಠ ಪ್ರಾರ್ಥಿಸಿದರು. ತ್ರಿಭುವಾನಂದ ಸ್ವಾಮಿ ಸ್ವಾಗತಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು