ಶುಕ್ರವಾರ, ಫೆಬ್ರವರಿ 21, 2020
29 °C
ದಾವಣಗೆರೆ ವಲಯದ ‘ಪ್ರಜಾವಾಣಿ’ ಕ್ವಿಜ್‌ ಚಾಂಪಿಯನ್‌ಷಿಪ್‌

‘ಪ್ರಜಾವಾಣಿ’ ಕ್ವಿಜ್‌ : ಕೂದಲೆಳೆ ಅಂತರದಲ್ಲಿ ಚಾಂಪಿಯನ್‌ ಆದ ತರಳಬಾಳು ಐಸಿಎಸ್‌ಇ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬರೀ ಎರಡು ಅಂಕಗಳ ಅಂತರದಲ್ಲಿ ತರಳಬಾಳು ಐಸಿಎಸ್‌ಇ ಚಾಂಪಿಯನ್‌ ಆದರೆ, ಎರಡನೇ ಸ್ಥಾನ ಪಡೆದ ಅನುಭವ ಮಂಟಪ ಎಸ್‌ಟಿಜೆ ತಂಡವು, ಮೂರನೇ ಸ್ಥಾನ ಪಡೆದ ಕುಮುಧ್ವತಿ ರೆಸಿಡೆನ್ಸಿಯಲ್‌ ಸ್ಕೂಲ್‌ ತಂಡಕ್ಕಿಂತ ಮೂರು ಅಂಕಗಳಷ್ಟೇ ಮುಂದಿತ್ತು.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗದಿಂದ ‘ದೀಕ್ಷಾ’ ಸಹಯೋಗದಲ್ಲಿ ಸೋಮವಾರ ಕುವೆಂಪು ಕನ್ನಡ ಭವನದಲ್ಲಿ ನಡೆದ ‘ಪ್ರಜಾವಾಣಿ’ ಕ್ವಿಜ್‌ ಚಾಂಪಿಯನ್‌ಶಿಪ್‌ನ ರೋಚಕತೆ ಇದು.

ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಅಲ್ಲದೇ ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಯ ತಂಡಗಳೂ ಭಾಗವಹಿಸಿದ್ದವು. ಮುನ್ನೂರಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದ ತಂಡಗಳಿಗೆ ಪ್ರಾಥಮಿಕ ಹಂತದ ರಸಪ್ರಶ್ನೆ(ಕ್ವಿಜ್‌) ನಡೆಸಲಾಯಿತು. ‘ಕ್ಯೂರಿಯೊಸಿಟಿ ಸೊಲ್ಯುಷನ್ಸ್‌’ ಸಂಸ್ಥೆಯ ಕ್ವಿಜ್‌ ಮಾಸ್ಟರ್‌ ಮೇಘವಿ ಗೌಡ ಕ್ವಿಜ್‌ ನಡೆಸಿಕೊಟ್ಟರು. ದರ್ಶನ್‌ ಅವರಿಗೆ ಸಹಕರಿಸಿದರು. ಪ್ರಾಥಮಿಕ ಹಂತದಲ್ಲಿ ಇ‍ಪ್ಪತ್ತು ಪ್ರಶ್ನೆಗಳಿಗೆ ಸ್ಪರ್ಧಿಗಳು ಉತ್ತರ ಬರೆಯಬೇಕಿತ್ತು. ಅದರಲ್ಲಿ 19 ‍ಪ್ರಶ್ನೆಗಳಿಗೆ ತಲಾ ಒಂದು ಅಂಕ ಹಾಗೂ ಒಂದು ಪ್ರಶ್ನೆಗೆ 2 ಅಂಕ ನೀಡಲಾಗಿತ್ತು.

ಇದರಲ್ಲಿ ಚಿತ್ರದುರ್ಗ ಎಂ.ಕೆ. ಹಟ್ಟಿ ಎಸ್‌ಜೆಎಂ ರೆಸಿಡೆನ್ಶಿಯಲ್‌ ಸ್ಕೂಲ್‌ನ ಸಾಗರ್‌ ಮತ್ತು ಅಪೂರ್ವ, ಕುಮಧ್ವತಿ ರೆಸಿಡೆನ್ಶಿಯಲ್‌ ಸ್ಕೂಲ್‌ನ ಪವನ್‌ ಮತ್ತು ವಿಕನಸ್‌, ತರಳಬಾಳು ಐಸಿಎಸ್‌ಇಯ ಶಶಾಂಕ್‌ ಮತ್ತು ಶ್ರೇಯಸ್‌, ಅನುಭವ ಮಂಟಪದ ಎಸ್‌ಟಿಜೆ ಪ್ರೌಢಶಾಲೆಯ ಪ್ರಜ್ವಲ್‌ ಮತ್ತು ವಿಷ್ಣುತೀರ್ಥ, ಅದೇ ಶಾಲೆಯ ಅಣ್ಣಪ್ಪ ಮತ್ತು ಸುಮನ್‌, ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆಯ ವಿಕಾಸ್‌ ಮತ್ತು ತರುಣ್‌ ತಂಡಗಳು ಕ್ರಮವಾಗಿ ಮೊದಲ ಆರು ಸ್ಥಾನಗಳನ್ನು ಗಳಿಸುವ ಮೂಲಕ ಅಂತಿಮ ಹಂತಕ್ಕೆ ತಲುಪಿದವು.

ಐದು ಸುತ್ತುಗಳು: ಪ್ರಶ್ನೋತ್ತರ ಸುತ್ತು ಮತ್ತು ಸರಿ ತಪ್ಪು ಸುತ್ತುಗಳಲ್ಲಿ ಸರಿ ಉತ್ತರಕ್ಕೆ 10 ಅಂಕಗಳು ಮತ್ತು ಮುಂದಿನ ತಂಡಕ್ಕೆ ಪಾಸ್‌ ಆದ ಬಳಿಕ ಬರುವ ಉತ್ತರಕ್ಕೆ 5 ಅಂಕಗಳನ್ನು ನೀಡಲಾಗಿತ್ತು. ತಪ್ಪು ಉತ್ತರಕ್ಕೆ ಯಾವುದೇ ಮೈನಸ್‌ ಅಂಕಗಳು ಇರಲಿಲ್ಲ. ಈ ಎರಡು ಸುತ್ತುಗಳು ಮುಗಿದಾಗ ಶಶಾಂಕ್‌–ಶ್ರೇಯಸ್‌ ತಂಡ 20 ಅಂಕ ಗಳಿಸಿದ್ದರೆ, ನಾಲ್ಕು ತಂಡಗಳು ತಲಾ 10 ಅಂಕ ಗಳಿಸಿದ್ದವು. ಸಾಗರ್‌– ಅಪೂರ್ವ ತಂಡಕ್ಕೆ ಅಂಕ ದೊರೆಯಲಿಲ್ಲ.

ಮೂರನೇ ಸುತ್ತಿನಿಂದ ಬರ್ಸರ್‌ ಒತ್ತಿ ಉತ್ತರ ನೀಡುವುದು ಆರಂಭಗೊಂಡಿತು. ಪ್ರತಿ ಸರಿ ಉತ್ತರಕ್ಕೆ 15 ಅಂಕಗಳು, ತಪ್ಪು ಉತ್ತರಕ್ಕೆ ಮೈನಸ್‌ 7 ಅಂಕಗಳು, ಮುಂದಿನ ತಂಡಕ್ಕೆ ಪಾಸ್‌ ಆದ ಸರಿ ಉತ್ತರಕ್ಕೆ 10 ಅಂಕಗಳು ತಪ್ಪು ಉತ್ತರಕ್ಕೆ 5 ಅಂಕಗಳು ನಿಗದಿಯಾಗಿದ್ದವು. ಸಂಬಂಧ, ಧ್ವನಿದೃಶ್ಯ ಹಾಗೂ ರ‍್ಯಾಪಿಡ್‌ ಫೈರ್‌ ಕೊನೆಯ ಈ ಮೂರು ಸುತ್ತುಗಳು ಮುಗಿದಾಗ ಶಶಾಂಕ್‌ – ಶ್ರೇಯಸ್‌ ತಂಡ 65 ಅಂಕ ಗಳಿಸಿ ಚಾಂಪಿಯನ್‌ಗಳಾದರೆ, ಪ್ರಜ್ವಲ್‌ ಮತ್ತು ವಿಶ್ವತೀರ್ಥ 63 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನಿಗಳಾದರು. ಒಂದು ತಪ್ಪು ಉತ್ತರ ನೀಡಿ 7 ಅಂಕ ಕಳೆದುಕೊಂಡಿದ್ದು ಈ ತಂಡಕ್ಕೆ ದುಬಾರಿಯಾಯಿತು. ಪವನ್‌ ಮತ್ತು ವಿಕನಸ್‌ ತಂಡವು 60 ಅಂಕ ಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಉದ್ಘಾಟನೆಗೆ ಆಯ್ಕೆಯಾದ 5ನೇ ತರಗತಿಯ ಪೋರಿ: ಈ ಕಾರ್ಯಕ್ರಮವನ್ನು ಉದ್ಘಾಟಿಸಲು ವಿದ್ಯಾರ್ಥಿಯನ್ನು ಆಯ್ಕೆ ಮಾಡಲು ಕೇಳಿದ ಪ್ರಶ್ನೆಗೆ ಮಲೇಬೆನ್ನೂರು ಆಶ್ರಯ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಮೆಹ್ತಾಜಿ ಸರಿ ಉತ್ತರ ನೀಡುವ ಮೂಲಕ ಅಚ್ಚರಿ ಮೂಡಿಸಿದಳು. ಅವಳ ಜತೆಗೆ ಅವಳ ತಂಡದ ಪರಶುರಾಮ್‌ ಕೂಡ ಬಂದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಜಾವಾಣಿ ಬ್ಯೂರೋ ಮುಖ್ಯಸ್ಥ ವಿಶಾಖ ಎನ್‌, ಪ್ರಸರಣ ವಿಭಾಗದ ವ್ಯವಸ್ಥಾಪಕ ಎಸ್‌. ಪ್ರಕಾಶ್‌, ಜಾಹೀರಾತು ವಿಭಾಗದ ಹಿರಿಯ ವ್ಯವಸ್ಥಾಪಕ ಪ್ರಮೋದ್‌ ಕೆ. ಭಾಗವತ್‌ ಇದ್ದರು.

ಪ್ರೇಕ್ಷಕ ವಿದ್ಯಾರ್ಥಿಗಳ ಜಾಣ್ಮೆ: ಅಂತಿಮ ಹಂತಕ್ಕೆ ಆಯ್ಕೆಯಾದ ಆರು ತಂಡಗಳಿಗೆ ಉತ್ತರ ನೀಡಲು ಸಾಧ್ಯವಾಗದ ಪ್ರಶ್ನೆಗಳಿಗೆ ವೀಕ್ಷಕರಾಗಿ ಕುಳಿತಿದ್ದ ವಿದ್ಯಾರ್ಥಿಗಳು ಉತ್ತರ ನೀಡುವ ಮೂಲಕ ರಂಜಿಸಿದರು. ಇದಕ್ಕಿಂತ ಮೊದಲು ಪ್ರಾಥಮಿಕ ಹಂತದ ಉತ್ತರ ಪರೀಕ್ಷೆಗಳ ಮೌಲ್ಯಮಾಪನ ಒಂದು ಕಡೆ ನಡೆದರೆ, ಇತ್ತ ವೇದಿಕೆಯಲ್ಲಿ ಅದೇ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿ ಸರಿ ಉತ್ತರ ನೀಡಿದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ದೊಡ್ಡ ಕನಸು ಕಾಣಿರಿ: ಜಿಲ್ಲಾಧಿಕಾರಿ

ಸಣ್ಣ ಕನಸು ಕಾಣುವುದು ಅಪರಾಧ. ದೊಡ್ಡ ಕನಸನ್ನು ಕಾಣಬೇಕು. ಮುಂದಿನ ಹತ್ತು ವರ್ಷಗಳ ನಂತರ ನೀವು ಏನಾಗಿವಿರೋ ಅದು ಈಗ ನೀವು ಕಾಣುವ ಕನಸು, ಸಾಗುವ ದಾರಿಯಲ್ಲಿದೆ. ಇದು ಒಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣವಾಗುವ ಕಾಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗದಿಂದ ‘ದೀಕ್ಷಾ’ ಸಹಯೋಗದಲ್ಲಿ ಆದಿತ್ಯ ಬಿರ್ಲಾ–ಗ್ರಾಸಿಂ, ವೇದಾಂತ–ಸೀಸಾ ಗೋವಾ ಐರನ್‌ ಓರ್‌ ಕಂಪನಿ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಹ ಪ್ರಾಯೋಜಕತ್ವದಲ್ಲಿ ನಡೆದ ಈ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌’ನ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಮುಂದೆ ಏನಾಗಬೇಕು ಎಂದು ಈ ಮಕ್ಕಳಲ್ಲಿ ಕೇಳಿದಾಗ ಕೆಲವರು ಸಿಎ, ವಿಜ್ಞಾನಿಗಳಾಗಬೇಕು ಎಂಬ ಸ್ಪಷ್ಟ ಉತ್ತರ ನೀಡಿದ್ದಾರೆ. ಇನ್ನು ಕೆಲವರು ಹೆತ್ತವರು ವೈದ್ಯರೋ, ಎಂಜಿನಿಯರೋ ಆಗಿರುವುದರಿಂದ ಮಕ್ಕಳೂ ಅದೇ ಆಗಲು ಬಯಸಿದ್ದಾರೆ. ಬರೀ ಸ್ವಾರ್ಥ ಇಟ್ಟುಕೊಳ್ಳದೇ ಸಮಾಜಕ್ಕಾಗಿ, ದೇಶಕ್ಕಾಗಿ ಕೆಲಸ ಮಾಡಬೇಕು. ಸಮಾಜದಿಂದ ಪಡೆದಿರುವುದನ್ನು ಮತ್ತೆ ಸಮಾಜಕ್ಕೆ ನೀಡಬೇಕು ಎಂದು ಸಲಹೆ ನೀಡಿದರು.

ಯಾವುದೇ ಗುರಿಯನ್ನು ಬೆನ್ನತ್ತುವಾಗ ಸಿಗುವ ಸಂತೋಷ, ಗುರಿ ತಲುಪಿದ ಬಳಿಕ ಸಿಗಲಾರದು. ಅದಕ್ಕಾಗಿ ಈಗ ಗುರಿ ಸಾಧಿಸುವ ಸಂತೋಷವನ್ನು ಅನುಭವಿಸಿ ಎಂದು ತಿಳಿಸಿದರು.

ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಕುಮಾರಪಟ್ಟಣಂನ ಗ್ರಾಸಿಂ ಇಂಡಸ್ಟ್ರೀಸ್‌ನ ಸಿಎಸ್‌ಆರ್‌ ರೇಣುಕಮ್ಮ, ದಾವಣಗೆರೆಯ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದ ವಲಯ ಪ್ರಬಂಧಕ ಛಲಪತಿ ರಾವ್‌, ಭೀಮಸಮುದ್ರದ ವೇದಾಂತ ಲಿಮಿಟೆಡ್‌ನ ಚಂದ್ರಕಾಂತ್ ಎಸ್‌. ಪಾಟೀಲ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು