ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ ತೆರವು ಕಾರ್ಯಾಚರಣೆಗೆ ಇನ್ನು ಸುಲಭ

ಫೈರ್‌ ಬ್ರಿಗೇಡ್‌ ಬತ್ತಳಿಕೆ ಸೇರಿದ ಅತ್ಯಾಧುನಿಕ ಗರಗಸ
Last Updated 22 ಜೂನ್ 2018, 15:56 IST
ಅಕ್ಷರ ಗಾತ್ರ

ದಾವಣಗೆರೆ: ಗಾಳಿ–ಮಳೆಗೆ ನಗರದ ರಸ್ತೆ ಮೇಲೆ ದೊಡ್ಡ ಮರ ಉರುಳಿ ಬಿದ್ದರೆ ವಾಹನ ಸಂಚಾರಕ್ಕೆ ಆ ಮಾರ್ಗ ಮುಕ್ತಗೊಳ್ಳುವವರೆಗೆ ಇನ್ನು ಮುಂದೆ ಗಂಟೆಗಟ್ಟಲೆ ಕಾಯಬೇಕಾಗಿಲ್ಲ. ಮನೆಗಳ ಮೇಲೆ ಮರ ಉರುಳಿದರೆ ಕೆಲವೇ ನಿಮಿಷಗಳಲ್ಲಿ ರೆಂಬೆ–ಕೊಂಬೆಗಳನ್ನು ಕಡಿದು ಒಳಗೆ ಸಿಲುಕಿರುವ ಜನರ ಜೀವವನ್ನು ಉಳಿಸಬಹುದಾಗಿದೆ.

ಜಿಲ್ಲಾ ಅಗ್ನಿಶಾಮಕ ಠಾಣೆಯು ಜರ್ಮನಿ ಮೂಲದ ‘ಸ್ಟಿಲ್ಹ್‌’ ಕಂಪನಿಯ ಮರ ಕಡಿಯುವ ಅತ್ಯಾಧುನಿಕ ಗರಗಸಗಳೊಂದಿಗೆ ಈ ಬಾರಿಯ ಮುಂಗಾರು ಎದುರಿಸಲು ಸಜ್ಜಾಗಿದೆ. ಜಿಲ್ಲಾಡಳಿತವು ಪ್ರಕೃತಿ ವಿಕೋಪ ನಿಧಿಯಡಿ ಒಟ್ಟು ₹ 1 ಲಕ್ಷ ಅನುದಾನದಲ್ಲಿ ಮರ ಕಡಿಯುವ ಎರಡು ಅತ್ಯಾಧುನಿಕ ಯಂತ್ರಗಳನ್ನು ನೀಡಿದೆ. ಜೊತೆಗೆ ಅಗ್ನಿಶಾಮಕ ದಳದ ಕೇಂದ್ರ ಕಚೇರಿಯಿಂದಲೂ ಹೆಚ್ಚು ಸಾಮರ್ಥ್ಯದ ಇನ್ನೊಂದು ಯಂತ್ರವನ್ನು ಕಳುಹಿಸಿಕೊಡಲಾಗಿದೆ. ಇದರೊಂದಿಗೆ ತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳುವ ‘ಫೈರ್‌ ಬ್ರಿಗೇಡ್‌’ನ ಸಿಬ್ಬಂದಿಯ ಕೈ ಬಲಪಡಿಸಿದಂತಾಗಿದೆ.

ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಅವರು ಶುಕ್ರವಾರ ಈ ಯಂತ್ರಗಳ ಕಾರ್ಯವೈಖರಿಯನ್ನು ಪರಿಶೀಲಿಸಿ ಠಾಣೆಗೆ ಹಸ್ತಾಂತರಿಸಿದರು. ‘ಸ್ಟಿಲ್ಹ್‌’ ಕಂಪನಿಯ ವ್ಯವಹಾರ ಅಭಿವೃದ್ಧಿ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ ಅವರು ಫೈರ್‌ ಬ್ರಿಗೇಡ್‌ ಸಿಬ್ಬಂದಿಗೆ ಯಂತ್ರದ ಕಾರ್ಯನಿರ್ವಹಣೆ ಬಗ್ಗೆ ತರಬೇತಿ ನೀಡಿದರು.

‘ಈ ಮೊದಲು ಮರ ಬಿದ್ದಾಗ ತೆರವುಗೊಳಿಸಲು ಕೊಡಲಿ, ಕತ್ತಿಯನ್ನೇ ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿತ್ತು. ರಕ್ಷಣಾ ವಾಹನದಲ್ಲಿನ ಜನರೇಟರ್‌ ಬಳಸಿ ಮರ ಕಡಿಯುವ ಯಂತ್ರದ ಸಹಾಯದಿಂದ ಮರದ ದಿಮ್ಮಿಗಳನ್ನು ಕಡಿಯಲು ಬಹಳ ಸಮಯ ತಗಲುತ್ತಿತ್ತು. ಆಜಾದ್‌ನಗರದಂತಹ ಕೆಲವು ಪ್ರದೇಶಗಳಲ್ಲಿ ನಮ್ಮ ವಾಹನ ಒಳಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹೆಚ್ಚಿನ ದೂರಕ್ಕೆ ಕೇಬಲ್‌ ಎಳೆದುಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲ. ಕಾರ್ಯಾಚರಣೆ ಮುಗಿಯಲು ವಿಳಂಬವಾಗುತ್ತಿರುವುದನ್ನು ಕಂಡು ನಾಗರಿಕರೂ ನಮ್ಮ ಸಿಬ್ಬಂದಿ ಮೇಲೆ ಬೇಸರ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಪೆಟ್ರೋಲ್‌ ಚಾಲಿತ ಯಂತ್ರ ನೀಡುವಂತೆ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು’ ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಪಿ.ಎಸ್‌. ಜಯರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಯಂತ್ರವನ್ನು ಕೈಯಲ್ಲಿ ಹಿಡಿದು ಎಂತಹ ಇಕ್ಕಟ್ಟಾದ ಪ್ರದೇಶದಲ್ಲೂ ಹೋಗಿ ತೆರವು ಕಾರ್ಯಾಚರಣೆ ನಡೆಸಬಹುದಾಗಿದೆ. ಬೈಕ್‌ನಲ್ಲೂ ತೆಗೆದುಕೊಂಡು ಹೋಗಲು ಸಾಧ್ಯವಿರುವುದರಿಂದ ನಗರದಲ್ಲಿ ಎಲ್ಲಿಯೇ ಮರ ಬಿದ್ದರೂ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ನಡೆಸಬಹುದಾಗಿದೆ. ಎಂಥ ದೊಡ್ಡ ಮರವನ್ನೂ 20ರಿಂದ 25 ನಿಮಿಷಗಳಲ್ಲಿ ತೆರವುಗೊಳಿಸಬಹುದಾಗಿದೆ’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮಾ ಮಾಹಿತಿ ನೀಡಿದರು.

ತಾಂತ್ರಿಕ ಮಾಹಿತಿ:

ಠಾಣೆಗೆ ನೀಡಿರುವ ₹ 65 ಸಾವಿರ ಮೌಲ್ಯದ 5.3 ಎಚ್‌ಪಿ ಸಾಮರ್ಥ್ಯದ ಯಂತ್ರ ದೊಡ್ಡ ಮರಗಳ ಬುಡಗಳನ್ನು ಕ್ಷಣಮಾತ್ರದಲ್ಲಿ ಕಡಿದು ಹಾಕುತ್ತದೆ. ₹ 35 ಸಾವಿರ ಮೌಲ್ಯದ 2.7 ಎಚ್‌ಪಿ ಸಾಮರ್ಥ್ಯದ ಯಂತ್ರ ಸಣ್ಣ ಮರ ಹಾಗೂ ರೆಂಬೆ– ಕೊಂಬೆಗಳನ್ನು ಕಡಿಯಲು ಅನುಕೂಲವಾಗಲಿದೆ. 2 ಸ್ಟ್ರೋಕ್‌ ಪೆಟ್ರೊಲ್‌ ಎಂಜಿನ್‌ ಹೊಂದಿದೆ. ಒಂದು ಲೀಟರ್‌ ಪೆಟ್ರೋಲ್‌ನಲ್ಲಿ ಒಂದೂವರೆ ಗಂಟೆ ಕೆಲಸ ಮಾಡಬಹುದು. ಹದಿನೆಂಟು ಇಂಚಿನ ಬ್ಲೇಡ್‌ ಅಳವಡಿಸಲಾಗಿದ್ದು, ದೊಡ್ಡ ಮರಗಳನ್ನು 15ರಿಂದ 20 ನಿಮಿಷಗಳಲ್ಲಿ ತೆರವುಗೊಳಿಸಬಹುದು ಎಂದು ಕಂಪನಿಯ ಅಧಿಕಾರಿ ಪ್ರಶಾಂತ್‌ ವಿವರ ನೀಡಿದರು.

ಪಾಲಿಕೆಯಿಂದ ನಿರ್ಲಕ್ಷ್ಯ

ನಗರದ ಹಲವು ರಸ್ತೆಗಳ ಪಕ್ಕದಲ್ಲಿ ಒಣಗಿದ ಮರಗಳಿದ್ದು, ಅವುಗಳನ್ನು ತೆರವುಗೊಳಿಸುವ ವಿಚಾರದಲ್ಲಿ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಾರೆ.

ಪಾಲಿಕೆಯ ಸಿಬ್ಬಂದಿ ಏಪ್ರಿಲ್‌– ಮೇ ತಿಂಗಳಲ್ಲಿ ನಗರದಲ್ಲಿ ಒಣಗಿರುವ ಮರಗಳನ್ನು ಗುರುತಿಸಿ ತೆರವುಗೊಳಿಸಬೇಕು. ಆದರೆ, ಆ ಕೆಲಸವನ್ನು ಸರಿಯಾಗಿ ಮಾಡದೇ ಇರುವುದರಿಂದ ಗಾಳಿ– ಮಳೆಗೆ ಮರಗಳು ಮುರಿದು ಬೀಳುತ್ತಿವೆ. ಕೆಲ ಬಾರಿ ಜನರ ಜೀವಕ್ಕೂ ಅಪಾಯ ತಂದೊಡ್ಡುತ್ತದೆ. ಮರ ಕಡಿಯುವ ಯಂತ್ರವನ್ನು ನೀಡುವಂತೆ ಕೋರಿದ್ದರೂ ಪಾಲಿಕೆ ಸ್ಪಂದಿಸಿರಲ್ಲ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT