ಸೋಮವಾರ, ಸೆಪ್ಟೆಂಬರ್ 27, 2021
22 °C
ದೊಡ್ಡೋಬನಹಳ್ಳಿ: ‘ಪರಿಸರ ಸ್ನೇಹಿ’ಯಾದ ಶಾಲಾ ವಾತಾವರಣ

‘ಸ್ಮಾರ್ಟ್‌ ಶಿಕ್ಷಕ’ ನಾಗರಾಜ್‌ಗೆ ರಾಷ್ಟ್ರ ಪ್ರಶಸ್ತಿಯ ಗರಿ

ನಾಗರಾಜ ಸಿರಿಗೆರೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್ ದುರಿತ ಕಾಲದಲ್ಲಿ ಸಾಂಪ್ರದಾಯಿಕ ಶಿಕ್ಷಣ ಕ್ಷೇತ್ರಕ್ಕೆ ಹಿಂದೆಂದೂ ಕಾಣದಂತಹ ದುಃಸ್ಥಿತಿ ಒದಗಿದೆ. ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಪರಿಕ್ರಮಕ್ಕೆ ಪರದಾಡುತ್ತಿದ್ದಾರೆ. ಶಿಕ್ಷಕರು ಬೋಧನೆಗೆ ಪರ್ಯಾಯ ವ್ಯವಸ್ಥೆ ಹುಡುಕಿಕೊಳ್ಳಬೇಕಾದ ಅನಿವಾರ್ಯತೆ ಒದಗಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಕ ಸಿ.ಎಂ. ನಾಗರಾಜ್ ಕಂಡುಕೊಂಡ ಮಾರ್ಗ ನಿಜಕ್ಕೂ ಬೆರಗು ಮೂಡಿಸುವಂತಹದ್ದು.

ಇವರು ತಂತ್ರಜ್ಞಾನದ ನೆರವಿನಿಂದ ಗ್ರಾಮೀಣ ಮಕ್ಕಳ ಕಲಿಕೆಯನ್ನು ಆಸಕ್ತಿ ಮತ್ತು ಆನಂದದಾಯಕವಾಗುವಂತೆ ಮಾಡಿದ್ದಾರೆ. ಶಾಲಾ ವಾತಾವರಣವನ್ನು ‘ಪರಿಸರ ಸ್ನೇಹಿ’ಯನ್ನಾಗಿಸಿದ್ದಾರೆ. ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ–4ರ ದೊಡ್ಡೋಬನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿರುವ ನಾಗರಾಜ್, ತಮ್ಮ ನೈಪುಣ್ಯ, ಅರ್ಪಣಾ ಮನೋಭಾವದಿಂದ ಇಂದು ದೇಶದ ಗಮನ ಸೆಳೆದಿದ್ದಾರೆ. ಇವರ ಕೌಶಲಾಧಾರಿತ ಬೋಧನೆಗೆ 2021ನೇ ಸಾಲಿನ ‘ಶಿಕ್ಷಕರ ರಾಷ್ಟ್ರ ಪ್ರಶಸ್ತಿ’ ಅರಸಿಕೊಂಡು ಬಂದಿದೆ.

ತಂತ್ರಜ್ಞಾನ ಆಧಾರಿತ ಬೋಧನೆ: ಸ್ಮಾರ್ಟ್‌ ಬೋರ್ಡ್‌, ಲ್ಯಾಪ್‌ಟಾಪ್‌, ಪ್ರೊಜೆಕ್ಟರ್ ಸಹಾಯದಿಂದ ಬೋಧನೆಯು ಪರಿಣಾಮಕಾರಿಯಾಗುವಂತೆ ಮಾಡಿದ್ದಾರೆ. ಈ ಉಪಕರಣಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕೆಯಲ್ಲಿ ಉತ್ಸಾಹ ಹೆಚ್ಚಿಸಿ, ಕುತೂಹಲ, ಆಸಕ್ತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೋವಿಡ್ ಕಾಲದಲ್ಲಿ ಕನ್ನಡ ಮಾಧ್ಯಮದ ಮಕ್ಕಳಿಗೆ ಅನುಕೂಲವಾಗುವಂತೆ ಪಠ್ಯಕ್ಕೆ ಸಂಬಂಧಿಸಿದ ವಿಡಿಯೊಗಳಿಗೆ ಕನ್ನಡ ಭಾಷೆಯಲ್ಲಿ ‘ವಾಯ್ಸ್‌ ಓವರ್’ ನೀಡಿ, ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದ್ದಾರೆ. ಈ ಮಾದರಿಯಿಂದ ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಪಠ್ಯಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಿದೆ.

ಸಿಮ್ಯುಲೇಷನ್ ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ವರ್ಚುವಲ್‌ ಪ್ರಯೋಗಾಲಯ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಟಾಪ್ಮೋಷನ್ ಅನಿಮೇಷನ್ ತಂತ್ರಜ್ಞಾನದ ಮೂಲಕ ವಿಜ್ಞಾನ ಪಠ್ಯಗಳಿಗೆ ಸಂಬಂಧಿಸಿದ ಅನಿಮೇಷನ್ ವಿಡಿಯೊಗಳನ್ನು ತಯಾರಿಸಿ, ಕಲಿಕೆ ಸುಲಭವಾಗುವಂತೆ ಮಾಡಿದ್ದಾರೆ. ಸಿಮ್ಯುಲೇಷನ್ ತಂತ್ರಜ್ಞಾನದಿಂದ ಮಕ್ಕಳಲ್ಲಿ ಪ್ರಾಯೋಗಿಕ ಅನುಭವ ಜ್ಞಾನ ಉಂಟಾಗಲು ವರ್ಚುವಲ್‌ ಪ್ರಯೋಗಾಲಯ ನಿರ್ಮಿಸಿದ್ದಾರೆ.

ಪರಿಸರ ಸ್ನೇಹಿ ಶಾಲೆ: ಈ ಶಾಲೆಯ ಆವರಣ ಸ್ವಚ್ಛ ಮತ್ತು ಸುಂದರ. ಇಲ್ಲಿ ಉತ್ಪತ್ತಿಯಾಗುವ ಪ್ರತಿ ತ್ಯಾಜ್ಯವೂ ಉಪಯುಕ್ತ. ಕಸವೆಂದು ಯಾವುದನ್ನೂ ಎಸೆಯದೆ ಪುನರ್ಬಳಕೆಯಾಗುತ್ತದೆ. ಶಾಲಾ ಆವರಣದ ಹೊರಗೂ ದೊರಕುವ ಕಸವನ್ನು ಸಂಗ್ರಹಿಸಿ, ಎರೆಹುಳು ಗೊಬ್ಬರ ತಯಾರಿಸುತ್ತಾರೆ. ಬಯೋ ಡಿಗ್ರೆಡೆಬಲ್ ಬ್ಯಾಕ್ಟೀರಿಯಗಳ ಮೂಲಕ ಕಸದಿಂದ ಜೈವಿಕ ಗೊಬ್ಬರ ಉತ್ಪಾದಿಸುವುದನ್ನು ಮಕ್ಕಳಿಗೆ ತರಬೇತಿ ನೀಡಿದ್ದಾರೆ. ಶಾಲೆಯ ಹಳೆಯ ವಸ್ತುಗಳು, ಮುರಿದ ಕುರ್ಚಿ, ಟೇಬಲ್, ಮೇಜು, ಡೆಸ್ಕ್ ಮುಂತಾದವುಗಳನ್ನು ಗುಜರಿಗೆ ಹಾಕದೆ ಪುನರ್ಬಳಕೆ ಮಾಡಿಕೊಂಡಿದ್ದಾರೆ. ಈ ಹಳೆಯ ವಸ್ತುಗಳಿಂದ ಪ್ರೊಜೆಕ್ಟರ್ ಸ್ಟ್ಯಾಂಡ್, ಸ್ಕ್ರೀನ್, ಪೋಡಿಯಂ, ಡಯಾಸ್ ಮುಂತಾದ ಬಳಕೆಯ ವಸ್ತುಗಳಾಗಿ ಪರಿವರ್ತನೆಗೊಂಡಿವೆ. ಅಕ್ಷರ ದಾಸೋಹದ ಅಡಿಯಲ್ಲಿ ಬರುವ ಹಾಲಿನ ಪುಡಿಯ ಖಾಲಿ ಪಾಕೆಟ್‌ಗಳು ಕಂಪ್ಯೂಟರ್ ಕವಚಗಳಾಗಿ ರೂಪಗೊಂಡಿವೆ. ಮತ್ತೆ ಕೆಲವು ಚೀಲಗಳಲ್ಲಿ ತರಕಾರಿ ಗಿಡಗಳನ್ನು ಬೆಳೆಯಲು ಉಪಯೋಗಿಸಲಾಗುತ್ತದೆ.

ನೀರಿನ ಪುನರ್ಬಳಕೆ: ಮಳೆಯ ನೀರು ವ್ಯರ್ಥವಾಗಿ ಹರಿದು ಹೋಗದಂತೆ ಇಂಗು ಗುಂಡಿಯ ಮೂಲಕ ಭೂಮಿಗೆ ಸೇರುವಂತೆ ಮಾಡಿದ್ದಾರೆ. ಕೈತೊಳೆದ ನೀರನ್ನು ಶುದ್ಧೀಕರಿಸಿ, ಸ್ಪಿಂಕಲರ್ ಮತ್ತು ಡ್ರಿಪ್ ಮೂಲಕ ಗಿಡಗಳಿಗೆ ಉಣಿಸಲಾಗುತ್ತದೆ.

ಮೂಲತಃ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಜೋಳದಾಳ್ ಗ್ರಾಮದ ಸಿ.ಎಂ. ನಾಗರಾಜ್ ನಿವೃತ್ತ ಶಿಕ್ಷಕರ ಮಗ. 2005ರಿಂದ ಶಿಕ್ಷಕರಾಗಿ ಸೇವೆ ಆರಂಭಿಸಿದ ಇವರು ಸದಾ ಚಟುವಟಿಕೆಯಿಂದಿರುವ, ಹೊಸತನಕ್ಕೆ ತುಡಿಯುವ ಮನಸ್ಸಿನವರು. ಶಿಕ್ಷಣ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನಗಳ ಮೇಲ್ವಿಚಾರಣಾ ಅಧಿಕಾರಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕಳೆದ ಎರಡೂವರೆ ವರ್ಷಗಳಿಂದ ದೊಡ್ಡೋಬನಹಳ್ಳಿ ಶಾಲೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಜನಾನುರಾಗಿರುವ ಇವರು ಸರ್ಕಾರ ಅನುದಾನ ಹೊರತುಪಡಿಸಿ ಸುಮಾರು ₹ 60 ಲಕ್ಷದಷ್ಟು ದೇಣಿಗೆಯನ್ನು ಸಾರ್ವಜನಿಕರಿಂದ ಪಡೆದಿದ್ದಾರೆ. ಈ ದೇಣಿಗೆ ಹಣದಿಂದ ಈ ಸರ್ಕಾರಿ ಶಾಲೆ ಖಾಸಗಿ ಶಾಲೆಗಳನ್ನು ಮೀರಿಸುವಂತಿದೆ.

ಬೆಂಗಳೂರು ಮಹಾನಗರದ ಸಮೀಪವಿರುವ ಈ ಊರಿನಲ್ಲಿ ಬಡ, ಅನಕ್ಷರಸ್ತ ಕೂಲಿ ಕಾರ್ಮಿಕರೇ ಹೆಚ್ಚು. ಈ ವರ್ಗದ ಮಕ್ಕಳೇ ಈ ಶಾಲೆಯ ವಿದ್ಯಾರ್ಥಿಗಳು, ಈ ಮಕ್ಕಳ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ನಾಗರಾಜ್, ಈ ವರ್ಷ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿರುವ ಕರ್ನಾಟಕ ಏಕೈಕ ಶಿಕ್ಷಕರಾಗಿದ್ದಾರೆ. ಕ್ರಿಯಾಶೀಲತೆ, ಉತ್ಸಾಹ, ಆಸಕ್ತಿ, ಶ್ರದ್ದೆ ಹೊಂದಿರುವ ನಾಗರಾಜ್‌ ಅವರು ಶಿಕ್ಷಕ ಸಮುದಾಯಕ್ಕೊಂದು ಮಾದರಿ.

(ಲೇಖಕರು ದಾವಣಗೆರೆಯ ಕನ್ನಡ ಅಧ್ಯಾಪಕರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು