ಮಂಗಳವಾರ, ಜೂನ್ 28, 2022
23 °C
ನಗರದ ಎರಡು ಈಜುಕೊಳಗಳಲ್ಲಿ ನಡೆಯುತ್ತಿದೆ ಅಭಿವೃದ್ಧಿ ಕಾಮಗಾರಿ

ಹೆಸರಿಗಷ್ಟೇ ಈಜುಕೊಳ: ತೆರೆದಿದ್ದಕ್ಕಿಂತ ಮುಚ್ಚಿದ್ದೇ ಹೆಚ್ಚು

ಚಂದ್ರಶೇಖರ ಆರ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ದಾವಣಗೆರೆ ನಗರದಲ್ಲಿ ಎರಡು ಈಜುಕೊಳ ಇದ್ದರೂ ಕ್ರೀಡಾಪಟುಗಳು, ಸಾರ್ವಜನಿಕರ ಉಪಯೋಗಕ್ಕೆ ಬಾರದಾಗಿದೆ. 

ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಈಜುಕೊಳ ಇದ್ದರೂ ತಾಲ್ಲೂಕು ಕೇಂದ್ರ ಹರಿಹರಕ್ಕೆ ಹೋಗವ ಅನಿವಾರ್ಯ ಇಲ್ಲಿನ ಈಜುಪಟುಗಳದ್ದು. 

ಪದೇಪದೇ ಈಜುಕೊಳವನ್ನು ಮುಚ್ಚುವುದು, ಕಾಮಗಾರಿಗಾಗಿ ಬಂದ್‌ ಮಾಡುವ ಕಾರಣ ಅಭ್ಯಾಸಕ್ಕೆ ಕ್ರೀಡಾಪಟುಗಳು, ವಿದ್ಯಾರ್ಥಿಗಳು ಅಭ್ಯಾಸ ಮಾಡಲು ಹರಿಹರ ಇಲ್ಲವೇ ದೂರದೂರಿಗೆ ಹೋಗುವ ಪರಿಸ್ಥಿತಿ ಇದೆ.

ನಗರದ ಎಂ.ಸಿ.ಸಿ ‘ಬಿ’ ಬ್ಲಾಕ್‌ ಹಾಗೂ ದೇವರಾಜ ಅರಸ್‌ ಬಡಾವಣೆಯಲ್ಲಿರುವ ಈಜುಕೊಳಗಳು ತೆರೆದಿದ್ದಕ್ಕಿಂತ ಮುಚ್ಚಿದ್ದೇ ಹೆಚ್ಚು ಎನ್ನುವುದು ಸ್ಥಳೀಯರು, ಕ್ರೀಡಾಪಟುಗಳ ಅಸಮಾಧಾನ. ನವೀಕರಣ ಕಾಮಗಾರಿಯ ನೆಪವೊಡ್ಡಿ ಈಜುಕೊಳವನ್ನು ಮುಚ್ಚಲಾಗುತ್ತದೆ. ಆದರೆ ವರ್ಷಗಟ್ಟಲೇ ಕಾಮಗಾರಿ ನಡೆಯುವುದಿಲ್ಲ. ಮತ್ತೆ ಜನಪ್ರತಿನಿಧಿಗಳು, ಅಧಿಕಾರಿಗಳ ಮೇಲೆ ಒತ್ತಡ ತಂದು ತೆರೆಯಬೇಕಾಗುತ್ತದೆ. ಎರಡು ತಿಂಗಳು ಕಾರ್ಯನಿರ್ವಹಿಸಿದರೆ ಮತ್ತೆ ಮುಚ್ಚುತ್ತದೆ. ಹಲವು ವರ್ಷಗಳಿಂದ ಇದೇ ಸ್ಥಿತಿ ಎಂದು ಬೇಸರಿಸುತ್ತಾರೆ ಕ್ರೀಡಾಪಟುಗಳು.

ನಗರದ ಎಂ.ಸಿ.ಸಿ ‘ಬಿ’ ಬ್ಲಾಕ್‌ನ ಈಜುಕೊಳ ಮಹಾನಗರ ಪಾಲಿಕೆಯ ಆಡಳಿತಕ್ಕೆ ಒಳಪಟ್ಟಿದೆ. ದೇವರಾಜ ಅರಸ್‌ ಬಡಾವಣೆಯಲ್ಲಿರುವ ಈಜುಕೊಳದ ನಿರ್ವಹಣೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯದ್ದು. ಆದರೆ ಬೇರೆ ಬೇರೆ ಇಲಾಖೆ, ಸ್ಥಳೀಯ ಸಂಸ್ಥೆಗೆ ಒಳಪಟ್ಟರೂ ಎರಡೂ ಈಜುಕೊಳಗಳು ಮಾತ್ರ ತೆರೆಯುವುದು ಅಪರೂಪ.

ನಗರದ ಹಲವು ಈಜುಪಟುಗಳು ಅಂತರರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಆದರೆ ಅವರು ಅಭ್ಯಾಸ ಮಾಡಲು ದೂರದ ಊರಿಗೆ ಹೋಗಬೇಕಾದ ಪರಿಸ್ಥಿತಿ ಇರುವುದು ವಿಪರ್ಯಾಸ.

ನವೀಕರಣ ಕಾಮಗಾರಿ: ದೇವರಾಜ ಅರಸ್‌ ಬಡಾವಣೆಯಲ್ಲಿರುವ ಈಜುಕೊಳ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರಲಿಲ್ಲ. ಈಜುಕೊಳ ಚಿಕ್ಕದಾಗಿದ್ದ ಕಾರಣ ನವೀಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. 

ಪಾಲಿಕೆ ಆಡಳಿತಕ್ಕೆ ಒಳಪಟ್ಟ ಎಂ.ಸಿ.ಸಿ ‘ಬಿ’ ಬ್ಲಾಕ್‌ನ ಈಜುಕೊಳವನ್ನೂ ನವೀಕರಣ ಕಾಮಗಾರಿಗಾಗಿ ಸದ್ಯ ಮುಚ್ಚಲಾಗಿದೆ. ಶೀಘ್ರ ಕಾಮಗಾರಿ ಕೈಗೊಳ್ಳಲಾಗುವುದು ಎಂಬುದು ಅಧಿಕಾರಿಗಳ ಮಾತು.

ಜಿಲ್ಲಾ ಕೇಂದ್ರ ದಾವಣಗೆಯ ಕ್ರೀಡಾಪಟುಗಳು, ವಿದ್ಯಾರ್ಥಿಗಳು ಅಭ್ಯಾಸಕ್ಕಾಗಿ ಹರಿಹರ ಇಲ್ಲವೇ ಪಕ್ಕದ ಜಿಲ್ಲೆಗಳಿಗೆ ಹೋಗಬೇಕಾಗಿರುವುದು ವ್ಯವಸ್ಥೆಯ ದುರಂತ, ಈಜುಕೊಳ ಹೆಸರಿಗೆ ಮಾತ್ರ ಇದೆ. ತೆರೆದಿದ್ದಕ್ಕಿಂತ ಮುಚ್ಚಿದ್ದೇ ಹೆಚ್ಚು ಎಂದು ದೂರುತ್ತಾರೆ ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್‌ ಕೆ. ಶೆಟ್ಟಿ.

‘ಈಜುಕೊಳ ಯಾವಾಗಲೂ ಮುಚ್ಚಿರುತ್ತದೆ. ಮೊದಲು ಕ್ರೀಡಾಪಟುಗಳು, ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿದ್ದರು. ಪದೇಪದೇ ಮುಚ್ಚಿರುವ ಕಾರಣ ಈಗ ಯಾರೂ ಬರುತ್ತಿಲ್ಲ. ಮುಚ್ಚಿದ ಮಾಹಿತಿ ಇಲ್ಲದವರು ಬಂದು ಕೇಳಿಕೊಂಡು ಹಾಗೆಯೇ ಹೋಗುತ್ತಾರೆ’ ಎಂದರು ಸ್ಥಳೀಯರಾದ ರಾಜಪ್ಪ.

ಅಭಿವೃದ್ಧಿ ಹೆಸರಲ್ಲಿ ಹಾಳಾದ ಈಜುಕೊಳ

‘ಎರಡೂ ಈಜುಕೊಳಗಳು ತೆರೆಯುವ ಲಕ್ಷಣಗಳೇ ಕಾಣುತ್ತಿಲ್ಲ. ಮಹಾನಗರ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಈಜುಕೊಳವನ್ನು ಉಪಯೋಗಕ್ಕೆ ಬರದಂತೆ ಮಾಡಿದ್ದಾರೆ. ಪಾಲಿಕೆಯಲ್ಲಿ ಕಾಂಗ್ರೆಸ್‌ ಆಡಳಿತ ಇದ್ದಾಗ ಹಲವು ಬಾರಿ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ನೇತೃತ್ವದಲ್ಲಿ ಈಜುಕೊಳವನ್ನು ತೆರೆದು ಜನರಿಗೆ ಅನುಕೂಲ ಕಲ್ಪಿಸಿದ್ದೆವು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮತ್ತೆ ಮುಚ್ಚಿಸಿದೆ’ ಎಂದು ಆರೋಪಿಸಿದರು ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್‌ ಕೆ. ಶೆಟ್ಟಿ.

‘ನೆಪಕ್ಕೆ ಮಾತ್ರ ನವೀಕರಣ ಕಾಮಗಾರಿ ಎನ್ನುತ್ತಾರೆ. ಹಣ ಮಾಡಲು ಕಾಮಗಾರಿ ಕೈಗೊಳ್ಳುತ್ತಿದ್ದಾರೆ. ನನ್ನ ಮಗ ತನ್ಮಯ್ ಶೆಟ್ಟಿ ರಾಷ್ಟ್ರೀಯ ಈಜುಪಟು. ಅವನೂ ಈಗ ಅಭ್ಯಾಸಕ್ಕೆ ಪ್ರತಿದಿನ ಹರಿಹರಕ್ಕೆ ಹೋಗುತ್ತಿದ್ದಾನೆ’ ಎಂದರು ಅವರು.

‘ಒಂದು ಸಲ ಮುಚ್ಚಿದರೆ ನೀರು ಕಟ್ಟಿಕೊಳ್ಳುತ್ತದೆ. ರಾಸಾಯನಿಕ ಬಳಸಿ ಸ್ವಚ್ಛ ಮಾಡಬೇಕಾಗುತ್ತದೆ. ಉತ್ತಮವಾಗಿದ್ದ ಈಜುಕೊಳವನ್ನು ಅಭಿವೃದ್ಧಿ ಹೆಸರಲ್ಲಿ ಹಾಳು ಮಾಡಲಾಗಿದೆ. ಶೀಘ್ರ ಈಜುಕೊಳವನ್ನು ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಡಬೇಕು’ ಎಂದು ಅವರು ಒತ್ತಾಯಿಸಿದರು.

ಮುಂದಿನ ತಿಂಗಳಲ್ಲಿ ಕಾಮಗಾರಿ ಪೂರ್ಣ

‘ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ದೇವರಾಜ ಅರಸ್ ಬಡಾವಣೆಯ ಈಜುಕೊಳದ ನವೀಕರಣ ಕಾಮಗಾರಿ ಕೈಗೊಳ್ಳಲಾಗುತ್ತದೆ. ₹ 5 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಟೈಲ್ಸ್‌ ಹಾಕುವ ಕಾಮಗಾರಿ ನಡೆಯುತ್ತಿದೆ. ಜನರು ಕುಳಿತುಕೊಳ್ಳುವ ಗ್ಯಾಲರಿಗೆ ಸೋಲಾರ್‌ ಅಳವಡಿಸಲಾಗುತ್ತಿದೆ. ಅಲ್ಲಿ ಉತ್ಪಾದನೆ ಆಗುವ ವಿದ್ಯುತ್‌ ಅನ್ನು ಅಲ್ಲೇ ಬಳಸುವ ಯೋಜನೆ ಇದೆ. 2 ಅಡಿ ಆಳದ ಸಣ್ಣ ಈಜುಕೊಳ ಇದ್ದು, ಪುಟ್ಟ ಮಕ್ಕಳಿಗಾಗಿ ಮೀಸಲಿಡಲಾಗಿತ್ತು. 3 ಅಡಿಯಿಂದ 18 ಅಡಿಯವರೆಗೆ ಆಳ ಇರುವ 50 ಅಡಿ ಉದ್ದದ 25 ಅಡಿ ಅಗಲದ ಈಜುಕೊಳದ ನವೀಕರಣ ನಡೆಯುತ್ತಿದೆ. ಮುಂದಿನ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ತಿಳಿಸಿದರು.

ಟೆಂಡರ್‌ಗೆ ಪೈಪೋಟಿಯಿಂದ ನಲುಗಿದ ಈಜುಕೊಳ

ರಾಜ್ಯದಲ್ಲಿ ಈಜಿನಲ್ಲಿ ದಾವಣಗೆರೆ 3ನೇ ಸ್ಥಾನದಲ್ಲಿದೆ. ಆದರೆ ಇಲ್ಲಿಯೇ ಸಮರ್ಪಕ ಸೌಲಭ್ಯ ಇಲ್ಲ. ದಾವಣಗೆರೆಯಲ್ಲಿನ ಈಜುಕೊಳದ
ಅಸಮರ್ಪಕ ನಿರ್ವಹಣೆ ಕಾರಣ ಹಲವು ಈಜುಪಟುಗಳು ಈಜಿನ ಸಹವಾಸವೇ ಬೇಡ ಎಂದು ಬೇರೆಡೆ ಮುಖ ಮಾಡಿದ್ದಾರೆ. ಬೇರೆ ಕ್ರೀಡೆಯನ್ನು ಈ ಮೈದಾನ ಇಲ್ಲದಿದ್ದರೆ ನಗರದ ಇನ್ನೊಂದು ಮೈದಾನಕ್ಕೆ ಹೋಗಿ ಆಡಬಹುದು. ಆದರೆ ಈಜು ಹಾಗಲ್ಲ. ಈಜುಕೊಳ ಬೇಕೇ ಬೇಕು. ಈಜು ಅಭ್ಯಾಸ ಮಾಡುತ್ತಿದ್ದವರು ಈಗ ಓದೂ ಇಲ್ಲ. ಇತ್ತ ಕ್ರೀಡೆಯೂ ಇಲ್ಲದಂತಾಗಿದೆ. ಹಿಂದೆ ಫಿಜಿಯೋಥೆರಪಿ ಬೇಕಾದವರು, ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ನಗರಸಭೆ ಇದ್ದಾಗ ಈಜುಕೊಳ ಆರಂಭಿಸಲಾಗಿತ್ತು. ಆದರೆ ಈಗ ಅದು ವಾಣಿಜ್ಯಾತ್ಮಕವಾಗಿದೆ. ಕಾಮಗಾರಿಗೆ ಟೆಂಡರ್‌ ಪಡೆಯುವುದಕ್ಕಾಗಿ ನಡೆಯುತ್ತಿರುವ ಪೈಪೋಟಿಯಿಂದ ಈಜುಕೊಳವನ್ನು ಮುಚ್ಚಲಾಗಿದೆ ಎಂದು ಆರೋಪಿಸಿಸುತ್ತಾರೆ ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್.

‘ಈಜುಕೊಳ ವರ್ಷಗಳಿಂದ ಮುಚ್ಚಿರುವ ಕಾರಣ ನನ್ನ ಪುತ್ರಿ, ಅಂತರರಾಷ್ಟ್ರೀಯ ಈಜುಪಟು ರೇವತಿ ಬೇರೆ ಕಡೆ ಅಭ್ಯಾಸಕ್ಕೆ ಹೋಗುತ್ತಿದ್ದಾಳೆ. ಎಷ್ಟೋ ಜನ ಕೋಚ್‌ಗಳು ಬೇರೆ ಉದ್ಯೋಗ ಕಂಡುಕೊಂಡಿದ್ದಾರೆ. ಹಲವು ಈಜುಪಟುಗಳು ಬೆಂಗಳೂರಿಗೆ ಹೋಗಿ ಈಜು ಅಭ್ಯಾಸ ಮಾಡಲು ಆಗದೆ ಅದನ್ನೇ ಬಿಟ್ಟಿದ್ದಾರೆ. ಶೀಘ್ರ ಕಾಮಗಾರಿ ಮುಗಿಸಿ ಈಜುಕೊಳ ಆರಂಭಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ಬದ್ಧತೆ ತೋರಬೇಕು’ ಎಂದು ಒತ್ತಾಯಿಸುತ್ತಾರೆ ಅವರು.

ಈಜುಕೊಳವನ್ನು ಯಾರಾದರೂ ನಿರ್ವಹಣೆ ಮಾಡಲಿ. ನಿರಂತರವಾಗಿ ನಡೆಯಬೇಕು. ಪದೇಪದೇ ಮುಚ್ಚಿದರೆ ಅಭ್ಯಾಸಕ್ಕೆ ತೊಂದರೆಯಾಗುತ್ತದೆ. ಇದನ್ನು ವಾಣಿಜ್ಯ ದೃಷ್ಟಿಯಿಂದ ನೋಡದೆ ಕ್ರೀಡಾ ಮನೋಭಾವ ದಿಂದ ನೋಡಬೇಕು. ಈಗ ಶಾಲಾ, ಕಾಲೇಜುಗಳು ಆರಂಭವಾಗಿರುವುದರಿಂದ ಈಜು ಸ್ಪರ್ಧೆಗೆ ಅಭ್ಯಾಸ ಮಾಡಲು ಇದು ಸೂಕ್ತ ಸಮಯ. ಶೀಘ್ರ ಈಜುಕೊಳವನ್ನು ತೆರೆಯಬೇಕು.

– ರೇವತಿ ನಾಯಕ ಎಂ., ಅಂತರರಾಷ್ಟ್ರೀಯ ಈಜುಪಟು

ಈಜುಕೊಳದಲ್ಲಿ ಕೆಲ ದುರಸ್ತಿ ಕಾಮಗಾರಿ ಕೈಗೊಳ್ಳುವ ಸಲುವಾಗಿ ಮುಚ್ಚಲಾಗಿದೆ. ನೀರು ಇಂಗುತ್ತಿದೆ. ಹೀಗಾಗಿ ದುರಸ್ತಿ ಕಾಮಗಾರಿ ನಡೆಸಲು ಯೋಜಿಸಲಾಗಿದೆ. ಕಾಮಗಾರಿಗೆ ಶೀಘ್ರ ಟೆಂಡರ್‌ ಕರೆಯಲಾಗುವುದು. ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು.

–ವಿಶ್ವನಾಥ ಮುದಜ್ಜಿ, ಮಹಾನಗರ ಪಾಲಿಕೆ ಆಯುಕ್ತ

ಕಾಮಗಾರಿಗಾಗಿ ಪಾಲಿಕೆಯ ಈಜುಕೊಳ ಮುಚ್ಚಲಾಗಿದೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಲಾಗುವುದು.

-ಜಯಮ್ಮ ಗೋಪಿನಾಯ್ಕ್, ಮೇಯರ್‌

ದೇವರಾಜ ಅರಸ್ ಬಡಾವಣೆಯ ಈಜುಕೊಳದ ನವೀಕರಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಕೈಗೊಳ್ಳಲು ಸಮಯ ಬೇಕು. ಹಾಗಾಗಿ ಅದನ್ನು ಮುಚ್ಚಲಾಗಿದೆ.

–ಸುಚೇತ, ಸಹಾಯಕ ನಿರ್ದೇಶಕರು, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು