ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾಮತ’ ಜಾತ್ರೆಯ ಸಂಭ್ರಮಕ್ಕೆ ಸಜ್ಜಾದ ದಾವಣಗೆರೆ ಜಿಲ್ಲೆ

ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ
Last Updated 22 ಏಪ್ರಿಲ್ 2019, 14:49 IST
ಅಕ್ಷರ ಗಾತ್ರ

ದಾವಣಗೆರೆ: ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಮಂಗಳವಾರ (ಏ. 23) ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ.

ಚುನಾವಣಾ ಕಣದಲ್ಲಿ ಒಟ್ಟು 25 ಹುರಿಯಾಳುಗಳಿದ್ದಾರೆ. ಬಿಜೆಪಿ, ಕಾಂಗ್ರೆಸ್‌ (ಮೈತ್ರಿ ಅಭ್ಯರ್ಥಿ) ಬಿಎಸ್‌ಪಿ, ಎಸ್‌.ಯು.ಸಿ.ಐ.(ಸಿ), ಉತ್ತಮ ಪ್ರಜಾಕೀಯ ಪಾರ್ಟಿ, ಇಂಡಿಯಾ ಪ್ರಜಾ ಬಂಧು ಪಾರ್ಟಿ, ಇಂಡಿಯನ್‌ ಲೇಬರ್‌ ಪಾರ್ಟಿ–ಅಂಬೇಡ್ಕರ್‌ ಫುಲೆ ಜೊತೆಗೆ 18 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಜಿಲ್ಲೆಯ 1,949 ಮತಗಟ್ಟೆಗಳಲ್ಲಿ ‘ಮತದಾರ ಪ್ರಭು’ಗಳು ಇವಿಎಂ ಯಂತ್ರಗಳ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ ಅಭ್ಯರ್ಥಿಗಳ ‘ಹಣೆಬರಹ’ವನ್ನು ಬರೆಯಲಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ 73.23 ಮತದಾನವಾಗಿತ್ತು. ಈ ಬಾರಿ ‘ಸ್ವೀಪ್‌’ ಕಾರ್ಯಕ್ರಮದಡಿ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಜಿಲ್ಲೆಯಾದ್ಯಂತ ಕಡ್ಡಾಯವಾಗಿ ಮತದಾನ ಮಾಡುವ ಕುರಿತು ಜನಜಾಗೃತಿ ಮೂಡಿಸಲಾಗಿದೆ. ಮತದಾನ ಪ್ರಮಾಣ ಎಷ್ಟು ಹೆಚ್ಚಲಿದೆ ಎಂಬುದು ಮಂಗಳವಾರ ರಾತ್ರಿ ವೇಳೆಗೆ ತಿಳಿಯಲಿದೆ.

ಜಿಲ್ಲೆಯಲ್ಲಿ ಒಟ್ಟು 16,34,860 ಮತದಾರರಿದ್ದು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ (2,08,700 ಮತ) ಅತಿ ಹೆಚ್ಚು ಹಾಗೂ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ (1,89,723 ಮತ) ಅತಿ ಕಡಿಮೆ ಮತದಾರರಿದ್ದಾರೆ.

16 ಸಖಿ ಮತಗಟ್ಟೆ: ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ತಲಾ ಎರಡರಂತೆ ಒಟ್ಟು 16 ಕಡೆ ಸಖಿ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಸಖಿ ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಮಹಿಳೆಯರೇ ಆಗಿರುವುದು ವಿಶೇಷ.

ವಿಧಾನಸಭಾ ಚುನಾವಣೆಯಲ್ಲಿ ಸಖಿ ಮತಟ್ಟೆಗಳಿಗೆ ‘ಪಿಂಕ್‌’ ಬಣ್ಣವನ್ನು ನಿಗದಿಪಡಿಸಲಾಗಿತ್ತು. ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳೆಯರೂ ಪಿಂಕ್‌ ಬಣ್ಣ ಸೀರೆ ಉಟ್ಟುಕೊಂಡು ಬಂದಿದ್ದರು. ಈ ಬಾರಿ ಯಾವುದೇ ನಿರ್ದಿಷ್ಟ ಬಣ್ಣವನ್ನು ನಿಗದಿಪಡಿಸಿಲ್ಲ.

ಜಿಲ್ಲೆಯಲ್ಲಿ ಒಟ್ಟು 16 ಸಾಂಪ್ರದಾಯಿಕ ಮತಗಟ್ಟೆಗಳನ್ನಾಗಿ ಮಾರ್ಪಡಿಸಲಾಗಿದೆ. ಈ ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕಾರ ಮಾಡಿ ದೇಸಿ ಸೊಗಡು ನೀಡಲಾಗುತ್ತಿದೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಒಂದು ಅಂಗವಿಕಲರ ಮತಗಟ್ಟೆ ನಿರ್ಮಿಸಲಾಗಿದೆ.

ಹೆಚ್ಚಿದ 1.12 ಲಕ್ಷ ಮತದಾರರು

2014ರ ಚುನಾವಣೆಯಲ್ಲಿ 7,71,821 ಪುರುಷರು, 7,50,411 ಮಹಿಳೆಯರು ಮತ್ತು 106 ಇತರೆ ಸೇರಿ ಒಟ್ಟು 15,22,338 ಮತದಾರರಿದ್ದರು. ಈ ಬಾರಿ 8,24,331 ಪುರುಷರು, 8,10,400 ಮಹಿಳೆಯರು ಹಾಗೂ 129 ಇತರೆ ಸೇರಿ ಒಟ್ಟು 16,34,860 ಮತದಾರರು ಇದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಮತದಾರರ ಸಂಖ್ಯೆ 1,12,522ರಷ್ಟು ಹೆಚ್ಚಾಗಿದೆ.

17,577 ಅಂಗವಿಕಲ ಮತದಾರರು ಹಾಗೂ 9,196 ಗರ್ಭಿಣಿ ಮತದಾರರು ಇದ್ದಾರೆ. ಮತದಾನ ಮಾಡಲು ಬಯಸುವ ಅಂಗವಿಕಲರು, ಅಂಧರು, ವೃದ್ಧರು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಮತಗಟ್ಟೆಗೆ ಬರಲು ವಾಹನದ ಸೌಲಭ್ಯ ಕಲ್ಪಿಸಲಾಗುತ್ತಿದೆ.

**

ವಿಧಾನಸಭಾ ಕ್ಷೇತ್ರವಾರು ಮತದಾರರ ವಿವರ

ವಿಧಾನಸಭಾ ಕ್ಷೇತ್ರ– ಪುರುಷರು– ಮಹಿಳೆರು– ಇತರೆ– ಒಟ್ಟು ಮತದಾರರು

ಜಗಳೂರು– 96,143– 93,570– 10– 1,89,723

ಹರಪನಹಳ್ಳಿ– 1,04,356– 99,739– 18– 2,04,113

ಹರಿಹರ– 104188– 1,04,006– 17– 2,08,211

ದಾವಣಗೆರೆ (ಉ)– 1,21,501– 1,22,041– 32– 2,43,574

ದಾವಣಗೆರೆ (ದ)– 1,04,689– 1,03,976– 35– 2,08,700

ಮಾಯಕೊಂಡ– 96,740– 94,262– 5– 1,91,007

ಚನ್ನಗಿರಿ– 98,920– 96,898– 9– 1,95,827

ಹೊನ್ನಾಳಿ– 97,794– 95,908– 3– 1,93,705

ಒಟ್ಟು– 8,24,331– 8,10,400– 129– 16,34,860

ಜಿಲ್ಲೆಯ ಮತಗಟ್ಟೆ– ಸಿಬ್ಬಂದಿ ವಿವರ

ವಿಧಾನಸಭಾ ಕ್ಷೇತ್ರ– ಮತಗಟ್ಟೆ ಸಂಖ್ಯೆ– ದುರ್ಬಲ ಮತಗಟ್ಟೆ– ಸೂಕ್ಷ್ಮ ಮತಗಟ್ಟೆ– ಸಿಬ್ಬಂದಿ

ಜಗಳೂರು– 262– 54– 12– 1,110

ಹರಪನಹಳ್ಳಿ– 257– 78– 4– 1,445

ಹರಿಹರ– 240– 83– 13– 1,190

ದಾವಣಗೆರೆ (ಉ)– 245– 37– 18– 1,527

ದಾವಣಗೆರೆ (ದ)– 211– 61– 10– 778

ಮಾಯಕೊಂಡ– 240– 69– 07– 929

ಚನ್ನಗಿರಿ– 249– 55– 02– 1,236

ಹೊನ್ನಾಳಿ– 245– 79– 14– 1,304

ಒಟ್ಟು– 1,949– 516– 80– 9,519

ಅಂಕಿ–ಅಂಶಗಳು

17,577 ಲೋಕಸಭಾ ಕ್ಷೇತ್ರದಲ್ಲಿರುವ ಅಂಗವಿಕಲ ಮತದಾರರು

9,196 ಕ್ಷೇತ್ರದಲ್ಲಿರುವ ಗರ್ಭಿಣಿ ಮತದಾರರು

1,949 ಕ್ಷೇತ್ರದಲ್ಲಿ ತೆರೆದಿರುವ ಒಟ್ಟು ಮತಗಟ್ಟೆಗಳು

516 ಕ್ಷೇತ್ರದಲ್ಲಿರುವ ಸೂಕ್ಷ್ಮ ಮತಗಟ್ಟೆಗಳು

80 ಕ್ಷೇತ್ರದಲ್ಲಿರುವ ದುರ್ಬಲ ಮತಗಟ್ಟೆಗಳು

9,519 ನಿಯೋಜನೆಗೊಂಡ ಮತದಾನ ಸಿಬ್ಬಂದಿ

ಗಮನ ಸೆಳೆದ ಪೌರ ರಕ್ಷಕರು

ಚುನಾವಣಾ ಬಂದೋಬಸ್ತ್‌ಗೆ ಇದೇ ಮೊದಲ ಬಾರಿಗೆ ಜಿಲ್ಲೆಗೆ ಪೌರ ರಕ್ಷಕ ದಳದ ಸಿಬ್ಬಂದಿ ಬಂದಿದ್ದಾರೆ. ನಿಂಬೆ ಹಳದಿ ಬಣ್ಣದ ಜಾಕೆಟ್‌ ತೊಟ್ಟ ಪೌರ ರಕ್ಷಕರು ಗಮನ ಸೆಳೆಯುತ್ತಿದ್ದಾರೆ.

‘ನಾವು ವಿಪತ್ತು ನಿರ್ವಹಣೆ ತರಬೇತಿ ಪಡೆದಿದ್ದೇವೆ. ಬೆಂಗಳೂರಿನಲ್ಲಿ ಕಳೆದ ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಗಳಲ್ಲೂ ಪೊಲೀಸರೊಂದಿಗೆ ಭದ್ರತಾ ಕಾರ್ಯಕ್ಕೆ ಸಹಕಾರ ನೀಡಿದ್ದೆವು. ಇದೇ ಮೊದಲ ಬಾರಿ ಚುನಾವಣೆಗೆ ನಮ್ಮನ್ನು ಕರೆಸಿಕೊಂಡಿದ್ದಾರೆ. ದಾವಣಗೆರೆ ದಕ್ಷಿಣ ಹಾಗೂ ಉತ್ತರ ಕ್ಷೇತ್ರಗಳಲ್ಲಿ ತಲಾ 40 ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ವಾಹನದಲ್ಲಿ ಪೆಟ್ರೋಲಿಂಗ್‌ ಮಾಡುತ್ತಿರುತ್ತೇವೆ. ತುರ್ತು ಅಗತ್ಯ ಬಿದ್ದಾಗ ಮತಗಟ್ಟೆಗೆ ತೆರಳಿ ಭದ್ರತಾ ಕಾರ್ಯ ಕೈಗೊಳ್ಳುತ್ತೇವೆ’ ಎಂದು ಪೌರ ರಕ್ಷಣ ದಳದ ವಿಶೇಷ ಪೊಲೀಸ್‌ ಅಧಿಕಾರಿ ರಾಜೇಂದ್ರ ಎಸ್‌.ವಿ. ‘ಪ್ರಜಾವಾಣಿ’ಗೆ ತಿಳಿಸಿದರು.

ಭದ್ರತೆಗೆ 3,500 ಸಿಬ್ಬಂದಿ ನಿಯೋಜನೆ

ಚುನಾವಣೆಯನ್ನು ಶಾಂತಿಯುತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಭದ್ರತಾ ಕಾರ್ಯಕ್ಕೆ 3,500 ಸಿಬ್ಬಂದಿ ನಿಯೋಜಿಸಲಾಗಿದೆ.

ಭದ್ರತಾ ಕಾರ್ಯಕ್ಕೆ ಹೋಮ್‌ ಹಾರ್ಡ್‌, ಪೌರ ರಕ್ಷಕರು, ಡಿ.ಎ.ಆರ್‌, ಕೆ.ಎಸ್‌.ಆರ್‌.ಪಿ, ಸೆಂಟ್ರಲ್‌ ಪ್ಯಾರಾ ಮಿಲಿಟರಿ ಫೋರ್ಸ್‌ನ ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ. ಪ್ರತಿ ಮತಗಟ್ಟೆಗೂ ಒಬ್ಬ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT