ಗುರುವಾರ , ಅಕ್ಟೋಬರ್ 21, 2021
21 °C

ಬಾರದ ಹಣ: ವಸತಿಗೆ ಗ್ರಹಣ

ಡಿ.ಕೆ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಡಾ.ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆಯಡಿ 4 ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದ ಎಸ್‌ಎಸ್ಎಂ ನಗರದ ಸಂಜೀದಾಬಾನು ಅವರಿಗೆ ಮನೆ ಕಟ್ಟಿಕೊಳ್ಳಲು ರಾಜ್ಯ ಸರ್ಕಾರದಿಂದ ಅನುದಾನ ಬಂದಿಲ್ಲ. ಇದರಿಂದಾಗಿ ಮನೆ ಅರ್ಧಕ್ಕೆ ನಿಂತಿದೆ. ಕೆಲ ವರ್ಷಗಳ ಕಾಲ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಬಾಡಿಗೆ ಕಟ್ಟಲು ಆಗದೇ ಸಂಕಷ್ಟ ಅನುಭವಿಸಿದ ಇವರು, ಬಡ್ಡಿಗೆ ಹಣ ತಂದು ಚಾವಣಿ ಕೆಲಸ ಮುಗಿಸಿದರೂ ಹಣ ಬಂದಿಲ್ಲ. ಮುಂದಿನ ಕಂತು ಬಿಡುಗಡೆಯಾಗುತ್ತದೆ ಎಂಬ ನಿರೀಕ್ಷೆಯಲ್ಲೇ ಕೆಲ ದಿನಗಳು ದೂಡಿದ ಇವರಿಗೆ ಇನ್ನೂ ಹಣ ಬಂದಿಲ್ಲ. ಇತ್ತ ಮನೆಯಲ್ಲೂ ವಾಸಿಸಲು ಆಗದೇ ಅತ್ತ ಸಾಲದ ಕಂತು ಕಟ್ಟಲು ಆಗದೇ ಪರದಾಡುತ್ತಿದ್ದಾರೆ.

ಇದು ಸಂಜಿದಾಬಾನು ಅವರೊಬ್ಬರ ಸ್ಥಿತಿಯಲ್ಲ. ಜಿಲ್ಲೆಯಾದ್ಯಂತ ವಸತಿಗಾಗಿ ಅರ್ಜಿ ಸಲ್ಲಿಸಿರುವ ಸಾವಿರಾರು ಫಲಾನುಭವಿಗಳ ಪರಿಸ್ಥಿತಿ ಹೀಗೆಯೇ ಇದೆ. ಕೋವಿಡ್ ಹಾಗೂ ಇತರೆ ಕಾರಣಗಳಿಂದ ರಾಜ್ಯ ಸರ್ಕಾರದಿಂದ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆಯಾಗುತ್ತಿಲ್ಲ. ಇದರಿಂದಾಗಿ ಸೂರು ಕಟ್ಟಿಕೊಳ್ಳಲು ಕನಸು ಕಂಡಿರುವ ಬಡವರಿಗೆ ನಿರಾಶೆಯಾಗಿದೆ.

ಅದೇ ಬಡಾವಣೆಯ ಮುಬಾರಕ್ ಬಾನು ಅವರು ಅರ್ಜಿ ಸಲ್ಲಿಸಿ 2 ವರ್ಷಗಳಾಗಿವೆ. ಮನೆ ಆರ್‌ಸಿಸಿ ಮಟ್ಟಕ್ಕೆ ಬಂದಿದೆ. ಹಣ ಬಿಡುಗಡೆಯಾಗದೇ ಹಾಗೆಯೇ ಬಿದ್ದಿದೆ. ದಾದಾಪೀರ್ ಅವರಿಗೆ ಒಂದು ಬಿಲ್ ಮಾತ್ರ ಬಂದಿದ್ದು, ಉಳಿದ ಹಣ ಇನ್ನೂ ಬಂದಿಲ್ಲ ಎಂಬುದು ಅವರ ದೂರು.

ಪ್ರತಿಯೊಬ್ಬರಿಗೂ ಸೂರು ಕಟ್ಟಿಸಬೇಕು ಎನ್ನುವ ಕನಸು ಇರುತ್ತದೆ. ಜಿಲ್ಲೆಯಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಸಾವಿರಾರು ಫಲಾನುಭವಿಗಳು ಇತ್ತ ವಾಸಿಸಲು ಮನೆಯೂ ಇಲ್ಲದೇ, ಅತ್ತ ಸಾವಿರಾರು
ರೂಪಾಯಿ ಬಾಡಿಗೆ ತೆತ್ತು ಜೀವನ ನಿರ್ವಹಿಸಬೇಕಾದ ಪರಿಸ್ಥಿತಿ ಬಂದಿದೆ. ಕೋವಿಡ್ ಕಾರಣದಿಂದಾಗಿ ಉದ್ಯಮಗಳು ಸ್ಥಗಿತಗೊಂಡಿದ್ದು, ದುಡಿಮೆ ಇಲ್ಲದೇ ಸಂಕಷ್ಟ ಅನುಭವಿಸುತ್ತಿರುವ ಕಾರ್ಮಿಕರು ಹಾಗೂ ಮಧ್ಯಮ ವರ್ಗದವರ ನಿರ್ಮಾಣ ಕನಸಾಗಿಯೇ ಉಳಿದಿದೆ.

‘ನಗರ ವ್ಯಾಪ್ತಿಯಲ್ಲಿ ವರ್ಷಕ್ಕೆ ಇಂತಿಷ್ಟು ಮನೆಗಳ ನಿರ್ಮಾಣ ಮಾಡಬೇಕು ಎಂದು ಗುರಿ ನಿಗದಿಪಡಿಸುತ್ತಿದ್ದ ಸರ್ಕಾರ 2017ರಿಂದ ಇದನ್ನು ನಿಲ್ಲಿಸಿದೆ’ ಎನ್ನುತ್ತಾರೆ ನಗರಾಭಿವೃದ್ಧಿ ಕೋಶದ ಹೌಸಿಂಗ್‌ ಎಂಜಿನಿಯರ್‌ ಪ್ರಕಾಶ್‌.

‘ದಾವಣಗೆರೆ, ಹರಿಹರ, ಚನ್ನಗಿರಿ, ಮಲೇಬೆನ್ನೂರು, ಹೊನ್ನಾಳಿ, ಜಗಳೂರು ಹೀಗೆ ನಗರ ಸ್ಥಳೀಯಾಡಳಿತ ಇರುವ ಪ್ರದೇಶಗಲ್ಲಿ ಆಗಸ್ಟ್ ತಿಂಗಳವರೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ (ನಗರ) ಬಿಎಲ್‌ಸಿ 6,067 ಮನೆಗಳಿಗೆ ಅರ್ಜಿ ಸಲ್ಲಿಸಿದ್ದು, ಅವುಗಳಲ್ಲಿ 5,381 ಮನೆಗಳಿಗೆ ಅನುಮೋದನೆ ನೀಡಲಾಗಿದೆ. ಅವುಗಳಲ್ಲಿ 1,597 ಮನೆಗಳು ಪೂರ್ಣಗೊಂಡಿವೆ’ ಎಂದು ಮಾಹಿತಿ ನೀಡಿದರು..

ಕೈಗೆಟಕುವ ದರದ ವಸತಿ
ಯೋಜನೆ (ಎಎಚ್‌ಪಿ):

‘ನಿವೇಶನ ಹಾಗೂ ಮನೆ ಎರಡೂ ಇಲ್ಲವರು ಈ ಯೋಜನೆ ವ್ಯಾಪ್ತಿಗೆ ಬರುತ್ತಾರೆ. ಜಿಲ್ಲೆಯಲ್ಲಿ 38,223 ಬೇಡಿಕೆ ಇದ್ದು, ಅವರಲ್ಲಿ 352 ಮನೆಗಳನ್ನು ಪೌರಕಾರ್ಮಿಕರಿಗೆ ಮಂಜೂರು ಮಾಡಲಾಗಿದೆ. 37,871 ಮನೆಗಳ ನಿರ್ಮಾಣ ಬಾಕಿ ಇದೆ. ₹ 6 ಲಕ್ಷ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತದೆ. 60 ಎಕರೆ ಜಮೀನು ಖರೀದಿಸಲಾಗಿದೆ’ ಎಂದು ಪ್ರಕಾಶ್ ಮಾಹಿತಿ ನೀಡಿದರು.

 ಸರ್ಕಾರ ನಿರ್ದಿಷ್ಟ ಯೋಜನೆ ರೂಪಿಸಿಲ್ಲ

‘ಸಾಕಷ್ಟು ಫಲಾನುಭವಿಗಳು ಇರುವ ಮನೆಯನ್ನು ಕೆಡವಿ ಮನೆ ನಿರ್ಮಿಸಿಕೊಳ್ಳಲು ಹೊರಟಿದ್ದಾರೆ. ಆದರೆ ಹಣ ಬಿಡುಗಡೆಯಾಗದೇ ಹಾಗೆಯೇ ಉಳಿದಿವೆ. ಕೆಲವರಿಗೆ ಒಂದು, ಎರಡು ಬಿಲ್‌ಗಳು ಮಾತ್ರ ಬಂದಿವೆ. ಇಲಾಖೆಗೆ ಭೇಟಿ ನೀಡಿದರೆ ಸಾಕಷ್ಟು ದಾಖಲೆಗಳು ಇವೆ ಆಮೇಲೆ ಬನ್ನಿ ಎಂದು ಹೇಳುತ್ತಾರೆ. ಇದನ್ನು ಕೇಳಿ ಜನ ಬೇಸತ್ತು ಹೋಗಿದ್ದಾರೆ’ ಎನ್ನುತ್ತಾರೆ ಹೋರಾಟಗಾರ್ತಿ, ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನ ಜಬೀನಾ ಖಾನಂ.

‘ಹಣ ಬರುತ್ತದೆ ಎಂಬ ಆಸೆಯಿಂದ ಬಡ್ಡಿ ಸಾಲ ತಂದು ಕೆಲವರು ಅರ್ಧಬರ್ಧ ಮನೆಕಟ್ಟಿ ಇವತ್ತಿನವರೆಗೂ ಬಡ್ಡಿ ಕಟ್ಟುತ್ತಿದ್ದಾರೆ. ಸರ್ಕಾರ ಯೋಜನೆಗಳನ್ನು ಘೋಷಣೆ ಮಾಡುತ್ತದೆ.  ಆದರೆ ಜನಸಂಖ್ಯೆಗೆ ತಕ್ಕಂತೆ ಆದರೆ ನಿರ್ದಿಷ್ಟವಾಗಿ ಯೋಜನೆ ರೂಪಿಸುವುದಿಲ್ಲ. ಉದ್ದೇಶಪೂರ್ವಕವಾಗಿ ಕಡಿಮೆ ಹಣ ಮೀಸಲಿಡುತ್ತಿದೆ. ಇದರಿಂದಾಗಿ ಸಮಯಕ್ಕೆ ಹಣ ಸಿಗದೇ ಪ‍ರದಾಡಬೇಕಾದ ಪರಿಸ್ಥಿತಿ ಬಂದಿದೆ’ ಎನ್ನುತ್ತಾರೆ.

‘ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಆದರೆ ಅಧಿಕಾರಿಗಳ ತಾತ್ಸಾರ ಮನೋಭಾವದಿಂದಾಗಿ ಎಷ್ಟೋ ಜನರು ನಿರಾಶರಾಗಿದ್ದಾರೆ.

ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ

‘ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡಲಾಗುತ್ತಿದೆ.
ಮನೆಯ ನಿರ್ಮಾಣದ ನಾಲ್ಕು ಹಂತಗಳಲ್ಲಿ ನಡೆಯುತ್ತದೆ. ಪ್ರತಿಯೊಂದು ಹಂತವೂ ಮುಕ್ತಾಯಗೊಂಡರೆ ಮಾತ್ರ ಸರ್ಕಾರದಿಂದ ಹಣ ಬರುತ್ತದೆ’ ಎನ್ನುತ್ತಾರೆ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಜಿ. 

‘ಅರ್ಹರಿಗೆ ಮನೆಗಳನ್ನು ಮಂಜೂರು ಮಾಡಲು ಸಾಕಷ್ಟು  ಜಮೀನು ಖರೀದಿಸಲಾಗಿದೆ. ಜಿ+1 ಅಥವಾ ಜಿ+2 ನೀಡುವುದಾ ಎಂಬ ಗೊಂದಲ ಇದೆ. ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಆಶ್ರಯ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕು’ ಎನ್ನುತ್ತಾರೆ ನಗರಾಭಿವೃದ್ಧಿ ಕೋಶದ
ಯೋಜನಾ ನಿರ್ದೇಶಕಿ ನಜ್ಮಾ ಜಿ. 

ಅವ್ಯವಹಾರ ತಡೆಗೆ ಇಂದಿರಾ ವಿಜಿಲ್ ಆ್ಯಪ್

ವಸತಿ ಯೋಜನೆಗಳಲ್ಲಿ ನಡೆಯುವ ಅವ್ಯವಹಾರ ತಡೆಗೆ ಇಂದಿರಾ ವಿಜಿಲ್ ಆ್ಯಪ್ ಬಂದಿದೆ. ಕೆಲವರು 20ರಿಂದ 30 ಬಾರಿ ಒಂದೇ ಮನೆಯ ಫೋಟೊ ಅಪ್‌ಲೋಡ್ ಮಾಡಿ ಹಣ ತೆಗೆದುಕೊಳ್ಳುತ್ತಿದ್ದರು. ಯೋಜನೆ ದುರುಪಯೋಗವಾಗದಂತೆ ತಡೆಯಲು ಇದು ನೆರವಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ. 

ಒಂದು ಮನೆ ತಳಪಾಯ, ಗೋಡೆ, ಚಾವಣಿ ಹಾಗೂ ಮುಗಿಯುವುದು ಸೇರಿ 4 ಹಂತಗಳಲ್ಲಿ ಅನುಮೋದನೆಯಾಗಬೇಕು. ಇದರಲ್ಲಿ ಯಾವುದಾದರೂ ಒಂದು ಹಂತದಲ್ಲಿ ಜಿಲ್ಲಾಧಿಕಾರಿ ಲಾಗಿನ್ ಆಗಿ ನಿಜವಾದ, ಅರ್ಹ ಫಲಾನುಭವಿಯನ್ನು ಗುರುತಿಸಿ ಅನುಮೋದನೆ ನೀಡಿದ ಬಳಿಕವಷ್ಟೇ ಫಲಾನುಭವಿಗೆ ಹಣ ಹೋಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.  

ಮಧ್ಯವರ್ತಿಗಳ ಕಾಟ ತಪ್ಪಿಸಿ

‘ವಸತಿಗಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಮಧವರ್ತಿಗಳ ಕಾಟ ಹೆಚ್ಚಾಗಿದ್ದು, ಇದರಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಅದನ್ನು ತಪ್ಪಿಸಬೇಕು’ ಎಂಬುದು ಜಿಲ್ಲಾ ವಸತಿ ರಹಿತರ ಖಾಲಿ ನಿವೇಶನ ರಹಿತರ ನಿರಾಶ್ರಿತರ ಹೋರಾಟ ಸಮಿತಿ (ಎಐಟಿಯುಸಿ) ಪ್ರಧಾನ ಕಾರ್ಯದರ್ಶಿ ಆವರಗೆರೆ ವಾಸು ಆಗ್ರಹ.

‘ಬಹಳಷ್ಟು ಮಂದಿ ಇರುವ ಮನೆಯನ್ನು ಕೆಡವಿ, ಅರ್ಧಂಬರ್ಧ ಕಟ್ಟಿಕೊಂಡಿದ್ದಾರೆ. ಸರ್ಕಾರದ ಹಣ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದೆ. ಒಂದು ಕಂತಿನ ಹಣ ಪಡೆಯಲು 10ರಿಂದ 15 ದಿನಗಳು ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ಬಂದಿದೆ. ಕೂಡಲೇ ಹಣ ಬಿಡುಗಡೆ ಮಾಡಬೇಕು’ ಎಂಬುದು ಅವರ ಆಗ್ರಹ.

ಸದಸ್ಯರ ಆಧಾರದ ಮೇಲೆ ಮನೆ

‘ಅಮೃತ ಗ್ರಾಮ ವಸತಿ ಯೋಜನೆಯಡಿ ಜಿಲ್ಲೆಯಲ್ಲಿ 27 ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ. ಈ ಯೋಜನೆಯಡಿ ವಸತಿರಹಿತರಿಗೆ ಮನೆ ಹಾಗೂ ನಿವೇಶನ ಇಲ್ಲದವರಿಗೆ ನಿವೇಶನ ನೀಡಲು ಉದ್ದೇಶಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ವಿಜಯ ಮಹಾಂತೇಶ ದಾನಮ್ಮನವರ್ ತಿಳಿಸಿದರು.

‘25 ಸದಸ್ಯರಿಗಿಂತ ಹೆಚ್ಚು ಗ್ರಾಮ ಪಂಚಾಯಿತಿ ಸದಸ್ಯರು ಇರುವ ಗ್ರಾಮ ಪಂಚಾಯಿತಿಗಳಿಗೆ 50 ಮನೆಗಳು, 15ಕ್ಕಿಂತ ಹೆಚ್ಚು ಹಾಗೂ 25ಕ್ಕಿಂತ ಕಡಿಮೆ ಸದಸ್ಯರು ಇರುವವರಿಗೆ 40 ಹಾಗೂ 15ಕ್ಕಿಂತಲೂ ಕಡಿಮೆ ಸದಸ್ಯರು ಇರುವ ಪಂಚಾಯಿತಿಗಳಿಗೆ ತಲಾ 30 ಮನೆಗಳನ್ನು ನೀಡಲಾಗುವುದು‘ ಎಂದು ಅವರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು