ಭಾನುವಾರ, ಅಕ್ಟೋಬರ್ 25, 2020
27 °C
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧ್ಯಕ್ಷತೆಯಲ್ಲಿ ಏಕಗವಾಕ್ಷಿ ಸಮಿತಿ ಸಭೆ

ಜವಳಿ ಪಾರ್ಕ್‌ನಲ್ಲಿ ಉದ್ದೇಶಿತ ಚಟುವಟಿಕೆ ಇರಲಿ: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ದಾವಣಗೆರೆ ಕರೂರು ಕೈಗಾರಿಕಾ ಪ್ರದೇಶದಲ್ಲಿರುವ ಜವಳಿ ಪಾರ್ಕ್‌ ಅನ್ನು ಉದ್ದೇಶಿತ ಕಾರ್ಯಕ್ಕಾಗಿ ಬಳಸುವ ಸಂಬಂಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಾವಣಗೆರೆ ರೆಡಿಮೇಡ್ ಗಾರ್ಮೆಂಟ್ಸ್ ಅಸೋಸಿಯೇಷನ್‍ನ ಮಂಜುನಾಥ್, ‘ಪ್ರಸ್ತುತ ಟೆಕ್ಸ್‌ಟೈಲ್ಸ್ ಕೈಗಾರಿಕೆ ಘಟಕಗಳಿಗೆ ಹಂಚಿಕೆಯಾಗಿರುವ ಕರೂರು ಕೈಗಾರಿಕಾ ಪ್ರದೇಶದಲ್ಲಿ ಟೆಕ್ಸ್‌ಟೈಲ್ಸ್ ಘಟಕಗಳೊಂದಿಗೆ ಇತರೆ ಕೈಗಾರಿಕೆ ಉತ್ಪಾದನೆ ಚಟುವಟಿಕೆ ಕೈಗೊಳ್ಳಲು ಅವಕಾಶ ಮಾಡಿಕೊಡಬೇಕು’ ಎಂದು ಹೇಳಿದರು.

ದಾವಣಗೆರೆ ಟೆಕ್ಸ್‌ಟೈಲ್ಸ್ ಪಾರ್ಕ್ ಪ್ರೈ.ಲಿ ಮತ್ತು ದಾವಣಗೆರೆ ಗಾರ್ಮೆಂಟ್ಸ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್‌ ಸದಸ್ಯ ಶೇಷಾಚಲ, ‘ರಾಜ್ಯದಲ್ಲಿ ಕೇವಲ ಮೂರು ಜವಳಿ ಪಾರ್ಕ್‍ಗಳಿದ್ದು, ಅದರಲ್ಲಿ ದಾವಣಗೆರೆ ಒಂದು. ಇಲ್ಲಿ ಬೇರೆ ಕೈಗಾರಿಕಾ ಚಟುವಟಿಕೆಗೆ ಅವಕಾಶ ಕೊಡಬಾರದು’ ಎಂದು ಮನವಿ ಮಾಡಿದರು.

ಸದಸ್ಯ ಹಾಲೇಶ್ ಗೌಡ್ರು, ‘ಜಿಲ್ಲೆಯಲ್ಲಿ ಕೃಷಿ ಬಿಟ್ಟರೆ ಜವಳಿ ಕೈಗಾರಿಕೆಯೇ ಆದ್ಯತಾ ವಲಯ. ಜವಳಿ ಪಾರ್ಕ್‌ ಪ್ರದೇಶದಲ್ಲಿ ಜವಳಿ ಕೈಗಾರಿಕಾ ಚಟುವಟಿಕೆ ಮಾತ್ರ ಮುಂದುವರಿಸಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

ಜವಳಿ ಮತ್ತು ಕೈಮಗ್ಗ ಇಲಾಖೆ ಉಪ ನಿರ್ದೇಶಕ ಸುರೇಶ್ ಎನ್. ತಡಕನಹಳ್ಳಿ, ‘ಕರೂರು ಕೈಗಾರಿಕಾ ಪ್ರದೇಶದಲ್ಲಿ 2006 ರಲ್ಲಿ 59 ಎಕರೆ ಜಮೀನನ್ನು ಜವಳಿ ಪಾರ್ಕ್‍ಗೆ ನೀಡಲಾಗಿದ್ದು, 44 ಜವಳಿ ಘಟಕ ಸ್ಥಾಪಿಸಲಾಗಿದೆ. ಈ ಪ್ರದೇಶದಲ್ಲಿ ಇತರೆ ಚಟುವಟಿಕೆಗಿಂತ ಜವಳಿ ಹಬ್ ಆದರೆ ಉತ್ತಮ’ ಎಂದರು.

ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ, ‘ಜವಳಿ ಪಾರ್ಕ್ ಅದೇ ಉದ್ದೇಶಕ್ಕೆ ಬಳಕೆಯಾಗಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಪ‍್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಈ ಬಗ್ಗೆ ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುತ್ತೇನೆ’ ಎಂದರು.

ಜಿಲ್ಲಾ ಕೈಗಾರಿಕಾ ಸಂಸ್ಥೆಯ ಉಪ ನಿರ್ದೇಶಕ ಮಂಜುನಾಥ್, ‘ಜಿಲ್ಲೆಯಲ್ಲಿ 50 ಮತ್ತು ಅದಕ್ಕೂ ಹೆಚ್ಚು ಕಾರ್ಮಿಕರನ್ನು ಒಳಗೊಂಡ ಕೈಗಾರಿಕಾ ಘಟಕಗಳಲ್ಲಿ ಡಾ.ಸರೋಜಿನಿ ಮಹಿಷಿ ವರದಿಯಂತೆ ‘ಸಿ’ ಮತ್ತು ‘ಡಿ’ ದರ್ಜೆಯಲ್ಲಿ ಶೇ 100 ಕನ್ನಡಿಗರಿಗೆ ಉದ್ಯೋಗ ನೀಡಲಾಗಿದೆ’ ಎಂದರು.

ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಯೋಜನೆಯನ್ವಯ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಕಾರ್ಯಕ್ರಮ ಅನುಷ್ಠಾನ ಅಡಿಯಲ್ಲಿ ದಾವಣಗೆರೆ ಜಿಲ್ಲೆಗೆ ‘ಆಗ್ರ್ಯಾನಿಕ್ ಮಿಲ್ಲೆಟ್ಸ್’ ಉತ್ಪನ್ನವನ್ನು ಗುರುತಿಸಲಾಗಿದೆ ಎಂದು ಡಿಸಿ ಹೇಳಿದರು.

ಲೋಕಿಕೆರೆ ಕೈಗಾರಿಕಾ ಮಾಲೀಕರ ಸಂಘದ ಅಧ್ಯಕ್ಷ ಶಂಭುಲಿಂಗಪ್ಪ, ‘ದಾವಣಗೆರೆ ಕೈಗಾರಿಕಾ ವಸಾಹತುವಿನಲ್ಲಿ ಪ್ರಾರಂಭದಿಂದಲೂ ಕೈಗಾರಿಕೆಗಳಿಗೆ ನೀರಿನ ಪೂರೈಕೆ ಆಗುತ್ತಿಲ್ಲ. ಕೈಗಾರಿಕಾ ಘಟಕಗಳಿಗೆ ಟ್ಯಾಂಕರ್ ನೀರಿನ ವ್ಯವಸ್ಥೆ ನಾವೇ ಮಾಡಿಕೊಂಡ ಕಾರಣ ನೀರಿನ ಕಂದಾಯವನ್ನು ಮನ್ನಾ ಮಾಡಬೇಕು’ ಎಂದು ಮನವಿ ಮಾಡಿದರು.

ಮೂಲ ಸೌಕರ್ಯಗಳ ಸಮಸ್ಯೆ ಬಗ್ಗೆ ಕೆಐಎಡಿಬಿ, ಕೆಎಸ್‍ಎಸ್‍ಐಡಿಸಿ ಮತ್ತು ಪಾಲಿಕೆಯವರು ಸಭೆ ನಡೆಸಿ ಬಗೆಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಯಪ್ರಕಾಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಆನಂದ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಗ್ರಾಮೀಣ ಕೈಗಾರಿಕೆಯ ಉಪ ನಿರ್ದೇಶಕ ಮನ್ಸೂರ್, ಕೆ.ಎಸ್.ಎಸ್.ಡಿ.ಸಿ ಸಹಾಯಕ ವ್ಯವಸ್ಥಾಪಕ ರಂಗಸ್ವಾಮಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಶೃತ್ ಡಿ. ಶಾಸ್ತ್ರಿ, ಕೈಗಾರಿಕೋದ್ಯಮಿಗಳು, ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.