ಭಾನುವಾರ, ನವೆಂಬರ್ 28, 2021
19 °C
ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರ ಸಂಕಿರಣದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ

ಅಂಕ ಆಧಾರಿತ ಶಿಕ್ಷಣ ಇನ್ನಿಲ್ಲ, ಕೌಶಲಾಧಾರಿತವೇ ಎಲ್ಲ: ತೇಜಸ್ವಿ ವಿ. ಕಟ್ಟೀಮನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಅಂಕಗಳ ಆಧಾರದ ಪ್ರಮಾಣಪತ್ರಗಳ ಪದವಿ ಕಾಲ ಮುಗಿಯಿತು. ಇನ್ನೇನಿದ್ದರೂ ತಂತ್ರಜ್ಞಾನದ ಮೂಲಕ ಕೌಶಲ ಆಧಾರಿತ ಶಿಕ್ಷಣಕ್ಕೆ ಆದ್ಯತೆ. ಇದೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲ ಉದ್ದೇಶ ಎಂದು ಆಂಧ್ರಪ್ರದೇಶ ವಿಜಯನಗರ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ, ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಸದಸ್ಯ ಪ್ರೊ. ತೇಜಸ್ವಿ ವಿ. ಕಟ್ಟೀಮನಿ ಅಭಿಪ್ರಾಯಪಟ್ಟರು.

ದಾವಣಗೆರೆ ವಿಶ್ವವಿದ್ಯಾಲಯದ ವತಿಯಿಂದ ಬಾಪೂಜಿ ಎಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ಸಂಸ್ಥೆಯಲ್ಲಿ ಗುರುವಾರ ನಡೆದ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ಥಳೀಯ ಸಂಪನ್ಮೂಲ, ಪರಂಪರೆ, ಮೌಲ್ಯ, ವೃತ್ತಿ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಅನುಭವಿಸಿ ಕಲಿಸುವುದೇ ರಾಷ್ಟ್ರೀಯ ಶಿಕ್ಷಣ ನೀತಿ ಎಂದರು.

ಕಲಿಕಾ ಆಸಕ್ತಿ, ಕೌಶಲ ಮತ್ತು ಅಗತ್ಯಗಳನ್ನು ಅವಲೋಕಿಸಿ ವಿದ್ಯಾರ್ಥಿಗಳೇ ನಿರ್ಧರಿಸಿದ ವಿಷಯದಲ್ಲಿ ಅಧ್ಯಯನ ಮಾಡಲು, ಪದವಿ ಪಡೆಯಲು ಅವಕಾಶ ನೀಡಲಾಗಿದೆ. ಪ್ರಮಾಣಪತ್ರಕ್ಕಿಂತ ವಿದ್ಯಾರ್ಥಿಯ ಕಲಿಕೆಯ ಗುಣಮಟ್ಟ, ಬದುಕಿಗೆ ಬೇಕಾಗಿರುವ ವೃತ್ತಿಯ ಕೌಶಲ ಮತ್ತು ವ್ಯಕ್ತಿತ್ವ ವಿಕಸನದ ಶಿಕ್ಷಣವು ಹೆಚ್ಚು ಮಹತ್ವ ಪಡೆಯುತ್ತದೆ ಎಂದು ಹೇಳಿದರು.

ಪ್ರಸ್ತುತ ನೂತನ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು. ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯದ ಪಾಠ ಮಾಡದೇ ಶೈಕ್ಷಣಿಕ ಕೌಶಲಗಳನ್ನು ಕಲಿತು ತಿಳಿಸಬೇಕು. ಸಂಶೋಧನೆಯ ವಿವಿಧ ಆಯಾಮಗಳು, ಹೊಸತನದ ಹುಡುಕಾಟ, ವಿಭಿನ್ನ ವೃತ್ತಿ ಅವಕಾಶಗಳ ಬಗ್ಗೆಯೂ ಗಮನ ಹರಿಸಬೇಕು ಎಂದರು.

ಶಿಕ್ಷಣದಲ್ಲಿ ಆಗುತ್ತಿರುವ ಅಸಮತೋಲನ ನಿವಾರಿಸಲು ಹೊಸ ಶಿಕ್ಷಣ ನೀತಿಯಲ್ಲಿ ವಿದ್ಯೆ ಮತ್ತು ತರಬೇತಿ ಎರಡಕ್ಕೂ ಸಮಾನ ಮಹತ್ವ ನೀಡಲಾಗಿದೆ. ಬುದ್ಧಿ ಹಾಗೂ ಕೌಶಲ ಜೊತೆಯಾಗಿ ಹೋಗಬೇಕು ಎಂದು ಸಲಹೆ ನೀಡಿದರು.

ಶಿಕ್ಷಕರ ನಿಯುಕ್ತಿ, ತಕರಾರುಮುಕ್ತ ಕೆಲಸ ಮಾಡುವ ಅವಕಾಶ, ದಿಟ್ಟ ಪಠ್ಯ ರಚಿಸುವ ಸ್ವಾತಂತ್ರ್ಯ, ಶೇ 20ರಷ್ಟು ಸ್ಥಳೀಯ ವಿಷಯಗಳನ್ನು ಪಠ್ಯದಲ್ಲಿ ಅಳವಡಿಸುವ ಅವಕಾಶವನ್ನು ಎನ್‌ಇಪಿ ಹೊಂದಿದೆ ಎಂದರು.

ಬಿಐಇಟಿ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ, ‘ಯಾವುದೇ ವಿಷಯವನ್ನು ಮಾತೃಭಾಷೆಯಲ್ಲಿ ಕಲಿತಾಗಲೇ ಪ್ರಭುತ್ವ ಸಾಧಿಸಲು ಸಾಧ್ಯ. ಅಲ್ಲದೆ ಯಾವುದೇ ಯೋಜನೆ ಅನುಷ್ಠಾನಕ್ಕೆ ತರುವಾಗ ಹಲವಾರು ಸಮಸ್ಯೆಗಳು ಇರುವುದು ಸಹಜ. ಅದಕ್ಕಾಗಿ ಕಾಯ್ದು ಕುಳಿತುಕೊಳ್ಳದೇ ಲಭ್ಯವಿರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ಮುನ್ನಡೆಯುವುದು ಮುಖ್ಯ’ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಟಾಸ್ಕ್‌ಫೋರ್ಸ್ ಸಮಿತಿ ಅಧ್ಯಕ್ಷ, ಕರ್ನಾಟಕ ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಪ್ರೊ. ಬಿ.ತಿಮ್ಮೇಗೌಡ ಆನ್‌ಲೈನ್‌ ಮೂಲಕ ಮಾತನಾಡಿ, ‘ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಿಂದ ಈ ವರ್ಷದ ಮಕ್ಕಳು ಕೂಡ ವಂಚಿತರಾಗಬಾರದು ಎಂಬ ಕಾರಣಕ್ಕೆ ಈ ಬಾರಿಯೇ ಎನ್‌ಇಪಿ ಜಾರಿ ಮಾಡಲಾಗಿದೆ’ ಎಂದು ತಿಳಿಸಿದರು.

ಕುಲಪತಿ ಪ್ರೊ. ಶರಣಪ್ಪ ವಿ ಹಲಸೆ ಅಧ್ಯಕ್ಷತೆ ವಹಿಸಿದ್ದರು.  ಬಿಐಇಟಿ ಕಾಲೇಜು ಪ್ರಾಚಾರ್ಯ ಪ್ರೊ. ಅರವಿಂದ, ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವೆ ಪ್ರೊ. ಅನಿತಾ ಎಚ್.ಎಸ್, ಹಣಕಾಸು ಅಧಿಕಾರಿ ಪ್ರಿಯಾಂಕ ಡಿ, ಸಿಂಡಿಕೇಟ್ ಸದಸ್ಯರಾದ ಡಾ. ರಾಮನಾಥ, ವಿಜಯಲಕ್ಷ್ಮೀ ಹಿರೇಮಠ, ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾದ ಪ್ರೊ. ಅಂಗಡಿ, ಶಿವಕುಮಾರ ಉಪಸ್ಥಿತರಿದ್ದರು. ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ್ ಸ್ವಾಗತಿಸಿದರು. ಡಾ. ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಡಾ. ಗೋಪಾಲ ಎಂ. ಅಡವಿರಾವ್ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು