ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾಳಿ: ನಕಾಶೆ ಕಂಡ ದಾರಿ ಒತ್ತುವರಿ ತೆರವು ಸುಖಾಂತ್ಯ

ಮಾರಿಕೊಪ್ಪ: 40 ವರ್ಷಗಳ ಸಮಸ್ಯೆಗೆ ಪರಿಹಾರ ನೀಡಿದ ತಹಶೀಲ್ದಾರ್ ಪಟ್ಟರಾಜಗೌಡ
Published 5 ಡಿಸೆಂಬರ್ 2023, 14:22 IST
Last Updated 5 ಡಿಸೆಂಬರ್ 2023, 14:22 IST
ಅಕ್ಷರ ಗಾತ್ರ

ಹೊನ್ನಾಳಿ: ತಾಲ್ಲೂಕಿನ ಮಾರಿಕೊಪ್ಪ ಗ್ರಾಮದಲ್ಲಿ 40 ವರ್ಷಗಳಿಂದ ಕಾಡುತ್ತಿದ್ದ ನಕಾಶೆ ಕಂಡ ದಾರಿ ಒತ್ತುವರಿ ಸಮಸ್ಯೆಗೆ ಇಲ್ಲಿನ ತಹಶೀಲ್ದಾರ್ ಪಟ್ಟರಾಜಗೌಡ ಅವರು ಮಂಗಳವಾರ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಜಮೀನಿನ ಮಾಲೀಕರೊಂದಿಗೆ ಚರ್ಚೆ ನಡೆಸಿ ಪರಿಹಾರ ನೀಡಿದರು. ನಕಾಶೆ ಕಂಡ ದಾರಿ ಒತ್ತುವರಿ ತೆರವುಗೊಳಿಸಲು ಜಮೀನಿನ ಮಾಲೀಕ ಪುಟ್ಟನಗೌಡ ಒಪ್ಪಿಕೊಂಡಿದ್ದರಿಂದ ಘಟನೆ ಸುಖಾಂತ್ಯ ಕಂಡಿತು.

ಮಾರಿಕೊಪ್ಪ ಗ್ರಾಮದ ಸರ್ವೆ ನಂ. 1ರಲ್ಲಿ ನಕಾಶೆ ಕಂಡ ದಾರಿ ಬಗ್ಗೆ ರೈತರಿಗೂ ಜಮೀನಿನ ಮಾಲೀಕರಿಗೂ 40 ವರ್ಷಗಳಿಂದ ತಕರಾರು ಇತ್ತು. ಇದಕ್ಕಾಗಿ ಜಮೀನಿನ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು.

‘ಜಮೀನು ಸೃಷ್ಟಿಯಾದಾಗಿನಿಂದಲೂ ನಕಾಶೆ ಕಂಡ ಬಂಡಿ ದಾರಿ ಇತ್ತು’ ಎನ್ನುತ್ತಾರೆ ದಲಿತ ಮುಖಂಡ ಎ.ಕೆ. ಮಂಜಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹನುಮಂತಪ್ಪ, ಚಿನ್ನಪ್ಪ, ರವಿ.

ಗ್ರಾಮದ ಅಂಬೇಡ್ಕರ್ ನಗರದಲ್ಲಿ ಭಜನೆ ಮಂದಿರಕ್ಕೆ ಕಾಯ್ದಿರಿಸಿದ ಜಾಗದಲ್ಲಿ ಜಮೀನಿಗೆ ಹೋಗುವ ರೈತರು ದಾರಿ ಮಾಡಿಕೊಂಡು ಓಡಾಡುತ್ತಿದ್ದರು. ಇದನ್ನು ಖಂಡಿಸಿದ ದಲಿತ ಮುಖಂಡರು, ಆ ಜಾಗವನ್ನು ಬಂದ್ ಮಾಡಿದ್ದರು. ಅಲ್ಲಿಂದ ಈ ಸಮಸ್ಯೆ ಬಿಗಡಾಯಿಸಿತ್ತು.

ಈ ಭಾಗದಲ್ಲಿ ಓಡಾಡುವ ಹತ್ತಾರು ರೈತರು ನಕಾಶೆ ಕಂಡ ದಾರಿ ಬಿಡಿಸಿಕೊಡುವಂತೆ ತಹಶೀಲ್ದಾರ್‌ಗೆ ಕಳೆದ ತಿಂಗಳು ಮನವಿ ಸಲ್ಲಿಸಿದ್ದರು. ಈ ಅರ್ಜಿ ಹಿಡಿದ ತಹಶೀಲ್ದಾರ್ ಪಟ್ಟರಾಜಗೌಡ ಅವರು ಗ್ರಾಮಕ್ಕೆ ಭೇಟಿ ನೀಡಿ ಇಬ್ಬರ ಸಮಸ್ಯೆ ಆಲಿಸಿದರು.

ನಕಾಶೆ ಕಂಡ ಬಂಡಿ ದಾರಿ ಜಮೀನಿನ ಪರಿಶೀಲನೆ ನಡೆಸಿದರು. ಇಬ್ಬರೊಂದಿಗೂ ಮಾತುಕತೆ ನಡೆಸಿದರು. ‘ಮಾನವೀಯತೆ ಮತ್ತು ಕಾನೂನು ಎರಡನ್ನೂ ನಾನು ಬಳಸಬಲ್ಲೆ. ಆದರೆ ಗ್ರಾಮದಲ್ಲಿ ಶಾಂತಿ ನೆಲೆಸುವ ದೃಷ್ಟಿಯಿಂದ ಇಬ್ಬರೂ ಒಪ್ಪಿಗೆ ನೀಡಿದರೆ ನಾನು ಪರಿಹಾರ ನೀಡುತ್ತೇನೆ’ ಎಂದು ಹೇಳಿದರು.

13 ಅಡಿ ಬಂಡಿ ದಾರಿ ಬಿಟ್ಟುಕೊಡುವಂತೆ ರೈತರಿಂದ ಬೇಡಿಕೆ ಬಂತು. ಜಮೀನಿನ ಮಾಲೀಕರು 8 ಅಡಿ ದಾರಿ ಬಿಡಲು ಒಪ್ಪಿಗೆ ನೀಡಿದ್ದರು.

ಅವರೊಂದಿಗೆ ಮತ್ತೊಮ್ಮೆ ಮಾತನಾಡಿದ ತಹಶೀಲ್ದಾರ್, ರೈತರ ಬೇಡಿಕೆ ಹಾಗೂ ಜಮೀನಿನ ಮಾಲೀಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು 10 ಅಡಿ ದಾರಿ ಬಿಟ್ಟುಕೊಡುವಂತೆ ಸೂಚಿಸಿದರು. ಅದಕ್ಕೆ ಜಮೀನಿನ ಮಾಲೀಕ ಪುಟ್ಟನಗೌಡ ಒಪ್ಪಿಗೆ ನೀಡಿದರು. ರೈತರು ಅದಕ್ಕೆ ಸಹಮತ ಸೂಚಿಸಿದರು. ಇದರಿಂದ ಸಮಸ್ಯೆ ಸರಳವಾಗಿ ಬಗೆಹರಿಯಿತು.

‘ಜಮೀನಿನ ಮಾಲೀಕ ತನ್ನ ಜಮೀನು ಹದ್ದುಬಸ್ತು ಮಾಡಿಸಿ ತಂತಿ ಬೇಲಿ ಹಾಕಿಕೊಳ್ಳುವುದಕ್ಕೆ ರೈತರು ಸಹಕಾರ ನೀಡಬೇಕು’ ಎಂದೂ ತಹಶೀಲ್ದಾರ್ ಸೂಚನೆ ನೀಡಿದರು. ಇದಕ್ಕೆ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು, ರೈತರು ಒಪ್ಪಿಗೆ ನೀಡಿದರು.

ಈ ಮೂಲಕ 40 ವರ್ಷಗಳಿಂದ ಈ ಭಾಗದ ರೈತರಿಗೂ, ಜಮೀನಿನ ಮಾಲೀಕನಿಗೂ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಪ್ರಕರಣ ಸುಖಾಂತ್ಯ ಕಂಡಿತು. ಪ್ರಕರಣ ಸುಖಾಂತ್ಯಗೊಂಡಿದ್ದಕ್ಕೆ ತಹಶೀಲ್ದಾರ್‌ಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸರ್ವೇಯರ್ ರಮೇಶ್‌, ಕಂದಾಯ ನಿರೀಕ್ಷಕ ರಮೇಶ್, ಗ್ರಾಮ ಲೆಕ್ಕಾಧಿಕಾರಿ ಮುನೇಶ್ ಹಾಗೂ ಕಂದಾಯಾಧಿಕಾರಿಗಳು, ಗ್ರಾಮದ ಮುಖಂಡರಾದ ಹನುಮಂತಪ್ಪ, ಮಾರಿಕೊಪ್ಪ ಎ.ಕೆ. ಮಂಜು, ರವಿ, ಚಿನ್ನಪ್ಪ, ಅರ್ಚಕರಾದ ಮಲ್ಲಿಕಾರ್ಜುನ್, ತಿಮ್ಮಪ್ಪ ಸೇರಿದಂತೆ ಹಲವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT