ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆ ಶಿಫಾರಸಿನಲ್ಲಿ ಖಾಸಗಿಯಲ್ಲಿ ಚಿಕಿತ್ಸೆ: ಸಂಸದ ಜಿ.ಎಂ.ಸಿದ್ದೇಶ

ಆಮ್ಲಜನಕ ಪೂರೈಕೆ, ಬೆಡ್‍, ಲಸಿಕೆ ನಿರ್ವಹಣೆ ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ
Last Updated 13 ಮೇ 2021, 9:05 IST
ಅಕ್ಷರ ಗಾತ್ರ

ದಾವಣಗೆರೆ: ಕೋವಿಡ್ ರೋಗಿಗಳು ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸು ಪಡೆದು ಎಬಿಎಆರ್‌ಕೆ ಯೋಜನೆಯಡಿ ಎಂಪಾನೆಲ್ ಆಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಮನವಿ ಮಾಡಿದರು.

ಆಮ್ಲಜನಕ ಪೂರೈಕೆ ಮತ್ತು ಬೆಡ್‍ಗಳು ಮತ್ತು ಲಸಿಕೆ ನಿರ್ವಹಣೆ ಕುರಿತು ಚರ್ಚಿಸಲು ಬುಧವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಶೇ 50 ಮತ್ತು ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಶೇ 75 ಬೆಡ್‍ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಬೇಕೆಂಬ ನಿಯಮವಿದೆ. ಇದುವರೆಗೆ ಎಬಿಎಆರ್‍ಕೆಯಿಂದ ಖಾಸಗಿ ಆಸ್ಪತ್ರೆಗೆ ರೆಫರೆನ್ಸ್ ಪಡೆದು ಕೇವಲ 64 ಜನರು ಮಾತ್ರ ಉಚಿತ ಚಿಕಿತ್ಸೆಯ ಸದುಪಯೋಗ ಪಡೆದಿದ್ದಾರೆ. ಸಿ.ಜಿ. ಆಸ್ಪತ್ರೆ ಹೊರತುಪಡಿಸಿ ಖಾಸಗಿಯಲ್ಲಿ 1,535 ಬೆಡ್‍ಗಳು ರೋಗಿಗಳಿಗೆ ನಿಗದಿ ಆಗಿದೆ. ಜನರು ಈ ಯೋಜನೆಯ ಬಳಕೆ ಮಾಡುತ್ತಿಲ್ಲ ಎಂದರು.

ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ ವತಿಯಿಂದ ಸರ್ಕಾರ ಜಾರಿಗೊಳಿಸಿರುವ ಎಬಿಎಆರ್‌ಕೆ ಅಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ರೆಫರೆನ್ಸ್ ನೀಡಲು ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ಪಾಳಿಯಲ್ಲಿ ಕೆಲಸ ಮಾಡುವ ವೈದ್ಯರು ಸೇರಿ 8 ಜನರ ಹೆಲ್ಪ್‌ಡೆಸ್ಕ್ ತಂಡ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರತಿಷ್ಠಿತ ಬಡಾವಣೆಗಳಲ್ಲಿಯೇ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಪ್ರತ್ಯೇಕ ಕೊಠಡಿ ಇತರೆ ವ್ಯವಸ್ಥೆ ಇದೆ ಎಂದು ಮನೆಯಲ್ಲಿಯೇ ಐಸೊಲೇಟ್ ಆಗುತ್ತಿದ್ದಾರೆ. ಆದರೆ ಸಮರ್ಪಕವಾಗಿ ಐಸೊಲೇಷನ್ ನಿಯಮ ಪಾಲಿಸದೇ ಮನೆಯವರೆಲ್ಲ ಪಾಸಿಟಿವ್ ಆಗುತ್ತಿದ್ದಾರೆ. ರಳಬಾಳು ಬಾಲಕಿಯರ ಹಾಸ್ಟೆಲ್‍ನ್ನು ಕೋವಿಡ್ ಆರೈಕೆ ಕೇಂದ್ರವಾಗಿಸಲು ನೀಡಿದ್ದು ಇಲ್ಲಿ 90 ಜನರಿಗೆ ಅವಕಾಶವಿದೆ. ಇಲ್ಲಿ ಐಸೋಲೇಟ್ ಆಗುವ ಮೂಲಕ ಕೋವಿಡ್ ಸರಪಳಿಯನ್ನು ತುಂಡರಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ತಾಲ್ಲೂಕುಗಳಲ್ಲಿನ ಕೋವಿಡ್ ಕೇರ್ ಸೆಂಟರ್‌ಗಳ ಬಳಕೆಯನ್ನು ಜನರು ಮಾಡಿಕೊಳ್ಳಬೇಕು. ನ್ಯಾಮತಿ ತಾಲ್ಲೂಕಿನ ರಾಮೇಶ್ವರ ಗ್ರಾಮದಲ್ಲಿ ಕಂಟೈನ್‍ಮೆಂಟ್ ಝೋನ್ ಮಾಡಲಾಗಿದೆ. ಎಲ್ಲ ತಾಲ್ಲೂಕುಗಳಲ್ಲಿ 50 ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ ಇದ್ದು, ಗಂಭೀರವಾದ ರೋಗಿಗಳನ್ನು ಮಾತ್ರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಬೇಕು ಎಂದರು.

ಕೇಂದ್ರ ಸರ್ಕಾರ ದೇಶದಲ್ಲಿ ಹೆಚ್ಚು ಪ್ರಕರಣ ಇರುವ 100 ಜಿಲ್ಲೆಗಳನ್ನು ಗುರುತಿಸಿದ್ದು ಅದರಲ್ಲಿ 17 ಜಿಲ್ಲೆ ನಮ್ಮ ರಾಜ್ಯ ಸೇರಿದ್ದವಾಗಿವೆ. ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳ ಪಟ್ಟಿಯಲ್ಲಿ ದಾವಣಗೆರೆ ಇದೆ ಎಂದು ತಿಳಿಸಿದರು.

ಸುಕ್ಷೇಮ, ಸುಚೇತ, ಆರೈಕೆ, ಆಶ್ರಯ ಸೇರಿ ಕೋವಿಡ್ ಚಿಕಿತ್ಸೆ ನೀಡುವ ಆಸ್ಪತ್ರೆಗಳ ವೈದ್ಯರು ಆಮ್ಲಜನಕಕ್ಕಾಗಿ ಬೇಡಿಕೆ ಸಲ್ಲಿಸಿದರು. ನಾಲ್ಕು ದಿನಗಳಲ್ಲಿ ಆಮ್ಲಜನಕ ಸಮಸ್ಯೆ ಸರಿ ಹೋಗಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವಿಶ್ವಾಸ ವ್ಯಕ್ತಪಡಿಸಿದರು.

ಮೇಯರ್‌ ಎಸ್.ಟಿ. ವೀರೇಶ್, ಎಡಿಸಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಆನಂದ್, ಡಿಎಚ್‍ಒ ಡಾ. ನಾಗರಾಜ್, ಡಿಎಸ್ ಡಾ.ಜಯಪ್ರಕಾಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಆರ್‌ಸಿಎಚ್‍ಒ ಡಾ.ಮೀನಾಕ್ಷಿ, ಡಾ.ಮುರಳೀಧರ ಇದ್ದರು.

‘ಆಮ್ಲಜನಕ ಕೊರತೆ ಇರುವುದು ನಿಜ’

‘ಜಿಲ್ಲೆಯಲ್ಲಿ ಸ್ವಲ್ಪ ಆಮ್ಲಜನಕ ಕೊರತೆ ಇರುವುದು ನಿಜ. ಪ್ರಸ್ತುತ 14 ಕೆ.ಎಲ್. ಆಮ್ಲಜನಕ ಸರಬರಾಜಾಗುತ್ತಿದೆ. 23 ಕೆಎಲ್‍ಗೆ ಒತ್ತಾಯ ಮಾಡಲಾಗುತ್ತಿದೆ. ಆಮ್ಲಜನಕ ಸಮಸ್ಯೆಯನ್ನು ಪರಿಹರಿಸಲು ಕೇಂದ್ರದ ಸಚಿವರು, ಮುಖ್ಯಮಂತ್ರಿ, ಆರೋಗ್ಯ ಸಚಿವರೊಂದಿಗೆ ಮಾತನಾಡಿದ್ದೇನೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

‘ತಮ್ಮಲ್ಲಿ ರೆಮಿಡಿಸಿವಿರ್ ಲಸಿಕೆ ಇಲ್ಲ. ಜಿಲ್ಲಾಧಿಕಾರಿ ಬಳಿ ಹೋಗಿ ಕೇಳಿದರೆ ನೀಡುತ್ತಾರೆ ಎಂದು ಕೆಲವು ಖಾಸಗಿ ಆಸ್ಪತ್ರೆಯವರು ಕಳುಹಿಸಿದ್ದಾರೆ. ಆಕ್ಸಿಜನ್ ಇಲ್ಲ. ನೀವೇ ವ್ಯವಸ್ಥೆ ಮಾಡಿದರೆ ಚಿಕಿತ್ಸೆ ನೀಡುತ್ತೇವೆಂದು ರೋಗಿಗಳಿಗೆ ಹೇಳಿರುವುದು ಗಮನಕ್ಕೆ ಬಂದಿದೆ. ರೋಗಿಗಳ ಬಳಿಯೇ ವ್ಯವಸ್ಥೆ ಮಾಡಿಸುವುದಾದರೆ ಖಾಸಗಿ ಆಸ್ಪತ್ರೆಗಳ ಪಾತ್ರವೇನು? ಇನ್ನು ಮುಂದೆ ಈ ರೀತಿ ಮಾಡುವುದು ನನ್ನ ಗಮನಕ್ಕೆ ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

‘50 ಬೆಡ್‌ ತಯಾರಿದೆ’

ಇಎಸ್‍ಐ ಆಸ್ಪತ್ರೆಯಲ್ಲಿ 50 ಆಮ್ಲಜನಕ ಬೆಡ್‍ಗಳ ವ್ಯವಸ್ಥೆಯನ್ನು ಮಾಡಲಾಗಿದ್ದು ಇಂದಿನಿಂದಲೇ ರೋಗಿಗಳನ್ನು ಅಲ್ಲಿಗೆ ಸ್ಥಳಾಂತರಿಸಬಹುದು. ಸಿ.ಜಿ. ಆಸ್ಪತ್ರೆಯ ರೂಂ ಸಂಖ್ಯೆ 65 ಮತ್ತು 66 ರಲ್ಲಿ ಸ್ಟೆಪ್‍ಡೌನ್ ವಾರ್ಡ್ ಮಾಡಿ ಬೆಡ್‍ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಮುಂದೆ ಆಮ್ಲಜನಕ ಪೂರೈಕೆ ಹೆಚ್ಚಾದಲ್ಲಿ ಬೆಡ್‍ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಸಂಸದರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT