ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಅಭಿವೃದ್ಧಿಗೆ ಪಕ್ಷಭೇದ ಬೇಡ

ಸನ್ಮಾನ ಸಮಾರಂಭದಲ್ಲಿ ಶಾಸಕ ಎಸ್‌.ವಿ. ರಾಮಚಂದ್ರ
Last Updated 5 ಜನವರಿ 2020, 14:15 IST
ಅಕ್ಷರ ಗಾತ್ರ

ದಾವಣಗೆರೆ: ‘ನಮ್ಮ ಸಮಾಜದ ಮತ್ತು ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿಗೆ ಪಕ್ಷ ಮರೆತು ಕೆಲಸ ಮಾಡಬೇಕು. ‍ಪಕ್ಷ ರಾಜಕೀಯವನ್ನು ಅಭಿವೃದ್ಧಿಯ ಆಚೆಗೆ ಇಟ್ಟುಕೊಂಡು ಮಾಡೋಣ’ ಎಂದು ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ ಹೇಳಿದರು.

ನಾಯಕ ವಿದ್ಯಾರ್ಥಿ ನಿಲಯದಿಂದ ವಾಲ್ಮೀಕಿ ಸಮಾಜ ಶಾಸಕರಿಗೆ ಹಾಗೂ ಪಾಲಿಕೆ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪಾಲಿಕೆ ಸದಸ್ಯರಾಗಿ ನಮ್ಮ ಸಮಾಜದವರು ಬಿಜೆಪಿ, ಕಾಂಗ್ರೆಸ್‌ ಅಥವಾ ಇನ್ನಿತರ ಯಾವುದೇ ಪಕ್ಷದಿಂದ ಗೆದ್ದರೂ ಸಮಾಜಕ್ಕಾಗಿ ಒಟ್ಟಿಗೆ ದುಡಿಯಬೇಕು. ಯಾವುದೇ ಸಹಕಾರ ನೀಡಲು ನಾನು ತಯಾರು ಇದ್ದೇನೆ’ ಎಂದರು.

‘ಇಲ್ಲಿನ ನಾಯಕ ವಸತಿ ನಿಲಯದಲ್ಲಿ ಓದಿ ಬೆಳೆದವನು ನಾನು. ಜಗಳೂರು ಕ್ಷೇತ್ರಕ್ಕೆ ಎಸ್‌ಟಿ ಮೀಸಲಾತಿ ಇರುವುದರಿಂದ, ನಾನು ನಾಯಕ ಜನಾಂಗದಲ್ಲಿ ಹುಟ್ಟಿದ್ದರಿಂದ ಶಾಸಕನಾಗಲು ಸಾಧ್ಯವಾಗಿದೆ. ಈ ಸಮಾಜದ ಋಣ ತೀರಿಸಲು ಬದ್ಧನಾಗಿದ್ದೇನೆ. ನನ್ನನ್ನು ಬಳಸಿಕೊಳ್ಳಿ’ ಎಂದು ತಿಳಿಸಿದರು.

ಜಗಳೂರು ತಾಲ್ಲೂಕಿನಲ್ಲಿ 100 ವರ್ಷಗಳಲ್ಲಿ ಸುಮಾರು 70 ವರ್ಷ ಬರಗಾಲವೇ ಇತ್ತು. ಈ ಬಾರಿ ಮಳೆ ಬಾರದೇ ಹೋಗಿದ್ದರೆ ಕುಡಿಯುವ ನೀರಿಗೂ ಪರದಾಡಬೇಕಿತ್ತು. ತುಂಗಭದ್ರಾ ನದಿಯಿಂದ 57 ಕೆರೆಗಳನ್ನು ತುಂಬಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಗೆ ನೀಡಿದ್ದಾರೆ. ಈ ತಿಂಗಳ ಅಂತ್ಯದೊಳಗೆ ಆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಅಲ್ಲದೇ ಭದ್ರ ಮೇಲ್ದಂಡೆ ಯೋಜನೆಗೆ ರಾಜ್ಯ ಸರ್ಕಾರವು ₹ 1,300 ಕೋಟಿ ಬಿಡುಗಡೆ ಮಾಡಿದೆ’ ಎಂದು ತಿಳಿಸಿದರು.

ನಾಯಕ ಸಮಾಜ ಮತ್ತು ನಾಯಕರ ವಸತಿನಿಲಯವನ್ನು ಇನ್ನಷ್ಟು ಅಭಿವೃದ್ಧಿ ಮಾಡಬೇಕು. ಮಾದರಿ ಸಮಾಜವನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ನಾಯಕ ವಿದ್ಯಾರ್ಥಿನಿಲಯದ ಅಧ್ಯಕ್ಷ ಬಿ. ವೀರಣ್ಣ ಮಾತನಾಡಿ, ‘ಪಾಲಿಕೆ ಚುನಾವಣೆಯಲ್ಲಿ 5 ಮಂದಿ ನಮ್ಮ ಸಮಾಜದಿಂದ ಆಯ್ಕೆಯಾಗಿದ್ದಾರೆ. ಮುಂದಿನ ಬಾರಿ 10 ಮಂದಿ ಆಯ್ಕೆಯಾಗಬೇಕು. ಯಾವುದೇ ಪಕ್ಷದಿಂದ ನಿಲ್ಲುವ ನಮ್ಮ ಸಮಾಜದವರಿಗೆ ಶಕ್ತಿ ತುಂಬುವ ಕೆಲಸ ಮಾಡಲಿದ್ದೇವೆ. ಸಮಾಜದ 17 ಮಂದಿ ಶಾಸಕರಿದ್ದಾರೆ. ಎಲ್ಲರೂ ಸೇರಿ ಶೇ 7.5 ಮೀಸಲಾತಿ ಸಿಗುವಂತೆ ಮಾಡಬೇಕು’ ಎಂದು ಆಗ್ರಹಿಸಿದರು.

ಶಾಸಕ ಎಸ್‌.ವಿ. ರಾಮಚಂದ್ರ ಮತ್ತು ಇಂದಿರಾ ದಂಪತಿಯನ್ನು ಗೌರವಿಸಲಾಯಿತು. ಪಾಲಿಕೆ ಸದಸ್ಯರಾದ ಬಿ.ಎಚ್‌. ವಿನಾಯಕ ಪೈಲ್ವಾನ್‌, ಸವಿತಾ ಗಣೇಶ ಹುಲ್ಲುಮನಿ, ಪಾಮೇನಹಳ್ಳಿ ಪಿ.ಎಸ್. ನಾಗರಾಜ್‌, ಯಶೋದಾ ಉಮೇಶ್‌ ಜಿ, ಕಲ್ಲಳ್ಳಿ ನಾಗರಾಜ್‌ ಅವರನ್ನು ಸನ್ಮಾನಿಸಲಾಯಿತು.

ನಾಯಕ ವಿದ್ಯಾರ್ಥಿನಿಲಯದ ಉಪಾಧ್ಯಕ್ಷ ಆರ್‌.ಎಸ್‌. ಶೇಖರಪ್ಪ, ನಿರ್ದೇಶಕ ಶಾಹು, ಜಿಲ್ಲಾ ವಾಲ್ಮೀಕಿ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಉಪಸ್ಥಿತರಿದ್ದರು. ಶ್ರೀನಿವಾಸ್‌ ದಾಸಕರಿಯಪ್ಪ ಸ್ವಾಗತಿಸಿದರು. ಎನ್‌.ಎಂ. ಆಂಜನೇಯ ಗುರೂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್‌. ಲಕ್ಷ್ಮಣ್‌ ವಂದಿಸಿದರು. ಶಾಮನೂರು ಪ್ರವೀಣ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT