ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾ.ಪಂ. ಅಸ್ತಿತ್ವದ ಪ್ರಶ್ನೆಯೇ ಚರ್ಚೆಗೆ ಗ್ರಾಸ

ಆಡಳಿತ ವಿಕೇಂದ್ರೀಕರಣದಲ್ಲಿ ತ್ರಿಸ್ತರಕ್ಕೆ ಕುತ್ತಿಲ್ಲ: ತಾ.ಪಂ ಸಾಮಾನ್ಯ ಸಭೆಯಲ್ಲಿ ಇಒ ಸಮರ್ಥನೆ
Last Updated 22 ಜನವರಿ 2021, 1:57 IST
ಅಕ್ಷರ ಗಾತ್ರ

ದಾವಣಗೆರೆ: ತಾಲ್ಲೂಕು ಪಂಚಾಯಿತಿಯನ್ನು ರದ್ದು ಮಾಡುವ ಬಗ್ಗೆ ಪಂಚಾಯತ್‌ರಾಜ್‌ ಸಚಿವರ ಸಹಿತ ಅನೇಕರು ವ್ಯಕ್ತಪಡಿಸುತ್ತಿರುವ ಅಭಿಪ್ರಾಯದ ಬಗ್ಗೆ ಗುರುವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಚರ್ಚೆಯಾಯಿತು. ತ್ರಿಸ್ತರ ವ್ಯವಸ್ಥೆಯನ್ನು ರದ್ದು ಮಾಡಲು ಆಗುವುದಿಲ್ಲ ಎಂದು ಕಾರ್ಯನಿರ್ವಹಣಾಧಿಕಾರಿ ಸ್ಪಷ್ಟನೆ ನೀಡಿದರು.

ತಾಲ್ಲೂಕು ಪಂಚಾಯಿತಿಗೆ ಅಧಿಕಾರ, ಅನುದಾನ ಇಲ್ಲ ಎಂಬ ಕಾರಣಕ್ಕೆ ತಾಲ್ಲೂಕು ಪಂಚಾಯಿತಿಯನ್ನೇ ತೆಗೆಯಬೇಕು ಎಂದು ನೊಂದು ಹೇಳಿರುತ್ತಾರೆ. ಅನುದಾನ ಹೆಚ್ಚು ಮಾಡಿ ಎಂಬುದು ಅದರ ಅರ್ಥ. ತಾಲ್ಲೂಕು ಪಂಚಾಯಿತಿಯನ್ನು ರದ್ದು ಮಾಡುವ ಬಗ್ಗೆ ನಿಮಗೆ ಏನಾದರೂ ಮಾಹಿತಿ ಇದೆಯೇ ಎಂದು ಸದಸ್ಯ ಆಲೂರು ಲಿಂಗರಾಜ್‌ ಪ್ರಶ್ನಿಸಿದರು.

ಬ್ರಿಟಿಷ್ ಆಡಳಿತ ಇರುವಾಗಲೇ ತ್ರಿಸ್ತರ ಆಡಳಿತವನ್ನು ಜಾರಿಗೆ ತಂದಿದ್ದರು. ಸ್ವಾತಂತ್ರ್ಯ ಬಂದ ಬಳಿಕ ಸಂವಿಧಾನದಲ್ಲಿಯೂ ತ್ರಿಸ್ತರ ಆಡಳಿತಕ್ಕೆ ಒತ್ತು ನೀಡಲಾಗಿದೆ. ಪಂಚಾಯತ್‌ರಾಜ್‌ ಕಾಯ್ದೆಯಲ್ಲಿಯೂ ಇದು ಸ್ಪಷ್ಟವಿದೆ. ಹಾಗಾಗಿ ಈ ವ್ಯವಸ್ಥೆಗೆ ಇತಿಹಾಸವಿದೆ. ಅನಧಿಕೃತವಾಗಿ ಈ ಚರ್ಚೆಗಳ ಬಗ್ಗೆ ಮಾಹಿತಿ ಇದೆ. ಆದರೆ ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲ. ತಾಲ್ಲೂಕು ಪಂಚಾಯಿತಿ ರದ್ದು ಮಾಡಲು ಸಾಧ್ಯವಿಲ್ಲ ಎಂದು ಇಒ ದಾರುಕೇಶ್‌ ವಿವರಿಸಿದರು.

ಅವ್ಯವಸ್ಥೆಯ ಸಬ್‌ರಿಜಿಸ್ಟ್ರಾರ್‌ ಕಚೇರಿ: ತಾಲ್ಲೂಕಿನ ಸಬ್ ರಿಜಿಸ್ಟರ್ ಕಚೇರಿಗೆ ಪ್ರತಿದಿನ ಸಾವಿರಾರು ಜನ ಬಂದು ಸರದಿಯಲ್ಲಿ ನಿಂತು ಸುಸ್ತಾಗುತ್ತಿದ್ದಾರೆ. ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲ. ನೀರಿನ ವ್ಯವಸ್ಥೆ ಇಲ್ಲ ಎಂದು ಸದಸ್ಯ ಮುರುಗೇಂದ್ರ ದೂರಿದರು.

ಪಕ್ಕದ ಹಾವೇರಿಯಲ್ಲಿ ಎಲ್ಲ ಸೌಕರ್ಯಗಳಿರುವ ಸಬ್ ರಿಜಿಸ್ಟರ್ ಕಚೇರಿ ಇದೆ. ಅಲ್ಲಿಯಂತೆ ಇಲ್ಲಿಯೂ ಮಾಡಬೇಕು ಎಂದು ಹನುಮಂತಪ್ಪ ಧ್ವನಿಗೂಡಿಸಿದರು.

ಆರ್‌ಟಿಇಗೆ ಶುಲ್ಕ: ಬಡವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಕೂಡ ವಿದ್ಯಾಭ್ಯಾಸ ಮಾಡಲು ಅವಕಾಶ ನೀಡಬೇಕು ಎಂದು ಆರ್‌ಟಿಇ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ ಅಲ್ಲಿ ಶುಲ್ಕ ಕೇಳಿತ್ತಿದ್ದಾರೆ. ಕೊಡದಿದ್ದರೆ ಹೆಸರನ್ನೇ ತೆಗೆಯುತ್ತಿದ್ದಾರೆ ಎಂದು ಸದಸ್ಯೆ ಆಶಾ ಮುರಳಿ ತಿಳಿಸಿದರು. ಆರ್‌ಟಿಇಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಶುಲ್ಕವನ್ನು ಪೋಷಕರು ಭರಿಸುವಂತಿಲ್ಲ. ಶುಲ್ಕಕ್ಕೆ ಒತ್ತಾಯಿಸುವ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಿರಂಜನಮೂರ್ತಿ ಮಾಹಿತಿ ನೀಡಿದರು.

ಕಾಶಿಪುರದ ಕೆನರಾ ಬ್ಯಾಂಕ್‌ ಅನ್ನು ಮರ್ಜ್‌ ಮಾಡಿ ಸ್ಥಳಾಂತರಿಸಬಾರದು. ತಾಲ್ಲೂಕು ಪಂಚಾಯಿತಿ ನೂತನ ಕಟ್ಟಡ ನಿರ್ಮಿಸಲು ಉದ್ದೇಶಿಸಲಾದ ನಿವೇಶನದಲ್ಲಿ ಇರುವ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಬೇಕು. ಪ್ರತಿವರ್ಷ ತೋಟಗಾರಿಕೆ ಇಲಾಖೆ ಗಿಡಗಳನ್ನು ಕೊಳೆಸಿ ಹಾಕುವ ಬದಲು ಗಿಡನೆಟ್ಟು ಬದುಕಿಸುವವರಿಗೆ ನೀಡಬೇಕು. ತರಳಬಾಳು ಶಾಲೆ ಸಹಿತ ದಾನಿಗಳು ನೀಡಿರುವ ಜಮೀನನ್ನು ಕೂಡಲೇ ಶಾಲೆಯ ಹೆಸರಿಗೆ ಮಾಡಿಕೊಳ್ಳಬೇಕು ಮುಂತಾದ ಸಲಹೆಗಳು ಸಭೆಯಲ್ಲಿ ಬಂದವು.

ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಉಪಾಧ್ಯಕ್ಷೆ ಮೀನಾ ಶ್ರೀನಿವಾಸ್, ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ಅಣಬೇರು ಶಿವಮೂರ್ತಿ, ಸದಸ್ಯರು ಇದ್ದರು.

ಪತ್ನಿ ಸದಸ್ಯೆ, ಪತಿ ಚರ್ಚೆ

ಮಹಿಳೆಯರು ಜನಪ್ರತಿನಿಧಿಗಳಾದರೂ ಅವರ ಪತಿಗಳೇ ಬಹುತೇಕ ಕಡೆಗಳಲ್ಲಿ ಅಧಿಕಾರ ಚಲಾಯಿಸುತ್ತಾರೆ. ಆದರೆ ಸಭೆಗಳಲ್ಲಿ ಮಾತ್ರ ಸದಸ್ಯರೇ ಹಾಜರಿರುತ್ತಾರೆ. ಆದರೆ ಗುರುವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯೆ ಭಾಗವಹಿಸಿ ಸುಮ್ಮನೆ ಕುಳಿತಿದ್ದರೆ ಅವರ ಪತಿ ಹಿಂದೆ ಕುಳಿತುಕೊಂಡು ಸದಸ್ಯರಂತೆ ಚರ್ಚೆಯಲ್ಲಿ ಭಾಗವಹಿಸಿದ್ದರು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾತ್ರ ಚರ್ಚೆಯಲ್ಲಿ ಭಾಗವಹಿಸಬೇಕು ಎಂದು ನಿಯಮ ಇದ್ದರೂ ತಾಲ್ಲೂಕು ಪಂಚಾಯಿತಿ ಇಒ ಸಹಿತ ಯಾರೂ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸದೇ ಇರುವುದು ಅಚ್ಚರಿಗೆ ಕಾರಣವಾಯಿತು.

‘ಉಚಿತ ನೀರು ನೀಡಿ’

ಜಲಜೀವನ್‌ ಮಿಶನ್‌ ಎಂಬ ಯೋಜನೆಯ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ‘ಮನೆಮನೆಗೆ ಗಂಗೆ’ ಎಂದು ಪ್ರತಿಮನೆಗೆ ದಿನಕ್ಕೆ 55 ಲೀಟರ್‌ ನೀರು ನಳ್ಳಿ ನೀರು ಕೊಡುವ ವ್ಯವಸ್ಥೆ ಇದು. ಶೇ 90ನ್ನು ಸರ್ಕಾರಗಳು ಭರಿಸಿದರೆ, ಶೇ 10 ಸ್ಥಳೀಯ ಪಂಚಾಯಿತಿ ಭರಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಂಜಿನಿಯರ್‌ ತಿಳಿಸಿದರು.

ಹಳ್ಳಿಗಳಲ್ಲಿ ಕೂಲಿ ಮಾಡಿ ಬದುಕುವವರಿಗೆ ನೀರಿನ ದರ ಕಟ್ಟುವುದು ಕಷ್ಟವಾಗಲಿದೆ. ಅವರಿಗೆ ಉಚಿತವಾಗಿ ನೀಡಬೇಕು. ಹಳ್ಳಿಗಳನ್ನು ಸುಲಿಗೆ ಮಾಡುವ ಯೋಜನೆ ಇದು ಎಂದು ಮಂಜಪ್ಪ, ಅಶೋಕ್‌, ಆಶಾ ಮುರಳಿ, ಹನುಮಂತಪ್ಪ, ಪರಮೇಶ್ವರಪ್ಪ ಸಹಿತ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT