ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಡುಕುರಿ ವನ್ಯಧಾಮದಲ್ಲಿ ಮರ ಕಡಿತಲೆ

ಬೆಲೆ ಬಾಳುವ ಶ್ರೀಗಂಧದ ಮರಗಳ ಕಳವು l ಅಪಾಯಕ್ಕೆ ಸಿಲುಕಿದ ಕೊಂಡುಕುರಿ ಸಂತತಿ
Last Updated 5 ಆಗಸ್ಟ್ 2021, 2:06 IST
ಅಕ್ಷರ ಗಾತ್ರ

ಜಗಳೂರು: ಜಗತ್ತಿನಲ್ಲೇ ಅಳಿವಿನ ಅಂಚಿನಲ್ಲಿರುವ ಕೊಂಡುಕುರಿ ಸಂತತಿಯ ಸಂರಕ್ಷಣೆಗಾಗಿ ದಶಕದ ಹಿಂದೆ ವನ್ಯಧಾಮವಾಗಿ ಘೋಷಣೆಯಾಗಿರುವ ತಾಲ್ಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಮರಗಳ ಕಳವು ಹಾಗೂ ವನ್ಯಪ್ರಾಣಿಗಳ ಬೇಟೆ ಅವ್ಯಾಹತವಾಗಿದ್ದು, ಸಸ್ಯ ಹಾಗೂ ವನ್ಯಜೀವಿ ಸಂಕುಲಕ್ಕೆ ಅಪಾಯ ಎದುರಾಗಿದೆ.

ವಲಯ ಅರಣ್ಯಾಧಿಕಾರಿ ಹಾಗೂ ಅರಣ್ಯ ವೀಕ್ಷಕರ ಹುದ್ದೆಗಳು ಖಾಲಿ ಇದ್ದು, ಸೂಕ್ತವಾದ ಮೆಲುಸ್ತುವಾರಿ ಇಲ್ಲದ ಕಾರಣ ಸಂರಕ್ಷಣಾ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ. 80 ಚ.ಕಿ.ಮೀ. ವಿಸ್ತೀರ್ಣದ ಅರಣ್ಯದ ಕೆಳಗೋಟೆ, ಮಡ್ರಳ್ಳಿ ಹಾಗೂ ಮಲೆಮಾಚಿಕೆರೆ ಬೀಟ್ ಗಳ ವ್ಯಾಪ್ತಿಯಲ್ಲಿ ಅಮೂಲ್ಯ ಮರಗಳ ಕಡಿತಲೆ ಹಾಗೂ ವನ್ಯಜೀವಿಗಳ ಬೇಟೆ ನಿರಾತಂಕವಾಗಿ ನಡೆಯುತ್ತಿದೆ ಎಂದು ವನ್ಯಜೀವಿ ಆಸಕ್ತರು ಆರೋಪಿಸಿದ್ದಾರೆ.

ಶಬ್ದರಹಿತವಾದ ಯಂತ್ರ
ಗಳಿಂದ ಶ್ರೀಗಂಧದ ಮರಗಳನ್ನು ಹಲವು
ತುಂಡುಗಳಾಗಿ ಕತ್ತರಿಸಿ
ಸಾಗಿಸಲಾಗಿದೆ. ಕೆಳಗೋಟೆ
ಬೀಟ್ ಹಾಗೂ ಮಲೆಮಾಚಿಕೆರೆ ಬೀಟ್ ವ್ಯಾಪ್ತಿಯಲ್ಲಿ ನೈಸರ್ಗಿಕವಾಗಿ ಬೆಳೆದ 18 ರಿಂದ 20 ವರ್ಷದ ಲಕ್ಷಾಂತರ ಬೆಲೆ ಬಾಳುವ ಶ್ರೀಗಂಧದ ಮರಗಳನ್ನು ಕತ್ತರಿಸಿ ಕಳವು ಮಾಡಲಾಗಿದೆ. ಕೆಲವೆಡೆ ಮರದ ಬುಡಗಳನ್ನು ಬಗೆದು ಸಾಗಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಗತ್ತಿನಲ್ಲಿ ಅಳಿವಿನ ಅಂಚಿನಲ್ಲಿರುವ ನಾಲ್ಕು ಕೊಂಬುಗಳ ಕೊಂಡುಕುರಿ (ಫೋರ್ ಹಾರ್ನ್ಡ್ ಆಂಟಿಲೋಪ್) ಹಾಗೂ ಚಿಂಕಾರ (ಇಂಡಿಯನ್ ಗೆಜೆಲ್), ಕೃಷ್ಣಮೃಗ, ತೋಳ, ಚಿರತೆ, ಕರಡಿ, ಪ್ಯಾಂಗೋಲಿನ್ ಮುಂತಾದ ಅಮೂಲ್ಯ ವನ್ಯಜೀವಿಗಳ ನೆಲೆಯಾಗಿದೆ.

ದೇಶದಲ್ಲೇ ಮಹತ್ವದ ಔಷಧೀಯ ಸಸ್ಯಗಳ ಆಗರವಾಗಿರುವ ವೈವಿಧ್ಯಮಯ ಒಣ ಕುರುಚಲು ಅರಣ್ಯ ಪ್ರದೇಶವನ್ನು ವನ್ಯಜೀವಿಧಾಮ ಹೊಂದಿದ್ದು, ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿದೆ.

‘ಈ ಹಿಂದೆ ಬೆಲೆಬಾಳುವ ಇಷ್ಟೊಂದು ಶ್ರೀಗಂಧದ ಮರಗಳನ್ನು ಕತ್ತರಿಸಿರಲಿಲ್ಲ. ಈಚೆಗೆ ಸಂರಕ್ಷಣೆ ಕೊರತೆಯಿಂದಾಗಿ ಬೇಕಾಬಿಟ್ಟಿ ಮರ ಕಡಿತಲೆ, ಪ್ರಾಣಿಗಳ ಬೇಟೆ ಜೋರಾಗಿ ನಡೆದಿದೆ. ವಿದೇಶಕ್ಕೆ ರಫ್ತಾಗುವ ಮಿಡಿ ಸೌತೆ ಬೆಳೆ ಹಾಗೂ ಟೊಮೆಟೊ ಬೆಳೆಗೆ ಬೇಕಾಗುವ ಕೋಲುಗಳಿಗಾಗಿ ಸಾವಿರಾರು ಎಳೆಯ ಮರಗಳನ್ನು ಕಡಿಯಲಾಗುತ್ತದೆ. ಕೇಳುವವರೇ ಇಲ್ಲವಾಗಿದ್ದು, ಕೊಂಡುಕುರಿ ಸಂತತಿ ಅಪಾಯದಲ್ಲಿದೆ’ ಎಂದು ವನ್ಯಜೀವಿ ಪ್ರೇಮಿಗಳಾದ ಎಚ್. ನಾಗರಾಜ್ ಹಾಗೂ ಮರೇನಹಳ್ಳಿ ಬಸವರಾಜ್ ಆತಂಕ ವ್ಯಕ್ತಪಡಿಸುತ್ತಾರೆ.

ದಿನೇ ದಿನೇ ಅರಣ್ಯ ನಾಶವಾಗುತ್ತಿದ್ದು, ಕೂಡಲೇ ಆಸಕ್ತಿ ಇರುವ ಅಧಿಕಾರಿಗಳನ್ನು ನೇಮಕ ಮಾಡಿ ಸಂರಕ್ಷಣಾ ಕಾರ್ಯ ಚುರುಕುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಬಗ್ಗೆ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜ್ ಅವರನ್ನು ಸಂಪರ್ಕಿಸಿದಾಗ, ‘ನಾನು ರಜೆ ಮೇಲಿದ್ದೇನೆ. ಬೇರೆಯವರೊಂದಿಗೆ ಮಾತನಾಡಿ’ ಎಂದು ಉತ್ತರಿಸಿದರು.

‘ಮರ ಕಡಿತಲೆ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ ಮೂರ್ತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT