ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ರಂಗಭೂಮಿ, ಜಾನಪದ ಬೋಧನೆಯ ‘ಮೇಷ್ಟ್ರು’

ಜಾನಪದ ವಿದ್ವಾಂಸ ಡಾ.ಎಂ.ಜಿ. ಈಶ್ವರಪ್ಪ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
Last Updated 28 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ದಾವಣಗೆರೆ: ಶಿಕ್ಷಣ ತಜ್ಞ, ಜಾನಪದ ವಿದ್ವಾಂಸ ಡಾ.ಎಂ.ಜಿ. ಈಶ್ವರಪ್ಪ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ2020ನೇ ಸಾಲಿನ ಕರ್ನಾಟಕರಾಜ್ಯೋತ್ಸವ ಪ್ರಶಸ್ತಿ ಬಂದಿದೆ.

ರಂಗಭೂಮಿ, ಜಾನಪದ, ಸಂಶೋಧನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅವರನ್ನು ಜನರೂ ಈಗಲೂ ’ಈಶ್ವರಪ್ಪ ಮೇಷ್ಟ್ರು‘ ಎಂದೇ ಕರೆಯುತ್ತಾರೆ. 38 ವರ್ಷ ಅಧ್ಯಾಪಕರಾಗಿ ದುಡಿದಿರುವ ಇವರು ಈ ಕ್ಷೇತ್ರಗಳ ಅನುಭವವನ್ನು ಪಾಠಕ್ಕೆ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಧಾರೆ ಎರೆದಿದ್ದಾರೆ.

1950ರಂದುಶಿವಮೊಗ್ಗ ತಾಲ್ಲೂಕಿನ ಹಾಡೋನಹಳ್ಳಿಯಲ್ಲಿ ಜನಿಸಿದ ಇವರು ಇ‌ಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿ, ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಪೂರೈಸಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ. ಪಿಎಚ್‌.ಡಿ ಮುಗಿಸಿದರು. ಹುಟ್ಟಿದ್ದು, ಶಿವಮೊಗ್ಗ ಜಿಲ್ಲೆಯಾದರೂ ದಾವಣಗೆರೆ ಈಶ್ವರಪ್ಪ ಅವರ ಕಾರ್ಯಕ್ಷೇತ್ರವಾಯಿತು.

1987ರಿಂದ 90ರವರೆಗೆ ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. 2003ರಿಂದ 2006ರವರೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಹಾಗೂ 2007ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಮೆಂಬರ್ ಆಗಿ ಕೆಲಸ ನಿರ್ವಹಿಸಿ ಅಪಾರ ಅನುಭವಗಳಿಸಿದರು.

ಡಿ.ಆರ್.ಎಂ ಕಾಲೇಜು ಆನಂತರ ಎಂ.ಎಸ್‌.ಬಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಬಳಿಕ ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ಶೈಕ್ಷಣಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. 50 ವರ್ಷಗಳಿಂದಲೂ ಬೋಧನೆ, ಸಂಶೋಧನೆ ಹಾಗೂ ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಇವರು ‘ಪ್ರಜಾವಾಣಿ ಯುವ ಸಾಧಕ–2020’ಗಾಗಿ ಸಾಧಕರ ಆಯ್ಕೆಯ ತೀರ್ಪುಗಾರರಲ್ಲಿ ಒಬ್ಬರಾಗಿದ್ದರು. ‘ಪ್ರಜಾವಾಣಿ’ಯ ಜೊತೆ ಅವರು ಅನಿಸಿಕೆ ಹಂಚಿಕೊಂಡಿದ್ದಾರೆ.

* ಪ್ರಶಸ್ತಿ ಬಂದಿದ್ದಕ್ಕೆ ನಿಮ್ಮ ಅನಿಸಿಕೆ ಏನು,ಮುಂದೆ ಹೇಗೆ ಕೆಲಸ ಮಾಡುತ್ತೀರಿ?

ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಜವಾಬ್ದಾರಿಯನ್ನು ಹೆಚ್ಚಿಸಿದೆ. ಕಸಾಪ ಹಾಗೂ ಪ್ರತಿಮಾ ಸಭಾಗಳಲ್ಲಿ ಕನ್ನಡದ ಕೆಲಸ ಮಾಡಲು ಇನ್ನಷ್ಟು ಪ್ರೇರಣೆ ದೊರೆತಿದೆ. ರಂಗಭೂಮಿಯಲ್ಲೂ ಕನ್ನಡದ ಕೆಲಸ ಮಾಡುತ್ತಿದ್ದೇನೆ. ಕನ್ನಡದ ನಾಟಕಗಳು ನಡೆಯುತ್ತಿವೆ. ಜಾನಪದದಲ್ಲಿ ಈಗಲೂ ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ಜವಾಬ್ದಾರಿಯನ್ನು ಇತರರ ಜೊತೆ ಹಂಚಿಕೊಂಡು ಮುಂದೆ ಸಾಗುತ್ತೇನೆ.ನಾಟಕಗಳನ್ನು ಆಡುವುದು ದೊಡ್ಡ ಅನುಭವ. ಲಂಕೇಶ್, ಚಂಪಾ, ಕಾರ್ನಾಡರ ನಾಟಕಗಳನ್ನು ಆಡಿಸುವುದಕ್ಕೆ ಶ್ರಮ ಹಾಗೂ ಸಂಘಟನೆ ಬೇಕು. ಪ್ರೇಕ್ಷಕರಲ್ಲಿ ಅಭಿರುಚಿ ಮೂಡಿಸುವುದು ಶ್ರಮದ ಜೊತೆಗೆ ಸಂತೋಷ ನೀಡುತ್ತದೆ.

* ಶಿಕ್ಷಣದ ಬಗ್ಗೆ ತುಡಿತ ಹೇಗೆ ಬಂತು?

ಮೊದಲಿನಿಂದಲೂ ಶಿಕ್ಷಕನಾಗಬೇಕು ಎಂಬ ಆಸೆ ಇತ್ತು.ಪ್ರೌಢಶಾಲೆಯಲ್ಲಿದ್ದಾಗಲೇ ರಾಘವೇಂದ್ರರಾವ್ ಅವರು ನನ್ನ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದು, ಇವರು ನನಗೆ ಪ್ರೇರಣೆ. ನನ್ನನ್ನು ಉತ್ತಮ ವಿದ್ಯಾರ್ಥಿ ಎಂದು ಗುರುತಿಸಿ ಪೆನ್ ಅನ್ನು ಉಡುಗೊರೆಯಾಗಿ ನೀಡಿ ಪ್ರೋತ್ಸಾಹಿಸಿದ್ದರು. ಆಗಲೇ ನಾನುಒಳ್ಳೆಯ ಮೇಷ್ಟ್ರಾಗಬೇಕು ಎಂದು ನಿರ್ಧರಿಸಿದೆ.

ಸಹ್ಯಾದ್ರಿ ಕಾಲೇಜಿನಲ್ಲಿ ಸಾ.ಶಿ.ಮರುಳಯ್ಯ, ಡಾ.ಸಿದ್ದಲಿಂಗಯ್ಯ, ಎಂ.ಆರ್.ಶಾಸ್ತ್ರಿ, ಅಬ್ದುಲ್ ಕಯ್ಯೂಬ್, ಮಾನಸ ಗಂಗೋತ್ರಿಯಲ್ಲಿ ಎಂ.ಎ ಓದುತ್ತಿದ್ದಾಗ ಡಾ.ಎಲ್.ಬಸವರಾಜು, ಡಾ. ಹಾ.ಮ.ನಾಯಕ, ಎಚ್.ಎಂ. ಚನ್ನಯ್ಯ, ಸಿ.ಪಿ. ಕೃಷ್ಣಕುಮಾರ್, ವರದರಾಜ ರಾವ್, ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರಂತಹ ಮೇಧಾವಿ ಮೇಷ್ಟರ ಸಾಲು ಇತ್ತು. ಪಿ.ಜಿ.ಡಿಪ್ಲೊಮಾ ಇನ್ ಇಂಗ್ಲಿಷ್ ಸೇರಿದ ಮೇಲೆ ಡಾ.ಯು.ಆರ್. ಅನಂತಮೂರ್ತಿ ಅವರ ಶಿಷ್ಯನಾದೆ. ಅಂದಿನಿಂದಲೂ ಮೇಷ್ಟ್ರಾಗುವ ತುಡಿತ ಇತ್ತು.

ಸಂಶೋಧನೆಯ ಕ್ಷೇತ್ರಗಳು ಬೋಧನೆಗೆ ಹೇಗೆ ಅನುಕೂಲವಾದವು?

ನನಗೆ ಪಾಠ ಮಾಡುವುದು ಎಂದರೆ ಖುಷಿ. ಪಂಪ, ರನ್ನ, ಬಸವಣ್ಣ, ಕುವೆಂಪು ಅವರ ಪದ್ಯಗಳು, ಕಾದಂಬರಿಗಳು, ಕಥೆಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿದ್ದೆ. ವಿದ್ಯಾರ್ಥಿಗಳಿಂದ ತಕ್ಷಣ ಸಿಗುತ್ತಿದ್ದ ಪ್ರತಿಕ್ರಿಯೆಯಿಂದ ಬಹಳ ಸಂತೋಷವಾವಾಗುತ್ತಿತ್ತು. ಇದಕ್ಕೆ ಪೂರಕವಾಗಿಯೇ ನನ್ನ ಕೆಲಸಗಳು ನಡೆಯುತ್ತಿವೆ. ರಂಗಭೂಮಿ, ಜಾನಪದ, ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದ ನಾನು ಅವುಗಳನ್ನು ಬೋಧನೆಗೆಬಳಸಿಕೊಳ್ಳುತ್ತಿದೆ. ಸಮಾಜ ಸುಧಾರಣೆ ಹಾಗೂ ಸ್ವಸ್ಥ ಬದುಕಿನ ಮನರಂಜನೆಗೆ ರಂಗಭೂಮಿಯನ್ನು ಬಳಸಿಕೊಳ್ಳುತ್ತಿದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT