ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪನಿಗೆ ಕೈಗೆ ಕೃಷಿಭೂಮಿ ಸಿಕ್ಕರೆ ಬರಡು ಭಾರತ

ಜಿಲ್ಲಾ ಮಟ್ಟದ ರೈತರ ಪ್ರತಿನಿಧಿ ಸಮಾವೇಶದಲ್ಲಿ ಸಿದ್ದನಗೌಡ ಪಾಟೀಲ ಎಚ್ಚರಿಕೆ
Last Updated 25 ಜನವರಿ 2021, 16:05 IST
ಅಕ್ಷರ ಗಾತ್ರ

ದಾವಣಗೆರೆ: ಕೃಷಿಭೂಮಿ ಕೃಷಿಕರ ಕೈಯಲ್ಲೇ ಇರಬೇಕು ಎಂಬ ನಿಯಂತ್ರಣ ಇಲ್ಲಿಯವರೆಗೆ ಇತ್ತು. ಆದರೆ ಈ ಎಲ್ಲ ನಿಯಂತ್ರಣಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ತೆಗೆದು ಹಾಕಿದೆ. ಕೃಷಿಭೂಮಿಯು ಕಂಪನಿಗಳ, ಬಂಡವಾಳಶಾಹಿಗಳ ಕೈಗೆ ಹೋದರೆ ರೈತರು ಬೀದಿಪಾಲಾಗುವುದು ಮಾತ್ರವಲ್ಲ, ಭೂಮಿಗೆ ವಿಪರೀತ ರಸಗೊಬ್ಬರ, ಕೀಟನಾಶಕ ಬಳಕೆಯಿಂದ ಹತ್ತೇ ವರ್ಷಗಳಲ್ಲಿ ಭೂಮಿ ಫಲವತ್ತತೆ ಕಳೆದುಕೊಳ್ಳಲಿದೆ. ದೇಶವನ್ನು ಬರಡು ಭಾರತವನ್ನಾಗಿ ಮಾಡಿ ಬಹುರಾಷ್ಟ್ರೀಯ ಕಂಪನಿಗಳು ಹೋಗಲಿವೆ ಎಂದು ಹೊಸತು ಪತ್ರಿಕೆಯ ಸಂಪಾದಕ ಡಾ. ಸಿದ್ದನಗೌಡ ಪಾಟೀಲ ಎಚ್ಚರಿಸಿದರು.

ಇಲ್ಲಿನ ಪಂಪಾಪತಿ ಭವನದಲ್ಲಿ ಅಖಿಲ ಭಾರತ ಕಿಸಾನ್‌ ಸಭಾ (ಎಐಕೆಎಸ್‌) ಜಿಲ್ಲಾ ಮಂಡಳಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರೈತರ ಪ್ರತಿನಿಧಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಇರುವ ಒಟ್ಟು ರೈತರಲ್ಲಿ ಶೇ 85ರಷ್ಟು ಮಂದಿ ಸಣ್ಣ ಮತ್ತು ಅತಿಸಣ್ಣ ರೈತರಾಗಿದ್ದಾರೆ. ಒಟ್ಟು ಕೃಷಿಭೂಮಿಯ ಶೇ 53ರಷ್ಟು ಅವರ ಕೈಯಲ್ಲಿದೆ. ತುಂಡುಭೂಮಿ ಕೃಷಿಯೇ ಆದಾಯ ಕಡಿಮೆಯಾಗಲು ಕಾರಣ ಎಂದು ಕೇಂದ್ರ ಸರ್ಕಾರ ವರದಿ ತರಿಸಿಕೊಂಡಿದೆ. ಅಂದರೆ ಈ ತುಂಡುಭೂಮಿಗಳನ್ನು ತೆಗೆದು ದೊಡ್ಡ ಹಿಡುವಳಿಗಳನ್ನು ಮಾಡುವುದೇ ಕೇಂದ್ರ ಸರ್ಕಾರದ ಉದ್ದೇಶ. ಕೇಂದ್ರ ಸರ್ಕಾರ ಸುಗ್ರಿವಾಜ್ಞೆ ಮೂಲಕ ತಂದಿರುವ ಕಾಯ್ದೆಗಳು ಜಾರಿಯಾದರೆ ಈ ರೈತರು ಭೂಮಿ ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ರೈತರನ್ನು ಮುಂದೆ ಆ ಕಂಪನಿಗಳ ಅಡಿಯಲ್ಲಿ ಕೃಷಿಕೂಲಿ ಕಾರ್ಮಿಕರನ್ನಾಗಿ ಮಾಡಲು ಸರ್ಕಾರ ಹೊರಟಿದೆ ಎಂದು ಬಹಳ ಮಂದಿ ಟೀಕಿಸಿದ್ದಾರೆ. ನಿಜ ಏನೆಂದರೆ ಕೃಷಿ ಕೂಲಿ ಕಾರ್ಮಿಕರಾಗಲು ಕೂಡ ಅವಕಾಶ ಸಿಗುವುದಿಲ್ಲ. ಯಾಕೆಂದರೆ ಅವರು ಯಂತ್ರಗಳನ್ನೇ ನೆಚ್ಚಿಕೊಂಡು ಕೃಷಿ ಮಾಡುತ್ತಾರೆ ಎಂದು ತಿಳಿಸಿದರು.

ರೈತರ ಉತ್ಪಾದನೆಗೆ ಸಂಬಂಧಿಸಿದ ಒಪ್ಪಂದ, ಗುತ್ತಿಗೆ ಕಾಯ್ದೆಯಿಂದ ಇದೇ ಪ್ರಥಮ ಬಾರಿಗೆ ಕಂಪನಿಗಳು ಕೃಷಿ ಕ್ಷೇತ್ರವನ್ನು ಆವರಿಸಿಕೊಳ್ಳುತ್ತಿವೆ. ಮಾರುಕಟ್ಟೆಗೆ ಸಂಬಂಧಿಸಿದಂತೆ ಒಂದು ನಿಯಂತ್ರಣ ಇತ್ತು. ಎಪಿಎಂಸಿ ಮೂಲಕ ನಿಗದಿತ ಬೆಲೆ ಸಿಗುತ್ತಿತ್ತು. ಮುಂದೆ ಕನಿಷ್ಠ ಬೆಂಬಲ ಬೆಲೆ ಕೂಡ ಸಿಗುವುದಿಲ್ಲ. ಅಗತ್ಯ ವಸ್ತುಗಳ ಕಾನೂನು ತಿದ್ದುಪಡಿಯಿಂದ ಕಾಳಸಂತೆಕೋರರ ಕೈಗೆ ಆಹಾರಧಾನ್ಯಗಳು ಸೇರಲಿವೆ. ಇನ್ನು ಮುಂದೆ ಆಹಾರ ಧಾನ್ಯಗಳನ್ನು ಕಳ್ಳದಾಸ್ತಾನು ಮಾಡಿ, ಕೊರತೆ ತೋರಿಸಿ ಬೆಲೆ ಏರಿಕೆ ಮಾಡಿಸಿ ಆಮೇಲೆ ಮಾರಾಟ ಮಾಡುವ ವ್ಯವಸ್ಥೆ ಬರುತ್ತದೆ. ಇದರಿಂದ ಉತ್ಪಾದಕನಿಗೂ ಲಾಭವಿಲ್ಲ. ಬಳಕೆದಾರನಿಗೂ ಲಾಭವಿಲ್ಲ. ಮಧ್ಯದಲ್ಲಿ ವ್ಯಾಪಾರಿ ಎಂಬ ದಲ್ಲಾಳಿ ಲಾಭ ಮಾಡಿಕೊಳ್ಳುತ್ತಾನೆ ಎಂದರು.

ಈ ಮೂರು ಕಾಯ್ದೆಗಳಲ್ಲದೇ ಬೀಜ ಕಾಯ್ದೆ, ವಿದ್ಯುತ್‌ ಕಾಯ್ದೆ ತಿದ್ದುಪಡಿಗಳೆಲ್ಲ ಅದಾನಿ, ಅಂಬಾನಿಗಳಿಗೆ ಸಹಾಯ ಮಾಡಲೆಂದೇ ಆಗುತ್ತಿವೆ. ರೈತರಿಗೆ ಮಾತ್ರ ಸಮಸ್ಯೆಯಲ್ಲ ಇದು. ಅನ್ನ ತಿನ್ನುವ ಎಲ್ಲ ಪ್ರಜೆಗಳಿಗೆ ಸಮಸ್ಯೆಯಾಗಲಿದೆ. ಮೇಲ್ನೋಟಕ್ಕೆ ದೆಹಲಿಯಲ್ಲಿ ರೈತರು ತಮ್ಮ ಸಮಸ್ಯೆಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಅನ್ನಿಸಿದರೂ ಆಳವಾಗಿ ಇದು ಪ್ರಜಾಪ್ರಭುತ್ವಕ್ಕೆ, ಒಕ್ಕೂಟ ವ್ಯವಸ್ಥೆಗೆ, ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ವ್ಯವಸ್ಥೆಯನ್ನು ವಿರೋಧಿಸುವ ಹೋರಾಟ ಎಂದು ವಿಶ್ಲೇಷಿಸಿದರು.

ಎಐಕೆಎಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್‌.ಜಿ. ಉಮೇಶ್‌ ಅಧ್ಯಕ್ಷತೆ ವಹಿಸಿದ್ದರು. ಎಐಕೆಎಸ್‌ ರಾಜ್ಯ ಉಸ್ತುವಾರಿ ಪಿ.ಬಿ. ಲೋಕೇಶ್‌, ಸಿಪಿಐ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಚ್‌.ಕೆ. ರಾಮಚಂದ್ರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಾಲವ್ವನಹಳ್ಳಿ ಪ್ರಸನ್ನಕುಮಾರ್‌, ಸಿಪಿಐ ಖಜಾಂಚಿ ಆನಂದರಾಜ್‌, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ಟಿ.ಎಸ್‌. ನಾಗರಾಜ್‌, ಸಿದ್ದೇಶ್‌ ಹಾಲೇಕಲ್‌, ಭೀಮಾರೆಡ್ಡಿ ಅವರೂ ಇದ್ದರು.

ನರಗ ರಂಗನಾಥ್‌ ಸ್ವಾಗತಿಸಿದರು. ಎಐಕೆಎಸ್‌ ಪ್ರಧಾನ ಕಾರ್ಯದರ್ಶಿ ಐರಣಿ ಚಂದ್ರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಕೆ. ಬಾನಪ್ಪ ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಸದಸ್ಯರನ್ನು ಸನ್ಮಾನಿಸಲಾಯಿತು.

ಇಂದು ಜನಗಣರಾಜ್ಯೋತ್ಸವ

ದೇಶ ಮತ್ತು ರಾಜ್ಯವನ್ನು ಆಳುತ್ತಿರುವ ಮೋದಿ, ಬಿ.ಎಸ್‌. ಯಡಿಯೂರಪ್ಪ ನಾಯಕರಲ್ಲ ಖಳನಾಯಕರು. ಅವರು ಗಣರಾಜ್ಯೋತ್ಸವ ಆಚರಿಸುವ ನೈತಿಕತೆ ಕಳೆದುಕೊಂಡಿದ್ದಾರೆ. ಹಾಗಾಗಿ ಪ್ರಭುತ್ವದ ಗಣರಾಜ್ಯೋತ್ಸವಕ್ಕೆ ಪ್ರತಿಯಾಗಿ ಜನಗಣರಾಜ್ಯೋತ್ಸವವನ್ನು ದೇಶದ ಎಲ್ಲೆಡೆ ಆಚರಿಸಲಾಗುವುದು ಎಂದು ಡಾ. ಸಿದ್ದನಗೌಡ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT