ಮಂಗಳವಾರ, ಜೂನ್ 2, 2020
27 °C
ಹೊರಗಿನಿಂದ ಬಂದವರನ್ನು ತಪಾಸಣೆ ನಡೆಸುವ ವೈದ್ಯರ ಅಳಲು

ಪ್ರಾಥಮಿಕ ಸೌಲಭ್ಯವೇ ಇಲ್ಲ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

ದಾವಣಗೆರೆ: ಬೇರೆ ಜಿಲ್ಲೆ ಮತ್ತು ಬೇರೆ ರಾಜ್ಯಗಳಿಂದ ಜಿಲ್ಲೆಗೆ ಬಂದವರ ಆರೋಗ್ಯ ತಪಾಸಣೆ ಮಾಡುವಂತೆ ಸಮುದಾಯ ಆರೋಗ್ಯ ಕೇಂದ್ರಗಳಿಗೆ, ನಗರ ಆರೋಗ್ಯ ಕೇಂದ್ರಗಳಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೂಚಿಸಲಾಗಿದೆ. ಆದರೆ ಅಲ್ಲಿನ ವೈದ್ಯರಿಗೆ, ಆಯಾಗಳಿಗೆ, ಆಶಾ ಕಾರ್ಯಕರ್ತೆಯರಿಗೆ ಮೂಲ ಅಗತ್ಯಗಳನ್ನು ಒದಗಿಸಿಲ್ಲ ಎಂದು ವೈದ್ಯರು ಅಲವತ್ತುಕೊಂಡಿದ್ದಾರೆ.

‘ಬೆಂಗಳೂರು ಮತ್ತು ಇತರ ಕಡೆಗಳಿಂದ ಸುಮಾರು 19,500 ಮಂದಿ ಬಂದಿದ್ದಾರೆ. ಈಗ ಅವರಿಗೆ ಕೆಮ್ಮು, ನೆಗಡಿ, ಜ್ವರ, ಗಂಟಲುಬಾಧೆ ಇದೆಯೇ ಎಂದು ಪರೀಕ್ಷಿಸಲು, ಇದ್ದರೆ ಚಿಕಿತ್ಸೆ ನೀಡಲು ಜಿಲ್ಲಾ ಆರೋಗ್ಯ ಅಧಿಕಾರಿ ಸೂಚನೆ ನೀಡಿದ್ದಾರೆ. ಆದರೆ ನಮ್ಮಲ್ಲಿ ಮಾಮೂಲಿ ಮಾಸ್ಕ್‌, ಸ್ಯಾನಿಟೈಜರ್‌ ಬಿಟ್ಟರೆ ಕೋವಿಡ್‌–19 ಇರಬಹುದಾದವರಿಗೆ ಚಿಕಿತ್ಸೆ ನೀಡಲು ಬೇಕಾದ ಸೌಕರ್ಯ ಕೊಟ್ಟಿಲ್ಲ’ ಎಂದು ನಗರ ಆರೋಗ್ಯ ಕೇಂದ್ರದ ವೈದ್ಯರೊಬ್ಬರು ಆರೋಪಿಸಿದರು.

‘ಕೊರೊನಾ ವೈರಸ್‌ ಸೋಂಕು ಇದೆಯೇ ಎಂಬುದು ಮೊದಲು ಗೊತ್ತಿರುವುದಿಲ್ಲ. ಪರೀಕ್ಷೆ ಮಾಡಿದ ಬಳಿಕ ಗೊತ್ತಾಗುವುದು. ಹಾಗಾಗಿ ಪೂರ್ತಿ ಕವರ್‌ ಮಾಡಿಕೊಂಡೇ ಪರೀಕ್ಷೆ ಮಾಡಬೇಕಾಗುತ್ತದೆ. ಪರೀಕ್ಷೆ ಮಾಡಲು ಹೋಗಿ ನಾವೇ ಸೋಂಕಿಗೆ ಒಳಗಾದರೆ ಕಷ್ಟ. ಕನಿಷ್ಠ ಎನ್‌ 95 ಮಾಸ್ಕ್‌ ಕೂಡ ನೀಡಿಲ್ಲ’ ಎಂಬುದು ಅವರ ಆಪಾದನೆ.

‘ಬೇರೆ ಜಿಲ್ಲೆ ಮತ್ತು ಬೇರೆ ರಾಜ್ಯಗಳಿಂದ ಬಂದವರು ಎಲ್ಲೆಲ್ಲಿ ಇದ್ದಾರೆ ಎಂದು ಮೊದಲ ಸುತ್ತಿನಲ್ಲಿ ಗುರುತಿಸಲಾಗಿದೆ. ಬಹುತೇಕ ಎಲ್ಲರೂ ತಮ್ಮ ಮನೆಯಲ್ಲಿಯೇ ಇದ್ದಾರೆ. ಈವರೆಗೆ ಯಾರಿಗೂ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಆದರೂ ಎರಡನೇ ಸುತ್ತಿನಲ್ಲಿ ಮಾಮೂಲು ಜ್ವರ, ಕೆಮ್ಮು, ಶೀತ, ಗಂಟಲುನೋವು ಇದೆಯೇ ಎಂದು ನೋಡಲಾಗುತ್ತದೆ. ಮಾಸ್ಕ್‌, ಸ್ಯಾನಿಟೈಸರ್‌ ಮತ್ತು ಗ್ಲೌಸ್‌ ನೀಡಲಾಗಿದೆ. ಇದಕ್ಕೆ ಎನ್‌ 95 ಮಾಸ್ಕ್‌ ಬೇಕಾಗಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್‌.ಎಸ್‌. ರಾಘವೇಂದ್ರ ಸ್ವಾಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಸೋಂಕಿನ ಲಕ್ಷಣಗಳು ಕಂಡುಬಂದರೆ ಮಾತ್ರ ಅವರು ಶಿಫಾರಸು ಮಾಡಬೇಕಾಗುತ್ತದೆ. ಜಿಲ್ಲಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗುತ್ತದೆ. ಆಗ ಎಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುವುದು. ಜ್ವರ, ಶೀತ, ಕೆಮ್ಮು ಇದೆಯೇ ಎಂದು ಕೇಳಲು ಇದೆಲ್ಲ ಬೇಕಾಗಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು